ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ | ಗರ್ಭಾಶಯದಲ್ಲಿ ಗಡ್ಡೆ: ಶಸ್ತ್ರಚಿಕಿತ್ಸೆ ಪರಿಹಾರವೇ?

Last Updated 23 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ನನ್ನ ಮಡದಿಯ ಗರ್ಭಾಶಯದಲ್ಲಿ ಗಡ್ಡೆಗಳಾಗಿವೆ. ಗರ್ಭಾಶಯ ತೆಗೆಯಬೇಕೆಂದು ವೈದ್ಯರು ಹೇಳಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿ ತೆಗೆಯಬಹುದು ಅಥವಾ ಲ್ಯಾಪ್ರೊಸ್ಕೋಪಿ ಮೂಲಕ ತೆಗೆಯಬಹುದು ಎಂದು ಹೇಳಿದ್ದರು. ಇದರಲ್ಲಿ ಯಾವುದು ಒಳಿತು ಎಂದು ತಿಳಿಸಿ.
-
ಊರು, ಹೆಸರು ಇಲ್ಲ.

ಉತ್ತರ: ನಿಮ್ಮ ಮಡದಿಗೆ ವಯಸ್ಸೆಷ್ಟು ಹಾಗೂ ಅವರಿಗೆ ಮಕ್ಕಳಿವೆಯೇ ಅಥವಾ ಮುಂದೆ ಮಗುವಾಗುವ ಅವಶ್ಯಕತೆ ಇದೆಯೇ? ಏನನ್ನೂ ತಿಳಿಸಿಲ್ಲ. ಗರ್ಭಕೋಶದ ನಾರುಗಡ್ಡೆ (ಫೈಬ್ರಾಯಿಡ್) ಸಂತಾನೋತ್ಪತ್ತಿ ವಯಸ್ಸಿನಲ್ಲಿ ಸಾಮಾನ್ಯವಾಗಿ ಆಗುವ ಸೌಮ್ಯವಾದ ಗಡ್ಡೆಯಷ್ಟೇ. ಇವು ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟಿರಾನ್ ಸಂಬಂಧಿತ ಗಡ್ಡೆಗಳಾದ್ದರಿಂದ ಮೆನೋಪಾಸ್ ನಂತರ ಕುಗ್ಗಿ ಹೋಗಿಬಿಡುತ್ತವೆ. ಈ ನಾರುಗಡ್ಡೆ ಮಕ್ಕಳಿಲ್ಲದವರಲ್ಲಿಯೂ, ಪದೇಪದೇ ಗರ್ಭಪಾತ ಮಾಡಿಸಿದವರಲ್ಲೂ ಅಪರೂಪಕ್ಕೊಮ್ಮೆ ಅತಿ ಹೆಚ್ಚು ಮಕ್ಕಳನ್ನು ಪಡೆದವರಲ್ಲೂ ಕಾಣಿಸಿಕೊಳ್ಳಬಹುದು. ಈ ಗಡ್ಡೆಗಳು ಹೊರಪದರ ಅಥವಾ ಸ್ನಾಯುಪದರ ಹಾಗೂ ಒಳಪದರಗಳಲ್ಲಿ ಇರಬಹುದು. ಈ ಗಡ್ಡೆಗಳ ಗಾತ್ರ ಹಾಗೂ ಅವು ಇರುವ ಸ್ಥಳಗಳ ಮೇಲೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವರಲ್ಲಿ ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವವಾಗಬಹುದು, ಕೆಲವರಲ್ಲಿ ಮುಟ್ಟಿನ ಮೊದಲೇ ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ಪದೇಪದೇ ಮುಟ್ಟಾಗಲೂಬಹುದು. ಕೆಲವೊಮ್ಮೆ ಮುಂಭಾಗದಲ್ಲಿ ಬೆಳೆಯುತ್ತಿದ್ದರೆ ಮೂತ್ರಕೋಶದ ಮೇಲೆ ಒತ್ತಡ ಆಗಿ ಮೂತ್ರವಿಸರ್ಜನೆಗೆ ತೊಂದರೆಯಾಗಬಹುದು. ಇಲ್ಲವೇ ಹಿಂಭಾಗದಲ್ಲಿ ಬೆಳೆಯುತ್ತಿದ್ದರೆ ಮಲವಿಸರ್ಜನೆಗೂ ತೊಂದರೆಯಾಗಬಹುದು.

ನಾರುಗಡ್ಡೆ ಪತ್ತೆಯಾದ ತಕ್ಷಣ ಗರ್ಭಕೋಶ ತೆಗೆಯಬೇಕೆಂದೇನೂ ಇಲ್ಲ. ಗಡ್ಡೆ ಸಣ್ಣದಿದ್ದು ಮುಟ್ಟಿನಲ್ಲಿ ಯಾವುದೇ ತೊಂದರೆಗಳು ಇಲ್ಲದಿದ್ದಲ್ಲಿ ಮತ್ತು ಮಲಮೂತ್ರಗಳ ಮೇಲೆ ಒತ್ತಡದ ಚಿಹ್ನೆಗಳಿಲ್ಲದಿದ್ದಲ್ಲಿ ಹಾಗೆಯೇ ಬಿಡಬಹುದು. ಅದನ್ನೆಲ್ಲಾ ವೈದ್ಯರು ನಿರ್ಣಯಿಸಿ ಶಸ್ತ್ರಚಿಕಿತ್ಸಾ ವಿಧಾನವಾಗಿ ಗರ್ಭಕೋಶ ತೆಗೆದು ಹಾಕುವುದನ್ನು ಹಿಸ್ಟರೆಕ್ಟಮಿ ಅನ್ನುತ್ತಾರೆ. ಅದನ್ನು ಸಹಜವಿಧಾನ ಅಥವಾ ಲ್ಯಾಪ್ರೊಸ್ಕೋಪಿಕ್ ವಿಧಾನದಲ್ಲಿ ಮಾಡಿಸಿಕೊಳ್ಳಬಹುದು. ಹೊಟ್ಟೆ ಕೊಯ್ದು ಮಾಡುವ ವಿಧಾನವಾದರೆ 3-4 ದಿನ ಆಸ್ಪತ್ರೆಯಲ್ಲಿ ಇರಬೇಕಾಗಬಹುದು ಮತ್ತು ಸ್ವಲ್ಪ ನೋವು ಇರಬಹುದು. ಲ್ಯಾಪ್ರೊಸ್ಕೋಪಿಕ್ ವಿಧಾನದಲ್ಲಿ 48 ಗಂಟೆಯೊಳಗಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡುತ್ತಾರೆ. ಶಸ್ತ್ರಚಿಕಿತ್ಸೆ ಮಾಡುವ ತಜ್ಞವೈದ್ಯರು ಯಾವ ವಿಧಾನದಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ಆ ಆಸ್ಪತ್ರೆಯಲ್ಲಿ ಅಂತಹ ಸೌಲಭ್ಯಗಳು ಇದೆಯೇ ಎನ್ನುವುದರ ಮೇಲೆ ಚಿಕಿತ್ಸಾ ವಿಧಾನ ನಿರ್ಣಯವಾಗುತ್ತದೆ. ಜೊತೆಗೆ ನಿಮಗೆ ಯಾವ ವಿಧಾನದಲ್ಲಿ ಮಾಡಿಸಿಕೊಳ್ಳಬೇಕೆಂಬ ಆಸೆ ಇದೆ ಎನ್ನುವುದನ್ನು ಅವಲಂಬಿಸಿರುತ್ತದೆ. ಗರ್ಭಕೋಶ ಉಳಿಸಿಕೊಳ್ಳಬೇಕು, ಫಲವಂತಿಕೆಯನ್ನು ಕಾಪಾಡಿಕೊಳ್ಳಬೇಕು ಎಂದಿದ್ದರೆ ಕೇವಲ ನಾರುಗಡ್ಡೆಯನ್ನು ಮಾತ್ರ ತೆಗೆಯುವ ವಿಧಾನವನ್ನು ಮಯೋಮೆಕ್ಟಮಿ ಎನ್ನುತ್ತಾರೆ. ಇತ್ತೀಚಿಗೆ ನಾರುಗಡ್ಡೆ ಕರಗಿಸುವ ಮಾತ್ರೆಗಳೂ ಬಂದಿವೆ. ಬೇರೆ ಬೇರೆ ತಂತ್ರಜ್ಞಾನಗಳು ಬಂದಿವೆ. ವೈದ್ಯರ ಸಲಹೆಯನ್ನು ಪಡೆಯಿರಿ.

ನನಗೆ ನಾಲ್ಕು ತಿಂಗಳಿಂದ ಮುಟ್ಟಾಗುತ್ತಿಲ್ಲ. ಮೈ ದಪ್ಪಗಾಗುತ್ತಿದೆ, ಸುಸ್ತಾಗುತ್ತಿದೆ. ಏನಾದರೂ ಕೆಲಸ ಮಾಡಬೇಕೆಂದರೆ ಉಬ್ಬಸ ಬರುತ್ತದೆ. ಕೆಲವೊಮ್ಮೆ ವಾಂತಿ ಬಂದಂತೆ ಆಗುತ್ತದೆ, ಆದರೆ ವಾಂತಿ ಬರುವುದಿಲ್ಲ. ನನಗೆ ಇನ್ನೂ ಮದುವೆ ಆಗಿಲ್ಲ. ಪರಿಹಾರ ತಿಳಿಸಿ.
-
ಪ್ರಣೀತಾ ಪೈ, ಊರು ತಿಳಿಸಿಲ್ಲ.

ಉತ್ತರ: ನಿಮ್ಮ ತೂಕ ಹೆಚ್ಚಾಗುತ್ತಿರುವುದಕ್ಕೆ ಥೈರಾಯಿಡ್ ಸಮಸ್ಯೆ ಅಥವಾ ಜೀವನಶೈಲಿಯಲ್ಲಿನ ವ್ಯತ್ಯಾಸವೂ ಕಾರಣವಿರಬಹುದು. ಅಂದರೆ ದೈಹಿಕ ಚಟುವಟಿಕೆಯ ಕೊರತೆ ಮತ್ತು ಅವಶ್ಯಕತೆಗಿಂತ ಹೆಚ್ಚು ಆಹಾರ ಸೇವನೆ ಇತ್ಯಾದಿಗಳಿಂದ ಪಿಸಿಒಡಿ ಸಮಸ್ಯೆಯಿಂದಾಗಿ ಪ್ರತಿ ತಿಂಗಳು ಅಂಡಾಣು ಬಿಡುಗಡೆಯಾಗದೆ ತಿಂಗಳಿಗೆ ಸರಿಯಾಗಿ ಮುಟ್ಟಾಗದೆ ಇರಬಹುದು. ನೀವು ತಜ್ಞವೈದ್ಯರನ್ನು ಕಂಡು ತಪಾಸಣೆಗೊಳಗಾಗಿ ಥೈರಾಯಿಡ್ ಹಾರ್ಮೋನ್‌ಗಳ ಮಟ್ಟ ಪರೀಕ್ಷಿಸಿಕೊಳ್ಳಿ. ಕತ್ತಿನ ಬುಡದಲ್ಲಿರುವ ಈ ಥೈರಾಯಿಡ್‌ ಗ್ರಂಥಿಯಿಂದ ಉತ್ಪಾದನೆಯಾಗುವ ಥೈರಾಯಿಡ್ ಹಾರ್ಮೋನ್‌ ಶರೀರದ ಚಯಾಪಚಯ ಕ್ರಿಯೆ, ಪಿಷ್ಟ, ಪ್ರೊಟೀನ್ ಹಾಗೂ ಕೊಬ್ಬುಗಳ ಆಮ್ಲೀಕರಣ ಇನ್ನಿತರ ಹಲವು ಚಟುವಟಿಕೆಗಳ ಮೇಲೆ ಪ್ರಭಾವಬೀರಿ ಋತುಚಕ್ರದ ಮೇಲೂ ಪ್ರಭಾವ ಬೀರುತ್ತದೆ. ಈ ಥೈರಾಯಿಡ್ ಗ್ರಂಥಿಯಲ್ಲಿ ಸ್ರಾವ ಕಡಿಮೆಯಾದರೆ ಹಲವು ಶಾರೀರಿಕ ಕ್ರಿಯೆಗಳು ಕುಂಠಿತಗೊಂಡು ತೂಕ ಹೆಚ್ಚಾಗುವುದು, ಮುಟ್ಟಿನ ಅವಧಿಯಲ್ಲಿ ಹಾಗೂ ಸ್ರಾವದಲ್ಲಿ ಏರುಪೇರಾಗುವುದು, ಬಂಜೆತನ, ಮಲಬದ್ಧತೆ, ಚರ್ಮ, ಕೂದಲು ಒರಟಾಗುವುದು, ಸುಸ್ತು, ಖಿನ್ನತೆ ಹೀಗೆ ಹಲವು ತರಹದ ಸಮಸ್ಯೆಗಳು ಆಗಬಹುದು. ಯಾವುದಕ್ಕೂ ತಜ್ಞ ವೈದ್ಯರಿಂದ ಸೂಕ್ತ ಸಲಹೆ ಹಾಗೂ ಚಿಕಿತ್ಸೆ ಪಡೆದುಕೊಳ್ಳಿ.

ನನಗೆ 27 ವರ್ಷ, ಮದುವೆಯಾಗಿ ಒಂದೂವರೆ ವರ್ಷ ಆಗಿದೆ. ಎರಡು ತಿಂಗಳಿಗೆ ಗರ್ಭಪಾತ ಆಗಿದೆ. ಗರ್ಭಪಾತವಾಗಿ ಒಂದು ವರ್ಷ ಕಳೆದಿದೆ. 70 ಕೆ.ಜಿ. ತೂಕವಿದ್ದೇನೆ. ಮುಂದೆ ಮಗುವಿಗಾಗಿ ಪ್ರಯತ್ನ ಮಾಡಬಹುದೇ? ಗರ್ಭಿಣಿಯಾಗಲು ನನ್ನ ತೂಕ ಜಾಸ್ತಿ ಇದೆಯೇ?
-
ವಿಜಯಲಕ್ಷ್ಮೀ ಪ್ರಸನ್ನ, ಹಾಸನ

ಉತ್ತರ: ನೀವು 70 ಕೆ.ಜಿ. ತೂಕವಿದ್ದರೆ ನಿಮ್ಮ ಎತ್ತರ ಎಷ್ಟಿದೆ ಎಂದು ತಿಳಿಸಿಲ್ಲ. ನಿಮ್ಮ ಎತ್ತರವನ್ನು ಸೆಂ.ಮೀಟರ್‌ನಲ್ಲಿ ಅಳೆದು ಅದರಲ್ಲಿ 105ನ್ನು ಕಳೆಯಿರಿ. ಆಗ ಬರುವ ಉತ್ತರ ಗಮನಿಸಿ. (ಉದಾ: ನೀವು 160 ಸೆಂ.ಮೀ ಇದ್ದರೆ ನೀವು 55 ಕೆ.ಜಿ ಇರುವುದು ಸೂಕ್ತ). ನಿಮ್ಮ ತೂಕ ಎಷ್ಟಿರಬೇಕೆಂದು ಹೀಗೆ ಕಂಡುಹಿಡಿದು ಗರ್ಭಧರಿಸುವ ಮೊದಲೇ ಸಮತೂಕ ಹೊಂದಲು ಪ್ರಯತ್ನಿಸಿ. ಸಮತೋಲಿತ ಹಾಗೂ ಪೌಷ್ಠಿಕ ಆಹಾರವನ್ನು ಸೇವಿಸಿ ಮತ್ತು ಗರ್ಭಧಾರಣೆಗೆ 2 ತಿಂಗಳ ಮೊದಲೇ ದಿನವೂ 5 ಮಿ.ಗ್ರಾಂನ ಫೋಲಿಕ್ ಆಸಿಡ್ ಮಾತ್ರೆ ತೆಗೆದುಕೊಳ್ಳುತ್ತಿರಿ. ತಜ್ಞವೈದ್ಯರನ್ನು ಸಂಪರ್ಕಿಸಿ. ಆದಷ್ಟು ಬೇಗ ಮಗು ಪಡೆದುಕೊಳ್ಳಿ.

ಡಾ. ವೀಣಾ ಎಸ್‌. ಭಟ್
ಡಾ. ವೀಣಾ ಎಸ್‌. ಭಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT