ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನರಲ್ಲಿ ಹೆಚ್ಚುತ್ತಿದೆ ಹೃದಯಾಘಾತ: ಹೃದ್ರೋಗ ತಜ್ಞರ ಕಳವಳ

ಬದಲಾದ ಜೀವನಶೈಲಿ, ವ್ಯಸನ ಪ್ರಮುಖ ಕಾರಣ l ನಗರದ ಹೃದ್ರೋಗ ತಜ್ಞರ ಕಳವಳ
Last Updated 29 ಸೆಪ್ಟೆಂಬರ್ 2021, 19:10 IST
ಅಕ್ಷರ ಗಾತ್ರ

ಬೆಂಗಳೂರು: ‘ಬದಲಾದ ಜೀವನಶೈಲಿ, ಧೂಮಪಾನದಂತಹ ವ್ಯಸನಗಳಿಂದ ಇತ್ತೀಚಿನ ವರ್ಷಗಳಲ್ಲಿ 45 ವರ್ಷದೊಳಗಿನವರೂ ಹೆಚ್ಚಾಗಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ’ ಎಂದು ನಗರದ ಹೃದ್ರೋಗ ತಜ್ಞರು ಕಳವಳ ವ್ಯಕ್ತಪಡಿಸಿದರು.

ವಿಶ್ವ ಹೃದಯ ದಿನದ ಅಂಗವಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಮಣಿಪಾಲ್‌ ಆಸ್ಪತ್ರೆಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ ವೆಬಿನಾರ್‌ ನಲ್ಲಿ ‘ಯುವಕರು ಏಕೆ ಹೃದಯಾಘಾತಕ್ಕೆ ಒಳಗಾಗುತ್ತಾರೆ’ ಎಂಬ ವಿಷಯ ಕುರಿತು ವೈದ್ಯರು ಮಾತನಾಡಿದರು.

ವೈಟ್‌ಫೀಲ್ಡ್‌ನ ಮಣಿಪಾಲ್‌ ಆಸ್ಪತ್ರೆಯ ಡಾ. ಪ್ರದೀಪ್‌ ಹಾರನಹಳ್ಳಿ, ‘ಬದಲಾದ ಜೀವನ ಶೈಲಿಯಿಂದ ಹೃದಯದ ಆರೋಗ್ಯವು ಕ್ಷೀಣಿಸುತ್ತಿದೆ. ಹೃದಯದ ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟಿದಾಗ ಹೃದಯಾಘಾತ ಸಂಭವಿಸುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯ, ಧೂಮಪಾನ, ಮಾದಕ ವಸ್ತು ಸೇವನೆ, ಒತ್ತಡದ ಜೀವನ, ವಾಯುಮಾಲಿನ್ಯ ಸೇರಿದಂತೆ ವಿವಿಧ ಕಾರಣಗಳಿಂದ ಹೃದಯಾಘಾತ ಸಂಭವಿಸುತ್ತಿದೆ.ಅನುವಂಶೀಯತೆಯಿಂದಲೂ ಕೆಲವರಿಗೆ ಹೃದಯಾಘಾತವಾಗುತ್ತದೆ’ ಎಂದರು.

ಧೂಮಪಾನ ಅಪಾಯ: ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಡಾ.ಎಸ್‌. ಸುನಿಲ್‌ ಕುಮಾರ್‌, ‘ಹೃದಯಾ
ಘಾತಕ್ಕೆ ಒಳಗಾಗುತ್ತಿರುವ ಯುವಜನರಲ್ಲಿ ಶೇ 60 ರಷ್ಟು ಮಂದಿ ಧೂಮಪಾನ ವ್ಯಸನಿಗಳಾಗಿರುತ್ತಾರೆ ಎನ್ನುವುದು ಸಂಶೋಧನೆಗಳಿಂದ ತಿಳಿದುಬಂದಿದೆ. ಹೃದಯ ಕಾಯಿಲೆಗಳ ಬಗ್ಗೆ ಜನ ಎಚ್ಚರದಿಂದ ಇರಬೇಕು. ಧೂಮಪಾನ, ಮಾದಕ ವಸ್ತುಗಳ ಸೇವನೆಯಿಂದಾಗಿ ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತವಾಗುತ್ತಿದೆ’ ಎಂದು ಹೇಳಿದರು.

ವಿಕ್ರಂ ಆಸ್ಪತ್ರೆಯ ವೈದ್ಯ ಡಾ. ಸುನಿಲ್‌ ದ್ವಿವೇದಿ, ‘ಹೃದಯಾಘಾತವನ್ನು ಲಘುವಾಗಿ ಪರಿಗಣಿಸಬಾರದು. ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಂಡಾಗ ಆಸ್ಪಿರಿನ್ ಮಾತ್ರೆ ನೀಡಬೇಕು. ಕೂಡಲೇ 108ಕ್ಕೆ ಕರೆ ಮಾಡಿ, ಚಿಕಿತ್ಸೆಗೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು. ಹೃದಯಾಘಾತ ಸಂಭವಿಸಿದ ಒಂದು ಗಂಟೆ ನಿರ್ಣಾಯಕವಾಗಿರುತ್ತದೆ. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮವಾದ ಜೀವನ ವಿಧಾನವನ್ನು ಅಳವಡಿಸಿಕೊಳ್ಳಬೇಕು. ವ್ಯಾಯಾಮವನ್ನು ನಿಯಮಿತವಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.

ಲೈವ್‌ಆಲ್ಟ್‌ಲೈಫ್‌ನ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಕ್‌ ಸುಬ್ರಹ್ಮಣ್ಯಂ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು.

ನಿಯಮಿತ ಪರೀಕ್ಷೆ ಅಗತ್ಯ

‘ಎದೆಯ ಮಧ್ಯಭಾಗದಲ್ಲಿ ಅತಿಯಾದ ನೋವು, ಕೆಲವೊಮ್ಮೆ ಎದೆಯುರಿ, ಸುಸ್ತು, ಅತಿಯಾಗಿ ಬೆವರುವುದು, ಉಸಿರಾಟದ ತೊಂದರೆ, ತಲೆಸುತ್ತುವಿಕೆ, ಜ್ಞಾನ ತಪ್ಪುವುದು ಹೃದಯಾಘಾತದ ಪ್ರಮುಖ ಲಕ್ಷಣಗಳಾಗಿವೆ. ತಕ್ಷಣದಲ್ಲಿ ಚಿಕಿತ್ಸೆ ದೊರೆಯದೆ ಇದ್ದರೆ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ನಿಯಮಿತವಾಗಿರಕ್ತದಲ್ಲಿನ ಕೊಲೆಸ್ಟ್ರಾಲ್‌ ಮಟ್ಟ, ಇಸಿಜಿ, ಇಕೋ, ಟಿಎಂಟಿ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಯಶವಂತಪುರದ ಕೊಲಂಬಿಯಾ ಏಷ್ಯಾ ರೆಫರಲ್‌ ಆಸ್ಪತ್ರೆಯ ಡಾ. ಕಾರ್ತಿಕ್‌ ವಾಸುದೇವನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT