ಶನಿವಾರ, ಮೇ 21, 2022
23 °C

'ಫಂಗಸ್‌' ಚಿಕಿತ್ಸೆ ಎಂಬ ಮರುಹುಟ್ಟು

ಜಯಂತಿ ಕೆವೈ Updated:

ಅಕ್ಷರ ಗಾತ್ರ : | |

ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ 'ಫಂಗಸ್‌' ಅಂದರೆ ಶಿಲೀಂಧ್ರದ ಸೋಂಕು ಕಾಣಿಸಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಅದರದೇ ಮಾತು. ಕರಿ, ಬಿಳಿ, ಹಳದಿ ಹೀಗೆ ಬಣ್ಣ ಬಣ್ಣದ ಶಿಲೀಂಧ್ರದ ಸೋಂಕು, ಅದರ ಅಪಾಯ, ಚಿಕಿತ್ಸೆಗೆ ಬೇಕಾದ ಔಷಧ ಸಿಗದಿರುವುದು ಹೀಗೆ ಹಲವಾರು ವಿಷಯಗಳು ಈಗ ಮುನ್ನೆಲೆಗೆ ಬಂದಿವೆ.

ಅದು 2018ರ ಜೂನ್‌ ತಿಂಗಳು. ನಾನಾಗ ಧಾರವಾಡ ಆಕಾಶವಾಣಿಯ ಸುದ್ದಿ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ನನ್ನ ಪತಿ ವೆಂಕಟೇಶ ಪ್ರಸಾದ್ ಆಗಾಗ ಧಾರವಾಡಕ್ಕೆ ಬಂದು ಹೋಗುತ್ತಿದ್ದರು. ಈ ಬಾರಿ ಬಂದಾಗ ಅವರ ಬಲಗಣ್ಣ ಕೆಳಗೆ ಒಂದು ಸಣ್ಣ ಊತ ಕಾಣಿಸುತ್ತಿತ್ತು. ಕಣ್ಣ ಕೆಳಗೆ ಆದ್ದರಿಂದ ಓದುವಾಗೆಲ್ಲ ಅಡಚಣೆಯಾಗುತ್ತಿತ್ತು. ಒಮ್ಮೆ ವೈದ್ಯರಿಗೆ ತೋರಿಸುವುದು ಸೂಕ್ತ ಎಂದು ಧಾರವಾಡದ ಜಿಲ್ಲಾಸ್ಪತ್ರೆಯ ಕಣ್ಣಿನ ತಜ್ಞರ ಬಳಿ ಹೋದೆವು. ನೋಡಿ, ಪರೀಕ್ಷೆ ಮುಗಿದ ಮೇಲೆ ಇದು ಕಣ್ಣಿನ ಆರ್ಬಿಟ್‌ ಪ್ರದೇಶವಾದ್ದರಿಂದ ನೀವು ಆರ್ಬಿಟಾಲಜಿಸ್ಟ್‌ ಅವರನ್ನು ಕಾಣುವುದು ಉತ್ತಮ. ಹಾಗೆಂದು ನಿಧಾನಿಸುವಂತಿಲ್ಲ, ವಿಳಂಬವಾದರೆ ಕಣ್ಣಿನ ದೃಷ್ಟಿಗೆ ತೊಂದರೆ ಆಗಬಹುದು ಅಥವಾ ಬಲಭಾಗ ಪಾರ್ಶ್ವವಾಯು ಆಗಬಹುದು ಎಂದಾಗ ನಮಗೆ ಅದರ ತೀವ್ರತೆ ಬಗ್ಗೆ ಸ್ವಲ್ಪ ಆತಂಕವೇ ಆಯಿತು.

ಅದುವರೆಗೂ ಅದೊಂದು ಸಣ್ಣ ಊತ ಅಂದುಕೊಂಡಿದ್ದ ನಮಗೆ ಹುಬ್ಬಳ್ಳಿಯ ಕಣ್ಣಾಸ್ಪತ್ರೆಯ ತಜ್ಞವೈದ್ಯರ ಭೇಟಿ ನಮ್ಮ ಮುಂದಿನ ಪಯಣಕ್ಕೆ ದಿಕ್ಕು ತೋರಿಸಿತು. ಬಯಾಪ್ಸಿ ಆಯಿತು. ಫಂಗಲ್‌ ಇನ್ಫೆಕ್ಷನ್- 'ಆಸ್ಪೆರ್ಜಿಲೋಸಿಸ್‌' ಅಂತ ಅದನ್ನು ಕರೆದಾಯಿತು. ನಮಗೇ ತಿಳಿದೇ ಇರದಿದ್ದ ಹೊಸರೋಗವೊಂದರ ಪರಿಚಯವಾಯಿತು. ಅವರಲ್ಲಿ ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ಹಾಗೂ ಶಸ್ತ್ರಕಿಯೆ ಅಗತ್ಯವಿದ್ದ ಕಾರಣ ನಮ್ಮನ್ನು ಶಿಲೀಂಧ್ರ ಸೋಂಕು ಗುಣಪಡಿಸುವ ತಜ್ಞರ ಬಳಿಗೆ ಹೋಗಲು ಶಿಫಾರಸು ಮಾಡಿದರು. ಇಷ್ಟೆಲ್ಲ ಆಗುವ ಹೊತ್ತಿಗೆ  ನಮ್ಮವರ ಕಣ್ಣಿನ ಬಿಳಿಗುಡ್ಡೆ ಮುಂದಕ್ಕೆ ಬರಲಾರಂಭಿಸಿತ್ತು ಜೊತೆಗೆ ದೃಷ್ಟಿ ಮಂದವಾಗತೊಡಗಿತ್ತು.

ಸರಿ ಕಣ್ಣಿನ ವೈದ್ಯರ ಸಲಹೆಯಂತೆ ಶಸ್ತ್ರಕ್ರಿಯಾ ತಜ್ಞರ ಭೇಟಿಗೆ ಹೋದೆವು. ಅದಾಗಲೇ ಸಂಜೆಯಾಗತೊಡಗಿತ್ತು. ಮನೆ ಧಾರವಾಡ, ಹುಬ್ಬಳ್ಳಿಯಿಂದ ಹೋಗಲು ರಾತ್ರಿಯಾಗಬಹುದು ಅನ್ನುವ ಲೆಕ್ಕಾಚಾರದಲ್ಲಿ ವೈದ್ಯರನ್ನು ಭೇಟಿ ಮಾಡಿದರೆ ಅವರು ಕೂಡಲೆ ಆಸ್ಪತ್ರೆಗೆ ದಾಖಲಾಗುವಂತೆ ಹೇಳಿದರು. ಯಾವುದೇ ಸಿದ್ಧತೆಯಿಲ್ಲದೆ ಹೋಗಿದ್ದ ನಮಗೆ ಸ್ವಲ್ಪ ಕಸಿವಿಸಿ. ಆದರೂ ಅವರ ಎಚ್ಚರಿಕೆಯ ನುಡಿ ವಿಳಂಬಕ್ಕೆ ಅವಕಾಶವಿಲ್ಲ ಎನ್ನುತ್ತಿತ್ತು. ಮಾರನೇ ದಿನವೇ ಎಂಡೋಸ್ಕೋಪಿಕ್‌ ಸರ್ಜರಿ ಎಂದರು. ನಮ್ಮವರನ್ನು ಆಸ್ಪತ್ರೆಗೆ ದಾಖಲಿಸಿ ನಾನು ಧಾರವಾಡಕ್ಕೆ ಹೋಗಿ ಅಗತ್ಯವಿದ್ದ ಕೆಲಸ ಮುಗಿಸಿ, ಮಗನ ಜೊತೆ ಮಾರನೇ ದಿನ ಬೆಳಗ್ಗೆಯೇ ಆಸ್ಪತ್ರಗೆ ಹೋದೆ.

ಕೌನ್ಸೆಲಿಂಗ್‌: ಬೆಳಗ್ಗೆ 10 ಗಂಟೆಗೆ ಕೌನ್ಸೆಲಿಂಗ್‌ ಗಾಗಿ ವೈದ್ಯರು ಕರೆದರು. ನನಗೆ ಸಮಸ್ಯೆಯ ಅಗಾಧತೆ, ಅದರಿಂದಾಗಬಹುದಾದ ಪರಿಣಾಮ ಎಲ್ಲವನ್ನೂ ವಿಷದವಾಗಿ ವಿವರಿಸಿದರು. ಆಗಲೇ ನಿಜಕ್ಕೂ ನಮಗೆ ಬಂದೊದಗಿರುವ ಸಮಸ್ಯೆಯ ಅರಿವು ಉಂಟಾಗಿದ್ದು! ಫಂಗಸ್‌ ಈಗಾಗಲೇ ಮೂಗಿನ ಒಳಗೋಡೆ, ನಂತರ ಸೈನಸ್‌ ಮತ್ತು ಮಿದುಳಿಗೂ ಹರಡಿರಬಹುದು ಹಾಗೇನಾದರೂ ಆಗಿದ್ದರೆ ಅದು ಪ್ರಾಣಕ್ಕೆ ಅಪಾಯ ಆಗಬಹುದಾದ ಸಾಧ್ಯತೆ ಬಗ್ಗೆ ಅವರು ಹೇಳುತ್ತಿದ್ದರೆ ಏನೂ ಹೇಳಲಾಗದ ಪರಿಸ್ಥಿತಿಯಲ್ಲಿ ನಾನು ದಿಗ್ಭ್ರಮೆಯಲ್ಲಿ ಕುಳಿತಿದ್ದೆ.

ಕೌನ್ಸೆಲಿಂಗ್‌ಗೆ ನಾನೊಬ್ಬಳೇ ಹೋಗಿದ್ದೆ. ಎಷ್ಟುಹೊತ್ತಾದರೂ ನಾನು ಬರದೇ ಇದ್ದದ್ದು ನೋಡಿ ಮಗ ಆ ಕೋಣೆಯ ಬಾಗಿಲ ಬಳಿ ಇದ್ದದ್ದು ನನ್ನ ಗಮನಕ್ಕೆ ಬರಲಿಲ್ಲ. ವೈದ್ಯರು ಪ್ರಾಣಾಪಾಯದ ಬಗ್ಗೆ ವಿವರಿಸಿದ್ದನ್ನು ಕೇಳಿದವನು ಸೀದಾ ಅಪ್ಪ ದಾಖಲಾಗಿದ್ದ ಕೋಣೆಗೆ ಓಡಿದ. ಅವನು ಓಡಿದ ಸದ್ದಿಗೆ ತಿರುಗಿ ನೋಡಿದಾಗ ನನಗೆ ತಿಳಿದದ್ದು ಅವನು ವೈದ್ಯರ ಮಾತು ಕೇಳಿಸಿಕೊಂಡಿರಬಹುದು ಅಂತ. ಅಲ್ಲಿ ಕೋಣೆಯಲ್ಲಿದ್ದ ಅಪ್ಪನನ್ನು ಅದಾಗಲೇ ಆಪರೇಶನ್‌ ಥಿಯೇಟರಿಗೆ ಕರೆದೊಯ್ಯಲಾಗಿತ್ತು. ನಾನು ವೈದ್ಯರು ಹೇಳಿದ ಕನ್ಸೆಂಟ್‌ ಫಾರಂಗೆ  ಸಹಿ ಮಾಡಿ ಕೋಣೆಗೆ ಹೋದರೆ ಮಗ ತಲೆ ಕೆಳಗೆ ಹಾಕಿ ಕುಳಿತಿದ್ದ! ಪುಟ್ಟ ಏನಾಯ್ತು ? ಯಾಕೆ ಹೀಗೆ ಕುಳಿತಿದ್ದೀಯಾ, ಎಲ್ಲಿ ನೋಡು ನನ್ನ, ತಲೆ ಎತ್ತು ಎಂದಾಗ ಅವನ ಕಣ್ಣುಗಳು ನೀರಿನಕೊಳಗಳಾಗಿದ್ದವು. ಯಾಕೆ ಪುಟ್ಟಾ ಕೇಳಿದರೆ ಅವನ ದನಿ ನಡುಗುತ್ತಿತ್ತು? ಅಪ್ಪಂಗೆ ಏನೂ ಆಗಲ್ಲ ಅಲ್ವಾ ಅಮ್ಮಾ? ಅಂದಾಗ ಏಳನೇ ಕ್ಲಾಸಿನ ಹುಡುಗನ ಮನಸಿನಲ್ಲಿ ನಡೆಯುತ್ತಿರಬಹುದಾದ ತಾಕಲಾಟ ಗೊತ್ತಾಯಿತು. ನನಗೂ ಆ ಕ್ಷಣ ಗಲಿಬಿಲಿಯಾದರೂ ತಕ್ಷಣವೇ ಚೇತರಿಸಿಕೊಂಡು ಏನೂ ಆಗಲ್ಲ ಅವರು ಚೆನ್ನಾಗಿ ಆಗಿ ಮನೆಗೆ ಬರುತ್ತಾರೆ ಒಂದುವಾರ ಇಲ್ಲಿರುವುದು ಅಷ್ಟೆ ನೀನೇನೂ ಯೋಚಿಸಬೇಡ ಎಂದೆ. ಒಂದೇ ವಾರಕ್ಕೆ ಮನೆಗೆ ಹೋಗುತ್ತೇವೆ ಎಂಬುದು ನನ್ನ ಭರವಸೆಯೂ ಆಗಿತ್ತು.

ಮುಗಿದ ಶಸ್ತ್ರಕ್ರಿಯೆ ವೈದ್ಯರ ಮುಖದಲ್ಲಿ ಗೆಲುವು : ಎಂಡೋಸ್ಕೋಪಿಕ್‌ ಸರ್ಜರಿ ಮುಗಿಯಿತು. ಹೊರಗೆ ಬಂದ ವೈದ್ಯರು ನಗುಮುಖದೊಂದಿಗೆ, ಥ್ಯಾಂಕ್‌ ಗಾಡ್‌ ಫಂಗಸ್‌ ಹರಡಿಲ್ಲ. ಹಾಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದರು. ಅದು ಒಂದು ಬಗೆಯ ಸಮಾಧಾನ ನೀಡಿತು. ನನ್ನ ಸಹೋದ್ಯೋಗಿಯೊಬ್ಬರು ನಮ್ಮ ಜತೆಗೆ ಇದ್ದದ್ದು ನಮಗೆ ಕಾಣದ ಊರಲ್ಲಿ ಕಷ್ಟಪಡದಂತಾಗಿತ್ತು. ಸಂಜೆ ಹೊತ್ತಿಗೆ ಜ್ಞಾನ ಬರುತ್ತದೆ ನಂತರ ಹೋಗಿ ಮಾತನಾಡಿಸಿ ಈಗ ಸದ್ಯ ಮಂಪರು ಇರತ್ತೆ. ಅನಸ್ತಿಶಿಯಾ ಕೊಟ್ಟಿದ್ದ ಕಾರಣಕ್ಕೆ ಸಂಜೆ ಹೊತ್ತಿಗೆ ಸರಿಹೋಗತ್ತೆ ಅಂದರು. ಸಮಾಧಾನದ ಉಸಿರು ಬಿಡುವಂತಾಗಿತ್ತು. ಒಂದು ವಾರ ಆಸ್ಪತ್ರೆಯಲ್ಲಿ ಇದ್ದೆವು. ಮೊದಲಿಗೆ ವೆರಿಕೋನಝೋಲ್‌ ಎನ್ನುವ ಫಂಗಸ್‌ ನಿಗ್ರಹಿಸುವ ಔಷಧ ಆರಂಭಿಸಿದರು. ದೇಹ ಪ್ರತಿಕ್ರಿಯೆ ತೋರಲಾರಂಬಿಸಿತು. ಸಂಜೆಯ ವೇಳೆಗೆ ಜ್ವರ. ಸುಸ್ತು. ದೇಹಕ್ಕೆ ಔಷಧ ಒಗ್ಗಿದ ಕೂಡಲೆ ಸರಿಯಾಗುತ್ತದೆ. ಆರಂಭದಲ್ಲಿ ಹೀಗೆ ಆಗುತ್ತೆ ಅನ್ನುವ ಸಮಜಾಯಿಷಿ ಸಿಕ್ಕಿತು. ಸರಿ ಹೋದರೆ ಸಾಕು ಅನ್ನುವ ನಮ್ಮ ಆಲೋಚನೆಗೆ ಪ್ರತಿ ಹಂತದಲ್ಲೂ ವೈದ್ಯರ ಸಾಂತ್ವನ ಇರುತ್ತಿತ್ತು.  

ಮಾರನೆಯ ದಿನ ವೈದ್ಯರು ಆಂಟಿ ಫಂಗಲ್‌ ಚಿಕಿತ್ಸೆಯ ಪೂರ್ಣ ಮಾಹಿತಿ ನೀಡಿದರು. ಕನಿಷ್ಠ 2000 ಎಮ್‌ ಜಿ ಔಷಧ ದೇಹ ಸೇರಲೇಬೇಕು. ದೇಹದಿಂದ ಫಂಗಸ್‌ ನಿರ್ಮೂಲವಾಗಬೇಕೆಂದರೆ ಅದು ಮಿನಿಮಮ್‌ ಡೋಸ್‌ ಎಂದರು. ವಾರದಲ್ಲಿ ಮುಗಿದುಹೋಗುತ್ತದೆ ಅಂದುಕೊಂಡಿದ್ದರೆ ಈಗ ಹೊಸ ವಿಷಯ ತಿಳಿಯಿತು. ದಿನಕ್ಕೆ 100 ಎಮ್‌ ಜಿ ಹೋದರೆ 20 ದಿನದಲ್ಲಿ ಚಿಕಿತ್ಸೆ ಮುಗಿಯುತ್ತದೆ ಎಂದು ಲೆಕ್ಕ ಹಾಕಿದೆವು. ಆದರೆ ಅಂದು ಜ್ವರ ಕಾಣಿಸಿಕೊಂಡದ್ದರಿಂದ ಸ್ವಲ್ಪ ಸಮಯ ಔಷಧ ನಿಂತಿತು 50 ಎಮ್‌ ಜಿ ದೇಹ ಸೇರಲು ಹೀಗೆ ತಡ ಆಗಬಹುದು ಎಂಬ ಕಲ್ಪನೆ ನಮಗೆ ಇರಲಿಲ್ಲ. ಅಲ್ಲಿಂದ ಮುಂದೆ ಹೇಗೋ ಎಂಬ ಆಲೋಚನೆಯೂ ಬರಲಿಲ್ಲ. ವೆರಿಕೋನಝೋಲ್‌ ನಿಂದ ಆಂಫೋಟೆರಿಸಿನ್‌ ಬಿ ಗೆ ಔಷಧ ಬದಲಾವಣೆ ಆಯಿತು. ಆಂಫೋಟೆರಿಸಿನ್‌ ಬಿ ಸ್ಥಳಿಯವಾಗಿ ಲಭ್ಯವಿರಲಿಲ್ಲ. ವೈದ್ಯರೇ ಅದನ್ನು ಮುಂಬೈನಿಂದ ತರಿಸಿಕೊಡುವ ವ್ಯವಸ್ಥೆ ಮಾಡಿದರು. ಒಟ್ಟಾರೆ ಔಷಧ ದೊರೆಯದೆಂಬ ಆತಂಕ ದೂರವಾಗಿತ್ತು. ಮೂರ್ನಾಲ್ಕು ದಿನ ಹೇಗೋ ಕಷ್ಟಪಟ್ಟು ಔಷಧ ದೇಹ ಸೇರಿದ ನಂತರ ಡಿಸ್‌ ಚಾರ್ಜ್‌ ಮಾಡುವುದಾಗಿ ಹೇಳಿದರು. ಸದ್ಯ ಆಸ್ಪತ್ರೆಯಿಂದ ಬಿಡುಗಡೆ ಆಗುತ್ತದೆ ಅನ್ನುವ ಖುಷಿ!.

ಇಲ್ಲಿ ಒಂದು ಮಾತು ಹೇಳಲೇಬೇಕು. ನಮ್ಮವರು ಎಂದೂ ಆಸ್ಪತ್ರೆಗೆ ಹೋದವರಲ್ಲ. ಏನಾದರೂ ಅಲ್ಪಸ್ವಲ್ಪ ಸಮಸ್ಯೆಯಾದರೆ ಮನೆಯಲ್ಲೇ ಕಷಾಯ ಅಷ್ಟಕ್ಕೂ ಮೀರಿದರೆ ನಮ್ಮ ಆಯುರ್ವೇದ ವೈದ್ಯರ ಬಳಿ ಸಲಹೆ. ಅಲ್ಲದೆ ಅವರು ಧೂಮಪಾನಿಯಲ್ಲ, ಮದ್ಯಪಾನಿಯೂ ಅಲ್ಲ. ಕಾಫಿ, ಚಹಾ ಸೇವನೆಯೂ ಕಡಿಮೆ. ಆರೋಗ್ಯದ ವಿಷಯದಲ್ಲಿ ಹುಷಾರಿ. ಹೊರಗಡೆ ಅಂದರೆ ಹೊಟೆಲುಗಳಲ್ಲಿ ತಿನ್ನುವುದು ಕಡಿಮೆ. ಬಿಪಿ, ಮಧುಮೇಹಗಳ ಬಾಧೆಯೂ ಇಲ್ಲದೆ ಶರೀರವನ್ನು ಜೋಪಾನವಾಗಿ ಕಾಪಾಡಿಕೊಳ್ಳುವ ಪೈಕಿ. ಅಂತಹವರಿಗೆ ಇದಾವುದೋ ರೋಗ ಅದೂ ಹೇಗೆ ಬಂದು ಅಮರಿಕೊಂಡಿತೋ ಒಟ್ಟಾರೆ ಅನುಭವಿಸುವಂತಾಯಿತು.

ಮನೆಗೆ ಹೊರಡುವ ಮೊದಲು ಬಂದ ತಜ್ಞ ವೈದ್ಯರು 2000 ಎಮ್‌ ಜಿ ಪೂರೈಸಬೇಕೆಂದರೆ ಇನ್ನುಮುಂದೆ ಡೇಕೇರ್‌ ನಲ್ಲಿ ಬಂದು ಇಂಜೆಕ್ಷನ್‌ ಹಾಕಿಸಿಕೊಂಡು ಹೋಗುವಂತೆ ಸಲಹೆ ನೀಡಿದರು. ನಮಗೂ ಅದು ಹಿತವಾಗಿತ್ತು. ಸದ್ಯ ಎಲ್ಲ ಮುಗಿಯಿತಲ್ಲ ಅನ್ನುವ ಭಾವದೊಂದಿಗೆ ಆಸ್ಪತ್ರೆಯಿಂದ ಹೊರಟುಬಂದೆವು.

ಯಾತನಾಮಯ ಪಯಣದ ಆರಂಭ: ಮರುದಿನ ಮತ್ತೆ ಇಂಜೆಕ್ಷನ್‌ಗೆ ಹೋದೆವು. ನಮಗಾಗಿ ಆಂಫೋಟೆರಿಸಿನ್ ಬಿ ಕಾಯುತ್ತಿತ್ತು. 50ಎಮ್‌ ಜಿ ಯ ವಯಲ್‌ ಔಷಧ ಅಂಗಡಿಯಿಂದ ಪಡೆದು ನಮಗೆ ನಿಗದಿ ಪಡಿಸಿದ್ದ ಕೋಣೆಗೆ ಹೋದೆವು. ಡ್ರಿಪ್ಸ್‌ ಮೂಲಕ ಔಷಧ ಹಾಕಿ ಹೋದರು. ಮಲಗಿದ್ದ ನಮ್ಮವರಿಗೆ ಚಳಿ ಶುರುವಾಯಿತು. ಅಂಗೈ, ಅಂಗಾಲು ಕೊರೆಯಲಾರಂಭಿಸಿತು. ದೇಹವಿಡೀ ನಡುಗುತ್ತಿತ್ತು. ಹಿಡಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಓಡಿಹೋಗಿ ವೈದ್ಯರನ್ನು ಕರೆತಂದೆ. ತಕ್ಷಣವೆ ಪ್ಯಾರಸಿಟಮಾಲ್‌ ಇಂಜೆಕ್ಷನ್‌ ಕೊಟ್ಟರು. ಸ್ವಲ್ಪ ಹೊತ್ತಿಗೆ ಜ್ವರ ಇಳಿಯಿತು ಮತ್ತೆ ಡ್ರಿಪ್ಸ್‌ ಮೂಲಕ ಔಷಧಿ ಮುಂದುವರಿಯಿತು. ಅಂದು ಹಾಗೂ ಹೀಗೂ ೫೦ ಎಮ್‌ ಜಿ ದೇಹ ಸೇರಿತು. ನಂತರ ಎರಡು ದಿನ ಹಾಗೆ ಬಡಿದಾಡಿ 100 ಎಮ್‌ ಜಿ ಆಯಿತು. ಮತ್ತೆ ನಾಲ್ಕನೆ ದಿನದ ಹೊತ್ತಿಗೆ ದೇಹ ತೀವ್ರ ಪ್ರತಿರೋಧ ತೋರಿತು. ಔಷಧ ಹೋಗಲು ಸಾಧ್ಯವಾಗುತ್ತಿಲ್ಲ, ಒಂದೆಡೆ ನಡುಕ, ಮತ್ತೊಂದೆಡೆ ಏರಿದ ಜ್ವರ, ವಾಂತಿ ಹೀಗೆ ಸಮಸ್ಯೆ ಹೆಚ್ಚಾಗತೊಡಗಿತು. ಆಂಫೋಟೆರಿಸಿನ್‌ ಬಿ ಒಂದುರೀತಿ ವಿಷದಂತೆ. ದೇಹ ಸೇರುವುದೇ ಕಷ್ಟವಾಗುತ್ತಿತ್ತು ಅದರ ಜತೆ ಅದರಿಂದಾಗುವ ಅಂಗಾಂಗಗಳ ಹಾನಿ ಮತ್ತೊಂದು ತರಹ. ದಿನ ಬಿಟ್ಟು ದಿನ ಲಿವರ್‌ ಫಂಕ್ಷನ್‌ ಟೆಸ್ಟ್‌, ರೀನಲ್‌ ಫಂಕ್ಷನ್‌ ಟೆಸ್ಟ್‌, ಎಕ್ಸ್‌ ರೇ, ಹೀಗೆ ಪರೀಕ್ಷೆಗಳನ್ನು ಮಾಡಿಸಿ ಯಾವ ಅಂಗಕ್ಕೂ ಏನೂ ಹಾನಿಯಾಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡು ಔಷಧ ಮುಂದುವರಿಸಲಾಗುತ್ತಿತ್ತು. ಇವರಿಗೆ ಔಷಧ ದೇಹ ಸೇರುವುದು ಕಷ್ಟವಾಗತೊಡಗಿತು. ಮೇಲಿಂದ ಮೇಲೆ ಜ್ವರ, ಛಳಿ, ವಾಂತಿ ಹೀಗೆ ಆಂಫೋಟೆರಿಸಿನ್‌ ಬಿಯ ದುಷ್ಪರಿಣಾಮಗಳು ನಮ್ಮವರನ್ನು ಹಿಂಡಿ ಹಿಪ್ಪೆ ಮಾಡಲಾರಂಭಿಸಿತು.

ಕಡೆಗೆ ಡೇ ಕೇರ್‌ ಆಗುವುದಿಲ್ಲ ಎಂದು ಮತ್ತೆ ಆಸ್ಪತ್ರಗೆ ದಾಖಲಾಗಬೇಕಾದ ಅನಿವಾರ್ಯ ಬಂದೊದಗಿತು. ಆಸ್ಪತ್ರೆಯಲ್ಲಿ ದಾಖಲಾದರು. ದಿನ ದಿನ ಅದೇ ಕತೆ. ಪ್ಯಾರಾಸಿಟಮಾಲ್‌ ಇಂಜೆಕ್ಷನ್‌ ಪಕ್ಕದಲ್ಲೆ ಇರಬೇಕು. ವಾಂತಿ ನಿಲ್ಲಲು ಮತ್ತೊಂದು, ಎಲ್ಲ ನಿಂತು ದೇಹ ತಹಬಂದಿಗೆ ಬಂದಕೂಡಲೆ ಮತ್ತೆ ಆಂಫೋಟೆರಿಸಿನ್‌ ಬಿ! ಹೀಗೆ ಅದರೊಡನೆ ಹೆಣಗಾಡುವ ಪರಿಸ್ಥಿತಿ ಬಂದಿತು. ವಾರವಾದರೂ 500 ಎಮ್‌ ಜಿ ದಾಟಲಿಲ್ಲ. ಈ ಮಧ್ಯೆ ಕೈಗಳಿಗೆ ಹಾಕಿದ್ದ ಡ್ರಿಪ್ಸ್‌ನ ಸೂಜಿಯಿಂದಾಗಿ ಕೈಗಳು ಊದಿಕೊಂಡವು. ಮತ್ತೆ ಅಲ್ಲಿ ಚುಚ್ಚಲು ಸಾಧ್ಯವಾಗದಂತಾಯಿತು. ಎರಡೂ ಕೈಗಳು ಊದಿದ ಮೇಲೆ ಕಾಲಿಗೆ ಹಾಕುವ ಯೋಚನೆ ಬಂದಿತಾದರೂ ಅದರ ಬದಲಿಗೆ ಕತ್ತಿನ ಎಡ ಬಲ ಪಕ್ಕಗಳಿಗೆ ಹಾಕುವ ಅದೂ ನಾಲ್ಕೈದು ನಾಳಗಳಿರುವಂತಹ ಡ್ರಿಪ್ಸ್‌ ಹಾಕುವ ನಿರ್ಧಾರ ತೆಗೆದುಕೊಂಡರು. ಇದರದು ಇನ್ನೊಂದು ತರಹದ ಸಮಸ್ಯೆ.ಅಕಸ್ಮಾತ್‌ ಇನಫೆಕ್ಷನ್‌ ಆದರೆ  ಶ್ವಾಸಕೋಶಕ್ಕೆ ಹಾನಿ ಆಗುವ ಸಾಧ್ಯತೆ. ಮತ್ತೊಂದು ರಿಸ್ಕ್!  ಡ್ರಿಪ್ಸ್‌ ನ ನಾಳ ಮಾಮೂಲಿ ತರಹದ್ದು ಅಲ್ಲ ಮಿರಾ ಫಿಲ್ಟರ್‌ ಎನ್ನುವಂತಹುದು. ಅದೂ ಸ್ವಲ್ಪ ದುಬಾರಿಯೆ. ಮತ್ತು ಈ ಆಂಫೋಟೆರಿಸಿನ್‌ ಬಿ ಜಿಗುಟಾದಂತಹ ಔಷಧ. ಹಾಗಾಗಿ ಅದು ಮಾಮೂಲೀ ಡ್ರಿಪ್ಸ್‌ ನಾಳದಲ್ಲಿ ಸರಾಗವಾಗಿ ಹರಿಯುವುದಿಲ್ಲ. ಒಮ್ಮೊಮ್ಮೆ ದಿನಕ್ಕೆ ಮೂರು ನಾಲ್ಕು ಫಿಲ್ಟರ್‌ ಡ್ರಿಪ್‌ ಬೇಕಾಗುತ್ತಿತ್ತು. ಮೊದಲವಾರ 500 ಎಮ್‌ ಜಿ ದಾಟಲಿಲ್ಲ. ಹಾಗೆಂದು ನಿಲ್ಲಿಸುವಂತಿಲ್ಲ. ಮುಂದುವರಿಯಲು ಬಿಡದ ಹಾಗೆ ಜ್ವರ, ಛಳಿ ವಾಂತಿ ಕಾಡುತ್ತಿತ್ತು. ದೇವರಷ್ಟೇ ನಮ್ಮ ಪಾಲಿಗೆ ನೆರವಾಗಬೇಕಿತ್ತು.

ಏರಡನೆಯ ವಾರದ ಹೊತ್ತಿಗೆ ನಮ್ಮವರು ಅದರೊಡನೆ ಹೋರಾಡುವ ಮನಸಿನೊಂದಿಗೆ ಹೇಗಾದರೂ 2000 ಎಂಜಿ ಮುಗಿಸುವ ಸಂಕಲ್ಪ ಮಾಡಿದರು. ನಮ್ಮವರ ಈ ಸಂಕಲ್ಪ ಜಯ ಕಂಡಿತು ನಿಧಾನವಾಗಿ ದಿನಕ್ಕೆ ಒಂದೊಂದು ಬಾರಿ 50 ಎಮ್‌ ಜಿ ದೇಹ ಸೇರಲಾರಂಭಿಸಿತು. ಈಗ ಛಳಿ, ಜ್ವರ ಮತ್ತು ವಾಂತಿಯೊಂದಿಗೆ ಊಟ ಸೇರದ ಸ್ಥಿತಿ ಉಂಟಾಯಿತು. ಯಾವ ಆಹಾರದ ವಾಸನೆಯೂ ಸಹ್ಯ ಆಗುತ್ತಿರಲಿಲ್ಲ. ಮಾಮೂಲಿ ಊಟದಲ್ಲಿ ಎಣ್ಣೆಯೊಗ್ಗರಣೆ, ಬೆಳ್ಳುಳ್ಳಿ ಇವೇ ಇರುತ್ತಿತ್ತು. ನಮಗೆ ಹುಬ್ಬಳ್ಳಿಯಲ್ಲಿ ಮನೆ ಇಲ್ಲದ ಕಾರಣ, ಬಂಧು ಬಳಗವೂ ಇಲ್ಲದ ಕಾರಣ ನಾವು ಹೊಟೆಲುಗಳ ಮೇಲೇ ಅವಲಂಬಿತರಾಗಿದ್ದೆವು. ಅಲ್ಲಿ ಸಿಗುತ್ತಿದ್ದುದೇ ಅಂತಹ ಆಹಾರ. ರೊಟ್ಟಿಗೆ ಪಲ್ಯ ಕೊಟ್ಟರೆ ಪಲ್ಯದಲ್ಲಿ ಎಣ್ಣೆ ಅಂಶ ಇರುತ್ತಿತ್ತು. ಅದನ್ನು ಡಬ್ಬಿಯಿಂದ ತೆಗೆದರೆ ಅವರಿಗೆ ವಾಕರಿಸುವಂತಾಗುತ್ತಿತ್ತು. ನಾನೊಂದು ವಿದ್ಯುತ್‌ ಕುಕರ್‌ ಓಯ್ದಿದ್ದೆ. ಅದರಲ್ಲಿ ಅನ್ನ ಮಾಡಿ ಸ್ವಲ್ಪ ಅನ್ನ ಉಪ್ಪು ಮಕ್ಕಳಿಗೆ ತಿನಿಸುವ ಹಾಗೆ ಚೂರು ಚೂರೆ ಕೊಡಬೇಕಾಗುತ್ತಿತ್ತು. ಕೆಲವೊಮ್ಮೆ ನಾಲ್ಕನೆಯ ಸಣ್ಣತುತ್ತಿಗೆ ಕೊನೆಯಾಗುತ್ತಿತ್ತು ಊಟ. ಇಲ್ಲವೆ ಬ್ರೆಡ್‌ ತಂದು ಅದನ್ನು ಬಿಸಿನೀರಿನಲ್ಲಿ ಅದ್ದಿ ಸ್ವಲ್ಪ ತಿನಿಸುತ್ತಿದ್ದೆ. ಆಗೊಮ್ಮೆ ಈಗೊಮ್ಮೆ ಸ್ವಲ್ಪ ದಾಳಿಂಬೆ ಚೂರು ಸೇಬು ಹೀಗೆ ಸೇರುವುದನ್ನು ಕೊಡುತ್ತಿದ್ದೆ. ಆದರೆ ದೇಹ ದುರ್ಬಲವಾಗುತ್ತಿತ್ತು. ಕಡೆಗೆ ಹಿಮೋಗ್ಲೋಬಿನ್‌ ಅಂಶ ತೀರ ಕಡಿಮೆಯಾಗಿ ರಕ್ತಪೂರಣ ಮಾಡಿಸಬೇಕಾಯಿತು. ಈ ಮಧ್ಯೆ ಕ್ರಿಯಾಟಿನಿನ್‌ ಏರದ ಹಾಗೆ, ಲಿವರ್‌ ಹಾಳಾಗದ ಹಾಗೆ, ಶ್ವಾಸಕೋಶಕ್ಕೆ ಸೋಂಕು ತಗುಲದ ಹಾಗೆ ಕಾಪಾಡಪ್ಪಾ ಆಂತ ದೇವರಲ್ಲಿ ಮೊರೆಯಿಡುವುದು ಬಿಟ್ಟರೆ ಮತ್ತೊಂದು ದಾರಿ ಇರಲಿಲ್ಲ.

ಇನ್ನೇನು 2000 ಎಮ್‌ ಜಿ ಮುಗಿಸಿದೆವು ಅನ್ನುವ ಹಂತ ತಲುಪುವ ಹೊತ್ತಿಗೆ ಬದುಕಿನ ಮಹತ್ವದ ಪರೀಕ್ಷೆ ಎದುರಿಸುವ ಹಾಗಾಗಿತ್ತು. ಸ್ವಲ್ಪವೂ ಊಟ ಹೋಗದ ಸ್ಥಿತಿ ತಲುಪಿದೆವು. ಹೇಗಾದರೂ ತಿನ್ನಿ ಎನ್ನುವ ವೈದ್ಯರ ಮಾತು ಕಣ್ಣಲ್ಲಿ ನೀರು ತರಿಸುತ್ತಿತ್ತು. ಏನೊಂದೂ ತಿನ್ನಲಾಗದ ಅವರಿಗೆ ಹೇಗೆ ಏನಾದರೂ ಕೊಡುವುದು? ಅಂತಹ ಸಂದರ್ಭದಲ್ಲಿ ನಮ್ಮ ಗೆಳೆಯರೊಬ್ಬರು ನಮ್ಮ ನೆರವಿಗೆ ಬಂದರು. ಒಂದು ಸಣ್ಣ ರಾಗಿ ಮುದ್ದೆ ಸ್ವಲ್ಪ ಸಪ್ಪೆಯಾದ ಸೊಪ್ಪಿನ ಸಾರು ಹೀಗೆ ಬಿಸಿಬಿಸಿಯಾಗಿ ಮಧ್ಯಾಹ್ನದ ಹೊತ್ತು ತಂದುಕೊಡಲಾರಂಭಿಸಿದರು. ಅವರ ಒಳ್ಳೆಯ ಮನಸಿನ ಪ್ರೀತಿ ಕೆಲಸಮಾಡಿತು. ಸ್ವಲ್ಪ ಸ್ವಲ್ಪ ದಕ್ಕತೊಡಗಿತು. ಹೇಗೋ ಒಂದಿಷ್ಟು ಆಹಾರ ಸೇರತೊಡಗಿತಲ್ಲ ಎಂಬ ಸಮಾಧಾನವೂ ನಮ್ಮದಾಯಿತು. 2000 ಎಮ್‌ ಜಿ ಮುಗಿದ ದಿನ ಸ್ವರ್ಗಕ್ಕೆ ಮೂರೇ ಗೇಣು ಅನ್ನುವಂತಾಗಿತ್ತು! ಆದರೆ ಅದೃಷ್ಟ ಕೂಡಿಬಂದಿರಲಿಲ್ಲ. ತಜ್ಞವೈದ್ಯರು ಬಂದು ಪೂರ್ತಿ 2000 ಎಮ್‌ ಜಿ ಹೋಗಿರುವುದಿಲ್ಲ ಒಂದಿಷ್ಟು ನಷ್ಟವಾಗಿರುತ್ತದೆ ಹಾಗಾಗಿ ಇನ್ನೂ 200 ಎಮ್‌ ಜಿ ನೀಡಬೇಕಾದ ಅವಶ್ಯಕತೆ ಇದೆ ಎಂದರು. ಈ ಮಧ್ಯೆ ಫಂಗಸ್‌ ಮತ್ತೆಲ್ಲೂ ವ್ಯಾಪಿಸಿಲ್ಲ ಅನ್ನುವುದನ್ನು ಖಚಿತಪಡಿಸಿಕೊಳ್ಳಲು ಆಗಿಂದಾಗ್ಗೆ ಎಂಡೋಸ್ಕೋಪಿ ನಡೆಯುತ್ತಿತ್ತು. ಮತ್ತೆ 200 ಎಮ್‌ ಜಿಗಾಗಿ ನಮ್ಮ ಆಸ್ಪತ್ರೆವಾಸ ಮುಂದುವರಿಯಿತು. ಫಂಗಸ್‌ ಹರಡಿಲ್ಲ ಮತ್ತು ಕಣ್ಣ ಕೆಳಗೆ ನಿರ್ಮೂಲವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಮತ್ತೊಂದು ಬಯಾಪ್ಸಿ ಆಯಿತು. ಅವರ ಕಣ್ಣ ದೃಷ್ಟಿ ಉಳಿದುಕೊಂಡಿತ್ತು. ದುರ್ಬಲವಾಗಿದ್ದರೂ ಕಿಡ್ನಿ, ಲಿವರ್‌ ಮತ್ತು ಶ್ವಾಸಕೋಶಗಳು ಸುಸ್ಥಿತಿಯಲ್ಲಿದ್ದವು. ವೈದ್ಯರ ಪರಿಶ್ರಮದೊಂದಿಗೆ ನಮ್ಮವರ ಶ್ರಮವೂ ಸೇರಿ ಅಂತೂ ಇಂತೂ ಫಂಗಸ್‌ ಚಿಕಿತ್ಸೆ ಹಾಗು 45 ದಿನಗಳ ಆಸ್ಪತ್ರೆ ವಾಸ ಮುಗಿಸಿ ಮರುಹುಟ್ಟು ಪಡೆದಿದ್ದೆವು.

- ಜಯಂತಿ ಕೆವೈ, ಲೇಖಕಿ ಪಿಐಬಿಯಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು