ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಥಿತಿ: ದ್ವೇಷಿಸುವುದೂ ಸುಲಭವಲ್ಲ!

Last Updated 23 ಜುಲೈ 2022, 21:30 IST
ಅಕ್ಷರ ಗಾತ್ರ

‘ದ್ವೇಷಿಸುವುದು ಪ್ರೀತಿಸುವುದಕ್ಕಿಂತ ಸುಲಭ’ ಎಂದು ಚೀನಾದ ತತ್ವಶಾಸ್ತ್ರಜ್ಞ ಕನ್‌ಫ್ಯೂಶಿಯಸ್‌ ಹೇಳಿದ್ದ. ಇದು ಹೊರನೋಟದ ಸತ್ಯ ಮಾತ್ರ. ದ್ವೇಷಿಸುವವರು ಎದುರಿಸಬೇಕಾದ ಸವಾಲುಗಳ ಅರಿವಿದ್ದರೆ ಅವನು ಈ ಮಾತನ್ನು ಹೇಳುವುದು ಸಾಧ್ಯವಿರಲಿಲ್ಲ. ದ್ವೇಷಿಸುವವರ ಕಷ್ಟಗಳನ್ನು ಕೇಳಿದ ಮೇಲೆ ನೀವೂ ನನ್ನೊಡನೆ ತಲೆದೂಗುತ್ತೀರಿ.

ದ್ವೇಷಿಸುವುದಕ್ಕೆ ಮತ್ತು ದ್ವೇಷವನ್ನು ಕಳೆದುಕೊಳ್ಳದೆ ಉಳಿಸಿಕೊಳ್ಳುವುದಕ್ಕೆ ದೇಹ ನಿರಂತರವಾಗಿ ಒತ್ತಡದಲ್ಲಿ ಇರಬೇಕಾಗುತ್ತದೆ. ಈ ಒತ್ತಡವನ್ನು ಮಿದುಳು ಅಪಾಯವೆಂದು ಗ್ರಹಿಸಿ ಸೂಕ್ತ ರಕ್ಷಣೆ ಒದಗಿಸಲು ಅನುವಾಗುವಂತೆ ಅಡ್ರಿನಾಲಿನ್‌ ಮತ್ತು ಕಾರ್ಟಿಸೋಲ್‌ ಎನ್ನುವ ಒತ್ತಡದ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಆಗೊಮ್ಮೆ ಈಗೊಮ್ಮೆ ಬರುವ ಅಪಾಯಗಳಿಂದ ರಕ್ಷಿಸಿಕೊಳ್ಳಲು ಈ ಹಾರ್ಮೋನ್‌ಗಳು ಅನಿವಾರ್ಯ. ಆದರೆ ದ್ವೇಷವನ್ನೇ ಉಸಿರಾಗಿಸಿಕೊಂಡವರ ದೇಹದಲ್ಲಿ ಇವು ನಿರಂತರವಾಗಿ ಬಿಡುಗಡೆಯಾಗುತ್ತಲೇ ಇದ್ದಾಗ ರೋಗನಿರೋಧಕ ಶಕ್ತಿ ಕುಗ್ಗುವುದಲ್ಲದೆ ನೆನಪಿನ ಶಕ್ತಿಯ ಮೇಲೆ ದುಷ್ಪರಿಣಾಮ ಆಗುತ್ತದೆ. ದೇಹದಲ್ಲಿ ಹೆಚ್ಚುವ ಕಾರ್ಟಿಸೋಲ್‌ನ ಮಟ್ಟ ಖಿನ್ನತೆಗೂ ಕಾರಣವಾಗುತ್ತದೆ.

ದ್ವೇಷ ಮತ್ತು ಕೋಪ ತಾತ್ಕಾಲಿಕವಾಗಿ ದೇಹಕ್ಕೆ ಹೆಚ್ಚಿನ ಶಕ್ತಿ ನೀಡುತ್ತವೆ. ಆದರೆ, ಮುಂದಿನ ತಲೆಮಾರುಗಳಿಗೆ ಉಳಿಸಬೇಕಾದ ಪ್ರಾಕೃತಿಕ ಶಕ್ತಿ ಮೂಲಗಳನ್ನು ನಾವು ಈಗಲೇ ಉಪಯೋಗಿಸುತ್ತಿರುವಂತೆ ಜೀವನದ ಮುಂದಿನ ದಿನಗಳಿಗೆ ಬೇಕಾದ ಶಕ್ತಿಯನ್ನು ದೇಹ ಇಂದೇ ವ್ಯಯಿಸುತ್ತದೆ. ಹೀಗೆ ನಮ್ಮ ಆರೋಗ್ಯವನ್ನೂ ಬಲಿಕೊಟ್ಟು ದ್ವೇಷವನ್ನು ಉಳಿಸಿಕೊಳ್ಳುವುದು ಒಂದು ರೀತಿಯ ತ್ಯಾಗವೇ ಅಲ್ಲವೇ? ಹಾಗಾಗಿ ಧರ್ಮಕ್ಕಾಗಿಯೋ ದೇಶಕ್ಕಾಗಿಯೋ ಉಳಿಸಿಕೊಳ್ಳಬೇಕಾದ ದ್ವೇಷ ಮೌಲ್ಯವಾಗಿ ಕಾಣಿಸುವುದು ಸಹಜವೇ.

ದ್ವೇಷಿಸುವುದಕ್ಕೆ ಪ್ರಾರಂಭಿಸಿದ ಮೇಲೆ ನಿಧಾನವಾಗಿ ಅದು ರುಚಿಸತೊಡಗುತ್ತದೆ. ಆ ರುಚಿಯನ್ನು ಕಳೆದುಕೊಳ್ಳಲು ಮನಸ್ಸು ಒಪ್ಪುವುದೇ ಇಲ್ಲ. ಹಾಗಾಗಿ ದ್ವೇಷವನ್ನು ಉಳಿಸಿಕೊಳ್ಳಲೇಬೇಕಾಗುತ್ತದೆ. ನಿರಂತರವಾಗಿ ಮಾನವ ಸಹಜ ಪ್ರೀತಿ ಹೊರಹೊಮ್ಮದಂತೆ ಅವರು ಎಚ್ಚರವನ್ನೂ ವಹಿಸಬೇಕಾಗುತ್ತದೆ. ಆದರೆ, ನಮ್ಮ ವಿರೋಧಿ ನಮ್ಮನ್ನು ದ್ವೇಷಿಸುವುದನ್ನು ನಿಲ್ಲಿಸಿಬಿಟ್ಟರೆ? ದಿಢೀರನೆ ಎದ್ದುಬಂದು ಪ್ರಧಾನಿಯನ್ನು ಅಪ್ಪಿಕೊಂಡ ವಿರೋಧ ಪಕ್ಷದ ನಾಯಕನಂತೆ ವರ್ತಿಸಿಬಿಟ್ಟರೆ? ಇಂತಹ ‘ಅನಾಹುತ’ಗಳು ಆಗದಂತೆ ಎಚ್ಚರವಹಿಸಬೇಕು. ಅದಕ್ಕೆ ಸಾಕಷ್ಟು ಎಚ್ಚರಿಕೆ, ಯೋಜನೆ, ಸಿದ್ಧತೆ ಎಲ್ಲವೂ ಬೇಕಾಗುತ್ತದೆ! ಇದೆಲ್ಲಾ ಸುಲಭದ ಕೆಲಸ ಅಂತ ದಡ್ಡರು ಮಾತ್ರ ಅಂದುಕೊಳ್ಳಲು ಸಾಧ್ಯ.

ಒಬ್ಬೊಬ್ಬರೇ ದ್ವೇಷಿಸಿದರೆ ಅದು ಪರಿಣಾಮಕಾರಿಯಲ್ಲ. ಹಾಗಾಗಿ ಸಮಾನ ದ್ವೇಷಿಗಳ ಸಂಘಟನೆ ಮಾಡಬೇಕಾಗುತ್ತದೆ. ಸಮೂಹ ಮಟ್ಟದಲ್ಲಿ ದ್ವೇಷವನ್ನು ಹುಟ್ಟುಹಾಕಬೇಕಾದರೆ ಸಂಘಟನಾ ಶಕ್ತಿ ಇರಲೇಬೇಕು. ಇಲ್ಲಿಯೂ ಕೂಡ ತ್ಯಾಗ, ಬಲಿದಾನಗಳು ಇದ್ದೇ ಇರುತ್ತವೆ.

ದ್ವೇಷಿಸುವವರಲ್ಲಿ ಪ್ರೀತಿಯೇ ಇರುವುದಿಲ್ಲ ಎಂದು ನೀವಂದುಕೊಂಡಿದ್ದರೆ ಅದೂ ತಪ್ಪೇ. ಸಮಾನ ದ್ವೇಷಿಗಳ ನಡುವೆ ಅದ್ಭುತ ಸ್ನೇಹ, ಪ್ರೀತಿ ಇರುತ್ತದೆ. ಸಂಶೋಧನೆಗಳ ಪ್ರಕಾರ, ದ್ವೇಷಿಸುವವರ ನಡುವಿನ ಬಾಂಧವ್ಯ, ಪ್ರೀತಿಸುವವರ ನಡುವೆ ಇರುವ ಬಾಂಧವ್ಯಕ್ಕಿಂತ ಬಿಗಿಯಾಗಿರುತ್ತದೆ! ಪಾಕಿಸ್ತಾನವನ್ನು ದ್ವೇಷಿಸುವವರೆಲ್ಲ ಭಾರತದಲ್ಲಿ ಉತ್ತಮ ಸ್ನೇಹಿತರು. ಅವರ ನಡುವೆ ಎಂತಹ ಅದ್ಭುತ ಬಾಂಧವ್ಯವಿರುತ್ತದೆ ಎಂದರೆ ತಮ್ಮ ದ್ವೇಷವನ್ನು ಉಳಿಸಿ, ಬೆಳೆಸಿಕೊಳ್ಳಲು ಅವರು ಎಂತಹ ತ್ಯಾಗಕ್ಕೂ ಸಿದ್ಧ! ತ್ಯಾಗವು ಪ್ರೀತಿಯ ಗುಣವಲ್ಲವೇ? ಅಂದಮೇಲೆ ದ್ವೇಷಿಸುವವರಿಗೆ ತ್ಯಾಗ ಸಾಧ್ಯವಿಲ್ಲ ಎಂದು ಹೇಗೆ ಹೇಳುತ್ತೀರಿ? ತ್ಯಾಗ ಮಾಡುವುದು ಎಂತಹ ಕಷ್ಟದ ಕೆಲಸ ಎಂಬುದು ಮಾಡಲು ಪ್ರಯತ್ನಿಸಿ ವಿಫಲರಾದವರಿಗಷ್ಟೇ ಗೊತ್ತು!

ಸಮಾನ ದ್ವೇಷಿಗಳಲ್ಲೂ ಸಾಕಷ್ಟು ಹಂತಗಳಿರುತ್ತವೆ. ಯಾವುದನ್ನಾದರೂ ನಿಮಗಿಂತ ಕಡಿಮೆ ದ್ವೇಷಿಸುವವನನ್ನು ನೀವು ದ್ವೇಷಿಸುತ್ತೀರಿ. ಯಾವುದನ್ನಾದರೂ ನಿಮಗಿಂತ ಹೆಚ್ಚು ದ್ವೇಷಿಸುವವನು ನಿಮ್ಮನ್ನು ದ್ವೇಷಿಸುತ್ತಾನೆ! ನೆಹರೂ ಅವರನ್ನು ಸಮಾನವಾಗಿ ದ್ವೇಷಿಸುವವರ ನಡುವೆ ಮಾತ್ರ ಸ್ನೇಹ ಸಾಧ್ಯ. ನೀವು ಅವರ ಒಂದೆರಡಾದರೂ ಗುಣಗಳನ್ನು ಇಷ್ಟಪಟ್ಟರೆ ನೆಹರೂ ಅವರನ್ನು ಪೂರ್ಣ ದ್ವೇಷಿಸುವವರು ನಿಮ್ಮ ಸ್ನೇಹ ಬಿಡುತ್ತಾರೆ. ಅಂದರೆ ಸಮಾನ ಮಟ್ಟದ ದ್ವೇಷಿಗಳಲ್ಲಿ ಮಾತ್ರ ಸ್ನೇಹ, ಪ್ರೀತಿಯಿರುತ್ತದೆ. ಯಾರೊಬ್ಬರ ದ್ವೇಷದ ಮಟ್ಟ ಕಡಿಮೆಯಾದರೂ ಅವರಿಬ್ಬರ ಸ್ನೇಹ ಮುಗಿದಂತೆಯೇ. ತಮ್ಮ ದ್ವೇಷದ ಮಟ್ಟವನ್ನು ಕಾಪಾಡಿಕೊಂಡರೆ ಮಾತ್ರ ಅವರ ಸ್ನೇಹ ಉಳಿಯುತ್ತದೆ. ಹೀಗೆ ಸ್ನೇಹವನ್ನು ಉಳಿಸಿಕೊಳ್ಳಲು ಅವರು ಎಷ್ಟು ಕಷ್ಟಪಡುತ್ತಾರಲ್ಲವೇ?

ದ್ವೇಷವನ್ನೇ ತಮ್ಮ ವ್ಯಕ್ತಿತ್ವದ ಗುರುತಾಗಿ ಮಾಡಿಕೊಂಡು ಹಣ, ಪ್ರಚಾರ, ಅಧಿಕಾರ ಪಡೆದವರ ಕಷ್ಟಗಳಂತೂ ಹೇಳತೀರದು. ತಮ್ಮ ದ್ವೇಷದ ಮಟ್ಟವನ್ನು ಕಾಯ್ದುಕೊಳ್ಳುವುದಷ್ಟೇ ಸಾಕಾಗುವುದಿಲ್ಲ. ಅದನ್ನು ದಿನದಿನಕ್ಕೂ ಹೆಚ್ಚು ಮಾಡಿಕೊಳ್ಳುತ್ತಿರಬೇಕು. ಹಾಗೆ ಮಾಡದಿದ್ದರೆ ಆರಾಧಕರು ತಮ್ಮ ದ್ವೇಷದ ‘ಪ್ರಾಮಾಣಿಕತೆ’ಯನ್ನು ಅನುಮಾನಿಸಬಹುದು ಎನ್ನುವ ಆತಂಕ ಅವರಿಗೆ ಸದಾ ಕಾಡುತ್ತದೆ. ಹಾಗಾಗಿ ನಿರಂತರವಾಗಿ ಹೊಸಹೊಸ ದ್ವೇಷದ ಮಾರ್ಗಗಳನ್ನು ಅವಿಷ್ಕರಿಸಬೇಕಾಗುತ್ತದೆ. ಇನ್ನು ಹೆಚ್ಚು ದ್ವೇಷಿಸುವುದು ಸಾಧ್ಯವೇ ಇಲ್ಲ ಎನ್ನಿಸಿದಾಗ ಕೊನೆಯ ಪ್ರಯತ್ನವಾಗಿ ಅಂಥವರು ದ್ವೇಷದ ಖಜಾನೆಯನ್ನು ಸ್ಫೋಟಿಸಲು ಪ್ರಯತ್ನಿಸುತ್ತಾರೆ. ಜ್ಯೂಗಳ ದ್ವೇಷದ ಮೇಲೆಯೇ ಸಾಮ್ರಾಜ್ಯ ಕಟ್ಟಿದ್ದ ಹಿಟ್ಲರ್‌ ಕೊನೆಗೆ ಎರಡನೇ ಮಹಾಯುದ್ಧಕ್ಕೆ ನಾಂದಿ ಹಾಡಿದ್ದ. ಕೊನೆಯ ದಿನಗಳಲ್ಲಿ ಹಿಟ್ಲರ್‌ ಪಟ್ಟ ಪಾಡನ್ನು ನೋಡಿದ ಮೇಲಾದರೂ ದ್ವೇಷಿಸುವುದು ಎಂತಹ ಕಷ್ಟದ ಕೆಲಸ ಎಂದು ನಮಗೆ ಅರಿವಾಗಬೇಕಲ್ಲವೇ?

ದ್ವೇಷಿಸುವವರ ನಡುವೆಯೂ ಸ್ಪರ್ಧೆ ಇರುತ್ತದೆ. ಪ್ರಪಂಚದ ಹಲವಾರು ದೇಶಗಳಲ್ಲಿನ ಆಗುಹೋಗುಗಳನ್ನು ನೋಡಿದರೆ ಮುಂದೊಂದು ದಿನ ದ್ವೇಷದ ಸ್ಪರ್ಧೆ ಬಂದರೂ ಆಶ್ಚರ್ಯವಿಲ್ಲ. ಆಗ ಸಕ್ಷಮವಾಗಿ ದ್ವೇಷಿಸುವುದು ಹೇಗೆ ಎಂದು ತರಬೇತಿ ನೀಡುವ ಸಂಸ್ಥೆಗಳೂ ತಜ್ಞರೂ ಹುಟ್ಟಿಕೊಳ್ಳಬಹುದು! ಶಾಲೆಗಳಲ್ಲಿ ‘ದ್ವೇಷಾಲಜಿ’ ಎನ್ನುವ ವಿಷಯವನ್ನೂ ಕಲಿಸಬಹುದು. ಆಗ ಬೇರೆ ಪಠ್ಯಗಳಲ್ಲಿ ಅದನ್ನು ತುರುಕುವ ಅಗತ್ಯವಿರುವುದಿಲ್ಲ! ಪ್ರಪಂಚದ ಎಲ್ಲಾ ದೇಶಗಳಲ್ಲಿ ಅಧಿಕಾರ ಸ್ಥಾನಕ್ಕೇರಲು ದ್ವೇಷಾಲಜಿಯಲ್ಲಿ ಪದವಿ ಪಡೆದಿರುವುದು ಕಡ್ಡಾಯ ಎನ್ನುವ ನಿಯಮಗಳು ಜಾರಿಗೆ ಬರಬಹುದು.

ಈಗ ಹೇಳಿ. ದ್ವೇಷಿಸುವವರನ್ನು ನೀವೂ ದ್ವೇಷಿಸಿ ಅವರಂತೆ ಕಷ್ಟಪಡುತ್ತೀರೋ? ಅಥವಾ ಪ್ರೀತಿಸುವುದೇ ಸುಲಭ ಎಂದು ಪ್ರೀತಿಗೆ ಒಡ್ಡಿಕೊಳ್ಳುತ್ತೀರೋ? ಪ್ರೀತಿಸದೆ ಇರುವವರನ್ನೆಲ್ಲಾ ದ್ವೇಷಿಸಲೇಬೇಕು ಅಂತೇನೂ ಇಲ್ಲವಲ್ಲ! ಪ್ರೀತಿಸಲು ಸಾಧ್ಯವೇ ಇಲ್ಲ ಎನ್ನಿಸಿದಾಗಲೂ ದ್ವೇಷಿಸುವುದನ್ನು ಮಾತ್ರ ನಿಲ್ಲಿಸಿದರೆ ನಿಮ್ಮ ಹೆಚ್ಚಿನ ಕಷ್ಟಗಳು ಇರುವುದಿಲ್ಲ. ಆದರೆ ನಿಮಗೆ ದ್ವೇಷಾಲಜಿಯಲ್ಲಿ ಪದವಿ ಮಾತ್ರ ಸಿಗುವುದಿಲ್ಲ. ಆಯ್ಕೆ ನಿಮ್ಮದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT