ಭಾನುವಾರ, ಆಗಸ್ಟ್ 25, 2019
24 °C
ತೊಂದರೆಗೆ ಸಿಲುಕಿರುವ ಲಕ್ಷಾಂತರ ಜನ

ಭಾರಿ ಮಳೆ: 13 ಸಾವು

Published:
Updated:
Prajavani

ಸಾಂಗ್ಲಿ/ ಪಣಜಿ/ ತಿರುವನಂತಪುರ: ಮಹಾರಾಷ್ಟ್ರ, ಗೋವಾ, ಕೇರಳದಲ್ಲಿ ಗುರುವಾರವೂ ವಿಪರೀತ ಮಳೆ ಸುರಿದಿದ್ದು, ಜನರು ತತ್ತರಿಸಿದ್ದಾರೆ. ಮಳೆ ಮತ್ತು ಪ್ರವಾಹಕ್ಕೆ ಮಹಾರಾಷ್ಟ್ರದಲ್ಲಿ 9 ಜನರು, ಕೇರಳದಲ್ಲಿ ನಾಲ್ವರು ಬಲಿಯಾಗಿದ್ದಾರೆ. 

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿದ್ದವರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ  ಬೋಟ್‌ ಮಗುಚಿ ಒಂಬತ್ತು ಜನರು ಸತ್ತಿರುವ ಘಟನೆ ಸಾಂಗ್ಲಿ ಜಿಲ್ಲೆಯ ಬ್ರಹ್ಮನಲ್‌ ನಡೆದಿದೆ. 30 ರಿಂದ 32 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಒಯ್ಯುವಾಗ ಈ ದುರಂತ ಸಂಭವಿಸಿದೆ.

‘ಬೋಟ್‌ ಮಗುಚುವಾಗ ನೀರಿಗೆ ಹಾರಿದ 14 ರಿಂದ 15 ಜನರ ಪೈಕಿ 9 ಜನರ ಶವ ಪತ್ತೆಯಾಗಿದೆ. ಕಾಣೆ ಆಗಿರುವವರ ಪತ್ತೆ ಕಾರ್ಯವನ್ನು ವಿಪತ್ತು ನಿರ್ವಹಣಾ ಸಿಬ್ಬಂದಿ ಕೈಗೊಂಡಿದ್ದಾರೆ‘ ಎಂದು ಪುಣೆ ವಿಭಾಗೀಯ ಆಯುಕ್ತ ದೀಪಕ್‌ ಮೈಶೇಖರ್‌ ತಿಳಿಸಿದ್ದಾರೆ.

ಪಶ್ಚಿಮ ಮಹಾರಾಷ್ಟ್ರದ ಪುಣೆ, ಸತಾರ, ಸೊಲ್ಲಾಪುರ ಮತ್ತು ಕೊಲ್ಲಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಗುರುವಾರವೂ ಮಳೆ ಸುರಿದಿದೆ.

1.32 ಲಕ್ಷ ಜನರಿಗೆ ಸಂಕಷ್ಟ: ಪುಣೆ ವಿಭಾಗೀಯ ವ್ಯಾಪ್ತಿಯಲ್ಲಿ ಅಂದಾಜು 1.32 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಂಗ್ಲಿ ಜಿಲ್ಲೆಯ 53 ಸಾವಿರ, ಕೊಲ್ಲಾಪುರದಲ್ಲಿ 51 ಸಾವಿರ, ಪುಣೆಯಲ್ಲಿ 13 ಸಾವಿರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ದೀಪಕ್‌ ಮಾಹಿತಿ ನೀಡಿದ್ದಾರೆ.

ಜೈಲೂ ಜಲಾವೃತ: ವಿಪರೀತ ಸಾಂಗ್ಲಿಯ ಜಿಲ್ಲಾ ಕಾರಾಗೃಹ ನೆಲಮಹಡಿ ಜಲಾವೃತವಾಗಿದ್ದು, ಸುಮಾರು 370 ಕೈದಿಗಳನ್ನು ಮೇಲ್ಮಹಡಿಗೆ ಸ್ಥಳಾಂತರಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಕಾರಾಗೃಹ) ಸುನಿಲ್‌ ರಾಮಾನಂದ ತಿಳಿಸಿದ್ದಾರೆ.

ಉಜ್ಜನಿ ಜಲಾಶಯದಿಂದ ಹೆಚ್ಚುವರಿ ನೀರು ಬಿಟ್ಟಿದ್ದು, ಸೊಲ್ಹಾಪುರದ ದೇವಾಲಯ ನಗರಿ  ಪಂಢರಾಪುರದಲ್ಲಿ ಪ್ರವಾಹ ಭೀತಿ ಇದೆ. 2,500 ಜನರನ್ನು ಸ್ಥಳಾಂತರಿಸಲಾಗಿದೆ. ಸತಾರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಗಿರಿ ಪ್ರದೇಶಗಳಿಂದ 6 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ ಎಂದಿದ್ದಾರೆ.

ಕೇರಳದಲ್ಲಿ ನಾಲ್ವರ ಬಲಿ: ಕೇರಳದ ಕೆಲವೆಡೆ ಭಾರಿ ಮಳೆಯಾಗುತ್ತಿದ್ದು, ಇಡುಕ್ಕಿ, ಮಲ‍ಪ್ಪುರಂ, ಕೊಯಿಕೋಡ್‌, ವಯನಾಡ್‌ ಜಿಲ್ಲೆಗಳಲ್ಲಿ ’ರೆಡ್‌ ಅಲರ್ಟ್‌‘ ಘೋಷಿಸಲಾಗಿದೆ. ಮಹಾಮಳೆಗೆ ನಾಲ್ವರು ಸತ್ತಿದ್ದಾರೆ.

ಕಣ್ಣೂರು, ವಯನಾಡ್‌, ಇಡುಕ್ಕಿ, ಮಲಪ್ಪುರಂ, ಕೊಯಿಕೋಡ್‌, ಕಾಸರಗೋಡು ಜಿಲ್ಲೆಯಲ್ಲಿನ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಜಲಾಶಯಗಳಲ್ಲಿ ಒಳ ಹರಿವು ಹೆಚ್ಚಾಗಿದೆ. ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ.

ಬುಧವಾರ ರಾತ್ರಿ ಗಾಳಿ, ಮಳೆಯಿಂದ ರಾಜ್ಯದಲ್ಲಿ 10 ಮನೆಗಳು ಬಹುತೇಕ ನಾಶವಾಗಿವೆ. ಪಾಲಕ್ಕಾಡ್‌ ಜಿಲ್ಲೆಯ ಅಟ್ಟಪ್ಪಾಡಿ ಗ್ರಾಮದಲ್ಲಿ ಮರ ಬಿದ್ದು 50 ವರ್ಷದ ವ್ಯಕ್ತಿ ಸತ್ತಿದ್ದಾರೆ ಎಂದು ಹಿರಿಯ ಅಧಿಕಾರಿ ಯೊಬ್ಬರು ಹೇಳಿದ್ದಾರೆ.

ನಿಲಂಬೂರ್‌ ಜಲಾವೃತ: ಮಲಪ್ಪುರಂ ಜಿಲ್ಲೆಯ ಪ್ರಮುಖ ಪಟ್ಟಣ ನಿಲಂಬೂರ್‌ ಬಹುತೇಕ ಜಲಾವೃತವಾಗಿದೆ. ಕಟ್ಟಡಗಳ ನೆಲಮಹಡಿಯವರೆಗೆ ಅಂಗಡಿ, ಮಳಿಗೆಗಳ ಚಾವಣಿ ಮಾತ್ರ ಕಾಣಿಸುತ್ತಿದೆ. ಕಾರು, ಬೈಕು ಮತ್ತಿತರ ವಾಹನಗಳು ಕೊಚ್ಚಿ ಹೋಗಿವೆ. ಇಲ್ಲಿನ ಬಹುತೇಕ ಜನರನ್ನು ನಾಡ ದೋಣಿಗಳ ಮೂಲಕ ಸುರಕ್ಷಿತ ಪ್ರದೇಶಕ್ಕೆ ಕರೆತರಲಾಗಿದೆ. ಇಲ್ಲಿ 10 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, 200 ಕುಟುಂಬಗಳು ಆಶ್ರಯ ಪಡೆದಿವೆ.

ಜೂನ್‌ 6ರಿಂದ ಆರಂಭವಾದ ಮುಂಗಾರಿಗೆ ಇಲ್ಲಿಯವರೆಗೆ ರಾಜ್ಯದಲ್ಲಿ 29 ಜನರು ಸತ್ತಿದ್ದಾರೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Post Comments (+)