ಗುರುವಾರ , ಜೂನ್ 24, 2021
23 °C
ಅವಲೋಕನ

ಹೊರೆಯಾಗದಿರಲಿ ನೆರೆ ಸಹಾಯ

ಕೆ.ರತ್ನಪ್ರಭಾ Updated:

ಅಕ್ಷರ ಗಾತ್ರ : | |

Deccan Herald

ಕೊಡಗು ಮತ್ತು ಕೇರಳದ ನೆರೆ ಸಂತ್ರಸ್ತರಿಗೆ ಲಭಿಸುತ್ತಿರುವ ಸಹಾಯ, ಸಹಕಾರಗಳನ್ನು ನೋಡಿದಾಗ ಸಮಾಧಾನವೆನಿಸುತ್ತದೆ. ಈಗ ಸಂಪರ್ಕ ಸಾಧನಗಳಿವೆ. ಏರ್‌ಲಿಫ್ಟ್‌, ಏರ್‌ ಡ್ರಾಪ್‌ಗಳೂ ಆಗುತ್ತಿವೆ. ಅತ್ಯಂತ ಕನಿಷ್ಠ ಸಮಯದಲ್ಲಿ ಸಂತ್ರಸ್ತರನ್ನು ತಲುಪಲು ಈಗ ಸಾಧ್ಯವಾಗಿದೆ. ಆದರೆ ಎರಡು– ಮೂರು ದಶಕಗಳ ಹಿಂದಿನ ಸ್ಥಿತಿ ಹೀಗಿರಲಿಲ್ಲ.

ಮೂವತ್ತೈದು ವರ್ಷಗಳ ಹಿಂದಿನ ಸನ್ನಿವೇಶಗಳನ್ನುನೆನಪಿಸಿಕೊಳ್ಳೋಣ. ಬೀದರ್‌ನಲ್ಲಿ ಒಮ್ಮೆ ಇಂಥದ್ದೇ ಮಳೆಯಾಗಿತ್ತು. ಹೊಲಗಳು ಮುಳುಗಿದ್ದವು. ಹಳ್ಳಿಗಳೂ ನೀರುಪಾಲಾಗಲಿದ್ದವು. ಆಗೆಲ್ಲ ಇಷ್ಟು ಸಂವಹನ ಸಾಧನಗಳಿರಲಿಲ್ಲ. ಸಂಪರ್ಕಕ್ಕೆ ಇದ್ದವುಗಳೆಂದರೆ ವೈರ್‌ಲೆಸ್‌ ಸಾಧನ ಅಥವಾ ಲ್ಯಾಂಡ್‌ಲೈನ್‌ ಮಾತ್ರ. ಮಳೆ, ಸಿಡಿಲು, ಗುಡುಗುಗಳಿಗೆ ಲೈನ್‌ ಔಟ್‌ ಆದರೆ ಫೋನ್‌ ಸಹ ದುರ್ಲಭ.

ಮಳೆ, ಮಳೆ... ಬರೀ ಮಳೆ. ನೆರೆ ಸಂತ್ರಸ್ತರಿಗೆ ಹೆಲಿಕಾಪ್ಟರ್‌ನಿಂದ ಆಹಾರದ ಪೊಟ್ಟಣಗಳನ್ನು ಎಸೆಯುವ ಮೂಲಕ ನೆರವಿನ ಹಸ್ತ ಚಾಚಲಾಗಿತ್ತು. ಅಲ್ಲೊಂದು ಗ್ರಾಮವಿತ್ತು, ಕೌಠಾ ಕೆ. ಎಂದು ಅದರ ಹೆಸರು. ಅದನ್ನು ಸ್ಥಳಾಂತರ
ಮಾಡಲೇಬೇಕಿತ್ತು. ಗ್ರಾಮಸ್ಥರೊಂದಿಗೆ ಎಷ್ಟೇ ಚರ್ಚಿಸಿದರೂ ಅವರು ‘ಊರು ಬಿಡಲೊಲ್ಲೆವು’ ಎನ್ನುತ್ತಿದ್ದರು. ನಮಗೋ ಊರಿನ ಸ್ಥಳಾಂತರ ಅನಿವಾರ್ಯವಾಗಿತ್ತು. 48 ಗಂಟೆಗಳ ಗಡುವು. ಅದರಲ್ಲಿ 24 ಗಂಟೆ ಚರ್ಚೆಯಲ್ಲಿಯೇ ಕಳೆದುಹೋಗಿದ್ದವು. ಸ್ಥಳಾಂತರಕ್ಕೆ ಜನರೇಕೆ ಒಪ್ಪುತ್ತಿಲ್ಲ ಎಂದು ತಿಳಿದುಕೊಳ್ಳಲು ಕೌಠಾ ಗ್ರಾಮದ ಸರಪಂಚರನ್ನು ಕರೆಯಿಸಿದೆವು.

ಅವರು, ‘ಎ.ಸಿ. ಸಾಹೇಬಮ್ಮಾ, ಸ್ಥಳಾಂತರ ಮಾಡ್ತೀನಿ ಅಂತೀರಿ. ಸರ್ಕಾರ ನಮ್ಮ ಜಮೀನಿಗೆ, ಮನಿಗೆ ಬದಲಾಗಿ ರೊಕ್ಕ ಕೊಡ್ತದ. ಯವಾಗ ಕೊಡ್ತದ– ಎಷ್ಟು ಕೊಡ್ತದ ಗೊತ್ತಿಲ್ಲ. ಆದ್ರ ನಾವು ಅನ್ನ ಬೆಳಕೊಂಡು ಉಣ್ಣೋರು. ಸರ್ಕಾರ ಕೊಟ್ಟ ರೊಕ್ಕದಾಗ ಎಷ್ಟು ದಿನ ಉಣ್ಣಬಹುದು? ಆಮೇಲೆ ಮುಂದಿನ ತಲೆಮಾರಿಗೆ ಏನು ಮಾಡೋಣ? ಈಗ ಇಲ್ಲೇ ಇದ್ರೆ, ಮುಂದಿನ ತಲೆಮಾರಿಗೆ ಜಮೀನು ಉಳಿಯುತ್ತದಲ್ಲ...?’

ಅವರ ಆತಂಕ ಅರ್ಥವಾಗಿತ್ತು. ಅದು ಸ್ವಾಭಿಮಾನಿಗಳ ಊರು. ಅವರಿಗೆ ಜಮೀನಿನ ಬದಲಿಗೆ ಜಮೀನು ಕೊಡುವ ಭರವಸೆ ನೀಡಿದೆ. ಸರ್ಕಾರದೊಂದಿಗೆ ಮಾತುಕತೆಗಳಾದವು. ಕೌಠಾ ಗ್ರಾಮ ಸ್ಥಳಾಂತರವಾಯಿತು. ಸರ್ಕಾರದಲ್ಲಿ ಇದಕ್ಕೆ ಅವಕಾಶ ಇತ್ತೇ, ಇಲ್ಲವೇ ಎನ್ನುವುದಕ್ಕಿಂತಲೂ, ಒಂದು ಪ್ರಯತ್ನವನ್ನು ಮಾಡಿದ್ದೆವು. ಅದಕ್ಕೆ ಗೆಲುವು ಸಿಕ್ಕಿತು. ಅವರ ಜಮೀನಿನ ಬದಲಿಗೆ ಸರ್ಕಾರಿ ಜಮೀನು ನೀಡಲಾಯಿತು.

ಇನ್ನೊಂದು ಸಂದರ್ಭ ಕಿಲಾರಿಯಲ್ಲಿ ಭೂಕಂಪ ಸಂಭವಿದಾಗಿನದ್ದು. ಆಗ ನಾನು ರಾಯಚೂರಿನ ಜಿಲ್ಲಾಧಿಕಾರಿಯಾಗಿದ್ದೆ. ಲಾತೂರು ನಮಗೆ ನೆರೆಯ ಜಿಲ್ಲೆ. ಬೀದರ್‌ನ ಬಸವಕಲ್ಯಾಣ, ಭಾಲ್ಕಿ, ಔರಾದ ತಾಲ್ಲೂಕುಗಳೂ ಭೂಕಂಪದ ಪ್ರಭಾವಕ್ಕೆ ಒಳಗಾಗಿದ್ದವು. ಕಿಲಾರಿ ಎಂಬ ಇಡೀಗ್ರಾಮ ಭೂಗತವಾದಂತೆ ಆಗಿತ್ತು. ಅಲ್ಲಿ, ಉಣ್ಣಲು, ಉಡಲು ಯಾರೂ ಉಳಿದಿರಲೇ ಇಲ್ಲ. ನಾಡಿನ ವಿವಿಧ ಮೂಲೆಗಳಿಂದ ನೆರವಿನ ರೂಪದಲ್ಲಿ ಬಂದಿದ್ದ ವಸ್ತುಗಳನ್ನು ಸಂಗ್ರಹಿಸಿಡುವುದೇ ಜಿಲ್ಲಾಡಳಿತಕ್ಕೆ ಸವಾಲಾಗಿತ್ತು. ಅಸಂಖ್ಯಾತ ಸ್ವಯಂಸೇವಕರ ಪ್ರವೇಶವನ್ನು ಸಹ ತಡೆಯಬೇಕಿತ್ತು. ಗಡಿ ಜಿಲ್ಲೆಗಳಾದ ರಾಯಚೂರು, ಬೀದರ್‌ಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಿಸಿದೆವು. ನೆರವಿನ ರೂಪದಲ್ಲಿ ಬಂದಿದ್ದ ಎಲ್ಲವನ್ನೂ ಅಲ್ಲಿಯೇ ಸಂಗ್ರಹಿಸಿದೆವು. ಅದೇ ಸಮಯಕ್ಕೆ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್‌ ಅವರು ವಾಜಪೇಯಿ ಜೊತೆಗೆ ಕಿಲಾರಿ ಭೇಟಿಗೆ ಬಂದರು. ಅವರನ್ನೆಲ್ಲ ಬರಮಾಡಿಕೊಳ್ಳಲು, ಕರ್ನಾಟಕ, ಆಂಧ್ರ ಪ್ರದೇಶದ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಹಾಗೂ ಇನ್ನೂ ಅನೇಕ ಗಣ್ಯರು ಬಂದಿದ್ದರು. ಒಂದೆಡೆ ದೇಶದ ನಾಯಕರನ್ನು ಬರ ಮಾಡಿಕೊಳ್ಳುವುದು, ಶಿಷ್ಟಾಚಾರ ಪಾಲನೆ, ಅವರ ಸುರಕ್ಷತೆಗೆ ಗಮನ ಕೊಡಬೇಕು. ಇನ್ನೊಂದೆಡೆ ಸಂತ್ರಸ್ತರಿಗೆ ಅವಶ್ಯವಿರುವುದನ್ನೆಲ್ಲ ಕೊಡಬೇಕು. ಹೀಗೆ ಎರಡೂ ಹೊಣೆಗಳನ್ನು ನಿಭಾಯಿಸುವುದು ಸವಾಲಿನ ಕೆಲಸವೇ ಆಗಿತ್ತು. ಪ್ರಧಾನಿಯ ಬರುವಿಕೆಗಿಂತ ಹತ್ತಿಪ್ಪತ್ತು ನಿಮಿಷಗಳ ಮುಂಚೆಯೇ ಅನೇಕ ಗಣ್ಯರು ಬೀದರ್‌ನ ವಾಯುನೆಲೆಯ ಆವರಣಕ್ಕೆ ಬಂದಿಳಿಯಲಿದ್ದರು. ಅವರ ಸುರಕ್ಷೆ, ಅವರ ಆತಿಥ್ಯ ಹಾಗೂ ಅವರನ್ನು ಕರೆದೊಯ್ಯುವ ವ್ಯವಸ್ಥೆಯ ಜವಾಬ್ದಾರಿ ನನ್ನ ಹೆಗಲಿಗಿತ್ತು. ರಸ್ತೆಗಳಿರಲಿಲ್ಲ, ಸುತ್ತು ಬಳಸಿಯೇ ಎಲ್ಲರನ್ನೂ ಕರೆದೊಯ್ಯಬೇಕಿತ್ತು. ಇಂದಿನಂತೆ ಸಂವಹನ ಮಾಧ್ಯಮಗಳು ಸಹ ಇರಲಿಲ್ಲ.

ನೆರವು ನೀಡಲೆಂದು ಬರುತ್ತಿದ್ದ ಸ್ವಯಂ ಸೇವಕರಿಗೆ ಅಧಿಕಾರಿಗಳ ಮೇಲೆ ಸಿಟ್ಟು ಬರುತ್ತಿತ್ತು. ನಮಗೆ ಅವರ ಕಾಳಜಿ ಅರ್ಥವಾಗುತ್ತಿತ್ತು. ಆದರೆ ಅವರಿಗೆ ನಮ್ಮ ಸಮಸ್ಯೆಗಳನ್ನು ಮನದಟ್ಟು ಮಾಡುವುದು ಕಷ್ಟವಾಗಿತ್ತು. ಇವೆಲ್ಲವನ್ನೂ ನಿಭಾಯಿಸುವುದು ಸವಾಲಾಗಿತ್ತೇ, ಕಷ್ಟವಾಗಿತ್ತೆ ಎಂಬುದನ್ನು ನಿರ್ಧರಿಸಲಾಗದು. ಆದರೆ ಅವೆಲ್ಲವೂ ನಮಗೆ ಕೆಲವು ಪಾಠಗಳನ್ನು ಕಲಿಸಿಕೊಟ್ಟವು. ಇಂಥ ಸಂದರ್ಭಗಳಲ್ಲಿ ಜನರ ನಡುವೆ ಇದ್ದಷ್ಟೂ ಅವರಿಗೆ ವ್ಯವಸ್ಥೆಯ ಮೇಲೆ ಭರವಸೆ ಹುಟ್ಟುತ್ತದೆ. ಅವರ ಜನಜೀವನ ಒಂದು ಹಂತಕ್ಕೆ ಬರುವುದು ಸುಲಭವಾಗುತ್ತದೆ.

ಈಗ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗಿಸುವಂಥ ಸಾಧನಗಳಿವೆ. ಹಿಂದಿನಂತೆಯೇ ಈಗಲೂ ಜನರಿಂದ ನೆರವಿನ ಮಹಾಪೂರ ಹರಿದುಬರುತ್ತದೆ. ಇವೆಲ್ಲವುಗಳ ನಡುವೆ ಜನರೊಂದಿಗೆ ಹಂಚಿಕೊಳ್ಳಲೇಬೇಕಾದ ಕೆಲವು ವಿಷಯಗಳಿವೆ. ನಿಮ್ಮ ನೆರವು ಅಲ್ಲಿಯ ಜಿಲ್ಲಾಡಳಿತಕ್ಕೆ ಗೊಂದಲಕಾರಿ ಅಥವಾ ಹೊರೆಯೆನಿಸಬಾರದು. ಸಂತ್ರಸ್ತರಿಗೆ ಬೇಕಾಗುವಷ್ಟು ದಿನಸಿ, ಉಡುಗೆ ತೊಡುಗೆಗಳು ಮೊದಲೆರಡು ದಿನಗಳಲ್ಲೇ ಸಂಗ್ರಹವಾಗಿರುತ್ತವೆ. ಆನಂತರದ ದಿನಗಳಲ್ಲಿ ಸಂತ್ರಸ್ತರಿಗೆ ಬೇಕಾಗಿರುವುದು ಶ್ರಮದಾನದ ನೆರವು. ಕಿಲಾರಿಯ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ನಮಗಲ್ಲಿ ಶವಗಳನ್ನು ಹೊರತೆಗೆಯುವುದು, ಸಂಸ್ಕಾರ ಮಾಡುವುದೇ ಸವಾಲಾಗಿತ್ತು. ಜೀವನವೇ ಇಲ್ಲದಿದ್ದಲ್ಲಿ, ದಿನಸಿ ಹಾಗೂ ಉಡುಗೆಗಳನ್ನು ಕೊಡುವುದು ಯಾರಿಗೆ? ಇದ್ದವರಿಗಾಗಿ ಅಲ್ಲಿಯ ಮನೆಗಳ ಪುನರ್‌ನಿರ್ಮಾಣವಾಗಬೇಕಿತ್ತು. ಅದಕ್ಕಾಗಿ ಶ್ರಮದಾನದ ಅಗತ್ಯವಿತ್ತು.

ಈಗ, ಕೊಡಗು ಹಾಗೂ ಕೇರಳದ ಜನರಿಗೆ ತಾತ್ಕಾಲಿಕ ಆಶ್ರಯ ದೊರೆತಿದೆ. ಆಹಾರ ದಾಸ್ತಾನು ಇದೆ. ಅವರ ಜೀವನ ಸಹಜ ಸ್ಥಿತಿಗೆ ಮರಳಬೇಕಿದೆ. ಅದಕ್ಕೆ ಶ್ರಮದಾನದ ಅಗತ್ಯವಿದೆ. ಅವರ ಮನೆಗಳ ಪುನರ್‌ನಿರ್ಮಾಣವಾಗಬೇಕು. ಮನೆಯಲ್ಲಿ ನಿಂತಿರುವ ನೀರನ್ನು ಹೊರಹಾಕಬೇಕು. ಮನೆ ಸ್ವಚ್ಛಗೊಳಿಸಬೇಕು. ಪ್ಲಂಬರ್‌, ಎಲೆಕ್ಟ್ರೀಷಿಯನ್‌ ಹೀಗೆ ಕೌಶಲಆಧರಿತ ಶ್ರಮದಾನ ಬೇಕು. ಜನರು ಅದಕ್ಕೂ ಮುಂದಾಗಲಿ. ಇದರಿಂದ ನಿಜವಾಗಿಯೂ ಜಿಲ್ಲಾಡಳಿತಕ್ಕೆ ಹಾಗೂ ಜನರಿಗೆ ಸಹಾಯವಾಗುತ್ತದೆ. ನೈಸರ್ಗಿಕ ವಿಕೋಪಗಳ ನಿರ್ವಹಣೆಗೆ ಇದೀಗ ವಿಶೇಷ ಇಲಾಖೆ ಇದೆ. ಸರ್ಕಾರದಲ್ಲಿಯೂ ಸಾಕಷ್ಟು ಅನುದಾನಗಳಿವೆ. ಸ್ಕೀಮ್‌ಗಳಿವೆ. ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ ಅವನ್ನೆಲ್ಲ ಜಾರಿಗೊಳಿಸಲು ಸಹಾಯ ಮಾಡುವಂತಾಗಬೇಕು. ಈ ಸಂದರ್ಭದಲ್ಲಿ ಜನರ ಜೊತೆಗಿದ್ದಷ್ಟೂ ಪರಿಹಾರಗಳು ಸುಲಭವಾಗಿ ದೊರೆಯುತ್ತವೆ.

ಕೌಠಾದ ಸರಪಂಚನ ಮಾತು ಇಲ್ಲಿ ನೆನಪಾಗುತ್ತದೆ. ‘ಹಣ, ಪರಿಹಾರ ಒಂದು ತಲೆಗೆ ಮಾತ್ರ. ಜಮೀನು ನೀಡಿದರೆ ಮುಂದಿನ ತಲೆಮಾರುಗಳೂ ಬದುಕುತ್ತವೆ. ಅನ್ನ ಕೊಟ್ಟರೆ ಉಣ್ಣುವೆ. ಭತ್ತ ನೀಡಿದರೆ ಬೆಳೆಯುವೆ. ಬೆಳೆದು ಹಂಚುವ ನನಗೆ ಬೇಡಿ ತಿನ್ನುವುದು ಕಲಿಸಬೇಡಿ’ ಮೂವತ್ತೈದು ವರ್ಷಗಳು ಕಳೆದಿವೆ. ಅಲ್ಲಿ ಸಾಕಷ್ಟು ಹೊಸ ನೀರು ಹರಿದು ಹೋಗಿದೆ. ಈಚೆಗೆ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಬೀದರ್‌ಗೆ ಹೋದಾಗ, ಕೌಠಾ ಸರಪಂಚನ ಮೊಮ್ಮಗ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿ ಹೋದರು.

ನನ್ನ ಕರ್ತವ್ಯವನ್ನು ನಿಭಾಯಿಸಿದ್ದಕ್ಕಾಗಿ, ನೆರವು ಪಡೆದ ವ್ಯಕ್ತಿಯ ಮೂರನೆಯ ತಲೆಮಾರಿನ ವ್ಯಕ್ತಿಯೊಬ್ಬ ಬಂದು ಕೃತಜ್ಞತೆ ಹೇಳಿದ್ದು ನನ್ನಲ್ಲಿ ಸಾರ್ಥಕ ಭಾವ ಮೂಡಿಸಿತು. ಅಂದು ಸಮಯಪ್ರಜ್ಞೆಯನ್ನು ಮೆರೆದಿದ್ದುದರ ಫಲ ಇದು. ಆಡಳಿತದ ಯಶಸ್ಸು ಜನರ ಒಳಿತಿನಲ್ಲಿಯೇ ಇರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು