ಪರಿಶಿಷ್ಟರಿಗೆ ‘ಇ–ಐರಾವತ’: ₹224 ಕೋಟಿ ಮೀಸಲು

7
ಸಾವಿರ ಇ–ಆಟೊಗಳು ಮಾರ್ಚ್‌ನಲ್ಲಿ ರಸ್ತೆಗೆ

ಪರಿಶಿಷ್ಟರಿಗೆ ‘ಇ–ಐರಾವತ’: ₹224 ಕೋಟಿ ಮೀಸಲು

Published:
Updated:
Prajavani

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಜನರು ಸ್ವ-ಉದ್ಯೋಗ ನಡೆಸುವುದಕ್ಕೆ ನೆರವಾಗುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆಯು ‘ಇ–ಐರಾವತ’ ಯೋಜನೆ ಆರಂಭಿಸಲು ನಿರ್ಧರಿಸಿದೆ.

ಯುವಜನರ ಆರ್ಥಿಕ ಸಬಲೀಕರಣಕ್ಕೆ ಇಲಾಖೆಯು ಸೆಪ್ಟೆಂಬರ್‌ನಲ್ಲಿ ಐರಾವತ ಯೋಜನೆ ಆರಂಭಿಸಿದೆ. ಈ ಯೋಜನೆಗಾಗಿ ₹224 ಕೋಟಿ ಮೀಸಲಿಟ್ಟಿದೆ. ಅದರ ಮುಂದುವರಿದ ಭಾಗವಾಗಿ ಇ–ಐರಾವತ ಯೋಜನೆ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.

ವಿದ್ಯುತ್‌ ಚಾಲಿತ ವಾಹನಗಳಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ‘ವಿದ್ಯುತ್‌ ವಾಹನ ಮತ್ತು ಇಂಧನ ಸಂಗ್ರಹಣಾ ನೀತಿ’ಯನ್ನು ಕಳೆದ ವರ್ಷ ಜಾರಿಗೆ ತಂದಿದೆ. ಈ ನೀತಿಯನ್ನು ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ. ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹ, ವಾಹನ ಖರೀದಿದಾರರಿಗೆ ವಿವಿಧ ತೆರಿಗೆ ವಿನಾಯಿತಿ, ಇಂತಹ ವಾಹನಗಳ ಉತ್ಪಾದನೆಗೆ ಮುಂದಾಗುವ ಉದ್ಯಮಗಳಿಗೆ ವಿಶೇಷ ರಿಯಾಯಿತಿ ನೀಡುವುದು ನೀತಿಯಲ್ಲಿ ಇದೆ. ಅದಕ್ಕೆ ಪೂರಕವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ.

ಇಲಾಖೆಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಪ್ರತಿವರ್ಷ ಕಾರುಗಳನ್ನು ನೀಡಲಾಗುತ್ತಿದೆ. ಈ ಕಾರುಗಳ ಜತೆಗೆ ಇ–ರಿಕ್ಷಾಗಳನ್ನು ನೀಡಲು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ನಿರೀಕ್ಷೆಯಂತೆ ನಡೆದರೆ ಒಂದು ಸಾವಿರ ಇ–ಆಟೊಗಳು ಮಾರ್ಚ್‌ನಲ್ಲಿ ರಸ್ತೆಗೆ ಇಳಿಯಲಿವೆ.

ಈ ವಾಹನಗಳಿಗೆ ಚಾರ್ಜಿಂಗ್‌ ಸೌಲಭ್ಯ ಕಲ್ಪಿಸಲು ವಿದ್ಯುತ್‌ ಸರಬರಾಜು ಕಂಪನಿಗಳೊಂದಿಗೆ (ಎಸ್ಕಾಂ) ಚರ್ಚೆ ನಡೆಸಲಾಗಿದ್ದು, ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಒದಗಿಸಿಕೊಡುವಂತೆ ಕೋರಲಾಗಿದೆ. ಇದಕ್ಕೆ ಎಸ್ಕಾಂಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ.

ಪ್ರಿಯಾಂಕ್ ಖರ್ಗೆ ಹಾಗೂ ಇಲಾಖೆಯ ಅಧಿಕಾರಿಗಳು ಎಲೆಕ್ಟ್ರಿಕ್ ರಿಕ್ಷಾಗಳ ಕಾರ್ಯಕ್ಷಮತೆ ಪರಿಶೀಲನೆ ನಡೆಸಿದ್ದಾರೆ. ಇವುಗಳು ನಮ್ಮ ವಾತಾವರಣಕ್ಕೆ ಹೊಂದಾಣಿಕೆ ಆಗುತ್ತವೆಯೇ, ಗುಡ್ಡಗಾಡು ಪ್ರದೇಶಗಳಲ್ಲಿ ಬಳಕೆ ಸಾಧ್ಯವೇ ಹಾಗೂ ಈ ರಿಕ್ಷಾಗಳಿಗೆ ಮೂಲಸೌಕರ್ಯ ಕಲ್ಪಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿ ಪಡೆದಿದ್ದಾರೆ.

‘ರಾಜ್ಯದಲ್ಲಿ ಹೊಸ ಆಟೊಗಳಿಗೆ ಪರವಾನಗಿ ನೀಡುತ್ತಿಲ್ಲ. ಬೆಂಗಳೂರಿನಲ್ಲಿ ಮಾಲಿನ್ಯ ಪ್ರಮಾಣ ವಿಪರೀತವಾಗಿದೆ. ಜತೆಗೆ, ಇ–ರಿಕ್ಷಾಗಳಿಗೆ ಅನುಮತಿ ನೀಡಲು ಸಾರಿಗೆ ಇಲಾಖೆ ಒಪ್ಪಿಗೆ ಸೂಚಿಸಿದೆ. ಹೀಗಾಗಿ, ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಪ್ರಿಯಾಂಕ್‌ ತಿಳಿಸಿದರು.

‘ಇ–ರಿಕ್ಷಾಗಳನ್ನು ಮನೆಯಲ್ಲೇ ಚಾರ್ಜ್‌ ಮಾಡಿಕೊಳ್ಳಬಹುದು. ಏಳೆಂಟು ಗಂಟೆ ಚಾರ್ಜ್‌ ಮಾಡಬೇಕಾಗುತ್ತದೆ. ಇದು ಕಷ್ಟದ ಕೆಲಸ. ಹಾಗಾಗಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ರಿಕ್ಷಾಗಳಿಗೆ ಚಾರ್ಜ್ ಮಾಡಲು ಅಗತ್ಯವಾದ ಚಾರ್ಜಿಂಗ್ ಪಾಯಿಂಟ್‌ಗಳನ್ನು 80 ಕಡೆ ಸ್ಥಾಪಿಸಲು ಈಗಾಗಲೇ ಬೆಸ್ಕಾಂ ಜತೆ ಮಾತುಕತೆ ನಡೆದಿದೆ’ ಎಂದರು.

*
ಪ್ರತಿ ಇ–ರಿಕ್ಷಾಗೆ ₹3 ಲಕ್ಷ ಆಗಲಿದ್ದು, ಈ ಯೋಜನೆಗೆ ₹30 ಕೋಟಿ ಮೀಸಲಿಡಲು ಉದ್ದೇಶಿಸಲಾಗಿದೆ.
-ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !