ಸೈನಿಕನಿಗೆ ಹುಟ್ಟೂರಲ್ಲಿ ಅದ್ಧೂರಿ ಸ್ವಾಗತ

7

ಸೈನಿಕನಿಗೆ ಹುಟ್ಟೂರಲ್ಲಿ ಅದ್ಧೂರಿ ಸ್ವಾಗತ

Published:
Updated:
Deccan Herald

ಚಾಮರಾಜನಗರ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಹುಟ್ಟೂರಿಗೆ ಬಂದ ಸೈನಿಕ ಆರ್. ಮಂಜುನಾಥ್‌ಗೆ ಕುಟುಂಬ ವರ್ಗ, ಸ್ನೇಹಿತರು ಹಾಗೂ ಪಟ್ಟಣದ ಜನತೆ ಬುಧವಾರ ಅದ್ಧೂರಿ ಸ್ವಾಗತ ನೀಡಿದರು.

ಮಂಜುನಾಥ್ ಅವರು ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. 1996ರಲ್ಲಿ ಸೇನೆಗೆ ಸೈನಿಕರಾಗಿ  ಸೇರ್ಪಡೆಗೊಂಡಿದ್ದ ಅವರು, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಗಡಿ ಪ್ರದೇಶ, ರಾಜೌರಿ, ಹುಡಿ ಅಮರ್‌ನಾಥ್, ಕುಪ್ವಾರ ಹಾಗೂ ಅರುಣಾಚಲ ಪ್ರದೇಶದಲ್ಲೂ ಸೇವೆ ಸಲ್ಲಿಸಿದ್ದಾರೆ.

ಕೊನೆಯದಾಗಿ ಬೆಳಗಾವಿಯ ಮರಾಠಾ ರೆಜಿಮೆಂಟ್‌ನಲ್ಲಿ ಕರ್ತವ್ಯ ಪೂರೈಸಿ ಪತ್ನಿ ಹಾಗೂ ಮಕ್ಕಳೊಂದಿಗೆ ಹುಟ್ಟೂರಿಗೆ ಆಗಮಿಸಿದರು. ಮಂಜುನಾಥ್ ಅವರು ಪಟ್ಟಣದ ದೇವಾಂಗ ಬೀದಿಯ ಸಿ.ಎಸ್.ರಂಗಸ್ವಾಮಿ ಮತ್ತು ಮಂಗಳಮ್ಮ ಅವರ ದ್ವಿತೀಯ ಪುತ್ರ. 

ಪಟಾಕಿ ಸಿಡಿಸಿ ಅದ್ಧೂರಿ ಸ್ವಾಗತ: ಮಂಜುನಾಥ್‌ ಹುಟ್ಟೂರಿಗೆ ಬರುವಾಗ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಕುಟುಂಬ ವರ್ಗ ಮತ್ತು ಸ್ನೇಹಿತರು ಸಿದ್ಧತೆ ನಡೆಸಿದ್ದರು. ಅವರ ಬರುವಿಕೆಗಾಗಿ ಹೂವಿನ ಹಾರ ಹಿಡಿದು ಸಂತೇಮರಹಳ್ಳಿ ವೃತ್ತದಲ್ಲಿ ಕೆಲವರು ನಿಂತಿರುವುದನ್ನು ಗಮನಿಸಿದ ಅನೇಕರು, ವಿಷಯ ತಿಳಿದು ತಾವು ಸಹ ಹೂವಿನ ಹಾರಗಳನ್ನು ಹಿಡಿದು ಸೈನಿಕನ ಸ್ವಾಗತಕ್ಕೆ ಕಾದು ನಿಂತರು.

ನೂರಾರು ಸಂಖ್ಯೆಯಲ್ಲಿ ಜನರು ಸಂತೇಮರಹಳ್ಳಿ ವೃತ್ತದ ಬಳಿ ಜಮಾಯಿಸಿದ್ದರು.  ಸೇನಾ ಸಮವಸ್ತ್ರ ಧರಿಸಿದ್ದ ಮಂಜುನಾಥ್‌ ಅವರು ಸಂಜೆ 7.20ಕ್ಕೆ ಸರ್ಕಾರಿ ಬಸ್‌ನಿಂದ ಇಳಿಯುತ್ತಿದ್ದಂತೆ ನೆರೆದಿದ್ದವರ ಸಂಭ್ರಮ ಮುಗಿಲು ಮುಟ್ಟಿತ್ತು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ, ಎಲ್ಲ ವಾಹನಗಳನ್ನು ತಡೆದು ಮೆರವಣಿಗೆ ಸರಾಗವಾಗಿ ನಡೆಯಲು ಅನುಕೂಲ ಮಾಡಿಕೊಟ್ಟರು.

ಇದೇ ಸಂದರ್ಭದಲ್ಲಿ ಸಾರ್ವಜನಿಕರು ಪಟಾಕಿಗಳನ್ನು ಸಿಡಿಸಿದರು. ಭಾರತಾಂಬೆಗೆ ಜಯಕಾರ ಹಾಕುತ್ತಾ ಮೆರವಣಿಗೆಯಲ್ಲಿ ಮಂಜುನಾಥ್‌ ಅವರನ್ನು ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದವರೆಗೆ ಕರೆತಂದರು. ಅಲ್ಲಿಂದ ದೇವಾಂಗ ಬೀದಿಯಲ್ಲಿರುವ ಅವರ ಮನೆವರೆಗೆ ಕರೆದುಕೊಂಡು ಹೋದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !