ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾತು ತಪ್ಪಿದ ಬೇಸರ’

Last Updated 30 ನವೆಂಬರ್ 2018, 19:30 IST
ಅಕ್ಷರ ಗಾತ್ರ

* ನಾನು ನನ್ನ ಸ್ನೇಹಿತೆಗೆ 1ಲಕ್ಷ ಸಾಲ ಕೊಡಿಸುತ್ತೇನೆ ಎಂದು ಮಾತು ಕೊಟ್ಟಿದ್ದೆ. ಆದರೆ ಎಲ್ಲೂ ಹಣ ಹೊಂದಿಸಲು ಸಾಧ್ಯವಾಗಲಿಲ್ಲ. ಲೋನ್ ಕೊಡಲು ಯಾರು ಮುಂದೆ ಬರುತ್ತಿಲ್ಲ. ಇದರಿಂದ ನಾನು ಅವಳಿಗೆ ಕೊಟ್ಟ ಮಾತು ತಪ್ಪಿದ್ದೇನೆ ಅನ್ನಿಸುತ್ತದೆ. ಮನಸ್ಸಿಗೆ ತುಂಬಾ ಬೇಜಾರಾಗುತ್ತಿದೆ. ಓದಲು ಆಸಕ್ತಿ ಇಲ್ಲ. ತಲೆಯಲ್ಲಿ ಬರೀ ಅದೇ ವಿಷಯ ಕೊರೆಯುತ್ತಿರುತ್ತದೆ. ನಾನು ಅವಳಿಗೆ ಯಾವ ರೀತಿ ಸಹಾಯ ಮಾಡಲಿ ತಿಳಿಯುತ್ತಿಲ್ಲ. ತುಂಬಾ ಬೇಸರವಾಗುತ್ತಿದೆ. ಏನು ಮಾಡಲಿ?

ಸುಧಾಕರ್, ಊರು ಬೇಡ

ಮೊದಲಿಗೆ ನೀವು ತಿಳಿದುಕೊಳ್ಳಬೇಕಾದದ್ದು ಏನೆಂದರೆ, ನೀವು ಸಂಪಾದಿಸುತ್ತಿಲ್ಲ ಎಂದ ಮೇಲೆ ಬೇರೆಯವರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತೇನೆ ಎಂದು ಪ್ರಾಮಿಸ್ ಮಾಡುವುದರಲ್ಲಿ ಅರ್ಥವಿಲ್ಲ. ಅದರೊಂದಿಗೆ ನೀವು ಅವರಿಗೆ ಭರವಸೆ ನೀಡಲು ಸಾಧ್ಯವಿಲ್ಲ. ಹಾಗಾಗಿ ಈ ಘಟನೆಯಿಂದ ಪಾಠ ಕಲಿಯಿರಿ. ನಿಮ್ಮ ಸ್ನೇಹಿತೆ ಖಂಡಿತ ನಿಮ್ಮ ಮೇಲೆ ಬೇಸರಗೊಂಡಿರುವುದಿಲ್ಲ. ನಿಮ್ಮಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಇಲ್ಲದೆ, ಬೇರೆಯವರಿಗೆ ಹಣದ ಸಹಾಯ ಮಾಡುತ್ತೇನೆ ಎಂದು ಎಂದಿಗೂ ಪ್ರಾಮಿಸ್ ಮಾಡಬೇಡಿ. ನಿಮ್ಮಲ್ಲಿ ಹಣ ಇಲ್ಲದಿರುವಾಗ ಬೇರೆಯವರಿಗೆ ಅದನ್ನು ಹೊಂದಿಸಿ ಕೊಡುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಡಿ. ಆರ್ಥಿಕ ಸಹಾಯದ ನಡುವೆ ಭಾವನಾತ್ಮಕ ಋಣವನ್ನು ತರಬೇಡಿ. ಇದನ್ನು ತುಂಬಾ ಜಾಗರೂಕರಾಗಿ ನಿಭಾಯಿಸಬೇಕು. ವಾಸ್ತವದ ದೃಷ್ಟಿಯಿಂದ ಯೋಚಿಸಿ. ಆಗ ಯಾರಿಗೂ ನೋವಾಗುವುದಿಲ್ಲ. ವಾಸ್ತವವನ್ನು ಸರಿಯಾಗಿ ತಿಳಿಸಿದರೆ ಆಗ ಯಾರೂ ತಪ್ಪಾಗಿ ತಿಳಿದುಕೊಳ್ಳುವುದಿಲ್ಲ.

**

* ನನಗೆ 18 ವರ್ಷ. ನಾನು ಡಿಗ್ರಿ ಓದುತ್ತಿದ್ದೇನೆ. ನನಗೆ ಈಗೀಗ ಓದೋಕೆ ಆಗುತ್ತಿಲ್ಲ. ಕೆಎಎಸ್‌ ಮಾಡಬೇಕು ಎಂಬ ಕನಸು ಇದೆ. ಹಾಗೆ ನನ್ನ ಅಪ್ಪ ಅಮ್ಮ ನನ್ನ ಮೇಲೆ ತುಂಬಾ ನಂಬಿಕೆ ಇಟ್ಟುಕೊಂಡಿದ್ದಾರೆ. ಇವೆಲ್ಲವೂ ನನಗೆ ತಿಳಿದಿದ್ದರೂ ಓದಲು ಆಗುತ್ತಿಲ್ಲ. ನನಗಿರುವ ಸಮಸ್ಯೆ ಏನು? ಇದಕ್ಕೆ ಪರಿಹಾರ ಏನು?

ಲಕ್ಷ್ಮಿ, ಊರು ಬೇಡ

ನೀವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಗುರಿಯನ್ನು ಇರಿಸಿಕೊಂಡಿದ್ದೀರಿ. ಅದು ಶ್ಲಾಘನೀಯ. ಹಾಗಾಗಿ ಮುಂದಿನ ಹೆಜ್ಜೆ ಇಡಲು ಸುಲಭವಾಗುತ್ತದೆ. ನಿಮ್ಮ ಗುರಿಯನ್ನು ಹೇಗೆ ತಲುಪಬೇಕು ಮತ್ತು ಅದರ ಮೇಲೆ ಹೇಗೆ ಗಮನವಿರಿಸಬೇಕು ಎಂಬುದು ಇದರಿಂದ ಅರಿತುಕೊಳ್ಳಬಹುದು. ಸದ್ಯಕ್ಕೆ ನೀವು ನಿಮ್ಮ ಓದು, ಗುರಿ ಸಾಧನೆ ಹಾಗೂ ತಂದೆ–ತಾಯಿಯರ ಗೌರವವನ್ನು ಹೇಗೆ ಹೆಚ್ಚಿಸಬಹುದು ಎಂಬುದರ ಬಗ್ಗೆ ತುಂಬ ಯೋಚಿಸಿ ಮಾನಸಿಕ ಒತ್ತಡಕ್ಕೆ ಒಳಗಾಗಿರಬಹುದು. ನಿಮ್ಮ ಮನಸ್ಸಿನಾಳದಲ್ಲಿ ಈ ವಿಷಯಗಳು ಇರುವುದು ನಿಜಕ್ಕೂ ಒಳ್ಳೆಯದು. ಆದರೆ ಅದರ ಬಗ್ಗೆ ಯೋಚಿಸುತ್ತಾ, ಅದನ್ನು ಕಾರ್ಯರೂಪಕ್ಕೆ ತರದೇ ಇರುವುದರಿಂದ, ಇದು ನಿಮ್ಮ ಮನಸ್ಸಿನ ಒತ್ತಡಕ್ಕೆ ಕಾರಣವಾಗುತ್ತಿದೆ. ನೀವು ಸರಿಯಾದ ಟೈಮ್ ಟೇಬಲ್ ಒಂದನ್ನು ರಚಿಸಿಕೊಳ್ಳಿ. ಅದರಲ್ಲಿ ನಿಮ್ಮ ಡಿಗ್ರಿ ಓದು ಹಾಗೂ ಕೆಎಎಸ್‌ ಓದಿಗೆ ಸಮಯ – ಇಂಥವನ್ನು ಸರಿಯಾಗಿ ಹೊಂದಿಸಿಕೊಳ್ಳಿ. ದಿನಪತ್ರಿಕೆ ಓದಲು, ಟಿ.ವಿ ನ್ಯೂಸ್‌ ನೋಡಲು ಸಮಯ ಕೊಡಿ. ಇದು ಕೂಡ ತುಂಬಾ ಮುಖ್ಯ. ಯೋಗ ಹಾಗೂ ಧ್ಯಾನವನ್ನು ಅಭ್ಯಾಸ ಮಾಡಿ. ಇದರಿಂದ ಮನಃಶಾಂತಿ ಹೆಚ್ಚುತ್ತದೆ. ಸ್ನೇಹಿತರೊಂದಿಗೆ ಸ್ವಲ್ಪ ಹೊತ್ತು ಹೊರಗಡೆ ಆಟವಾಡಿ. ಇದರಿಂದ ಒತ್ತಡದಿಂದ ಹೊರಬರಲಾದೀತು; ಆಗ ಹೊಸ ಹುರುಪಿನೊಂದಿಗೆ ಓದಲು ಸಾಧ್ಯವಾಗುತ್ತದೆ. ಯಾವುದೇ ವಿಷಯದ ಬಗ್ಗೆಯೂ ಅತಿಯಾಗಿ ಯೋಚಿಸಬೇಡಿ. ನಿಮ್ಮ ಓದು ನಿಮ್ಮ ಆದ್ಯತೆಯಾಗಲಿ. ಅದರ ಮೇಲೆ ಗಮನವಿಡಿ.ಆಗ ಖಂಡಿತ ನೀವು ಗುರಿ ಸಾಧಿಸಲು ಸಾಧ್ಯ.

**

* ನಾನು ಪದವಿ ಮುಗಿಸಿ ಸರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ನನ್ನ ಸಮಸ್ಯೆ ಏನೆಂದರೆ ಇತ್ತೀಚೆಗೆ ತುಂಬಾ ನಿದ್ದೆ ಬರುತ್ತಿದೆ. ಆಲಸ್ಯತನ ಹೆಚ್ಚಾಗಿದೆ. ಯಾವ ಕಾರಣಕ್ಕೆ ಹೀಗಾಗುತ್ತಿದೆ ಗೊತ್ತಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.

ಹೆಸರು, ಊರು ಬೇಡ

ಯುವಕರಲ್ಲಿ ಈ ರೀತಿಯ ಭಾವನೆ ಇರಬಾರದು.ಯುವಕರು ಯಾವಾಗಲೂ ಶಕ್ತಿವಂತರಾಗಿ, ಸದಾ ಚಟುವಟಿಕೆ ಹಾಗೂ ಉತ್ಸಾಹದಿಂದ ಇರಬೇಕು. ಆಗ ಮಾತ್ರ ಇರಿಸಿಕೊಂಡ ಗುರಿಯನ್ನು ಮುಟ್ಟಲು ಸಾಧ್ಯ. ನಿಮ್ಮ ಜೀವನಕ್ರಮವನ್ನು ಪರೀಕ್ಷಿಸಿಕೊಳ್ಳಿ. ಪ್ರತಿನಿತ್ಯದ ಡಯೆಟ್, ವ್ಯಾಯಾಮ, ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಮಾತು, ಸಮಾಜದಲ್ಲಿ ಬೆರೆಯುವುದು – ಈ ಎಲ್ಲವನ್ನೂ ಗಮನಿಸಿಕೊಳ್ಳಿ. ಸರಿಯಾದ ಕ್ರಮದಲ್ಲಿ ವ್ಯಾಯಾಮ ಮತ್ತು ಡಯೆಟ್ ಮಾಡುವುದು ತುಂಬಾ ಮುಖ್ಯ. ಇದರಿಂದ ಏಕಾಗ್ರತೆ ಹೆಚ್ಚುತ್ತದೆ. ನಿಮ್ಮಲ್ಲಿರುವ ಓರೆಕೋರೆಗಳನ್ನು ಬದಲಿಸಿಕೊಳ್ಳಿ. ಖಂಡಿತ ನಿಮ್ಮಿಂದ ಓದಲು ಮತ್ತು ಗುರಿ ಸಾಧಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT