ಗರ್ಭಾವಸ್ಥೆ ಕಿರಿಕಿರಿಗೆಮನೆಮದ್ದು

7
ಹಂತ

ಗರ್ಭಾವಸ್ಥೆ ಕಿರಿಕಿರಿಗೆಮನೆಮದ್ದು

Published:
Updated:
Prajavani

ಗರ್ಭಾವಸ್ಥೆ ಆನಂದದ, ಆತಂಕದ ಹಂತ. ಮೊದಲ ಬಾರಿ ಗರ್ಭಿಣಿಯಾದವಳಿಗೆ ಪ್ರತಿ ಸಣ್ಣಪುಟ್ಟ ಸಮಸ್ಯೆಯೂ ದೊಡ್ಡದಾಗಿಯೇ ಕಾಣುತ್ತದೆ. ಮನೆಯಲ್ಲಿ ಹಿರಿಯರಿದ್ದರೆ ಬಹಳಷ್ಟು ತೊಂದರೆಗಳಿಗೆ ಮನೆಯಲ್ಲೇ ಇದ್ದು ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡರೆ ಆ ಸಮಸ್ಯೆ ನಿವಾರಣೆಯಾಗುತ್ತದೆ. ಮತ್ತೂ ಹೆಚ್ಚಾಗಿ ಕಾಡಿದಾಗ ವೈದ್ಯರನ್ನು ಕಾಣಬೇಕಾಗುತ್ತದೆ.

ವಾಕರಿಕೆ ಮತ್ತು ವಾಂತಿ

ಶೇ 50ರಷ್ಟು ಗರ್ಭಿಣಿಯರಲ್ಲಿ ವಾಕರಿಕೆ ಮತ್ತು ವಾಂತಿ ಕಂಡು ಬರುತ್ತದೆ. ಇದು ದಿನದ ಯಾವ ಸಮಯದಲ್ಲಿ ಬೇಕಾದರೂ ಆಗಬಹುದು. ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣ ಕಂಡು ಬಂದಿಲ್ಲವಾದರೂ ಹಾರ್ಮೋನುಗಳ ಏರಿಕೆಯಿಂದಾಗಿ ಇರಬಹುದು ಎಂದು ಊಹಿಸಲಾಗಿದೆ. ಇದು ಗರ್ಭಾವಸ್ಥೆಯ 14 ವಾರಗಳ ನಂತರ ಕಡಿಮೆಯಾಗುತ್ತದೆ.

ಪರಿಹಾರ

ಸ್ವಲ್ಪ ಪ್ರಮಾಣದ ಆಹಾರವನ್ನು ಪದೇ ಪದೇ ತಿನ್ನಬೇಕು. ಪ್ರತಿದಿನ ಮೂರು ಊಟದ ಬದಲು ಎರಡು ಗಂಟೆಗೊಮ್ಮೆ ಸಮತೋಲಿತ ಪೌಷ್ಟಿಕ ಆಹಾರವನ್ನು ಸೇವಿಸುವುದು ಒಳ್ಳೆಯದು.

ಚೆನ್ನಾಗಿ ಗಾಳಿ ಬರುವಂತೆ ಕಿಟಕಿಯ ಪಕ್ಕ ಮಲಗಿಕೊಳ್ಳಿ.

 ಗಾಢವಾದ ಸುಗಂಧದಿಂದ ದೂರವಿರಿ.

ಬಿಗಿಯಾದ ಬಟ್ಟೆಯನ್ನು ಧರಿಸಬೇಡಿ.

ಹಗಲಿನ ವೇಳೆ ಚೆನ್ನಾಗಿ ದ್ರವ ರೂಪದ ಆಹಾರ ಸೇವಿಸಿ. ತಂಪನೆಯ, ಸಿಹಿಯಾದ ದ್ರವದ ಸೇವನೆ ಒಳ್ಳೆಯದು.

ಬೆಳಿಗ್ಗೆ ಎದ್ದ ಕೂಡಲೇ ಹಲ್ಲುಜ್ಜಿ, ನಾಲಿಗೆಯನ್ನು ತಿಕ್ಕಬೇಡಿ. ಆಗ ಸಂವೇದನೆ ಇಲ್ಲದಿದ್ದರೂ ವಾಂತಿಯಾಗಿ ಬಿಡುತ್ತದೆ.

ಶುಂಠಿಯನ್ನು ತಿನ್ನುವುದರಿಂದ ವಾಕರಿಕೆ ಕಡಿಮೆಯಾಗುತ್ತದೆ. ಶುಂಠಿಯ ಟೀ ಮಾಡಿಕೊಂಡು ಕುಡಿಯಬಹುದು.

ಸ್ತನಗಳಲ್ಲಿ ನೋವು ಮತ್ತು ಬದಲಾವಣೆ

ಗರ್ಭಾವಸ್ಥೆಯಲ್ಲಿ ಈಸ್ಟ್ರೋಜೆನ್ ಹಾಗೂ ಪ್ರೋಜೆಸ್ಟಿರಾನ್ ಹೆಚ್ಚಾಗಿ ಉತ್ಪಾದನೆಯಾಗುವುದರಿಂದ ನಿಮ್ಮ ಸ್ತನಗಳು ದೊಡ್ಡದಾಗುತ್ತವೆ ಹಾಗೂ ಮುಟ್ಟಿದರೆ ನೋವಾಗುತ್ತದೆ. ಮೊದಲ ಮೂರು ತಿಂಗಳ ನಂತರ ಸ್ತನವನ್ನು ಹಿಂಡಿದಾಗ ಸ್ವಲ್ಪ ಸ್ರಾವ ಹೊರಬರುತ್ತದೆ. ಎರಡನೆಯ ತ್ರೈಮಾಸಿಕದಲ್ಲಿ ಮೊಲೆತೊಟ್ಟಿನ ಸುತ್ತಲಿರುವ ಕಪ್ಪುಭಾಗ ಮತ್ತಷ್ಟು ದೊಡ್ಡದಾಗುತ್ತದೆ. ಇದರ ಮೇಲೆ ಸಣ್ಣ ಸಣ್ಣ ಗಡ್ಡೆಗಳಂತಹವು ಕಂಡು ಬರುತ್ತದೆ. ಇವು ಹಿರಿದಾದ ಬೆವರಿನ ಗ್ರಂಥಿಗಳು. ಹೆರಿಗೆಯ ನಂತರ ಈ ಮೊಲೆತೊಟ್ಟಿನ ಸುತ್ತಲಿರುವ ಕಪ್ಪುಭಾಗದ ಗಾಢತೆ ಕಡಿಮೆಯಾಗಬಹುದಾದರೂ ಪೂರ್ಣವಾಗಿ ಹೋಗುವುದಿಲ್ಲ. ಆದರೆ ಉಬ್ಬಿದ ಬೆವರಿನ ಗ್ರಂಥಿಗಳು ಹೆರಿಗೆಯ ನಂತರ ಸಹಜಸ್ಥಿತಿಗೆ ಬರುತ್ತವೆ.

 ಪರಿಹಾರ

ಸಡಿಲವಾದ ಬ್ರಾ ಧರಿಸಿ. ಬಿಗಿಯಾದ ಬ್ರಾ ಧರಿಸುವುದರಿಂದ ಸ್ತನಗಳಿಗೆ ರಕ್ತಪರಿಚಲನೆ ಸರಿಯಾಗಿ ಆಗುವುದಿಲ್ಲ. ಸ್ತನಗಳು ಊದಿರುವಾಗ ಬಿಗಿಯಾದ ಬ್ರಾದಿಂದ ನೋವು ಹೆಚ್ಚಾಗುತ್ತದೆ.

ಹೆರಿಗೆಯ ನಂತರ ಸ್ತನಗಳು ಜೋತಾಡುವುದರಿಂದ, ಸದಾ ಸ್ವಲ್ಪ ಬಿಗಿಯಾದ ಬ್ರಾ ಧರಿಸಬೇಕು.

ದೇಹದಲ್ಲಿ ಹೆಚ್ಚಾದ ನೀರಿನಂಶ ಇರುವುದರಿಂದ ಸ್ತನಗಳಲ್ಲಿ ನೋವು ಉಂಟಾಗಿದ್ದರೆ, ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.

ಒಂದು ವೇಳೆ ಒಂದೇ ಸ್ತನದಲ್ಲಿ ನೋವಿದ್ದರೆ, ಉಸಿರು ತೆಗೆದುಕೊಳ್ಳುವಾಗ ನೋವಿದ್ದರೆ, ಕೆಮ್ಮಿದರೆ, ಉಸಿರಾಡಲು ತೊಂದರೆಯಾಗುತ್ತಿದ್ದರೆ ಬಹುಶಃ ನಿಮ್ಮ ಎದೆಯಲ್ಲಿ ತೊಂದರೆ ಇರಬಹುದು, ಸ್ತನದಲ್ಲಿ ಅಲ್ಲ. ಹಾಗಾಗಿ ವೈದ್ಯರನ್ನು ಸಂಪರ್ಕಿಸಿ.

ಎದೆ ಉರಿ

ಗರ್ಭಿಣಿಯರಲ್ಲಿ ಎದೆಯುರಿ ಅತಿ ಸಾಮಾನ್ಯವಾದ ತೊಂದರೆ. ಗರ್ಭಿಣಿಯರಲ್ಲಿ ಅನ್ನನಾಳದ ಕೊನೆಯ ಭಾಗದಲ್ಲಿ ಇರುವ ಬಾಗಿಲಿನ ಮಾಂಸಖಂಡವು ಸಡಿಲವಾಗಿರುತ್ತದೆ. ಹೀಗಾಗಿ ಬಾಗಿಲು ಪೂರ್ತಿಯಾಗಿ ಮುಚ್ಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಹೊಟ್ಟೆ ತುಂಬಿರುವಾಗ ಅಲ್ಲಿರುವ ಆಮ್ಲಗಳು ಬಾಗಿಲಿನಿಂದ ತೂರಿ ಮೇಲೆ ಬಂದು ಎದೆಯುರಿಯನ್ನು ಉಂಟು ಮಾಡುತ್ತದೆ. ಜೊತೆಗೆ ಬೆಳೆಯುತ್ತಿರುವ ಗರ್ಭಾಶಯವು ಹೊಟ್ಟೆಯನ್ನು ಪಕ್ಕಕ್ಕೆ ಸರಿಸುವುದರಿಂದ ಆಮ್ಲ ಮೇಲಕ್ಕೆ ಬಂದಾಗ ಎದೆಯುರಿಯಾಗುತ್ತದೆ.

ಪರಿಹಾರ

ಹೊಟ್ಟೆ ತುಂಬಾ ಆಹಾರ ಸೇವಿಸಬಾರದು.

ಖಾಲಿ ಹೊಟ್ಟೆಯಲ್ಲೂ ಇರಬಾರದು.

ಎರಡು ಊಟದ ಬದಲು 5 – 6 ಬಾರಿ ಸ್ವಲ್ಪ ಸ್ವಲ್ಪ ಆಹಾರ ಸೇವಿಸಬೇಕು.

ಕಾಫಿ, ಟೀ, ಕರಿದ ಪದಾರ್ಥಗಳನ್ನು ಕಡಿಮೆ ಮಾಡಬೇಕು.

ಮಸಾಲೆ ಪದಾರ್ಥಗಳನ್ನು ಕಡಿಮೆ ಸೇವಿಸಬೇಕು.

ಹಾಲು, ಮಜ್ಜಿಗೆ ಒಳ್ಳೆಯದು.

ಎಲೆಕೋಸು, ಬದನೆಕಾಯಿ, ಗ್ಲೂಕೋಸ್, ಬಿಸ್ಕೆಟ್‌ಗಳನ್ನು ಕಡಿಮೆ ಮಾಡಿ.

ಅಕ್ಕಿ ತೊಳೆದ ನೀರಿಗೆ ಸ್ವಲ್ಪ ಏಲಕ್ಕಿ, ಬೆಲ್ಲ ಹಾಗೂ ಹಾಲು ಬೆರೆಸಿ ಆಗಾಗ್ಗೆ ಕುಡಿಯುತ್ತಿರಿ.

ಹೆಸರುಬೇಳೆ ನೆನೆ ಹಾಕಿ ಅದನ್ನು ರುಬ್ಬಿ ಹಾಲು, ಬೆಲ್ಲ ಸೇರಿಸಿ ಕುಡಿಯಿರಿ.

ರಕ್ತಹೀನತೆ

ಗರ್ಭಾವಸ್ಥೆಯ ಅವಧಿಯಲ್ಲಿ ಗರ್ಭಿಣಿಯ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತವೆ. ಈ ಸಮಯದಲ್ಲಿ ರಕ್ತಕ್ಕೆ ಹೆಚ್ಚು ದ್ರವದ ಅಂಶ ಬೆರೆತು ರಕ್ತದ ಪ್ರಮಾಣ ಹೆಚ್ಚಾಗಿ, ಒಟ್ಟಾರೆ ಹಿಮೋಗ್ಲೋಬಿನ್‌ ಸಾಂಧ್ರತೆ ಕಡಿಮೆಯಾಗುವುದರಿಂದ ರಕ್ತಹೀನತೆ ಉಂಟಾಗುತ್ತದೆ. ಜೊತೆಗೆ ಕಬ್ಬಿಣದ ಬೇಡಿಕೆ ಈ ಅವಧಿಯಲ್ಲಿ ಹೆಚ್ಚಾಗಿರುವುದರಿಂದ, ಗರ್ಭಿಣಿಯು ಆಹಾರದ ಕಡೆಗೆ ವಿಶೇಷ ಗಮನಹರಿಸದಿದ್ದರೆ ರಕ್ತಹೀನತೆ ಕಂಡು ಬರುತ್ತದೆ.

ಪರಿಹಾರ

ಪ್ರತಿದಿನ ಹಸಿಯಾದ 8–10 ಕರಿಬೇವಿನ ಸೊಪ್ಪಿನ ಎಲೆಗಳನ್ನು ಸೇವಿಸಿ.

ವಾರಕ್ಕೆ 2–3 ಬಾರಿ ಪಾಲಾಕ್ ಸೊಪ್ಪನ್ನು ಬಳಸಿ.

ಆಂಜೂರ, ದಾಳಿಂಬೆ ಹಣ್ಣುಗಳನ್ನು ಸೇವಿಸಿ.

ಕ್ಯಾರೆಟ್, ಬೀಟ್‌ರೂಟ್ ಹೆಚ್ಚಾಗಿ ಬಳಸಿ.

ಜೋಮು ಹಿಡಿಯುವುದು

ಕೆಲವು ಗರ್ಭಿಣಿಯರಿಗೆ ಕೈ ಮತ್ತು ತೋಳುಗಳಲ್ಲಿ ಬೆಳಿಗ್ಗೆ ಎದ್ದ ಕೂಡಲೇ ಚುಮುಚುಮು ಎಂದು ಜೋಮು ಹಿಡಿಯುತ್ತದೆ. ಜೀವಕೋಶಗಳಲ್ಲಿನ ಹೆಚ್ಚಾದ ದ್ರವವು ರಕ್ತನಾಳಗಳು ಹಾಗೂ ನರಗಳ ಮೇಲೆ ಒತ್ತಡ ಹೇರುವುದು ಇದಕ್ಕೆ ಕಾರಣ.

 ಪರಿಹಾರ

ರಾತ್ರಿ ಮಲಗುವಾಗ ಆರಾಮವಾದ ಎರಡು ತಲೆದಿಂಬುಗಳನ್ನಿಟ್ಟುಕೊಂಡು, ಕೈಗಳನ್ನು ಅದರ ಮೇಲಿಟ್ಟುಕೊಂಡು, ಪಕ್ಕಕ್ಕೆ ತಿರುಗಿ ಮಲಗಿ.

ಭುಜಗಳನ್ನು ವರ್ತುಲಾಕಾರವಾಗಿ ಆಡಿಸುವ ವ್ಯಾಯಾಮ ಮಾಡಿ. ಹಿಂದಕ್ಕೆ 10 ಬಾರಿ, ಮುಂದಕ್ಕೆ 10 ಬಾರಿ ಮಾಡಿ.

ಮಲಬದ್ಧತೆ

ಪ್ರತಿದಿನ 8 ಲೋಟ ನೀರು ಕುಡಿಯಿರಿ

ಪ್ರತಿದಿನ ನಿಧಾನವಾಗಿ ವಾಕಿಂಗ್ ಮಾಡಿ. ಗರ್ಭಿಣಿಯರಿಗಾಗಿ ನಿಗದಿತವಾದ ಯೋಗಾಸನಗಳನ್ನು ಮಾಡಿ.

ಬಟಾಣಿ, ಆಲೂಗಡ್ಡೆ ಇಂತಹವುಗಳನ್ನು ಕಡಿಮೆ ಮಾಡಬೇಕು.

ನಾರಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ.

ರಾತ್ರಿ ಮಲಗುವಾಗ ಬಿಸಿ ಬಿಸಿಯಾದ ಒಂದು ಲೋಟ ಹಾಲು ಕುಡಿಯಬೇಕು.

ಮನೆಯಲ್ಲೇ 5 ನಿಮಿಷ ಅಂಬೆಗಾಲಿಟ್ಟು ಓಡಾಡಿ.

ಮೂತ್ರದಲ್ಲಿ ಸೋಂಕು

ಗರ್ಭಾವಸ್ಥೆಯ ಸಮಯದಲ್ಲಿ ಅದರಲ್ಲೂ ಕೊನೆಯ ತಿಂಗಳುಗಳಲ್ಲಿ ಮೂತ್ರದ ಸೋಂಕು ಹೆಚ್ಚಾಗಿ ಆಗುವ ಸಾಧ್ಯತೆಗಳಿವೆ. ಮೂತ್ರದಲ್ಲಿ ಸೋಂಕಾದ ಈ ಲಕ್ಷಣಗಳಲ್ಲಿ ಯಾವುದಾದರೂ ಕಂಡು ಬರುವುದು.

ಮೂತ್ರ ಮಾಡುವಾಗ ಉರಿ

ಮೂತ್ರ ಮಾಡುವಾಗ ನೋವು

ಪದೇ ಪದೇ ಮೂತ್ರ ವಿಸರ್ಜನೆಯಾಗುವುದು.

ಪರಿಹಾರ

ಪ್ರತಿದಿನ 8–10 ಲೋಟ ನೀರು ಕುಡಿಯಿರಿ

ರಾತ್ರಿಯೆಲ್ಲ ಪದೇ ಪದೇ ಎದ್ದು ಹೋಗುವಷ್ಟು ತೊಂದರೆ ಕಂಡು ಬಂದರೆ ಸಂಜೆ 6 ಗಂಟೆಯ ನಂತರ ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯಬೇಕು.

ಮೂತ್ರ ವಿಸರ್ಜಿಸುವಾಗ ಸ್ವಲ್ಪ ಮುಂದೆ ಬಗ್ಗಿ ಮಾಡುವುದರಿಂದ ಮೂತ್ರಾಶಯ ಖಾಲಿಯಾಗಿ ನೀವು ಪದೇ ಪದೇ ಬಾತ್‌ರೂಂಗೆ ಹೋಗುವುದನ್ನು ತಪ್ಪಿಸಬಹುದು.

ಯೋನಿದ್ವಾರವನ್ನು ಸ್ವಚ್ಛವಾಗಿರಿಸಿಕೊಳ್ಳಿ. ಇದರಿಂದ ಮೂತ್ರದ ಸೋಂಕನ್ನು ತಪ್ಪಿಸಬಹುದು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !