ಮಂಗಳವಾರ, ಅಕ್ಟೋಬರ್ 22, 2019
21 °C

ಗಾಂಧಿ ತಾತನ ಸನ್ನಿಧಿಯಲ್ಲಿ..

Published:
Updated:

ಸೆಪ್ಟೆಂಬರ್ 27, ವಿಶ್ವ ಪ್ರವಾಸ ದಿನದಂದು ಎಲ್ಲಿಗೂ ಪ್ರವಾಸ ಹೋಗಲಾಗಲಿಲ್ಲ. ಹಾಗಾಗಿ ನಾವು ಹಿಂದೆ ಹೋಗಿದ್ದ ಪ್ರವಾಸದ ಚಿತ್ರಗಳನ್ನು ನೋಡುತ್ತಿದ್ದೆವು. ಆಗ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆಯಲ್ಲಿ (ಅ.2, 2018) ನಾವು ಗಾಂಧಿ ಹುಟ್ಟಿದ ಸ್ಥಳ ಪೋರಬಂದರ್, ವಾಸವಿದ್ದ ಸ್ಥಳ ಸಾಬರಮತಿ ಆಶ್ರಮಗಳನ್ನು ನೋಡಿಬಂದಿದ್ದು ನೆನಪಾಯಿತು. ಮಾರ್ಚ್‌ 2019ರಲ್ಲಿ ದೆಹಲಿ ಪ್ರವಾಸದ ವೇಳೆ ಅವರ ಸಮಾಧಿ ಸ್ಥಳ ರಾಜಘಾಟ್ ಹಾಗೂ ರಾಷ್ಟ್ರೀಯ ಗಾಂಧಿ ಮ್ಯೂಸಿಯಂಗೂ ಭೇಟಿ ನೀಡಿದ್ದೆವು. ಈ ಪ್ರವಾಸವನ್ನು ‘ಗಾಂಧೀಜಿ 150’ಕ್ಕೆ ಎಂದು ಯೋಜಿಸಿಲ್ಲದಿದ್ದರೂ ಕಾಕತಾಳೀಯವಾಗಿ ಈ ವರ್ಷವೇ ಆಗಿದ್ದು ನಮ್ಮ ಪ್ರವಾಸಗಳಲ್ಲಿ ಅವಿಸ್ಮರಣೀಯ ಎಂದೆನಿಸಿತು.

ಗಾಂಧಿ ಹುಟ್ಟಿದ ಮನೆಯಲ್ಲಿ..

ಪೋರ್‌ಬಂದರ್‌ನಲ್ಲಿ ಗಾಂಧೀಜಿ ಹುಟ್ಟಿದ ಮನೆಯು ಮೂರು ಅಂತಸ್ತುಗಳ ಒಂದು ದೊಡ್ಡ ಹವೇಲಿ. ಅವರ ಪೂರ್ವಜರು ಇದೇ ಸಂಸ್ಥಾನದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಜ್ಜ, ದೊಡ್ಡಪ್ಪ, ಚಿಕ್ಕಪ್ಪ ಅವರ ಸಂಸಾರಗಳ ಅವಿಭಕ್ತ ಕುಟುಂಬ ವಾಸಿಸುತ್ತಿದ್ದ ಹವೇಲಿಯನ್ನು ಈಗಲೂ ಹಾಗೆಯೇ ಸಂರಕ್ಷಿಸಲಾಗಿದೆ. ಅದಕ್ಕೆ ಹೊಂದಿಕೊಂಡಂತೆ ಗಾಂಧೀಜಿಯ ಸ್ಮಾರಕವಾಗಿ ‘ಕೀರ್ತಿ ಮಂದಿರ’‌ ವನ್ನು ನಿರ್ಮಿಸಲಾಗಿದೆ. ಹವೇಲಿಯ ಗಾಂಧೀಜಿ ಜನಿಸಿದ ಸ್ಥಳದಲ್ಲಿ ‘ಸ್ವಸ್ತಿಕ’ದ ಗುರುತು ಮಾಡಲಾಗಿದೆ. ತಂದೆ ಕರಮಚಂದ್ ಗಾಂಧಿ ಹಾಗೂ ತಾಯಿ ಪುತಲೀಬಾಯಿಯವರ ದೊಡ್ಡ ಭಾವಚಿತ್ರಗಳಿವೆ. ಪೋರಬಂದರ್ ಶ್ರೀಕೃಷ್ಣನ ಬಾಲ್ಯದ ಗೆಳೆಯ ಸುಧಾಮನ ಜನ್ಮ ಸ್ಥಳವಂತೆ ಹಾಗಾಗಿ ಅಲ್ಲಿ ‘ಸುಧಾಮನ ಮಂದಿರ’ವೂ ಇದೆ.

ಸಾಬರಮತಿ ಆಶ್ರಮ

‌ಗುಜರಾತ್ ರಾಜ್ಯದ ಅಹಮದಾಬಾದ್‍ನ ಸಾಬರಮತಿ ನದಿಯ ದಂಡೆಯಲ್ಲಿ ಸಾಬರಮತಿ ಆಶ್ರಮ ಇದೆ. ಇದಕ್ಕೆ ಗಾಂಧಿ ಆಶ್ರಮ, ಹರಿಜನ ಆಶ್ರಮ, ಸತ್ಯಾಗ್ರಹ ಆಶ್ರಮ ಎಂಬ ಹೆಸರುಗಳಿವೆ. ಜೂನ್ 17, 1917 ರಂದು ಈ ಆಶ್ರಮ ಸುಮಾರು 36 ಎಕರೆ ಪ್ರದೇಶದಲ್ಲಿ ಆರಂಭವಾಯಿತು(ಈಗ ಅಷ್ಟು ವಿಶಾಲವಾಗಿಲ್ಲ). ಆರಂಭದಲ್ಲಿ ಇದರ ಒಂದು ಬದಿಯಲ್ಲಿ ಸ್ಮಶಾನ, ಮತ್ತೊಂದು ಬದಿಯಲ್ಲಿ ಜೈಲೂ ಇತ್ತು.  ‘ಸತ್ಯಾಗ್ರಹಿಗಳು ಜೈಲಿಗಾಗಲೀ, ಸ್ಮಶಾನಕ್ಕಾಗಲೀ ಹೋಗಲು ಸದಾ ಸಿದ್ಧರಿರಬೇಕು. ಹಾಗಾಗಿ ಇದು ಸತ್ಯಾಗ್ರಹ ಆಶ್ರಮಕ್ಕೆ ಸೂಕ್ತ ಸ್ಥಳ’ ಎಂದು ಗಾಂಧೀಜಿ ಹೇಳಿದ್ದರಂತೆ!

1930ರ ಮಾರ್ಚ್ 12ರಂದು ಈ ಸ್ಥಳದಿಂದಲೇ ದಂಡಿ ಉಪ್ಪಿನ ಸತ್ಯಾಗ್ರಹ ಆರಂಭವಾಯಿತು. ನಂತರ ಬ್ರಿಟೀಷರು ಆಶ್ರಮವನ್ನು ವಶಪಡಿಸಿಕೊಂಡಿದ್ದರು.  ಅವರು ಬಿಟ್ಟ ನಂತರವೂ ಅನೇಕ ವರ್ಷಗಳ ಕಾಲ ಆಶ್ರಮ ಅನಾಥವಾಗಿತ್ತು. 1963ರಲ್ಲಿ ಇದನ್ನು ‘ಗಾಂಧಿ ಸ್ಮಾರಕ ಸಂಗ್ರಹಾಲಯ’ವನ್ನಾಗಿ ಪರಿವರ್ತಿಸಲಾಯಿತು. ಆಶ್ರಮದಲ್ಲಿ ಗಾಂಧೀಜಿ, ಕಸ್ತೂರಬಾ ಇದ್ದ ಮನೆ ‘ಹೃದಯ ಕುಂಜ್’, ಆಚಾರ್ಯ ವಿನೋಬಾ ಬಾವೆ ಭೇಟಿ ನೀಡಿದ್ದ ಕುಟೀರ, ಮೀರಾ ಬೆಹನ್ ಭೇಟಿನೀಡಿದ್ದ ಕುಟೀರ, ಪ್ರಾರ್ಥನಾ ಸ್ಥಳವಾದ ಉಪಾಸನಾ ಮಂದಿರಗಳು ಇವೆ. ‘ನನ್ನ ಜೀವನವೇ ನನ್ನ ಸಂದೇಶ’ ಎಂಬ ವಸ್ತು ಸಂಗ್ರಹಾಲಯವಿದೆ. ಇಲ್ಲಿಗೆ ವರ್ಷಕ್ಕೆ ಸುಮಾರು ಏಳು ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡುತ್ತಾರೆ.

ದೆಹಲಿಯಲ್ಲಿ ಗಾಂಧಿ ಮ್ಯೂಸಿಯಂ

ಗಾಂಧೀಜಿ ಹತ್ಯೆಯ ನಂತರ ಅನೇಕ ಆಸಕ್ತರು ಅವರಿಗೆ ಸಂಬಂಧಿಸಿದ ಪತ್ರಗಳು, ಚಿತ್ರಗಳು, ವಸ್ತುಗಳನ್ನು ಸಂಗ್ರಹಿಸಲಾರಂಭಿಸಿದರು. ಇಂತಹ ಅಪರೂಪದ ವಸ್ತುಗಳ ಸಂಗ್ರಹಾಲಯ ಮುಂಬೈನಲ್ಲಿ ಆರಂಭವಾಯಿತು. ನಂತರ 1961ರಲ್ಲಿ ದೆಹಲಿಯಲ್ಲಿ ‘ರಾಷ್ಟ್ರೀಯ ಗಾಂಧಿ ಮ್ಯೂಸಿಯಂ’ ಸ್ಥಾಪಿಸಿ, ಅವುಗಳನ್ನು ಅಲ್ಲಿಗೆ ವರ್ಗಾಯಿಸಲಾಯಿತು. ಅಂದಿನ ರಾಷ್ಟ್ರಪತಿ ಡಾ.ಬಾಬೂ ರಾಜೇಂದ್ರ ಪ್ರಸಾದ್ ಇದನ್ನು ಉದ್ಘಾಟಿಸಿದರು.

ಇದನ್ನೂ ಓದಿ: ಜಾಗತಿಕ ಸ್ಮಾರಕವಾಗಿ ಸಾಬರಮತಿ

ಇಲ್ಲಿ ಗಾಂಧೀಜಿಯವರ ಹಾಗೂ ಅವರಿಗೆ ಸಂಬಂಧಿಸಿದ ಮೂಲ ಪುಸ್ತಕಗಳ ಹಾಗೂ ಜರ್ನಲ್‍ಗಳ, ಪತ್ರಗಳ ಗ್ರಂಥಾಲಯ ವಿಭಾಗ ಇದೆ. ಅವರ ಜೀವನದ ಚಿತ್ರಗಳ ಹಾಗೂ ಕಲಾಕೃತಿಗಳ ವಿಭಾಗವಿದೆ. ಅವರು ಉಪಯೋಗಿಸುತ್ತಿದ್ದ ಚರಕ ಹಾಗೂ ಇನ್ನಿತರ ವಸ್ತುಗಳ ಸಂಗ್ರಹಾಲಯ ವಿಭಾಗ ಇದೆ. ಆಡಿಯೊ, ವೀಡಿಯೊ ವಿಭಾಗಗಳಿವೆ. ಹೊರಭಾಗದಲ್ಲಿ ದಂಡಿ ಉಪ್ಪಿನ ಸತ್ಯಾಗ್ರಹದ ಕಲ್ಲಿನ ಸ್ಮಾರಕ ಇದೆ. ಹಾಗೆಯೇ ಸಾಬರಮತಿ ಆಶ್ರಮದ ಅವರ ಮನೆ ‘ಹೃದಯ ಕುಂಜ್’ನ ಮಾದರಿಯೂ ಇದೆ.

ಇವೆಲ್ಲವನ್ನೂ ಹಾಗೆಯೇ ನೋಡಿಕೊಂಡು ಬರುತ್ತೇವೆ. ಕಡೆಗೆ ಅವರು ಹತ್ಯೆಯಾದಾಗ ಧರಿಸಿದ್ದ ವಸ್ತ್ರ, ಅದರ ಮೇಲಿನ ರಕ್ತದ ಕಲೆ, ಹತ್ಯೆಗೆ ಬಳಸಿದ್ದ ಗುಂಡು ಇವುಗಳನ್ನು ನೋಡುವಾಗ ಮೈ ಜುಂ ಎನ್ನುತ್ತದೆ.

ರಾಜ್‌ಘಾಟ್‌ಗೆ ಭೇಟಿ

ದೆಹಲಿಯ ಯಮುನಾ ನದಿ ತೀರದಲ್ಲಿರುವ ರಾಜಘಾಟ್, ಮಹಾತ್ಮಾ ಗಾಂಧಿಯವರ ಸಮಾಧಿ ಸ್ಥಳ. ಕಪ್ಪು ಗ್ರಾನೈಟ್ ಕಲ್ಲಿನ ಮೇಲೆ ‘ಹೇ ರಾಮ್’ ಎಂದು ಕೆತ್ತಲಾಗಿದೆ. ನಂದಾ ದೀಪದ ಜ್ಯೋತಿಯೊಂದು ಸದಾ ಬೆಳಗುತ್ತಿರುತ್ತದೆ. ಇಂಥ ಸರಳ ವ್ಯಕ್ತಿಯ ಸರಳ ಸ್ಥಳದ ಪ್ರವೇಶಕ್ಕೆ ಬಿಗಿ ಬಂದೋಬಸ್ತ್‌ ಇದೆ. ಸಶಸ್ತ್ರ ಯೋಧರು ಕಾವಲು ಕಾಯುತ್ತಿದ್ದುದು ವಿಪರ್ಯಾಸವೆನಿಸಿತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)