ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಖಿನ್ನತೆ!

Last Updated 16 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಮುಗ್ಧ ಮನಸ್ಸಿನ ಮುದ್ದು ಮಕ್ಕಳು ನಮ್ಮ ಅತಿದೊಡ್ಡ ಆಸ್ತಿ. ಅವರು ದೇಶದ ಹೊಸ ಬೆಳಕು. ನಮ್ಮ ಮಕ್ಕಳು ನಮ್ಮದೇ ಆದ ಪ್ರತಿಬಿಂಬಗಳು. ಅವರು ನಮ್ಮ ವ್ಯಕ್ತಿತ್ವದ ವಿಸ್ತರಣೆಗಳಿದ್ದಂತೆ. ನಾಳೆಯ ನಾಡಿನ ಮುನ್ನಡೆಯ ಹೊಣೆ ಅವರ ಭುಜಗಳ ಮೇಲೆ ಬೀಳುತ್ತದೆ.

ಆದರೆ ಇಂದು ನಮ್ಮ ಮುಚ್ಚಟೆಯ ಪ್ರೀತಿಯ ಬೆಚ್ಚನೆಯ ವಾತಾವರಣದಲ್ಲಿ ಹಾಯಾಗಿರುವ ಅವರಿಗೆ ಯಾವುದೇ ಹೊಣೆಗಾರಿಕೆ, ಭಯ, ಆತಂಕಗಳಿಲ್ಲ. ಅವರಿಗೇನು ಕಷ್ಟವಿದೆ? ಅವರೇಕೆ ಅತ್ತು ಕರೆದು ಹಠ ಮಾಡುತ್ತಾರೆ? ಅವರು ಕೇಳಿದ್ದನ್ನೆಲ್ಲಾ ನಾವು ಅವರಿಗೆ ಒದಗಿಸುತ್ತಿಲ್ಲವೇ ಎಂದು ಹಿರಿಯರು ಪ್ರಶ್ನಿಸಬಹುದು. ಆದರೆ ನೆನಪಿಡಿ. ಮಕ್ಕಳು ಬಹಳ Fragile ಆಗಿರುತ್ತಾರೆ. ಅವರ ಮನಸ್ಸು ಬಹು ಸೂಕ್ಷ್ಮ. ಅದು ಬಹಳ ಬೇಗನೇ ಘಾಸಿಗೊಳ್ಳುತ್ತದೆ. ಅದನ್ನು ಭರಿಸುವ ಶಕ್ತಿ ಇರುವುದಿಲ್ಲ.

ಆಂತಹ ವಿಶ್ವಾಸಾರ್ಹ ಸಮನ್ವಯ ಪೂರ್ಣ ಬೆಂಬಲ ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಇಂದಿನ ಪೀಳಿಗೆಯ ಎಳೆಯರಲ್ಲಿ ಭರವಸೆ ಮತ್ತು ಆತ್ಮವಿಶ್ವಾಸಗಳು ಕಡಿಮೆಯಾಗಿ ಮಕ್ಕಳ ಮನಸ್ಸು ಅನೇಕ ಬಗೆಯ ಆಘಾತಗಳಿಗೆ ಒಳಗಾಗಿ ಹೇಳಿಕೊಳ್ಳಲಾಗದ ಅಸಹಾಯಕ ಪರಿಸ್ಥಿತಿಯಿಂದ ಭಿನ್ನರೂ, ದುಃಖಿತರೂ ಆಗುತ್ತಿದ್ದಾರೆ. ಬಹುಪಾಲು ಪ್ರಕರಣಗಳಲ್ಲಿ ತೀರಾ ಕ್ಷುಲ್ಲಕ ಎನಿಸಬಹುದಾದ ಕಾರಣಗಳಿಂದಾಗಿ ಎಳೆ ವಯಸ್ಸಿನ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಾರೆ.

ಸೂಕ್ತ-ಆಪ್ತ ಮಾರ್ಗದರ್ಶನ

ಮಕ್ಕಳಿಗೆ ಪ್ರೀತಿ, ವಿಶ್ವಾಸಗಳಿಂದ ಸೂಕ್ತ ಮಾರ್ಗದರ್ಶನ ನೀಡಬೇಕಾದ ನಾವು ಪೋಷಕರು ನಮ್ಮ ಮಕ್ಕಳಿಂದ ಮಹತ್ವದ ನಿರೀಕ್ಷೆ ಹೊಂದಿ, ಏನೇನನ್ನೋ ಬಯಸುತ್ತೇವೆ. ಅದರೊಂದಿಗೇ ಮಕ್ಕಳತ್ತ ನಮ್ಮ ಕರ್ತವ್ಯ ಮತ್ತು ಹೊಣೆಗಾರಿಕೆಗಳನ್ನು ನಾವು ಆರ್ಥ ಮಾಡಿಕೊಳ್ಳಬೇಕು. ಮಕ್ಕಳ ಬೆಳವಣಿಗೆಯಲ್ಲಿ 8ರಿಂದ 18ರ ವಯೋಮಾನದ ಹಂತ ಅತಿ ಮುಖ್ಯವಾದದ್ದು. ಮಗು ಬಾಲ್ಯದಿಂದ ಹದಿಹರೆಯದ ಬದುಕಿಗೆ ತೆರೆದುಕೊಳ್ಳುವ ಸಂಕ್ರಮಣ ಕಾಲವದು. ಅವರ ಬದುಕಿನಲ್ಲಿ ಅನೇಕ ಪರಿವರ್ತನೆಗಳು ಸಂಭವಿಸುವುದರ ಪರಿಣಾಮ ಅವರ ಭವಿಷ್ಯದ ವ್ಯಕ್ತಿತ್ವವನ್ನು ರೂಪಿಸುತ್ತವೆ.
ನೆನಪಿಡಿ, ಸಮಸ್ಯಾತ್ಮಕ ಮಕ್ಕಳಿರುವುದಿಲ್ಲ... ಆದರೆ ಸಮಸ್ಯಾತ್ಮಕ ಪೋಷಕರಿರುತ್ತಾರೆ.

ಮಹತ್ವವಾದ ಕೆಲವು ಸೂಕ್ಷ್ಮ ವಿಷಯಗಳನ್ನು ಉಪೇಕ್ಷಿಸುವುದರಿಂದ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗುವ ಸಂಭವವಿದೆ. ಮಕ್ಕಳ ಸ್ವಸ್ಥ ಪಾಲನೆ ಪೋಷಣೆಗಳಿಗೆ ನೆರವಾಗುವ ಕೆಲವು ಹಂತಗಳು ಇಲ್ಲಿವೆ-

ಬೆಳೆಯುತ್ತಿರುವ ಮಕ್ಕಳನ್ನು ಪೋಷಿಸುವುದು ಗಾಳಿಪಟ ಹಾರಿಸಿದಂತೆ. ಇದೊಂದು ಕಲೆ. ಇದರಲ್ಲಿ ನಿಪುಣರಾದವರು ಗಾಳಿಪಟವನ್ನು ನಿರ್ಬಂಧಿಸದೇ ಮುಕ್ತವಾಗಿ ಹಾರಾಡಲು ಬಿಡುತ್ತಾರೆ. ಅದು ವಿಶಾಲ ಆಕಾಶದಲ್ಲಿ ಮೇಲೇರಿ ದೂರ ದೂರಕ್ಕೆ ಹಾರುವುದನ್ನು ಗಮನಿಸುತ್ತಿದ್ದು, ಪಟ ನಿಯಂತ್ರಣ ಮೀರುತ್ತಿದೆ ಎಂದು ಅನಿಸಿದಾಕ್ಷಣ ಎಚ್ಚರಿಕೆಯಿಂದ ದೃಢ ಹಿಡಿತದೊಂದಿಗೆ ದಾರವನ್ನು ಜಗ್ಗಿ ಅದನ್ನು ಸುರಕ್ಷಿತ ತಾಣಕ್ಕೆ ತಲುಪಿಸುತ್ತಾರೆ. ನಾವೂ ನಮ್ಮ ಸಾಮಾಜಿಕ ಸಂದರ್ಭದಲ್ಲಿ ಮಕ್ಕಳನ್ನು ಅತಿ ನಿಷ್ಠುರ ನಿರ್ಬಂಧಕ್ಕೆ ಒಳಪಡಿಸದೇ, ಸಂತುಲಿತ ಹಾದಿ ಕಲ್ಪಿಸಿಕೊಳ್ಳಬೇಕು.

ಮಕ್ಕಳಲ್ಲಿ ಒತ್ತಡ

ತಮ್ಮದೇ ಆದ ಪ್ರಪಂಚದಲ್ಲಿ ವಿಹರಿಸುವ ಮಕ್ಕಳು ಅನೇಕ ಬಗೆಯ ಒತ್ತಡಗಳಿಗೆ ಈಡಾಗುತ್ತಾರೆ. ಯಾವುದೇ ಬಗೆಯ ಒತ್ತಡ ಅಸಹನೀಯವಾದರೂ ಆ ಎಳೆಯ ಜೀವಗಳು ದುರ್ಭರ ನೋವು, ಮಾನಸಿಕ ಹಿಂಸೆ ಅನುಭವಿಸುತ್ತಾರೆ.

ಹಾಗಾಗಿ ನಾವು ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರ ನೆರವಿಗೆ ಸಕಾಲಿಕವಾಗಿ ಧಾವಿಸುವುದು ಅತ್ಯಗತ್ಯ. ನಂತರ  ಮಗುವಿನ ಸಂಕಟ ಪರಿಹರಿಸುವ ಕ್ರಮ. ಇದಕ್ಕಾಗಿ ಮಗುವಿನೊಂದಿಗೆ ಪರಿಣಾಮಕಾರಿ ಸಂವಹನ ಬೇಕು. ಊಟದ ಸಮಯದಲ್ಲಿ ಮಕ್ಕಳ ಜೊತೆ ಕುಳಿತು ಮಾತನಾಡುತ್ತ ಊಟ ಮಾಡುವುದು, ಟೆಲಿವಿಷನ್ ಮುಂದೆ ಒಟ್ಟಾಗಿ ಕುಳಿತುಕೊಳ್ಳುವುದಕ್ಕಿಂತ ಹೆಚ್ಚು ಅರ್ಥಪೂರ್ಣವೆನಿಸುತ್ತದೆ. ಕಡೆಯ ಪಕ್ಷ ವರ್ಷಕ್ಕೆರಡು ಬಾರಿಯಾದರೂ ಕುಟುಂಬ ಸಮೇತರಾಗಿ ಪ್ರವಾಸ ಹೊರಡುವುದು, ಜನ್ಮದಿನ ಆಚರಿಸುವುದು, ಮನಸ್ಸಿಗೆ ಸಾಕಷ್ಟು ಮುದ ನೀಡುತ್ತದೆ. ಕುಟುಂಬದ ಬಂಧ ಬೆಸುಗೆಗಳು ಬೆಳೆಯುತ್ತವೆ. ಇದರಿಂದ ನಂಬಿಕೆ, ವಿಶ್ವಾಸಗಳು ವೃದ್ಧಿಸುತ್ತವೆ. ಆಗ ನಿಮ್ಮ ಮಕ್ಕಳು ನಿಮ್ಮೆದುರು ಮನಬಿಚ್ಚಿ ಮಾತನಾಡಲು ಮುಂದಾಗುತ್ತಾರೆ.

ಈಗಿನ ಪೀಳಿಗೆಯ ಮಕ್ಕಳು ನಮಗಿಂತಲೂ ಹೆಚ್ಚಿನ ಬಹು ಮಾಧ್ಯಮ ಸಾಧ್ಯತೆಗಳಿಗೆ ತೆರೆದುಕೊಂಡಿರುವುದರಿಂದ ಅವರು ನಮಗಿಂತಲೂ ಒಂದು ಹೆಜ್ಜೆ ಮುಂದಿರುತ್ತಾರೆ. ಅವರಿಗೆ ಬದುಕಿನ ತತ್ವ, ಸಿದ್ಧಾಂತಗಳ ಬಗ್ಗೆ ಭಾಷಣ ನೀಡದಿರಿ. ಅವರು ನಿಮ್ಮ ನಡವಳಿಕೆಗಳನ್ನು ನಕಲು ಮಾಡುವರೇ ವಿನಃ ನಿಮ್ಮ ಭಾಷಣಗಳಿಗೆ ಕಿವಿಕೊಡುವುದಿಲ್ಲ. ಅವರಿಗೆ ನೀವು ಹೇಳಬೇಕಿರುವುದನ್ನು ಸರಳವಾಗಿ, ಸಂಕ್ಷಿಪ್ತವಾಗಿ, ಸೂಚ್ಯವಾಗಿ ಹೇಳಿ ಅವರಿಗೆ ಅವರದೇ ಆದ ಸ್ಥಳಾವಕಾಶವಿರಲಿ. ಅದಕ್ಕಾಗಿ ಅವರೊಂದಿಗೆ ಸ್ನೇಹಪರತೆಯಿಂದ ವರ್ತಿಸಿ.

ಮಕ್ಕಳು ಮಾತನಾಡುತ್ತಿರುವಾಗ ಅದರ ಬಗ್ಗೆ ನಿರ್ಣಾಯಕ, ವಿಮರ್ಶಾತ್ಮಕ ಅಥವಾ ಭಾವನಾತ್ಮಕ ನಿಷ್ಠುರತೆ ತೋರಬೇಡಿ. ಅದೊಂದು ಆರೋಗ್ಯಕರ ಚರ್ಚೆಯಾಗಿರಲಿ. ಕೆಲವೊಮ್ಮೆ ಅವರನ್ನು ತಾವೇ ಚಿಂತನೆ ಮಾಡುವಂತೆ ಪ್ರೇರೇಪಿಸಿ.

ಮಕ್ಕಳನ್ನೆಂದೂ ಇತರರ ಮುಂದೆ ಟೀಕಿಸಬೇಡಿ, ಅವಹೇಳನ ಮಾಡಬೇಡಿ. ಅವರ ಒಳ್ಳೆಯ ಕೆಲಸಗಳಿಗೆ ಪ್ರಶಂಸೆ ಮಾಡುವುದರಿಂದ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. ಆಗಿಂದಾಗ್ಗೆ ಅವರು ಪುಸ್ತಕ, ಮೊಬೈಲ್ ಸಂದೇಶಗಳು ಅವರು ಸಂದರ್ಶಿಸುವ ಅಂತರ್ಜಾಲದ ವಸ್ತು/ವಿಷಯಗಳನ್ನು ಗಮನಿಸುತ್ತಿರಿ. ಅದು ಅವರ ಬಗ್ಗೆ ಅಗತ್ಯ ಮಾಹಿತಿಗಳನ್ನು ನೀಡುತ್ತದೆ.

ನೈತಿಕ ಮೌಲ್ಯಗಳ ಬಗ್ಗೆ ಉದಾಹರಣೆಗಳೊಂದಿಗೆ ತಿಳಿಹೇಳಿ. ತಪ್ಪು ಸರಿಗಳ ನಡುವಿನ ವ್ಯತ್ಯಾಸಗಳನ್ನು ಸ್ಪಷ್ಟಪಡಿಸಿ. ನಿಮ್ಮ ನಿರ್ಧಾರಗಳನ್ನು ಹೇರುವ ಬದಲು ಅವರ ನಿರ್ಧಾರ ಅವರೇ ತೆಗೆದುಕೊಳ್ಳುವಂತೆ ನೆರವಾಗಿ ನಿಲ್ಲಿ. ಅವರು ಪ್ರಬುದ್ಧರಾಗಲು ಬಿಡಿ.

ಬದುಕಿನಲ್ಲಿ ಸ್ಪರ್ಧೆ ಇರುವುದಾದರೂ ಬದುಕೆಂಬುದು ಬರೀ ಸ್ಪರ್ಧೆಯೇ ಅಲ್ಲ, ಸೋಲು-ಗೆಲುವುಗಳೆರಡೂ ಬದುಕಿನ ಅನಿವಾರ್ಯ ಅಂಶಗಳೆಂದು ಅವರಿಗೆ ಅರ್ಥವಾಗುವಂತೆ ಹೇಳಿ. ಅವರು ಎದೆಗುಂದದೇ ಮರಳಿ ಯತ್ನ ಮಾಡಲು ಪ್ರೇರೇಪಿಸಿ.

ಹೀಗೆ ಮಾಡುವುದರಿಂದ ಮಗುವಿನ ಸಮಸ್ಯೆಗಳು ದೂರವಾಗುತ್ತವೆ. ಇದಕ್ಕೆ ಕೇವಲ ಔಷಧೋಪಚಾರ ಮಾತ್ರವಲ್ಲದೇ ಸಲಹೆ, ಬಿಹೇವಿಯರ್ ಥೆರಪಿಗಳು ನೆರವಾಗುತ್ತವೆ. ಆದ್ದರಿಂದ ಬನ್ನಿ ನಮ್ಮ ಮಕ್ಕಳಿಗೆ ಪ್ರೀತಿಯಿಂದ ಕಲಿಸೋಣ, ಬೆಳೆಸೋಣ. ಏಕೆಂದರೆ ಬದುಕು ಸುಂದರ ಹಾಗೂ ಬದುಕೆಂದರೆ ಸಂಪೂರ್ಣ ಗೆಲ್ಲುತ್ತ ಮುನ್ನಡೆಯುವುದೇ ಆಗಿದೆ.

ಒತ್ತಡದ ಸ್ವರೂಪಗಳು

ದೈಹಿಕ ಒತ್ತಡ: ಹವಾಮಾನ, ಸೋಂಕು, ರೋಗನಿರೋಧಕ ಶಕ್ತಿಯ ಕೊರತೆ ಇತ್ಯಾದಿ. 

ರಾಸಾಯನಿಕ ಒತ್ತಡ: ಮಾಲಿನ್ಯದಿಂದಾಗುವ ವಿಷಕಾರಕಗಳು, ವರ್ಣದ್ರವ್ಯಗಳು, ಅಧಿಕ ಸೀಸ, ಪಾದರಸ ಇತ್ಯಾದಿ. 

ಭಾವನಾತ್ಮಕ ಒತ್ತಡ : ಕೌಟುಂಬಿಕ ಸಮಸ್ಯೆಗಳು, ಜಗಳ, ಪೋಷಕರಲ್ಲಿನ ವಿಚ್ಛೇದನ, ಮಕ್ಕಳ ವೈಷಮ್ಯ, ಶಾಲೆಯಲ್ಲಿನ ಸಮಸ್ಯೆಗಳು, ಖಿನ್ನತೆ, ಕೀಳರಿಮೆ.

ಒತ್ತಡದ ಕಾರಣಗಳು

ಪರಿಸರ: ಮನೆ, ಶಾಲೆ

ಜನರು: ಕುಟುಂಬದ ಸದಸ್ಯರು, ಶಿಕ್ಷಕರು, ಗೆಳೆಯರು

ಆಹಾರ: ಕುಟುಂಬದಲ್ಲಿನ ಸಾಮರಸ್ಯದ ಕೊರತೆ, ಮನೆಯಲ್ಲಿನ ಮೌಲ್ಯಗಳು.

ಈ ಲಕ್ಷಣಗಳನ್ನು ಗಮನಿಸಿ

ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ. 

ನಿದ್ರಾ ಸಂಚಾರ

ಉಗುರು ಕಡಿಯುವಿಕೆ 

ಇದ್ದಕ್ಕಿದ್ದಂತೆ ಅಳುವುದು, ನಿದ್ರೆಯಲ್ಲಿ ಉಗ್ಗುವಿಕೆ.

ಏಕಾಗ್ರತೆಯ ಕೊರತೆ, ನಿರಾಸಕ್ತಿ,  ಅತಿ ನಿದ್ರೆ ಅಥವಾ ನಿದ್ರಾಹೀನತೆ

ಅತಿಯಾದ ಆಹಾರ ಸೇವನೆ ಅಥವಾ ತಿನ್ನಲು, ಓದಲು ನಿರಾಸಕ್ತಿ.

ಚಡ್ಡಿಯಲ್ಲಿ ಮಲವಿಸರ್ಜನೆ

ತೂಕದ ಹೆಚ್ಚಳ/ಕಡಿಮೆಯಾಗುವಿಕೆ 

ಕುಂದಿದ ಜ್ಞಾಪಕಶಕ್ತಿ ಇತ್ಯಾದಿ.

(ಲೇಖಕರ ಮೊಬೈಲ್ ಸಂಖ್ಯೆ- 9632921289)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT