ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗಡೆ ಸಂತ್ರಸ್ತರ ಸಮಸ್ಯೆ ನಿವಾರಣೆಗೆ ಆದ್ಯತೆ

ಹೊಸನಗರ: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಭರವಸೆ
Last Updated 7 ಮೇ 2018, 13:51 IST
ಅಕ್ಷರ ಗಾತ್ರ

ಹೊಸನಗರ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಭಾಗದ ಮುಳುಗಡೆ ಸಂತ್ರಸ್ತರ ಸಮಸ್ಯೆ ನಿವಾರಣೆ ಮಾಡುವುದು ಜೆಡಿಎಸ್‌ನ ಮೊದಲ ಆದ್ಯತೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ತಾಲ್ಲೂಕಿನ ಬಿದನೂರು ನಗರದಲ್ಲಿ ನಡೆದ ಜೆಡಿಎಸ್ ಅಭ್ಯರ್ಥಿ ಆರ್.ಎಂ. ಮಂಜುನಾಥಗೌಡ ಅವರ ಮತ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಕೈಗೊಂಡ 4 ಜಲವಿದ್ಯುತ್ ಯೋಜನೆಗಳಿಂದಾಗಿ ಭೂಮಿ ಕಳೆದುಕೊಂಡ ರೈತರು ಇನ್ನೂ ನರಕ ಸದೃಶ ಜೀವನ ನಡೆಸುತ್ತಿದ್ದಾರೆ. ಅವರಿಗೆ ಉದ್ಯೋಗ, ಪರಿಹಾರ ಸಿಕ್ಕಿಲ್ಲ. ಇಲ್ಲಿಯತನಕ ಆಳಿದ ಸರ್ಕಾರಗಳು ಈ ವಿಚಾರದಲ್ಲಿ ಪರಿಹಾರಕ್ಕೆ ಕ್ರಮಕೈಗೊಂಡಿಲ್ಲ. ಕೇವಲ ಪೊಳ್ಳು ಭರವಸೆ ನೀಡಿ ಮರುಳು ಮಾಡಲಾಗಿದೆ ಎಂದು ದೂರಿದರು.

‘ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಮುಳುಗಡೆ ಸಂತ್ರಸ್ತರ ಸಮಸ್ಯೆ ನಿವಾರಣೆಗೆ ಸಮಗ್ರ ಯೋಜನೆ ಜಾರಿಗೆ ತರಲಾಗುವುದು. ರೈತ ಸಾಲ ಮಾಡದಂತೆ ಸಮಗ್ರ ಯೋಜನೆ ಜಾರಿ ಆಗಬೇಕಾದ ಅವಶ್ಯಕತೆ ಇದೆ. ಇದನ್ನು ಅರಿತಿರುವುದರಿಂದ ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗೆ ರೈತರ ಸಾಲಮನ್ನಾ ಮಾಡುವೆವು ಎಂದು ಭರವಸೆ ನೀಡಿದ್ದೇವೆ. ಈ ಸೂಕ್ಷ್ಮವನ್ನು ಅರಿತ ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ರೈತರ, ಸ್ತ್ರೀ ಶಕ್ತಿ ಸಂಘದ ಸದಸ್ಯರ ಸಾಲ ಮನ್ನಾ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದೆ. ಅಂದು ಅಧಿಕಾರ ಇದ್ದಾಗ ರೈತರ ಸಮಸ್ಯೆ ಆಲಿಸದ ಬಿಜೆಪಿ ಇಂದು ರೈತರ ಸಂಕಷ್ಟವನ್ನು ಗುತ್ತಿಗೆ ಪಡೆದವರಂತೆ ನಾಟಕ ಆಡುತ್ತಿದೆ’ ಎಂದು ಟೀಕಿಸಿದರು.

ಲೂಟಿಯಲ್ಲಿ ಪೈಪೋಟಿ: ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಸಮಾನವಾಗಿ ರಾಜ್ಯದ ಬೊಕ್ಕಸ ಲೂಟಿ ನಡೆಸಿವೆ. ಜನರ ತೆರಿಗೆ ಹಣವನ್ನು ಪೈಪೋಟಿಗೆ ಬಿದ್ದಂತೆ ಕೊಳ್ಳೆ ಹೊಡೆಯಲು ಅಂದಾಜು ಹಾಕಿರುವ ಈ ಪಕ್ಷಗಳು ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿವೆ ಎಂದು ಹೇಳಿದರು.

‘ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಗೆದ್ದೇ ಬಿಟ್ಟೆವು ಎಂಬ ಅಹಂಕಾರದಲ್ಲಿ ಇವೆ. ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ಅಧಿಕಾರ ಪ್ರಮಾಣ ವಚನ ಸ್ವೀಕಾರಕ್ಕೆ ಸಮಯ ನಿಗದಿ ಮಾಡಿಕೊಂಡಿದ್ದಾರೆ. ನಾನೇ ಸಿ.ಎಂ ಎಂದು ನಾನು ಎಲ್ಲೂ ಹೇಳಿಲ್ಲ. ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ’ ಎಂದರು.

ಅಭ್ಯರ್ಥಿ ಆರ್.ಎಂ ಮಂಜುನಾಥ ಗೌಡ ಮಾತನಾಡಿದರು. ಸೊರಬ ಕ್ಷೇತ್ರದ ಅಭ್ಯರ್ಥಿ ಮಧು ಬಂಗಾರಪ್ಪ, ಸಾಗರ ಅಭ್ಯರ್ಥಿ ಗಿರೀಶ ಗೌಡ, ಶಿಮುಲ್ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ್, ಪ್ರಮುಖರಾದ ವಾಟಗೋಡು ಸುರೇಶ್, ಶ್ರೀಕಾಂತ್, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಸುಮಾ, ಹಾಲಗದ್ದೆ ಉಮೇಶ್, ಅಮೀರ್ ಹಂಝ ಇದ್ದರು.

‘ಜೆಡಿಎಸ್‌ ಯಾವ ಪಕ್ಷದ ಅಡಿಯಾಳೂ ಅಲ್ಲ’

‘ಜೆಡಿಎಸ್ ಯಾವ ಪಕ್ಷದ ಅಡಿಯಾಳು ಅಲ್ಲ. ನಮಗೆ ನಮ್ಮದೆ ಆದ ಸ್ವತಂತ್ರ ನಿಲುವು ಇದೆ. ದಿಕ್ಕು ದೆಸೆ ಇದೆ. ಪಕ್ಷ ಯಾವತ್ತಿಗೂ ಯಾರ ಪರವಾಗಿ ನಿಲ್ಲಲಾರದು. ಸ್ವತಂತ್ರವಾಗಿಯೇ ಆಡಳಿತ ಚುಕ್ಕಾಣಿ ಹಿಡಿಯುತ್ತೇವೆ. ಜನತೆಯ ಆಶೀರ್ವಾದ ಬಲದಿಂದ ಅಧಿಕಾರ ಸ್ಥಾಪಿಸುತ್ತೇವೆ’ ಎಂದು ಕುಮಾರಸ್ವಾಮಿ ತಿಳಿಸಿದರು.

ನಾನು ಏಕಾಂಗಿ

‘ನಮ್ಮ ಪಕ್ಷದಲ್ಲಿ ನಾನು ಏಕಾಂಗಿ ನಾಯಕ. ಎಲ್ಲಾ ಕ್ಷೇತ್ರದಲ್ಲಿಯೂ ನನ್ನನ್ನ ಕರೆಯುತ್ತಾರೆ. ದಿನಕ್ಕೆ 9-10 ಕಾರ್ಯಕ್ರಮ ಭಾಗವಹಿಸುತ್ತೇನೆ. ನಮ್ಮಲ್ಲಿ ಚಿತ್ರ ನಟರಿಲ್ಲ. ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಬರುತ್ತಿಲ್ಲ. ನಾನೊಬ್ಬನೇ ರಾಜ್ಯ ಸುತ್ತುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT