ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾರ ಮಸಾಲೆ ಜಿಡ್ಡಿಗೆ ಸೋಲದಿರಿ

Last Updated 1 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಗೌರಮ್ಮ 53 ವರ್ಷದವರು; ಸ್ಥೂಲಕಾಯದವರು. ಆಗಾಗ್ಗೆ ಹೊಟ್ಟೆನೋವು, ಎದೆಯುರಿ ಎಂದು ಸ್ಕ್ಯಾನಿಂಗ್ ಮಾಡಿಸಿದಾಗ ವೈದ್ಯರು ‘ನಿಮಗೆ ಫ್ಯಾಟೀ ಲಿವರ್ ಇದೆ, ಎಸಿಡಿಟಿ ಇದೆ, ಇನ್ನು ಮುಂದೆ ನೀವು ಜಿಡ್ಡು, ಮಸಾಲೆ ತಿನ್ನಲೇ ಬೇಡಿ’ ಎಂದಾಗ, ಅಯ್ಯೋ ದೇವರೇ, ಇಷ್ಟು ದಿನ ಉಪ್ಪುಳಿ, ಖಾರ ಉಂಡ ದೇಹ, ಇನ್ನು ಹೇಗೆ ನನ್ನ ಜೀವನ ಎಂದು ತಲೆಯ ಮೇಲೆ ಕೈಹೊತ್ತು ಕುಳಿತೇ ಬಿಡುತ್ತಾರೆ.

ಇಂತಹ ಘಟನೆಗಳಷ್ಟೇ ಅಲ್ಲ ಜ್ವರ, ಭೇದಿ ಇನ್ನಿತರ ಕಾಯಿಲೆಗೆ ಔಷಧ ಕೊಡುವಾಗಲೂ ಅಲೋಪಥಿ ವೈದ್ಯರಿಂದ ಹಿಡಿದು ಎಲ್ಲ ಪದ್ಧತಿಯವರೂ ಆಹಾರಪಥ್ಯದ ಬಗ್ಗೆ ತಿಳಿಸಿ ಸಾದ(ಸಾತ್ವಿಕ) ಆಹಾರ ತೆಗೆದುಕೊಳ್ಳಲು ತಿಳಿಸುತ್ತಾರೆ.

ಆದರೆ ಜಿಡ್ಡು, ಖಾರಾ, ಮಸಾಲೆ ಇಂದಿನ ನಮ್ಮ ಆಧುನಿಕ ಜೀವನಶೈಲಿಯ ಅವಿಭಾಜ್ಯ ಅಂಗ ಎಂಬಂತಾಗಿದೆ. ಹಾಗೆಯೇ ದುರ್ನಾತವನ್ನೀಯುವ ಮೀನು, ಇತರ ಮಾಂಸಗಳೂ, ಜೊತೆಗೆ ಕೆಲವು ಅಹಿತವಾಸನೆಯನ್ನುಂಟುಮಾಡುವ ಚಿಕನ್, ಮಟನ್ ಹಾಗೂ ಕೆಲವು ತರಕಾರಿ ಎಲ್ಲವೂ ಜಿಡ್ಡು ಗರಂ ಮಸಾಲೆಗಳು ಸೇರಿ ಘಮಘಮಿಸುವ ಭಕ್ಷ್ಯಗಳಾಗಿ ಎಲ್ಲರ ಮೂಗನ್ನೂ ಅರಳಿಸುತ್ತವೆ. ಆದರೆ ನಾವೆಲ್ಲರೂ ನೆನಪಿಡಬೇಕಾದ ಅಂಶಗಳೆಂದರೆ ನಮಗೆಲ್ಲ ಪ್ರಕೃತಿದತ್ತವಾಗಿ ಎರಡು ರೀತಿಯ ಆಹಾರಗಳು ಸಿಗುತ್ತವೆ. ಮೊದಲನೆಯದು  ಸಹಜ ಆಹಾರ. ಇನ್ನೊಂದು ಔಷಧರೂಪದಲ್ಲಿ ಸೇವಿಸಬಲ್ಲಂಥ ಆಹಾರ.

ಉದಾಹರಣೆಗಾಗಿ ಲವಂಗ, ಏಲಕ್ಕಿ, ದಾಲ್ಚಿನ್ನಿ, ಚಕ್ಕೆ, ಗಸಗಸೆ ಇತ್ಯಾದಿ. ಜೊತೆಗೆ ಸಾಸಿವೆ, ಮೆಂತ್ಯ, ಶುಂಠಿ, ಇಂಗು, ಕರಿಮೆಣಸು, ಅರಿಶಿಣ, ಬೆಳ್ಳುಳ್ಳಿ, ಒಮ, ಜೀರಿಗೆ, ಕೊತ್ತಂಬರಿಬೀಜ, ಇತ್ಯಾದಿಗಳು. ಕರಿಮೆಣಸು ಕೆಮ್ಮು, ಕಫನಿವಾರಣೆಗೆ ಸಹಾಯ ಮಾಡಿದರೆ, ಶುಂಠಿ, ಕೊತ್ತಂಬರಿ ಇವೆಲ್ಲ ಉದರವಾಯು ಪ್ರಕೋಪವನ್ನು ಕಡಿಮೆ ಮಾಡುತ್ತವೆ. ಅರಿಶಿಣದಲ್ಲಿ ಅಂಟಿಸೆಪ್ಟಿಕ್ ಗುಣವಿದೆ.

ಬೆಳ್ಳುಳ್ಳಿ ಹೃದಯಾಘಾತ ನಿವಾರಣೆಗೆ ಸಹಾಯಕ. ಹೀಗೆ ಒಂದೊಂದೂ ತರಕಾರಿ, ಕಾಳು, ಸಾಂಬಾರು ಪದಾರ್ಥಗಳು ಅತ್ಯುತ್ತಮ ಔಷಧಗುಣವನ್ನೇ ಹೊಂದಿವೆಯಾದರೂ ಅವುಗಳನ್ನು ದಿನಾಲೂ ಅತಿಯಾಗಿ ಉಪಯೋಗಿಸಿದರೆ ನಿಜವಾಗಿಯೂ ಅವುಗಳ ಆವಶ್ಯಕತೆ ಎದುರಾದಾಗ ಅವು ಹೆಚ್ಚು ಪರಿಣಾಮಕಾರಿ ಆಗುವುದಿಲ್ಲ. ಹಾಗಾದರೆ ಮಸಾಲೆ ಜಿಡ್ಡುಗಳನ್ನು ದಿನಾಲೂ ಹೆಚ್ಚು ಹೆಚ್ಚು ಸೇವಿಸಿದರೆ ಏನಾಗುತ್ತದೆ? ಹಾಗೆ ಸೇವಿಸುವುದರಿಂದ ಹೆಚ್ಚು ಜೀರ್ಣರಸಗಳು ಉತ್ಪಾದನೆಯಾಗಿ ಎದೆಯುರಿ, ಹಾಗೇ ದೀರ್ಘಾವಧಿಯಲ್ಲಿ ಅಲ್ಸರ್ ಕೂಡ ಉಂಟಾಗುವುದು. ಹೆಚ್ಚು ಸಾಂಬಾರ ಪದಾರ್ಥಗಳು ಕರುಳಿನ ಚಲನೆಯನ್ನು ಉದ್ರೇಕಿಸಿ, ತಾತ್ಕಾಲಿಕವಾಗಿ ಜೀರ್ಣಕ್ರಿಯೆಯನ್ನು ಪ್ರಚೋದಿಸಿದರೂ ಕಾಲಕ್ರಮೇಣ ಕರುಳಿನ ಕಾರ್ಯಕ್ಷಮತೆ ಕಡಿಮೆಯಾಗುತ್ತ ಬರಬಹುದು.

ಉದಾಹರಣೆಗೆ ಕೊತ್ತಂಬರಿಯನ್ನು ಒಳ್ಳೆಯದೆಂದು ಎಡೆಬಿಡದೆ ಉಪಯೋಗಿಸಿದಾಗ ಅನ್ನನಾಳ ಸಂಬಂಧಕ (ಸ್ಪಿಂಕ್ಟರ್) ಸರಿಯಾಗಿ ಕೆಲಸ ಮಾಡದೇ ಆಹಾರ ಗಂಟಲಿಗೇ ಬಂದ ಅನುಭವ ಆಗಬಹುದು. ಹಾಗೆಯೇ ಹೆಚ್ಚು ಹೆಚ್ಚು ಮಸಾಲೆ, ಸಾಂಬಾರ ಪದಾರ್ಥಗಳನ್ನು ಸೇವಿಸಿದಾಗ ಅವು ಯಕೃತ್ತಿನಲ್ಲಿ (ಲಿವರ್) ಸೇರಿಕೊಂಡು, ಅದನ್ನು ಹೊರಹಾಕಲು ಅದು ಹೆಚ್ಚು ಹೆಚ್ಚು ಕೆಲಸ ಮಾಡಬೇಕಾಗಿ ಬರುವುದರಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತ ಹೋಗುತ್ತದೆ.

ನಮ್ಮ ನರವ್ಯೂಹಗಳೂ ಹೆಚ್ಚು ಪ್ರಚೋದನೆಗೊಂಡು ಮನಸ್ಸಿಗೂ ಕಿರಿಕಿರಿ ಆಗಬಹುದು. ಹೆಚ್ಚಿನ ಮಸಾಲೆ, ಸಾಂಬಾರ ಪದಾರ್ಥಗಳು ಅಂಟಿಸೆಪ್ಟಿಕ್ ಹಾಗೂ ಅಂಟಿಬಯಾಟಿಕ್ ತರಹ ಕಾರ್ಯ ನಿರ್ವಹಿಸುವುದರಿಂದ ನಿರಂತರ ಉಪಯೋಗದಿಂದ ಅವು ನಿಜವಾಗಿ ಅವಶ್ಯ ಬಿದ್ದಾಗ ಪ್ರಯೋಜನವಾಗದೇ ಹೋಗಬಹುದು. ಆದ್ದರಿಂದ ಅವುಗಳನ್ನು ಹಿತಮಿತವಾಗಿ ಆಗಾಗ್ಗೆ ಮಾತ್ರ ಬಳಸುವುದು ಉತ್ತಮ.

ಇನ್ನು ಎಣ್ಣೆ ಹಾಗೂ ಜಿಡ್ಡಿನ ಪದಾರ್ಥಗಳನ್ನು ಬಿಸಿ ಮಾಡಿದಾಗ ನೀರಿನ ಕಣಗಳು ಹೊರಹೋಗಿ ಅಕ್ಸಿಜನ್ ಕಣಗಳು ಕಾರ್ಬನ್ ಸರಪಣಿಯೊಂದಿಗೆ ಮಿಶ್ರಣವಾಗುತ್ತದೆ. ಎಣ್ಣೆಯನ್ನು ಕಾಯಿಸಿದಾಗ ವಾಸನೆ, ರುಚಿ ಬದಲಾಗುತ್ತದೆ. ಎಣ್ಣೆಯಲ್ಲಿನ ಕೊಬ್ಬಿನ ಕಣಗಳು ಪಾಲಿಮರೈಸೇಷನ್ ಎಂಬ ಬದಲಾವಣೆ ಹೊಂದಿ ಕರುಳಿನಲ್ಲಿ ಚೆನ್ನಾಗಿ ಜೀರ್ಣವಾಗುವುದಿಲ್ಲ. ಈ ರೀತಿ ವಿರೂಪಗೊಂಡ ಎಣ್ಣೆಯ ಜಿಡ್ಡುಗಳು ರಕ್ತನಾಳಗಳಲ್ಲೂ ರಕ್ತಸರಬರಾಜು ಚೆನ್ನಾಗಿ ಆಗುವುದನ್ನು ತಡೆಗಟ್ಟಿ ದೀರ್ಘಾವಧಿಯ ನಂತರ ಅದು ಹೃದಯದ ರಕ್ತನಾಳಗಳಿಗಾದರೆ ಹೃದಯಾಘಾತವನ್ನೂ, ಮೆದುಳಿಗಾದರೆ ಪಾರ್ಶ್ವವಾಯುವನ್ನೂ ಉಂಟುಮಾಡುತ್ತದೆ.

ಇಂದು ಮಾಧ್ಯಮದಲ್ಲಿ ಬಿತ್ತರವಾಗುವ ಹೆಚ್ಚಿನ ಅಡುಗೆ ಕಾರ್ಯಕ್ರಮಗಳಲ್ಲೆಲ್ಲ ಚೆನ್ನಾಗಿ ಹೀಗೆ ಫ್ರೈ ಮಾಡಿ, ಡೀಪ್ ಫ್ರೈ ಎಂದೆಲ್ಲಾ ಹೇಳುವುದು ಸಾಮಾನ್ಯ. ಆದರೆ 400 ಡಿಗ್ರಿ ಕುದಿಸಿದಾಗ ಮಾತ್ರ ಆಹಾರಪದಾರ್ಥ ಡೀಪ್ ಫ್ರೈ ಆಗುವುದು. ಅಷ್ಟು ಹೆಚ್ಚು ಉಷ್ಣತೆಯಲ್ಲಿ ಯಾವ ಜೀವಸತ್ವ ಉಳಿಯುತ್ತದೆ, ನೀವೇ ಹೇಳಿ? ಬದಲಾಗಿ ಅದು ಬರೀ ರುಚಿಯನ್ನಷ್ಟೇ ನೀಡುವುದೇ ಹೊರತು ಯಾವುದೇ ಆರೋಗ್ಯವನ್ನೂ ಕೊಡುವುದಿಲ್ಲ. ಕುದಿಸಿದ ಎಣ್ಣೆಜಿಡ್ಡು ರಕ್ತನಾಳಗಳನ್ನು ತಡೆಗಟ್ಟುವುದಲ್ಲದೇ ಜೀವಕೋಶಗಳಲ್ಲಿನ ಆಮ್ಲಜನಕವನ್ನು ಪಡೆದು ಪ್ರಿರಾಡಿಕಲ್ಸ್ (ಸ್ವತಂತ್ರಕಾಯ)ಗಳನ್ನು ಉತ್ಪತ್ತಿ ಮಾಡಿ ಜೀವಕೋಶಗಳನ್ನು ದುರ್ಬಲಗೊಳಿಸುತ್ತದೆ. ಮತ್ತು ಇಂತಹ ಎಣ್ಣೆಜಿಡ್ಡಿನ ಸೇವನೆಯಿಂದ ಹೆಚ್ಚು ಜೀರ್ಣರಸಗಳ ಉತ್ಪಾದನೆಯಾಗಿ ಕರುಳುಗಳು ಹೆಚ್ಚು ಕೆಲಸ ಮಾಡುತ್ತವೆ; ಕ್ರಮೇಣ ತಮ್ಮ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಜಠರದಲ್ಲಿ ಹೆಚ್ಚು ಹೈಡ್ರೋಕ್ಲೋರಿಕ್ ಆಮ್ಲವೂ ಉತ್ಪಾದನೆಯಾಗಿ ಅಲ್ಸರ್ ಉಂಟಾಗಬಹುದು.

ಇವು ಜೀರ್ಣವಾಗಲು ಹೆಚ್ಚು ನೀರೂ ಬೇಕಾಗುವುದರಿಂದ, ಹೆಚ್ಚು ನೀರನ್ನು ಆಹಾರದೊಡನೆ ಸೇವಿಸಬೇಕಾಗಿ ಬರುವುದರಿಂದ ಜೀರ್ಣಕ್ರಿಯೆಯೂ ಮಂದವಾಗಿ ಹೊಟ್ಟೆಯುಬ್ಬರದ ಅನುಭವವಾಗುತ್ತದೆ. (ಮಾಮೂಲಾಗಿ ನೀರು ಮತ್ತು ಆಹಾರವನ್ನು ಒಟ್ಟಿಗೇ ಸೇವಿಸಬಾರದು.)
ಹಾಗಾದರೆ ಎಣ್ಣೆಜಿಡ್ಡನ್ನೆಲ್ಲಾ ಸೇವಿಸುವುದೇ ಬೇಡವೇ? ಕೊಬ್ಬಿನಾಂಶವೂ ನಮ್ಮ ಶರೀರಕ್ಕೆ ಅಗತ್ಯವಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಮನುಷ್ಯನಿಗೆ 20ರಿಂದ 30 ಗ್ರಾಂ ಕೊಬ್ಬು ಅತ್ಯವಶ್ಯವಿದೆ. ಆದರೆ ನಮ್ಮ ಪಾಕವಿಧಾನಗಳಲ್ಲಿ ಎಣ್ಣೆಯನ್ನು 100 ಡಿಗ್ರಿಗೂ ಹೆಚ್ಚು ಕಾಯಿಸಿದಾಗ ಅಥವಾ ಡೀಪ್ ಫ್ರೈ (400 ಡಿಗ್ರಿ) ಎಂದು ರುಚಿ ಬರಿಸಿದಾಗ ಎಲ್ಲ ಜೀವಸತ್ವಗಳೂ ಪೋಷಕಾಂಶಗಳೂ ನಾಶವಾಗುತ್ತವೆ.

ಜೀರ್ಣವಾಗಲು ಹೆಚ್ಚು ಸಮಯವೂ ಬೇಕು. ನಮ್ಮ ಕೈಗೆ ಜಿಡ್ಡು ತಗಲಿದರೆ ಸೋಪು ಹಾಕಿ ತಿಕ್ಕಿತಿಕ್ಕಿ ತೊಳೆಯುತ್ತೇವೆ. ಹಾಗಾದರೆ ಜಠರ ಹಾಗೂ ಕರುಳಿನ ಜಿಡ್ಡುನಿವಾರಣೆಗೆ ಎಷ್ಟು ಶ್ರಮವಾಗಬಹುದೆಂದು ನೀವೇ ಯೋಚಿಸಿ. ನಮಗೆ ಅವಶ್ಯವಿರುವ ಕೊಬ್ಬನ್ನು ನಾವು ಶೇಂಗಾಬೀಜ, ಬೇಳೆಕಾಳುಗಳು, ತೆಂಗಿನಕಾಯಿ, ಎಳ್ಳು ಇತ್ಯಾದಿ ಬೀಜಗಳನ್ನು ಬಳಸುವುದರಿಂದ ಪಡೆಯಬಹುದು. ಇದರ ಜೊತೆಗೆ ಇವುಗಳಲ್ಲಿ ನಾರು, ಲೆಸಿಥಿನ್ ಹಾಗೂ ಇನ್ನಿತರ ಆವಶ್ಯಕ ಅಮಿನೋ ಅಮ್ಲಗಳು ಎಲ್ಲವೂ ದೊರೆಯುತ್ತದೆ.

ಹೆಚ್ಚು ಹುರಿದ, ಕರಿದ ಜಿಡ್ಡಿನ ಪದಾರ್ಥಗಳನ್ನು ಸೇವಿಸಿದಾಗ ಯಕೃತ್ತಿನ (ಲಿವರ್) ಕೆಲಸವೂ ಹೆಚ್ಚಿ ಹೆಚ್ಚಾದ ಕೊಬ್ಬು ಯಕೃತ್ತಿನಲ್ಲಿ ಶೇಖರಣೆಯಾಗುತ್ತದೆ (ಫ್ಯಾಟೀ ಲಿವರ್).  ನಂತರ ವೈದ್ಯರು ಸ್ವಲ್ಪವೂ ಎಣ್ಣೆ ಬಳಸಬೇಡಿ ಎಂದು ಉಪದೇಶಿಸುತ್ತಾರೆ. ಆದ್ದರಿಂದ ನಾವೆಲ್ಲ ಈ ಮೊದಲೇ ತಿಳಿಸಿದ ಹಾಗೆ ಆರೋಗ್ಯವನ್ನೀಯುವ ಮಸಾಲೆ ಪದಾರ್ಥಗಳನ್ನು ಅಪರೂಪಕ್ಕೆ ಹಿತಮಿತವಾಗಿ ಬಳಸಿ, ಜೊತೆಗೆ ಎಣ್ಣೆ ಇನ್ನಿತರ ಜಿಡ್ಡನ್ನು ಸಾಧ್ಯವಾದಷ್ಟು ಕಡಿಮೆ ಬಳಸುತ್ತ ನಮ್ಮ ದೇಹಾವಶ್ಯವಾದ ಕೊಬ್ಬಿನಾಂಶ ಪೂರೈಸಲು ಎಣ್ಣೆಬೀಜ, ಕಾಳುಗಳನ್ನೇ ಹೆಚ್ಚು ಬಳಸಿ ಆರೋಗ್ಯ ಕಾಪಾಡಿಕೊಳ್ಳುವುದೇ ಒಳಿತಲ್ಲವೇ?
ಇವೆಲ್ಲ ಎಣ್ಣೆಯ ಬಗೆಗಾದರೆ ಬಹು ಚರ್ಚೆಗೊಳಗಾಗುತ್ತಿರುವ ತುಪ್ಪದ ಬಗ್ಗೆ ಹೇಳದಿದ್ದರೆ ತಪ್ಪಾಗುತ್ತದೆ. ತುಪ್ಪ ಪ್ರಾಣಿಜನ್ಯ ಆಹಾರ. ಎಣ್ಣೆಯ ಸಂಶೋಧನೆಯ ಮೊದಲು ವ್ಯಾಪಕವಾಗಿ ಬಳಸಲ್ಪಡುತ್ತಿತ್ತು. ಆಯುರ್ವೇದದಲ್ಲೂ ಮಹತ್ವದ ಸ್ಥಾನ ಪಡೆದಿದೆ. ಆದರೆ ತುಪ್ಪವನ್ನು ಬಿಸಿಮಾಡಿ, ತುಪ್ಪದಲ್ಲಿ ಫ್ರೈ ಮಾಡಿದಾಗ ಅಪಾಯಕಾರಿಯಾಗುತ್ತದೆ. ತುಪ್ಪವನ್ನು ಅತ್ಯಂತ ಹಿತವಾಗಿ, ಮಿತವಾಗಿ ಬಿಸಿಮಾಡದೇ ಬಳಸಿ. ತುಪ್ಪಕ್ಕೆ ಪರ್ಯಾಯವಾಗಿ ಮಜ್ಜಿಗೆ ಮೊಸರನ್ನೂ ಬಳಸಬಹುದು.

ನಾಲಿಗೆಯ ಸವಿ ಸುಖಕೆ ಚೀಲವನು ತುಂಬಿದರೆ
ಶೂಲೆಗಳು ಹಲವು ತೆರನಾಗಿ ರುಚಿಗಳು
ಕಾಲನೊಶನಕ್ಕು ಸರ್ವಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT