ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಯ ಬೇಡ ಭಯ

Last Updated 22 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಕ್ರಿಸ್ತ ಪೂರ್ವ 1500ರಲ್ಲಿ ಋಗ್ವೇದದಲ್ಲಿ ಪ್ರಸ್ತಾಪವಾಗಿರುವ `ರಾಜ ಕ್ಷಯ'ವೇ ಇಂದಿನ `ಕ್ಷಯ' ಅಥವಾ `ಟಿ.ಬಿ' (ಟ್ಯೂಬರ್ ಕ್ಯುಲೋಸಿಸ್) ಮಾನವನ ಬಲಿ ತೆಗೆದುಕೊಳ್ಳುವ ಅಂಟು ರೋಗಗಳಲ್ಲಿ ಏಡ್ಸ್ ನಂತರದ ಎರಡನೇ ಸ್ಥಾನ ಕ್ಷಯ ರೋಗದ್ದು. ಇದು ಗಾಳಿಯಿಂದ ಅಂಟುವ ರೋಗ. ಹೀಗಾಗಿ ಯಾರಿಗೆ ಬೇಕಾದರೂ ಕ್ಷಯ ತಗುಲಬಹುದಾದ್ದರಿಂದ ಈ ರೋಗ ವಿಶ್ವವ್ಯಾಪಿ. ಆದಾಗ್ಯೂ ಇದರ ದಳ್ಳುರಿ ಭಾರತದಲ್ಲಿ ಹೆಚ್ಚು. ವಿಶ್ವದಲ್ಲಿ ಎರಡು ದಶಲಕ್ಷ ಜನ ಪ್ರತಿ ವರ್ಷ ಕ್ಷಯದಿಂದ ಸಾಯುತ್ತಿದ್ದಾರೆ. ಇದನ್ನೆಲ್ಲ ಮನಗಂಡು ವಿಶ್ವ ಆರೋಗ್ಯ ಸಂಸ್ಥೆ, ಕ್ಷಯ ರೋಗವು `ಜಾಗತಿಕ ತುರ್ತು ಸ್ಥಿತಿ' ಎಂದು ಎಚ್ಚರಿಸಿದೆ.

ಕ್ಷಯದ ರೋಗಾಣುಗಳು ಆವಿಷ್ಕಾರವಾಗಿ (1882) ಇದೇ 24ಕ್ಕೆ ನೂರಾ ಮೂವತ್ತೊಂದು ವರ್ಷಗಳಾಗುತ್ತವೆ. ಕ್ಷಯದ ಲಸಿಕೆಯಾದ ಬಿ.ಸಿ.ಜಿ ಬಳಕೆಗೆ ಬಂದು (1921) ತೊಂಬತ್ತೆರಡು ವರ್ಷಗಳಾಗಿವೆ. ಪರಿಣಾಮಕಾರಿಯಾದ ಔಷಧಿ ದೊರಕಿ (1947) ಅರವತ್ತಾರು ವರ್ಷಗಳಾಗಿವೆ. ಇಷ್ಟೆಲ್ಲ ಮನ್ವಂತರಗಳ ನಂತರವೂ ಕ್ಷಯ ಭಾರತದಲ್ಲಿ ನೆಲೆಯೂರಿದೆ. ನಮ್ಮ ದೇಶ ಕ್ಷಯ ರೋಗದ ತವರು ಮನೆಯಾಗಿದೆ. ಮಲೇರಿಯಾ, ಎಚ್.ಐ.ವಿ, ಕುಷ್ಟ ಮತ್ತಿತರ ಅಂಟು ರೋಗಗಳ ಒಟ್ಟಾರೆ ಕೊಲ್ಲುವ ಶಕ್ತಿಗಿಂತ ಕ್ಷಯ ರೋಗವೊಂದರ ಕೊಲ್ಲುವ ಶಕ್ತಿಯೇ ಹೆಚ್ಚು. ಭಾರತದಲ್ಲಿ ಇಂದಿಗೂ ಪ್ರತಿ ವರ್ಷ 5 ಲಕ್ಷ ಜನ ಕ್ಷಯದಿಂದ ಸಾಯುತ್ತಿದ್ದಾರೆ.

ಅಮೆರಿಕದಲ್ಲಿ 1906ರಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 200 ಮಂದಿ ಕ್ಷಯದಿಂದ ಸಾಯುತ್ತಿದ್ದರು. ಈಗ ಅಲ್ಲಿ ಈ ಕಾರಣದಿಂದ ಸಾಯುವವರ ಸಂಖ್ಯೆ ಪ್ರತಿ ಲಕ್ಷ ಜನಸಂಖ್ಯೆಗೆ ಒಬ್ಬರು ಮಾತ್ರ. ಅಲ್ಲಿ ಹಾಗಾಗಿರುವಾಗ ಭಾರತದಲ್ಲಿ ಈಗಲೂ ಪ್ರತಿ ಲಕ್ಷ ಜನರಲ್ಲಿ 60 ಜನ ಕ್ಷಯದಿಂದ ಸಾಯುತ್ತಿರುವ ದುರಂತ ಘಟಿಸುತ್ತಿದೆ. ಹೀಗೇಕೆ? ನಮ್ಮಲ್ಲಿ ಕ್ಷಯ ಕೇವಲ ಆರೋಗ್ಯ ಸಮಸ್ಯೆಯಾಗಿ ಉಳಿಯದೆ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಯ ರೂಪ ಪಡೆದುಕೊಂಡಿದೆ.

ದೇಶದಲ್ಲಿ 4 ದಶಲಕ್ಷ ಕ್ಷಯ ರೋಗಿಗಳಿದ್ದಾರೆ. ಪ್ರತಿ ವರ್ಷ 2 ದಶಲಕ್ಷ ಜನರಿಗೆ ಕಾಯಿಲೆ ಅಂಟುತ್ತಿದೆ. ಹೀಗೆ ಕಾಯಿಲೆ ಅಂಟುತ್ತಿರುವವರಲ್ಲಿ ಮತ್ತು ಅದರಿಂದ ಪ್ರಾಣ ಕಳೆದುಕೊಳ್ಳುತ್ತಿರುವವರಲ್ಲಿ ದುಡಿಯುವ ವಯಸ್ಸಿನವರೇ (15- 50 ವರ್ಷದ ಒಳಗಿನವರು) ಹೆಚ್ಚು. ಇತರ ಅಂಟು ರೋಗಗಳಿಂದ ಸಾಯುವುದಕ್ಕಿಂತ ಹೆಚ್ಚಿನ ಸಂಖ್ಯೆಯ ಮಹಿಳೆಯರು ಕ್ಷಯದಿಂದ ಸಾವನ್ನಪ್ಪುತ್ತಿದ್ದಾರೆ. ದೇಶದಲ್ಲಿ ಪ್ರತಿ ವರ್ಷ 13 ದಶಲಕ್ಷ ಮಾನವ ದುಡಿಮೆ ದಿನಗಳು ನಷ್ಟವಾಗುತ್ತಿವೆ. ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿಗಳಷ್ಟು ಆರ್ಥಿಕ ನಷ್ಟ ಆಗುತ್ತಿದೆ. ತಂದೆ/ ತಾಯಿಗೆ ಬರುವ ಕ್ಷಯದಿಂದ 3 ಲಕ್ಷ ಮಕ್ಕಳು ಶಾಲೆ ಬಿಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ವರ್ಷಂಪ್ರತಿ ನಾಲ್ಕು ಲಕ್ಷ ಜನ ಈ ಕಾಯಿಲೆಗೆ ಬಲಿಯಾಗುತ್ತಿರುವುದರಿಂದ ವಿಧವೆ, ವಿಧುರ ಹಾಗೂ ಅನಾಥ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ.

ತಿಳಿವಳಿಕೆಯ ಕೊರತೆಯಿಂದ ಬಹಳಷ್ಟು ಜನ ತಮ್ಮಲ್ಲಿರುವ ಕ್ಷಯದ ಬಗ್ಗೆ ಚಿಂತಿಸುತ್ತಿಲ್ಲ. ಇಂತಹವರು ಕಾಯಿಲೆಯನ್ನು ಉಲ್ಬಣ ಮಾಡಿಕೊಳ್ಳುವುದಲ್ಲದೆ, ತಮ್ಮ ರೋಗಾಣುಗಳನ್ನು ಉಸಿರು, ಕೆಮ್ಮು, ಕಫದ ಮೂಲಕ ಹೊರಚೆಲ್ಲಿ ಸಾವಿರಾರು ಜನರಿಗೆ ರೋಗವನ್ನು ಅಂಟಿಸುವ ವಾಹಕಗಳಾಗುತ್ತಿದ್ದಾರೆ. ಇನ್ನು ಕೆಲವು ಮಂದಿ ಕ್ಷಯ ರೋಗಕ್ಕೆ ಅಂಟಿರುವ ಕಳಂಕಕ್ಕೆ ಹೆದರಿ ಕಾಯಿಲೆಯನ್ನು ಉಡಿಯ ಕೆಂಡವಾಗಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಂತಹ ನಡವಳಿಕೆಯ ಜನರಿಂದಲೇ ಇತರರಿಗೆ ಹರಡುವ ಕ್ಷಯದ ಪ್ರಮಾಣ ಅತ್ಯಂತ ಘೋರವಾಗಿದೆ.

ಎಚ್.ಐ.ವಿ ಸೋಂಕು ಇರುವವರಿಗೆ ಕ್ಷಯ ಬಹಳ ಸುಲಭವಾಗಿ ಅಂಟಿಕೊಳ್ಳುತ್ತದೆ. ಇಂತಹವರು ಚಿಕಿತ್ಸೆಗೆ ಒಳಗಾಗದಿದ್ದಾಗಲೂ ಕ್ಷಯ ಇತರರಿಗೆ ಹರಡುತ್ತದೆ. ಹೀಗಾಗಿ ನಮ್ಮಲ್ಲಿ ಎಚ್.ಐ.ವಿ ಸೋಂಕು ಇರುವವರೆಗೂ ಕ್ಷಯದ ಹಾವಳಿ ನಿರಾತಂಕವಾಗಿ ಮುಂದುವರಿಯುತ್ತದೆ. ಅದೇ ರೀತಿ ಅಪೌಷ್ಟಿಕತೆ, ಪರಿಸರ ಮಾಲಿನ್ಯ. ಧೂಮಪಾನ, ಗಾಳಿ- ಬೆಳಕು ಸೋಕದ ಕೆಟ್ಟ ಪರಿಸರದಲ್ಲಿ ವಾಸ, ಸಕ್ಕರೆ ಕಾಯಿಲೆ ಮುಂತಾದ ಸಾಮಾಜಿಕ ಕಾರಣಗಳೇ ಕ್ಷಯ ರೋಗದ ನಿರ್ಮೂಲನೆಗೆ ಅಡ್ಡಿಯಾಗಿ ನಿಂತಿವೆ.

ಕ್ಷಯದ ಲಕ್ಷಣಗಳು ಕಂಡುಬಂದವರು ಅಲಕ್ಷಿಸದೆ ತಕ್ಷಣವೇ ಪರೀಕ್ಷೆಗೆ ಒಳಗಾಗಬೇಕು. ಕೇಂದ್ರ ಸರ್ಕಾರದ ಪರಿಷ್ಕೃತ ರಾಷ್ಟ್ರೀಯ ಕ್ಷಯ ನಿಯಂತ್ರಣ ಕಾರ್ಯಕ್ರಮದಡಿ ಪರೀಕ್ಷೆ ಮತ್ತು ಚಿಕಿತ್ಸಾ ಸೌಲಭ್ಯವನ್ನು ಪ್ರತಿ ಸರ್ಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ನೀಡಲಾಗುತ್ತದೆ. ಇಲ್ಲಿ ಕಫ ಪರೀಕ್ಷೆಯ ಮೂಲಕ ಕಾಯಿಲೆಯನ್ನು ಪತ್ತೆ ಮಾಡಿ ಔಷಧಿ ಕೊಡಲಾಗುತ್ತದೆ.

ಕ್ಷಯ ರೋಗದ ನಿವಾರಣೆ ದೇಶಕ್ಕೆ ಅತಿ ಮುಖ್ಯ. ಹೀಗಾಗಿ ಸರ್ಕಾರ ಅತ್ಯಂತ ದಕ್ಷತೆಯಿಂದ ಕ್ಷಯ ನಿಯಂತ್ರಣ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದೆ. ಇಲ್ಲಿ ಪ್ರತಿ ರೋಗಿಗೂ ಮಹತ್ವ. ಅವರ ಕಾಯಿಲೆಯನ್ನು ಸಂಪೂರ್ಣವಾಗಿ ನಿವಾರಿಸುವುದೇ ಮುಖ್ಯ ಗುರಿ. ಪ್ರತಿ ರೋಗಿಗೂ ಪ್ರತ್ಯೇಕ ಔಷಧಿ ಬಾಕ್ಸ್‌ಗಳನ್ನು ಮೀಸಲಿಡಲಾಗುತ್ತದೆ. ಮೇಲ್ವಿಚಾರಕರ ಕಣ್ಣೆದುರೇ ಔಷಧಿಯನ್ನು ನುಂಗಿಸಲಾಗುತ್ತದೆ. ವಾರಕ್ಕೆ 3 ದಿನದಂತೆ 6 ತಿಂಗಳವರೆಗೆ ಸತತವಾಗಿ ಮಾತ್ರೆಗಳನ್ನು ಸೇವಿಸಿದರೆ ಕ್ಷಯ ಸಂಪೂರ್ಣವಾಗಿ ಗುಣವಾಗುತ್ತದೆ. ಚಿಕಿತ್ಸೆ ಆರಂಭಿಸಿದ ಎರಡೇ ದಿನದಲ್ಲಿ ರೋಗಿಗೆ ಕಾಯಿಲೆ ಹರಡುವುದು ನಿಂತುಹೋಗುತ್ತದೆ.

ಕ್ಷಯ ರೋಗ ಬರುವುದೇಕೆ?

ಸರಿಯಾದ ಚಿಕಿತ್ಸೆ ಪಡೆದರೆ ಆರೇ ತಿಂಗಳಿನಲ್ಲಿ ಸಂಪೂರ್ಣವಾಗಿ ಗುಣವಾಗುವಂತಹ ಯಃಕಶ್ಚಿತ್ ಕಾಯಿಲೆಯಾಗಿರುವ ಕ್ಷಯ, ದೇಶದ ಉದ್ದಗಲಕ್ಕೂ ಪಾರ್ಥೇನಿಯಂನಂತೆ ಬೆಳೆದಿದೆ. ಇದಕ್ಕೆ ನಮ್ಮ ಸಾಮಾಜಿಕ ನಡವಳಿಕೆಗಳೇ ಅತಿ ಮುಖ್ಯ ಕಾರಣಗಳು. ಅವೆಂದರೆ:

  • ಎಲ್ಲೆಂದರಲ್ಲಿ ಉಗುಳುವ ರೂಢಿ
  • ಒಂದೇ ಹುಕ್ಕವನ್ನು ಹಲವರು ಸೇದುವುದು
  • ಕಾಯಿಲೆ ಬಗ್ಗೆ ತಿಳಿವಳಿಕೆ ಇಲ್ಲದಿರುವುದು
  • ಬಡತನ, ಜನಸಾಂದ್ರತೆ, ಕೊಳೆಗೇರಿ, ಅನಕ್ಷರತೆ, ನ್ಯೂನ ಪೋಷಣೆ
  • ಔದ್ಯೋಗೀಕರಣ, ಯಾಂತ್ರೀಕರಣ, ಪರಿಸರ ಮಾಲಿನ್ಯ
  • ಗಾಳಿ, ಬೆಳಕು ಇರದ ಮನೆಗಳು
  • ಕಾಯಿಲೆಗೆ ಅಂಟಿರುವ ಕಳಂಕ
  • ಕೆಮ್ಮುವಾಗ, ಸೀನುವಾಗ ಬಾಯಿಗೆ ಅಡ್ಡವಾಗಿ ಕರ್ಚೀಫ್ ಇರಿಸಿಕೊಳ್ಳುವ ಅಭ್ಯಾಸ ಇಲ್ಲದಿರುವುದು.   

ಲಕ್ಷಣಗಳು ಹೀಗಿವೆ

  • 15 ದಿನಗಳವರೆಗೆ ಮುಂದುವರಿಯುವ ಜ್ವರ
  • ಸಂಜೆಯೇ ಹೆಚ್ಚಾಗಿ ಜ್ವರ ಬರುವುದು, ರಾತ್ರಿ ಮೈ ಬೆವರುವುದು
  • 15 ದಿನಗಳವರೆಗೆ ಸತತವಾಗಿ ಕಾಡುವ ಕೆಮ್ಮು- ಕಫ
  • ಸುಸ್ತು, ಹಸಿವಿಲ್ಲದಿರುವುದು, ಆಯಾಸ
  • ಎದೆ ನೋವು, ಕಫದಲ್ಲಿ ರಕ್ತ ಕಾಣಿಸುವುದು
  • ದೇಹದ ತೂಕ ಇಳಿಕೆಯಾಗುವುದು

ಸೂಕ್ತ ನಿಯಂತ್ರಣ ಹೇಗೆ?

ಸಾಮಾನ್ಯ ಕ್ಷಯಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ `ಡಾಟ್ಸ್' ಔಷಧಿ ಉಪಯೋಗಿಸಬೇಕು. ಇವು ಉಚಿತವಾಗಿ ಮನೆಯ ಹತ್ತಿರದ `ಡಾಟ್ಸ್ ಕೇಂದ್ರ'ದಲ್ಲಿ ಲಭ್ಯ. ಈ ಔಷಧಿಯಿಂದ ತೊಂದರೆಯಾದರೆ ಕೂಡಲೇ ಚಿಕಿತ್ಸೆ ನೀಡಿದ ವೈದ್ಯರನ್ನು ಸಂಪರ್ಕಿಸಬೇಕು. ಅವರ ಸಲಹೆ ಇಲ್ಲದೆ ಔಷಧಿ ನಿಲ್ಲಿಸಬಾರದು.

ಖಾಸಗಿ ವೈದ್ಯರು `ಡಾಟ್ಸ್' ಔಷಧಿ ಬಳಸಬೇಕು.ನಿರಂತರ ಆರೋಗ್ಯ ಶಿಕ್ಷಣ: ದೂರದರ್ಶನ ಹಾಗೂ ಆಕಾಶವಾಣಿಯು ಆರೋಗ್ಯ ಶಿಕ್ಷಣದ ವಿಷಯದಲ್ಲಿ ಶೇ 60ರಿಂದ 80ರಷ್ಟು ಪ್ರಭಾವಶಾಲಿ. ಇವುಗಳಲ್ಲಿ ಚರ್ಚೆ, ಫೋನ್-ಇನ್ ಕಾರ್ಯಕ್ರಮಗಳು ಹೆಚ್ಚಾಗಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕ್ಷಯದ ಬಗ್ಗೆ ಮಾಹಿತಿ, ಚರ್ಚಾ ಸ್ಪರ್ಧೆ ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT