ಶುಕ್ರವಾರ, ಅಕ್ಟೋಬರ್ 30, 2020
25 °C

ಬೊಜ್ಜು ಇದ್ದವರಲ್ಲಿ ಶ್ವಾಸಕೋಶ ಬೇಗನೇ ದುರ್ಬಲ

ಡಾ.ಎಂ.ಜಿ.ಸತೀಶ್‌ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸ್ಥೂಲಕಾಯ, ಬೊಜ್ಜು ಇರುವವರಲ್ಲಿ ಕೋವಿಡ್‌ ಬಂದಾಗ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಈ ಸಮಸ್ಯೆ ಇರುವವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ. ಶ್ವಾಸಕೋಶ ಹಾಗೂ ಅದರ ಕಾರ್ಯಕ್ಷಮತೆ ದುರ್ಬಲವಾಗಿರುತ್ತದೆ. ಉಸಿರಾಟ ತೊಂದರೆಯಿಂದ ರಕ್ತದಲ್ಲಿನ ಆಮ್ಲಜನಕ ಸರಬರಾಜು ಪ್ರಮಾಣ ಏರುಪೇರಾಗಿ ಶ್ವಾಸಕೋಶಕ್ಕೆ ಹಾನಿ ಆಗುವುದಲ್ಲದೆ, ಇತರ ಅಂಗಾಂಗಗಳ ವೈಫ್ಯಲಕ್ಕೂ ಕಾರಣವಾಗುತ್ತದೆ.

ಸಾಮಾನ್ಯ ದೇಹ ಹೊಂದಿದವರಿಗಿಂತ ಬೊಜ್ಜು ಇದ್ದವರಲ್ಲಿ ಸಮಸ್ಯೆ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಉಸಿರು ಎಳೆದುಕೊಳ್ಳಲು ತೊಂದರೆ ಆಗುತ್ತದೆ. ಕುತ್ತಿಗೆಯ ಸುತ್ತಲಿನ ಬೊಜ್ಜಿನಿಂದಲೂ ಸಮಸ್ಯೆ ಉಂಟಾಗುತ್ತದೆ.

ಕೊರೊನಾ ಸೋಂಕು ತಗುಲಿದ್ದರೂ ಹಲವರಲ್ಲಿ ರೋಗ ಲಕ್ಷಣ ಇರುವುದಿಲ್ಲ. ಕೆಲವರಿಗೆ ಸ್ವಲ್ಪ ಪ್ರಮಾಣದಲ್ಲಿ ಸೋಂಕು (ಶೇ 25ಕ್ಕಿಂತ ಕಡಿಮೆ) ಇರುತ್ತದೆ. ಕೆಲವರಿಗೆ ಸಾಧಾರಣ (ಶೇ 25ರಿಂದ 60), ಇನ್ನೂ ಕೆಲವರಿಗೆ ತೀವ್ರಗತಿಯಲ್ಲಿ (ಶೇ 60ಕ್ಕಿಂತ ಹೆಚ್ಚು) ಇರುತ್ತದೆ. ಶ್ವಾಸಕೋಶಕ್ಕೆ ಎಷ್ಟು ಹಾನಿಯಾಗಿದೆ ಎಂಬುದನ್ನು ಸಿಟಿ ಸ್ಕ್ಯಾನಿಂಗ್‌ ಮೂಲಕ ತಿಳಿದುಕೊಳ್ಳಬಹುದು. ಬೇರೆ ಯಾವುದೇ ಸಮಸ್ಯೆ ಇಲ್ಲದೆ ಬರೀ ಕೋವಿಡ್‌ ನ್ಯುಮೋನಿಯಾ (ಶ್ವಾಸಕೋಶ ಸೋಂಕು) ಇದ್ದರೆ ಶೇ 95 ಮಂದಿ ಬೇಗನೇ ಚೇತರಿಸಿಕೊಳ್ಳುತ್ತಾರೆ.

ಆದರೆ, ಸ್ಥೂಲಕಾಯ, ಬೊಜ್ಜು, ಮಧುಮೇಹ, ಆಸ್ತಮಾ ಇದ್ದವರಲ್ಲಿ ಕೋವಿಡ್ ಬಂದರೆ ಶ್ವಾಸಕೋಶ ಬೇಗನೇ ದುರ್ಬಲಗೊಳ್ಳುತ್ತದೆ. ಚೇತರಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ.

ಶ್ವಾಸಕೋಶ ಸ್ಪಾಂಜ್‌ನಂತಿರುತ್ತದೆ. ಸೋಂಕು ತಗುಲಿದಾಗ ಇದು ಗಟ್ಟಿಯಾಗಿ ನಾರಿನಂತಾಗಿಬಿಡುತ್ತದೆ. ನೀರಿನ ಅಂಶ ಸೇರಿಕೊಳ್ಳುತ್ತದೆ. ಶೇ 75ರಷ್ಟು ಪ್ರಮಾಣ ಶ್ವಾಸಕೋಶಕ್ಕೆ ಅಪಾಯವಾಗಿದ್ದರೆ ನಾವು ಸೇವಿಸುವ ಗಾಳಿ ರಕ್ತಕ್ಕೆ ಹೋಗುವುದಿಲ್ಲ. ಆಗ ಶ್ವಾಸಕೋಶದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ದೇಹದಲ್ಲಿ ಒಂದೊಂದೇ ಅಂಗಾಂಗಗಳಿಗೆ ಅಪಾಯ ಉಂಟಾಗುತ್ತದೆ. ಮೆದುಳು, ಕಿಡ್ನಿ, ಹೃದಯ, ಅನ್ನನಾಳ ಸೇರಿದಂತೆ ಎಲ್ಲಾ ಅಂಗಗಳ  ಚಟುವಟಿಕೆಗೆ ಆಮ್ಲಜನಕ ಬೇಕಾಗುತ್ತದೆ.

ಆಗ ಸಿಲಿಂಡರ್‌ ಮೂಲಕ ‌ಆಮ್ಲಜನಕ ಪೂರೈಸಲಾಗುತ್ತದೆ. ಸುಧಾರಣೆ ಕಾಣದಿದ್ದರೆ ಹೈಫ್ಲೋ ಆಕ್ಸಿಜನ್‌ ಸರಬರಾಜು ಮಾಡಲಾಗುತ್ತದೆ. ಆಗಲೂ ಸಾಧ್ಯವಾಗದಿದ್ದರೆ ವೆಂಟಿಲೇಟರ್‌ ವ್ಯವಸ್ಥೆ ಮಾಡಲಾಗುತ್ತದೆ. ಇತರ ಚಿಕಿತ್ಸೆ ನೀಡಲಾಗುತ್ತದೆ. ಕೋವಿಡ್‌ನಿಂದ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ. ಹೃದಯ, ಕಿಡ್ನಿ, ಮೆದುಳು ಸೇರಿದಂತೆ ಇತರ ಅಂಗಾಂಗಳಲ್ಲೂ ರಕ್ತ ಹೆಪ್ಪುಗಟ್ಟುತ್ತದೆ. ಬೊಜ್ಜು ಇರುವವರಲ್ಲಿ ಈ ಸಮಸ್ಯೆ ಹೆಚ್ಚು. ರಕ್ತ ಸಂಚಾರ ಸುಗಮಗೊಳಿಸಲು ಚಿಕಿತ್ಸೆ ನೀಡಲಾಗುತ್ತದೆ. 

ಆರಂಭದಲ್ಲೇ ಚಿಕಿತ್ಸೆ ನೀಡಿದರೆ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಕೋವಿಡ್‌ ಬಂದವರಿಗೆಲ್ಲಾ ನ್ಯುಮೋನಿಯಾ ಇರುವುದಿಲ್ಲ. ಸೋಂಕಿನ ಪ್ರಮಾಣ ಶೇ 60ಕ್ಕಿಂತ ಹೆಚ್ಚಾದಾಗ ಸಮಸ್ಯೆ ಉಂಟಾಗುತ್ತದೆ.

ಬೊಜ್ಜು ಇರುವವರು ತೂಕ ಕಡಿಮೆ ಮಾಡಿಕೊಳ್ಳಬೇಕು. ಅದು ಊಟ ಹಾಗೂ ಚಟುವಟಿಕೆಗಳ ಮೇಲೆ ಅವಲಂಬಿಸಿರುತ್ತದೆ. ಬೊಜ್ಜು ಇದ್ದವರಾಗಲಿ, ಸಾಮಾನ್ಯರಾಗಲಿ ಕೋವಿಡ್‌ ಲಕ್ಷಣ ಕಂಡ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆಗ ನಿಯಂತ್ರಣ ಸಾಧ್ಯ. ಶ್ವಾಸಕೋಶಕ್ಕೆ ಶೇ 25ರಷ್ಟು ಅಪಾಯ ಉಂಟಾಗಿದ್ದರೂ ಚಿಕಿತ್ಸೆ ಮೂಲಕ ಸರಿಮಾಡಬಹುದು. ಆದರೆ, ಶೇ 60 ದಾಟಿದರೆ ಅಪಾಯ ಹೆಚ್ಚು. ಉಳಿದ ಅಂಗಾಂಗಗಳ ವೈಫಲ್ಯ ಉಂಟಾಗುತ್ತದೆ.

–ಡಾ.ಎಂ.ಜಿ.ಸತೀಶ್‌ ಕುಮಾರ್‌, ಲೇಖಕರು: ಕೊಲಂಬಿಯಾ ಏಷ್ಯಾ ಆಸ್ಪತ್ರೆ ವೈದ್ಯ, ಮೈಸೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು