ಹಿಂಗಾರು ಹಂಗಾಮಿನತ್ತ ರೈತರ ಚಿತ್ತ..!

7
ಆಲಮಟ್ಟಿ ಅಚ್ಚುಕಟ್ಟು ವ್ಯಾಪ್ತಿಯ ಕಾಲುವೆ ಜಾಲಕ್ಕೆ ನೀರು ಹರಿಸುವ ಮಾಹಿತಿ ಕೊಡಿ; ನೀರಾವರಿ ಸಲಹಾ ಸಮಿತಿಗೆ ರೈತರ ಆಗ್ರಹ

ಹಿಂಗಾರು ಹಂಗಾಮಿನತ್ತ ರೈತರ ಚಿತ್ತ..!

Published:
Updated:

ಆಲಮಟ್ಟಿ: ಇಲ್ಲಿನ ಲಾಲ್‌ಬಹದ್ದೂರ್‌ ಶಾಸ್ತ್ರಿ ಸಾಗರ ಜಲಾಶಯದಲ್ಲಿನ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈಗಾಗಲೇ ನಿಗದಿಯಾಗಿರುವಂತೆ ಮುಂಗಾರು ಹಂಗಾಮಿಗೆ ನ.14ರವರೆಗೂ ವಾರಾಬಂಧಿಯಂತೆ ನೀರು ಹರಿಸಬೇಕಿದೆ.

ಈಗಾಗಲೇ ಹಿಂಗಾರು ಹಂಗಾಮಿನ ಚಟುವಟಿಕೆಗಳು ಆರಂಭಗೊಂಡಿವೆ. ಆದರೆ ಇನ್ನೂ ನೀರಾವರಿ ಸಲಹಾ ಸಮಿತಿ ಸಭೆ ಸೇರಿ ಈ ವಿಷಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಕಾಲುವೆ ಜಾಲಕ್ಕೆ ಎಲ್ಲಿಯ ತನಕ ನೀರು ಹರಿಸುತ್ತಾರೆ ಎಂಬುದರ ಆಧಾರದ ಮೇಲೆ ಬಹುತೇಕ ರೈತರು ಬೆಳೆ ಬೆಳೆಯಲು ಮುಂದಾಗುತ್ತಾರೆ. ಇದೂವರೆಗೂ ಈ ನಿಟ್ಟಿನಲ್ಲಿ ಯಾವ ಕ್ರಮವೂ ಜರುಗದಿರುವುದು ಅಚ್ಚುಕಟ್ಟು ವ್ಯಾಪ್ತಿಯ ರೈತರಲ್ಲಿ ತಲ್ಲಣ ಸೃಷ್ಟಿಸಿದೆ.

‘ಪ್ರಸ್ತುತ ಜಲಾಶಯದಲ್ಲಿ ಕೃಷಿಗಾಗಿ 80 ಟಿಎಂಸಿಗೂ ಅಧಿಕ ನೀರಿದೆ. ಇದರಲ್ಲೇ ನಿತ್ಯವೂ ವಿವಿಧ ಕಾರಣಗಳಿಂದ 1.2 ಟಿಎಂಸಿ ಅಡಿ ನೀರನ್ನು ಹೊರ ಹರಿಸಲಾಗುತ್ತಿದೆ. ನ.14ರವರೆಗೆ ಕಾಲುವೆಗಳಿಗೆ ನೀರು ಹರಿಸಿದರೆ, ಕನಿಷ್ಠ 35 ರಿಂದ 40ಟಿಎಂಸಿ ಅಡಿ ನೀರು ಕಡಿಮೆಯಾಗಲಿದೆ.

ಹಿಂಗಾರು ಹಂಗಾಮಿಗೆ ಅಂದಾಜು 45ರಿಂದ 50 ಟಿಎಂಸಿ ಅಡಿ ನೀರು ಮಾತ್ರ ಲಭ್ಯವಾಗುತ್ತದೆ. ಇದರಲ್ಲಿಯೇ ಹಿಂಗಾರು ಹಂಗಾಮಿಗೆ ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕಿದೆ. ಇದರ ಜತೆಯಲ್ಲೇ ಮುಂದಿನ ಜೂನ್‌ವರೆಗೂ ಜಲಚರ ಜೀವಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಿದೆ.

ಕಾಲುವೆಗೆ ನಿತ್ಯ ಕನಿಷ್ಠ 1.2 ಟಿಎಂಸಿ ಅಡಿ ನೀರು ಹರಿಸಲಾಗುತ್ತದೆ. ಕನಿಷ್ಠ 40 ದಿನ ಅಂದರೆ ಫೆಬ್ರುವರಿ ಅಂತ್ಯದವರೆಗೆ (8 ದಿನ ಚಾಲು, 8 ದಿನ ಬಂದ್ ಅವಧಿಯ ವಾರಾಬಂಧಿ) ಪ್ರಕಾರ ನೀರು ಹರಿಸಬಹುದು’ ಎಂದು ಕೆಬಿಜೆಎನ್‌ಎಲ್‌ನ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಶೀಘ್ರವೇ ತೀರ್ಮಾನಿಸಲಿ:

‘ಹಿಂಗಾರಿಗೆ ಸಿದ್ಧತೆ ನಡೆದಿದೆ. ಎಲ್ಲಿಯವರೆಗೆ ನೀರು ಹರಿಸುತ್ತಾರೆ ಎಂಬ ಗೊಂದಲದಲ್ಲಿ ರೈತರಿದ್ದಾರೆ. ನೀರು ಹರಿಸುವ ವೇಳೆಗೆ ಅನುಗುಣವಾಗಿ ಬೆಳೆ ಬೆಳೆಯುವ ಆಲೋಚನೆಯಿದೆ. ಈ ಸಂಬಂಧ ಐಸಿಸಿ ಆದಷ್ಟು ಬೇಗ ತನ್ನ ನಿರ್ಧಾರ ಪ್ರಕಟಿಸಬೇಕು’ ಎನ್ನುತ್ತಾರೆ ಕೃಷ್ಣಾ ಕಣಿವೆಯ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !