ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಎಂಬ ಘೋರ ವಿಷ

ಅಕ್ಷರ ಗಾತ್ರ

ನುಷ್ಯನಿಗೆ ಗೊತ್ತಿರುವ ವಿಷಗಳಲ್ಲೇ ಅತಿ ಘೋರ ವಿಷ ತಂಬಾಕು. ಒಂದು ಸಿಗರೇಟಿನಲ್ಲಿ ಇರುವಷ್ಟೇ ತಂಬಾಕನ್ನು ಇಂಜೆಕ್ಷನ್ ಮೂಲಕ ಕೊಟ್ಟರೆ ಮನುಷ್ಯ ಎರಡೇ ಸೆಕೆಂಡುಗಳಲ್ಲಿ ಇಹಲೋಕ ತ್ಯಜಿಸುತ್ತಾನೆ. ಹಾಗೆಯೇ ನಮಗೆ ಗೊತ್ತಿರುವ ಅತ್ಯಂತ ಚಟಕಾರಕ ವಸ್ತು ಸಹ ತಂಬಾಕು. ಹೀಗಾಗಿ ಬಹಳಷ್ಟು ಜನ ತಂಬಾಕಿನ ಸೆರೆಯಾಳುಗಳಾಗಿ ಹೋಗಿದ್ದಾರೆ.

ವಿಶ್ವದಲ್ಲಿ ಪ್ರತಿ ದಿನ 15 ದಶಲಕ್ಷಕ್ಕಿಂತ ಹೆಚ್ಚು ಸಿಗರೇಟುಗಳನ್ನು ಸೇದಲಾಗುತ್ತಿದೆ. ಒಬ್ಬ ಭಾರತೀಯ ಪ್ರತಿ ವರ್ಷ ಸರಾಸರಿ 130 ಸಿಗರೇಟು ಸೇದುತ್ತಾನೆ ಎಂದು ಲೆಕ್ಕ ಹಾಕಲಾಗಿದೆ. ಒಟ್ಟಾರೆ ದೇಶದಲ್ಲಿ ಶೇ 35ರಷ್ಟು ಗಂಡಸರು, ಶೇ 20ರಷ್ಟು ಹೆಂಗಸರು ಹಾಗೂ ಶೇ 20ರಷ್ಟು ಶಾಲಾ ಬಾಲಕರು ತಂಬಾಕಿನ ಚಟಕ್ಕೆ ಅಂಟಿಕೊಂಡಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ಪ್ರತಿ ದಿನ 6000 ದಷ್ಟು ವಯಸ್ಕರು, 150 ಮಂದಿ ಹದಿಹರೆಯದ ಶಾಲಾ ಮಕ್ಕಳು ಹೊಸದಾಗಿ ಧೂಮಪಾನ ಅಥವಾ ತಂಬಾಕಿನ ಅಭ್ಯಾಸ ಆರಂಭಿಸುತ್ತಿದ್ದಾರೆ.

ತಂಬಾಕನ್ನು ಬೀಡಿ, ಸಿಗರೇಟು, ಸಿಗಾರ್, ಹುಕ್ಕ, ಚುಟ್ಟ, ಜರ್ದಾ, ಗುಟ್ಕಾ, ಖೈನಿ ಮುಂತಾದ ರೂಪದಲ್ಲಿ ಬಳಸಲಾಗುತ್ತಿದೆ. ಅಪಾಯಕಾರಿಯಾದ ತಂಬಾಕು ಕ್ಯಾನ್ಸರ್‌ನಂತಹ ಭಯಾನಕ ಕಾಯಿಲೆಗಳನ್ನು ಹೊತ್ತು ತರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ತಂಬಾಕಿನಿಂದ ಉಂಟಾಗುವ ಸಾವು ನೋವು ಬಹಳ ನಿಧಾನವಾಗಿ ಸಂಭವಿಸುತ್ತವೆ. ಹೀಗಾಗಿ ಜನರಿಗೆ ತಂಬಾಕಿನ ಅಪಾಯದ ಬಗ್ಗೆ ಅಸಡ್ಡೆ.

ನಾವು ಸೇದುವ ಪ್ರತಿ ಸಿಗರೇಟು ನಮ್ಮ ಆಯುಷ್ಯವನ್ನು 7 ನಿಮಿಷದಷ್ಟು ಕಡಿಮೆ ಮಾಡುತ್ತಾ ಹೋಗುತ್ತದೆ. ತಂಬಾಕಿನ ಕಾರಣದಿಂದ ಪ್ರತಿ ವರ್ಷ ಆಯುಷ್ಯ ಕ್ಷೀಣಿಸಿ ಅಕಾಲಿಕವಾಗಿ ಸಾಯುತ್ತಿರುವವರ ಸಂಖ್ಯೆ ವಿಶ್ವದಲ್ಲಿ 5 ದಶಲಕ್ಷ ಹಾಗೂ ಭಾರತದಲ್ಲಿ 10 ಲಕ್ಷ. ತಂಬಾಕಿನ ಚಟದಿಂದ ಸಾಯುವವರೆಲ್ಲ 35ರಿಂದ 63 ವರ್ಷದೊಳಗಿನ ದುಡಿಯುವ ವಯಸ್ಸಿನವರು. ಇವರು ಸಾಯುವುದರಿಂದ 60 ದಶಲಕ್ಷ  ವರ್ಷಗಳಷ್ಟು ಮಾನವ ದುಡಿಮೆ ದಿನಗಳು ಹಾಗೂ 200 ದಶಲಕ್ಷ ಡಾಲರ್‌ಗಳಷ್ಟು ಆರ್ಥಿಕ ನಷ್ಟ ಉಂಟಾಗುತ್ತದೆ.

ವಿಶ್ವದಲ್ಲಿ ಅಪಘಾತ, ಕೊಲೆ, ಬೆಂಕಿ ದುರಂತ, ಆತ್ಮಹತ್ಯೆ, ಪ್ರಕೃತಿ ವಿಕೋಪ, ಮದ್ಯಪಾನ,     ಎಚ್.ಐ.ವಿ. ಈ ಎಲ್ಲವುಗಳ ಒಟ್ಟಾರೆ ಕೊಲ್ಲುವ ಶಕ್ತಿಗಿಂತ 5 ಪಟ್ಟು ಹೆಚ್ಚು ಕೊಲ್ಲುವ ಶಕ್ತಿ ತಂಬಾಕೊಂದಕ್ಕೇ ಇದೆ ಎಂದರೆ ಅದರ ಅಗಾಧ ದುಷ್ಪರಿಣಾಮದ ಅರಿವಾಗುತ್ತದೆ. ಧೂಮಪಾನಿಗಳು ಸೇದಿ ಬಿಡುವ ಹೊಗೆಗೂ ಇಷ್ಟೇ ಹಗೆ ಇದೆ.

ತಂಬಾಕಿನಲ್ಲಿ 4000 ಅಪಾಯಕಾರಿ ರಾಸಾಯನಿಕಗಳಿದ್ದು, ಇವುಗಳಲ್ಲಿ 400 ಅಂತೂ ಘೋರ ವಿಷವಸ್ತುಗಳಾಗಿವೆ. ಆದಾಗ್ಯೂ ಅವುಗಳ ಮಂದಗತಿಯ ಅಪಾಯದ ಪರಿಣಾಮವೇ ನಮಗೆ ಮೋಸದ ಯಮಪಾಶವಾಗಿದೆ. ಇದಕ್ಕೆ ಐತಿಹಾಸಿಕ ನಿದರ್ಶನವೆಂದರೆ 1945ರಲ್ಲಿ ಅಮೆರಿಕದಲ್ಲಿ ಧೂಮಪಾನದ ಅಭ್ಯಾಸ ಬಹಳಷ್ಟು ಇತ್ತು. ಆದರೆ ಸೇದುವ ಜನರಲ್ಲಿ ಕ್ಯಾನ್ಸರ್ ಉಂಟಾದದ್ದು 1985ರಲ್ಲಿ. ಅಂದರೆ 40 ವರ್ಷಗಳ ಅನಂತರ. ಪ್ರತಿ ದಿನ 25 ಸಿಗರೇಟಿನಂತೆ 25 ವರ್ಷ ಸೇದಿದವರಿಗೆ ಕ್ಯಾನ್ಸರ್, ಹೃದಯಾಘಾತ, ಲಕ್ವ, ಬಿ.ಪಿ., ಶ್ವಾಸಕೋಶಗಳ ಉರಿಯೂತ ಕಟ್ಟಿಟ್ಟ ಬುತ್ತಿ ಎಂದು ವೈದ್ಯ ವಿಜ್ಞಾನಿಗಳು ಹೇಳಿದ್ದಾರೆ. ತಂಬಾಕು ಜಗಿಯುವ ಚಟಕ್ಕೂ ಇದು ಅನ್ವಯಿಸುತ್ತದೆ.

ವಿಶ್ವ ತಂಬಾಕು ದಿನದಂದು ನಮ್ಮೆಲ್ಲರ ಮೇಲೆ ಇರುವ ಹೊಣೆಗಾರಿಕೆ ಎಂದರೆ:
1. ತಂಬಾಕು ಬಳಸುತ್ತಿರುವವರು, ತಮ್ಮ ಚಟ ತ್ಯಜಿಸಬೇಕು.
2. ಇನ್ನೂ ತಂಬಾಕು ಸೇವನೆ ಆರಂಭಿಸಿರದವರು ಎಂದೆಂದಿಗೂ ಅದನ್ನು ಹತ್ತಿರಕ್ಕೆ ಸುಳಿಯಗೊಡಬಾರದು.

-ಡಾ. ಪ್ರೊ. ಡಿ.ಕೆ.ಮಹಾಬಲರಾಜು .
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT