ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ

ಬುಧವಾರ, ಜೂನ್ 26, 2019
29 °C
ಹೆಬ್ಬಾಳದಲ್ಲಿ ನಡೆದ ಘಟನೆ

ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ

Published:
Updated:
Prajavani

ಬೆಂಗಳೂರು: ತನ್ನ ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದಿರುವ ಪುಷ್ಪಾವತಿ (30) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹೆಬ್ಬಾಳದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಪುಷ್ಪಾವತಿ, ಬೆಂಗಳೂರಿನ ನಾಗರಾಜ್ ಎಂಬುವರನ್ನು 10 ವರ್ಷಗಳ ಹಿಂದೆ ಮದುವೆ ಆಗಿದ್ದರು. ಹೆಬ್ಬಾಳ ಸಮೀಪದ ಮನೋರಾಯನಪಾಳ್ಯದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ದಂಪತಿಗೆ 7 ವರ್ಷದ ಮಗ ಜೀವನ್ ಹಾಗೂ 5 ತಿಂಗಳ ಹೆಣ್ಣು ಮಗುವಿತ್ತು.

‘ಖಾಸಗಿ ಕಂಪನಿ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿರುವ ನಾಗರಾಜ್, ಸೋಮವಾರ ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಪುಷ್ಪಾವತಿ ಹಾಗೂ ಮಕ್ಕಳು ಮನೆಯಲ್ಲಿದ್ದರು. ಕೆಲಸ ಮುಗಿಸಿ ಸಂಜೆ ನಾಗರಾಜ್ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಮಾಡಲಾಗಿತ್ತು. ಅನುಮಾನಗೊಂಡ ಅವರು ಸ್ಥಳೀಯರ ಸಹಾಯದಿಂದ ಬಾಗಿಲು ಮೀಟಿ ಲಾಕ್‌ ತೆರೆದು ನೋಡಿದಾಗಲೇ ವಿಷಯ ಗೊತ್ತಾಗಿದೆ’ ಎಂದು ಹೆಬ್ಬಾಳ ಪೊಲೀಸರು ಹೇಳಿದರು.

‘ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಪತಿ ನಾಗರಾಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದರು. 

ಒದ್ದಾಡಿ ಪ್ರಾಣ ಬಿಟ್ಟಿರುವ ಮಕ್ಕಳು: ‘ಪುಷ್ಪಾವತಿ, ಐದು ತಿಂಗಳ ಹಿಂದಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಬಾಲಕ ಜೀವನ್, ಹೆಬ್ಬಾಳದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ. ತಾಯಿಯು ಸೋಮವಾರ ಆತನನ್ನು ಶಾಲೆಗೆ ಕಳುಹಿಸಿರಲಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ತಾಯಿ ಹಾಗೂ ಮಗ, ಮನೆಯ ಹೊರಗಡೆ ಬೆಳಿಗ್ಗೆ ಓಡಾಡುತ್ತಿದ್ದದ್ದನ್ನು ಕೆಲ ಸ್ಥಳೀಯರು ನೋಡಿದ್ದರು. ಮಧ್ಯಾಹ್ನದಿಂದ ಮಾತ್ರ ಮನೆಯಿಂದ ಹೊರಗೆ ಬಂದಿರಲಿಲ್ಲ. ಈ ಬಗ್ಗೆ ಸ್ಥಳೀಯರು ಹೇಳಿಕೆ ನೀಡಿದ್ದಾರೆ.’

‘ಮಧ್ಯಾಹ್ನದ ವೇಳೆಯಲ್ಲೇ ಪುಷ್ಪಾವತಿ, ವಿಷ ಬೆರೆಸಿದ್ದ ಆಹಾರವನ್ನು ಮಕ್ಕಳಿಬ್ಬರಿಗೆ ತಿನ್ನಿಸಿರುವ ಸಾಧ್ಯತೆ ಇದೆ. ಅದಾದ ಕೆಲ ನಿಮಿಷಗಳ ಬಳಿಕ ಬಾಲಕ ಮನೆಯಲ್ಲೆಲ್ಲ ಒದ್ದಾಡಿ ಮೃತಪಟ್ಟಿದ್ದು, ಆತನ ಮೃತದೇಹ ಮಂಚದ ಬಳಿ ನೆಲದ ಮೇಲಿತ್ತು’ ಎಂದರು.

‘ಮಂಚದ ಮೇಲೆಯೇ ಮಗು ಅಸುನೀಗಿದ್ದು, ಬಾಯಿಯಲ್ಲಿ ನೊರೆ ಬಂದಿದೆ. ಮಂಚದ ಸಮೀಪದಲ್ಲಿರುವ ಫ್ಯಾನ್‌ಗೆ ಪುಷ್ಪಾವತಿ ನೇಣು ಹಾಕಿಕೊಂಡಿದ್ದಾಳೆ. ಮೂರು ಮೃತದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ವಿವರಿಸಿದರು.

ಪ್ರೀತಿಸಿ ಮದುವೆ ಆಗಿದ್ದ ದಂಪತಿ: ‘2009ರಲ್ಲಿ ಉದ್ಯೋಗ ಹುಡುಕಿಕೊಂಡು ಪುಷ್ಪಾವತಿ ಬೆಂಗಳೂರಿಗೆ ಬಂದಿದ್ದಳು. ನಗರದ ಫೋಟೊ ಸ್ಟುಡಿಯೊ ಒಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಸ್ನೇಹಿತೆಯೊಬ್ಬಳ ಮೂಲಕ ಆಕೆಗೆ ನಾಗರಾಜ್‌ ಪರಿಚಯವಾಗಿತ್ತು. ನಂತರ, ಅವರಿಬ್ಬರು ಪರಸ್ಪರ ಪ್ರೀತಿಸಲಾರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಮದುವೆಯಾಗಲು ತೀರ್ಮಾನಿಸಿದ್ದ ಇಬ್ಬರೂ ಕುಟುಂಬದವರಿಗೆ ವಿಷಯ ತಿಳಿಸಿದ್ದರು. ಇಬ್ಬರದ್ದೂ ಬೇರೆ ಬೇರೆ ಜಾತಿಯಾಗಿದ್ದರಿಂದ ಮದುವೆಗೆ ಪೋಷಕರು ಒಪ್ಪಿರಲಿಲ್ಲ. ಅವರ ವಿರೋಧ ಕಟ್ಟಿಕೊಂಡು ಪುಷ್ಪಾವತಿ ಹಾಗೂ ನಾಗರಾಜ್ ಮದುವೆ ಆಗಿದ್ದರು’ ಎಂದು ವಿವರಿಸಿದರು.

‘ಮದುವೆ ಬಳಿಕ ಸಂಬಂಧಿಕರ‍್ಯಾರೂ ದಂಪತಿಯನ್ನು ಭೇಟಿಯಾಗಿಲ್ಲ. ಘಟನೆ ಬಳಿಕವೂ ಸಂಬಂಧಿಕರ‍್ಯಾರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ, ಸದ್ಯಕ್ಕೆ ಮರಣೋತ್ತರ ಪರೀಕ್ಷೆ ನಡೆಸಿಲ್ಲ’ ಎಂದು ಹೇಳಿದರು.  

‘ಮಕ್ಕಳು ಅನಾಥರಾಗಬಾರದೆಂದು ವಿಷ ಹಾಕುತ್ತಿದ್ದೇನೆ’
ಆತ್ಮಹತ್ಯೆ ಮಾಡಿಕೊಂಡಿರುವ ಪುಷ್ಪಾವತಿ, ಮರಣ ತ್ರ ಬರೆದಿಟ್ಟಿದ್ದಾರೆ. ಅದನ್ನು ಪೊಲೀಸರು ಸುಪರ್ದಿಗೆ ಪಡೆದಿದ್ದಾರೆ.

‘ಜೀವನದಲ್ಲಿ ಜಿಗುಪ್ಸೆಯಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ನಮ್ಮ ಸಾವಿಗೆ ನಾವೇ ಕಾರಣ. ಮಕ್ಕಳನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡರೆ, ಅವರು ಅನಾಥರಾಗುತ್ತಾರೆ. ಹೀಗಾಗಿ, ಅವರಿಗೂ ವಿಷವುಣಿಸಿ ಸಾಯಿಸಿ ನಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಪತ್ರದಲ್ಲಿ ಪುಷ್ಪಾವತಿ ಬರೆದಿರುವುದಾಗಿ ಪೊಲೀಸರು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 7

  Sad
 • 0

  Frustrated
 • 0

  Angry

Comments:

0 comments

Write the first review for this !