ಗುರುವಾರ, 3 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ | ಜುಲೈ 2025: ಈ ರಾಶಿಯವರು ಎಚ್ಚರಿಕೆಯಿಂದ ವ್ಯವಹರಿಸಬೇಕು
Published 1 ಜುಲೈ 2025, 8:54 IST
ಅರುಣ ಪಿ.ಭಟ್ಟ
ಮೇಷ
ತಿಂಗಳ ಆರಂಭದಲ್ಲಿ ವೃತ್ತಿ ಜೀವನದಲ್ಲಿ ಕೀರ್ತಿ ಪ್ರತಿಷ್ಠೆಗಳು ಲಭಿಸುತ್ತವೆ. ಇನ್ನು ಉದ್ಯೋಗಸ್ಥರಿಗೆ ಜವಾಬ್ದಾರಿ ಹೆಚ್ಚಾಗಲಿದೆ. ವೈಯಕ್ತಿಕ ಜೀವನದಲ್ಲೂ ಉತ್ತಮವಾದ ಸಮಯ ಇದು. ವಿದ್ಯಾರ್ಥಿಗಳು ಹೆಚ್ಚು ಜಾಗರೂಕರಾಗಿ ಇರಬೇಕು. ಅದರಲ್ಲೂ ಯಾರ ಜತೆಗೆ ಸ್ನೇಹ ಮಾಡಿದ್ದೀರಿ, ಅವರ ಜತೆ ಹೇಗೆ ಸಮಯ ಕಳೆಯುತ್ತಿದ್ದೀರಿ ಎಂಬ ಬಗ್ಗೆ ಎಚ್ಚರ ಇರಲಿ. ನಿಮ್ಮ ಗುರಿಯಿಂದ ಗಮನ ಬೇರೆಡೆ ಹೋಗದಂತೆ ನೋಡಿಕೊಂಡರೆ ಮಾತ್ರ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಲು ಸಾಧ್ಯ. ಸಂಬಂಧದ ಪ್ರಾಮುಖ್ಯ ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೀರಿ. ವ್ಯಾಪಾರ ವ್ಯವಹಾರಸ್ಥರಿಗೆ ತಿಂಗಳ ಅಂತ್ಯದ ಹೊತ್ತಿಗೆ ಮುಖ್ಯವಾದ ಕೆಲಸಗಳನ್ನು ಪೂರೈಸಲು ಸಿಬ್ಬಂದಿಯ ಅಗತ್ಯ ಬರುತ್ತದೆ. ಖರ್ಚಿನ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಚಿಂತೆಗೆ ಗುರಿಯಾಗುತ್ತೀರಿ.
ವೃಷಭ
ತಿಂಗಳ ಆರಂಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ದೇವತಾ ಆರಾಧನೆ ಕಡೆಗೆ ನಿಮ್ಮ ಗಮನ ಹೆಚ್ಚಿರುತ್ತದೆ. ತೀರ್ಥಕ್ಷೇತ್ರ ಪ್ರವಾಸ ಮಾಡಬೇಕು ಅಂದುಕೊಂಡವರಿಗೆ, ಹಿರಿಯರ ಸೇವೆ ಮಾಡಲು ಬಯಸುವವರಿಗೆ ಅದಕ್ಕೆ ಅವಕಾಶ ದೊರೆಯಲಿದೆ. ಉನ್ನತ ಶಿಕ್ಷಣ ಮಾಡುತ್ತಿರುವವರಿಗೆ ಉತ್ತಮ ಪ್ರಗತಿ ಇದೆ. ಇನ್ನು ಮಾಮೂಲಿ ಕೆಲಸ ಕಾರ್ಯಗಳ ಹೊರತಾಗಿ ಇತರ ವಿಚಾರಗಳ ಕಡೆಗೆ ನಿಮ್ಮ ಗಮನ ಹೋಗುತ್ತದೆ. ತಿಂಗಳ ಅಂತ್ಯದಲ್ಲಿ ವೇತನದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಈ ಅವಧಿಯಲ್ಲಿ ವ್ಯಾಪಾರ ವ್ಯವಹಾರದಲ್ಲಿ ಚೆನ್ನಾಗಿ ಲಾಭವಾಗುತ್ತದೆ. ಇದರಿಂದ ನಿಮಗೆ ಸಂತಸವಾಗುತ್ತದೆ. ಇನ್ನು ವೈಯಕ್ತಿಕ ಸಂಬಂಧದಲ್ಲಿ ಸಂತಸದ ಕ್ಷಣಗಳನ್ನು ಕಳೆಯಲಿದ್ದೀರಿ.
ಮಿಥುನ
ಕೌಟುಂಬಿಕ ವಿಚಾರದಲ್ಲಿ ಕೆಲವು ಕಷ್ಟಗಳು ಎದುರಾಗಲಿವೆ. ಈಗಾಗಲೇ ಇರುವ ಸಮಸ್ಯೆಗಳ ಜತೆಗೆ ಇದೂ ಸೇರಿಕೊಳ್ಳಲಿದೆ. ಆದರೆ ಹೆದರುವ ಅಗತ್ಯ ಇಲ್ಲ. ನಿಮ್ಮ ಪ್ರಯತ್ನ ಭವಿಷ್ಯದ ಯಶಸ್ಸಿಗೆ ಸಹಕಾರಿ ಆಗಿರುತ್ತದೆ. ಸಂಗಾತಿ ಜತೆಗೆ ನಡೆಸುವ ಮಾತುಕತೆ ಉದ್ವಿಗ್ನತೆಗೆ ಕಾರಣವಾಗಬಹುದು. ಆದ್ದರಿಂದ ಎಚ್ಚರಿಕೆಯಿಂದ ವ್ಯವಹರಿಸಬೇಕು. ಉದ್ಯೋಗ ಸ್ಥಳದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇನ್ನು ಇದೇ ಅವಧಿಯಲ್ಲಿ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಧಾರ್ಮಿಕ ಚಟುವಟಿಕೆ, ಪೂಜೆಗಳಲ್ಲಿ ಭಾಗವಹಿಸಲು ಆಹ್ವಾನ ಬರಲಿದೆ. ತಿಂಗಳ ಅಂತ್ಯದಲ್ಲಿ ವ್ಯಾಪಾರ ವ್ಯವಹಾರ, ಉದ್ಯೋಗ ಎಲ್ಲದರಲ್ಲೂ ಒಂದು ಬಗೆಯ ವಿಶ್ವಾಸ ಮೂಡಲಿದೆ.
ಕರ್ಕಾಟಕ
ಜೀವನದಲ್ಲಿ ಸಂತಸ ಇರುತ್ತದೆ. ಸಂಗಾತಿ ಜತೆ ಉತ್ತಮ ಬಾಂಧವ್ಯ ಇರಲಿದೆ. ಉದ್ಯೋಗ, ವ್ಯಾಪಾರ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ಸಾಕಷ್ಟು ಅವಕಾಶಗಳು ದೊರೆಯಲಿವೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಸನ್ಮಾನಗಳು ಆಗಬಹುದಾದ ಸಾಧ್ಯತೆಗಳಿವೆ. ಇದರಿಂದ ಸಂತೋಷ ಹೆಚ್ಚಲಿದೆ. ಮಾಸದ ಅಂತ್ಯಕ್ಕೆ ಸರಿಯುತ್ತಾ ಕುಟುಂಬ ಸದಸ್ಯರ ನಡವಳಿಕೆಯಿಂದ ಗೊಂದಲಕ್ಕೆ ಸಿಲುಕಿಕೊಳ್ಳುತ್ತೀರಿ. ಇನ್ನು ಆರೋಗ್ಯದಲ್ಲಿ ಕೂಡ ಏರಿಳಿತಗಳು ಕಾಣಿಸಿಕೊಳ್ಳುತ್ತವೆ. ವಾಹನ ಅಥವಾ ಕಟ್ಟಡಕ್ಕೆ ಸಂಬಂಧಿಸಿದ ವಿಚಾರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ.
ಸಿಂಹ
ರಾಜಕಾರಣ, ಸಮಾಜ ಸೇವೆ, ತಂತ್ರಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಇರುವವರಿಗೆ ತಿಂಗಳ ಆರಂಭದಲ್ಲಿ ಪ್ರಗತಿ ಇದೆ. ಉದ್ಯೋಗ ನಿಮಿತ್ತವಾಗಿ ಈ ಅವಧಿಯಲ್ಲಿ ದೂರ ಪ್ರಯಾಣ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಬಹುದು. ಆದ್ಯತೆ ಮೇಲೆ ಕೆಲಸ ಕಾರ್ಯಗಳನ್ನು ಪೂರೈಸುವುದಕ್ಕೆ ನಿರ್ಧಾರ ಮಾಡುತ್ತೀರಿ. ಈ ತೀರ್ಮಾನದಿಂದ ಭವಿಷ್ಯದಲ್ಲಿ ಅನುಕೂಲವಾಗಲಿದೆ. ಆಹಾರ ನೀರು ಸೇವನೆ ಬಗ್ಗೆ ಹೆಚ್ಚು ಲಕ್ಷ್ಯ ಇರಲಿ. ಹಿರಿಯರಿಗೆ ಮಂಡಿ ನೋವು ಕಾಣಿಸಿಕೊಳ್ಳಬಹುದು. ತಿಂಗಳ ಅಂತ್ಯಕ್ಕೆ ಸರಿಯುತ್ತಾ ನಿಮ್ಮ ಸಮಸ್ಯೆಗಳು ಹೆಚ್ಚುತ್ತವೆ. ಖರ್ಚಿನ ಪ್ರಮಾಣ ಹೆಚ್ಚಾಗಲಿದೆ. ಈ ಸನ್ನಿವೇಶದಿಂದ ಆತಂಕವಾಗುತ್ತದೆ. ಆದರೆ ತಾಳ್ಮೆ ಮತ್ತು ಧೈರ್ಯದಿಂದ ಇರಬೇಕು ಎಂಬುದು ಗಮನದಲ್ಲಿ ಇರಲಿ.
ಕನ್ಯಾ
ಮಗ ಅಥವಾ ಮಗಳ ಏಳ್ಗೆ, ಪ್ರಗತಿಯಿಂದ ಸಂತಸ ಹೆಮ್ಮೆ ಉಂಟಾಗುತ್ತದೆ. ಅವರ ಶಿಕ್ಷಣ, ಉದ್ಯೋಗ, ಭವಿಷ್ಯದ ಬಗ್ಗೆ ಹೆಚ್ಚು ಗಮನ ನೀಡುತ್ತೀರಿ. ಈ ಪೈಕಿ ಯಾವುದಾದರೂ ಉದ್ದೇಶ ಈಡೇರಲು ಮನೆಯನ್ನು ಬದಲಿಸುವ ಸಾಧ್ಯತೆ ಕೂಡ ಇದೆ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಯಶಸ್ಸು ದೊರೆಯಲಿದೆ. ತಿಂಗಳ ಮಧ್ಯದಲ್ಲಿ ಆದಾಯ ಅತ್ಯುತ್ತಮವಾಗಿ ಇರುತ್ತದೆ. ವೈಯಕ್ತಿಕ ಸಂಬಂಧದಲ್ಲಿ ಸಂಗಾತಿ ಜತೆ ಬಾಂಧವ್ಯ ಗಟ್ಟಿಯಾಗಿರುತ್ತದೆ. ಸಂಬಂಧಿಕರ ಆಹ್ವಾನದ ಮೇರೆಗೆ ಶುಭ ಕಾರ್ಯಗಳಲ್ಲಿ ಭಾಗವಹಿಸಲಿದ್ದೀರಿ. ಕಾನೂನು ವ್ಯಾಜ್ಯಗಳು ನಡೆಯುತ್ತಿದ್ದಲ್ಲಿ ನಿಮ್ಮ ಪರವಾಗಿ ಬೆಳವಣಿಗೆಗಳು ನಡೆಯಲಿವೆ. ಆರೋಗ್ಯ ಸಮಸ್ಯೆಗಳು ಕಾಡಬಹುದು. ಬಹಳ ಎಚ್ಚರಿಕೆ ಅಗತ್ಯ. ಯಾರನ್ನೂ ವಿನಾಕಾರಣ ನಂಬಿ, ಹಣ ನೀಡಬೇಡಿ. ಹಾಗಾದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ.
ತುಲಾ
ಮ್ಯಾನೇಜ್‌ಮೆಂಟ್, ವೈದ್ಯಕೀಯ, ತಂತ್ರಜ್ಞಾನ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಯಶಸ್ಸಿದೆ. ಉದ್ಯಮಿಗಳು ವ್ಯಾಪಾರಸ್ಥರಿಗೆ ಉತ್ತಮ ಸಮಯ ಇದು. ಇದರಿಂದ ಸಂತಸ ಉಂಟಾಗಲಿದೆ. ಈ ಅವಧಿಯಲ್ಲಿ ಆರೋಗ್ಯವೂ ಉತ್ತಮವಾಗಿರುತ್ತದೆ. ಉದ್ಯೋಗಿಗಳಿಗೆ ದೊರೆಯುತ್ತಿರುವ ಸವಲತ್ತು ಮತ್ತಷ್ಟು ವಿಸ್ತರಣೆಯಾಗಲಿದೆ. ತಿಂಗಳ ಮಧ್ಯ ಭಾಗದಲ್ಲಿ ಕೆಲಸ ಕಾರ್ಯಗಳು ವಿಪರೀತ ವೇಗವಾಗಿ ಪೂರ್ಣಗೊಳ್ಳುತ್ತವೆ. ಆದಾಯ ಹೆಚ್ಚು ಮಾಡಿಕೊಳ್ಳುವುದಕ್ಕೂ ಅತ್ಯುತ್ತಮವಾದ ಸಮಯ ಇದು. ಮಗ ಅಥವಾ ಮಗಳ ಮದುವೆಗಾಗಿ ಸೂಕ್ತ ಸಂಬಂಧದ ಹುಡುಕಾಟದಲ್ಲಿ ಇದ್ದರೆ ಪ್ರಯತ್ನದಲ್ಲಿ ಸಾಫಲ್ಯ ಕಾಣುತ್ತೀರಿ. ತಿಂಗಳ ಕೊನೆಯ ದಿನಗಳಲ್ಲಿ ಹಣಕಾಸಿನ ವೆಚ್ಚ ಹೆಚ್ಚಾಗಿರುತ್ತದೆ.
ವೃಶ್ಚಿಕ
ನಿಮ್ಮ ಸಾಮರ್ಥ್ಯ ಹೆಚ್ಚಲಿದೆ. ಕೌಟುಂಬಿಕ ಜೀವನದಲ್ಲೂ ಅದೃಷ್ಟ ನಿಮ್ಮ ಪಾಲಿಗೆ ಇರಲಿದೆ. ಭದ್ರತೆ, ಶಿಕ್ಷಣ ಹಾಗೂ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವವರಿಗೆ ಉತ್ತಮ ಪ್ರಗತಿ ಇದೆ. ಮಾಹಿತಿ ಹಾಗೂ ಸಂವಹನ ಕ್ಷೇತ್ರದಲ್ಲಿ ಇರುವವರಿಗೆ ಗೌರವ ಹೆಚ್ಚಾಗಲಿದೆ. ಜತೆಗೆ ಯಶಸ್ಸು ನಿಮ್ಮ ಪಾಲಿಗೆ ಸಿಗಲಿದೆ. ಹಿರಿಯರಿಗೆ ಆರೋಗ್ಯ ಸಮಸ್ಯೆಗಳು ಕಾಡಬಹುದು. ಆದರೆ ತಿಂಗಳಾಂತ್ಯದ ಹೊತ್ತಿಗೆ ಚೇತರಿಕೆ ಕಾಣಿಸಿಕೊಳ್ಳಲಿದೆ. ತಿಂಗಳ ಮಧ್ಯಭಾಗದಲ್ಲಿ ಆದಾಯದಲ್ಲಿ ಹೆಚ್ಚಳವಾಗಲಿದೆ. ವೈಯಕ್ತಿಕ ಸಂಬಂಧವು ಶಾಂತಯುತವಾಗಿ, ಸಮಾಧಾನದಿಂದ ಇರಲಿದ್ದು, ಇದರಿಂದ ನಿಮಗೆ ಸಂತೋಷವಾಗಲಿದೆ.
ಧನು
ಭೂಮಿ ಖರೀದಿ ಪ್ರಕ್ರಿಯೆಯಲ್ಲಿ ತೊಡಗಲಿದ್ದೀರಿ. ಈಗಾಗಲೇ ವ್ಯಾಜ್ಯಗಳು ಇದ್ದಲ್ಲಿ ಅವುಗಳನ್ನು ನಿವಾರಿಸಿಕೊಳ್ಳಲು ಸಫಲರಾಗುತ್ತೀರಿ. ವಾಸ್ತವದಲ್ಲಿ ಸಂತೋಷ ಪಡುವುದಕ್ಕೆ ಬೇಕಾದ ಸೌಕರ್ಯಗಳನ್ನು ಪಡೆಯಲಿದ್ದೀರಿ. ಪಾಲುದಾರಿಕೆಯ ವ್ಯವಹಾರಗಳನ್ನು ಮಾಡುತ್ತಿದ್ದಲ್ಲಿ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಮೂಡಲಿವೆ. ತಿಂಗಳ ಮಧ್ಯ ಭಾಗದಲ್ಲಿ ಕೆಲವು ಕೆಲಸಗಳನ್ನು ಪೂರ್ಣ ಮಾಡಬೇಕಾದ ಅನಿವಾರ್ಯಕ್ಕೆ ಸಿಲುಕಿಕೊಂಡು ನೀವು ಸ್ವತಃ ಅಖಾಡಕ್ಕೆ ಇಳಿಯಬೇಕಾಗುತ್ತದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಅನುಕೂಲಕರವಾದ ಸನ್ನಿವೇಶ ಸೃಷ್ಟಿಯಾಗಲಿದೆ. ಮಾಸಾಂತ್ಯಕ್ಕೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯುವ ಅವಕಾಶಗಳು ಹೆಚ್ಚಿವೆ. ಇವೆಲ್ಲದರ ಜತೆಗೆ ಸೋದರ ಸೋದರಿಯರ ಜತೆಗೆ ಭಿನ್ನಾಭಿಪ್ರಾಯ ಮೂಡಬಹುದು.
ಮಕರ
ವೃತ್ತಿ ಜೀವನದಲ್ಲಿ ದೊರೆಯುವ ಅವಕಾಶಗಳನ್ನು ಸದ್ಬಳಕೆ ಮಾಡುವ ಕಡೆಗೆ ನಿಮ್ಮ ಗಮನ ಇರುತ್ತದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಆ ಮೂಲಕ ನಿಮ್ಮ ಈಗಿನ ವ್ಯಾಪಾರ ವ್ಯವಹಾರಗಳ ವಿಸ್ತರಣೆಗೆ ಅನುಕೂಲ ಆಗಲಿದೆ. ಭೂಮಿ ಖರೀದಿ ಬಗ್ಗೆ ಆಸಕ್ತರಾಗಿದ್ದಲ್ಲಿ ನಿಮ್ಮ ಪ್ರಯತ್ನ ಆರಂಭಿಸುವುದಕ್ಕೆ ಇದು ಸೂಕ್ತ ಸಮಯ. ಹವಾಮಾನ ಮತ್ತು ಇತರ ಕಾರಣಗಳಿಗೆ ದೈಹಿಕ ಬಾಧೆಗಳು ನಿಮ್ಮನ್ನು ಕಾಡಬಹುದು. ವೈಯಕ್ತಿಕ ಸಂಬಂಧದಲ್ಲಿ ಸಂಗಾತಿ ಜತೆಗೆ ಉತ್ತಮ ಸಮಯ ಕಳೆಯಲಿದ್ದೀರಿ. ತಿಂಗಳ ಕೊನೆಯ ದಿನಗಳಲ್ಲಿ ಒಂದಲ್ಲ ಒಂದು ಚಟುವಟಿಕೆಯಲ್ಲಿ ಬಿಡುವಿಲ್ಲದೆ ತೊಡಗಿಕೊಳ್ಳಬೇಕಾಗುತ್ತದೆ. ನಿಮ್ಮ ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಸಾಧಿಸಲಿದ್ದೀರಿ.
ಕುಂಭ
ನೀವು ಅಂದುಕೊಂಡ ವಿವಿಧ ಕೆಲಸಗಳನ್ನು ಶುರು ಮಾಡುವುದಕ್ಕೆ ಸೂಕ್ತವಾದ ಸಮಯ. ನಿಮ್ಮ ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಲು ಅಗತ್ಯವಾದ ವೇದಿಕೆಯನ್ನು ಸಿದ್ಧ ಮಾಡಿಕೊಳ್ಳುತ್ತೀರಿ. ನಿಮ್ಮ ವಿವೇಚನಾಶಕ್ತಿ ಹಾಗೂ ಧೈರ್ಯ ಅಗಾಧ ಪ್ರಮಾಣದಲ್ಲಿ ಹೆಚ್ಚಲಿದೆ. ವ್ಯಾಪಾರ ಒಪ್ಪಂದವನ್ನು ಪೂರ್ಣಗೊಳಿಸುವ ಸಲುವಾಗಿ ಹೆಚ್ಚು ಹಣ, ಸಮಯ ಮೀಸಲಿಡಬೇಕಾಗುತ್ತದೆ. ಆರೋಗ್ಯ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಕಾಡಬಹುದು. ನಿಮಗೆ ವಹಿಸಿದ ಜವಾಬ್ದಾರಿಯನ್ನು ಉದ್ಯೋಗ ಸ್ಥಳದಲ್ಲಿ ಜೋಪಾನವಾಗಿ ನಿರ್ವಹಿಸಿ. ವೈಯಕ್ತಿಕ ಸಂಬಂಧದಲ್ಲಿ ಬಾಂಧವ್ಯ ಗಟ್ಟಿಯಾಗಲಿದೆ. ತುಂಬ ಹತ್ತಿರದವರೊಬ್ಬರು ನಿಮ್ಮಿಂದ ದೂರ ಆಗಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬರಲಿದೆ. ತಿಂಗಳಾಂತ್ಯದ ಹೊತ್ತಿಗೆ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತದೆ. ಸಂಗಾತಿ ಮಕ್ಕಳ ಜತೆಗೆ ಉತ್ತಮವಾದ ಸಮಯ ಕಳೆಯಲಿದ್ದೀರಿ. ಲಾಭ ಹಾಗೂ ಆದಾಯದಲ್ಲಿ ಸ್ಥಿರತೆ ಇಲ್ಲದಂತಾಗಿ, ಚಿಂತೆಗೆ ಕಾರಣವಾಗುತ್ತದೆ. ತಾಳ್ಮೆ ಹಾಗೂ ಧೈರ್ಯದಿಂದ ಸನ್ನಿವೇಶವನ್ನು ಎದುರಿಸಿ.
ಮೀನ
ಕೆಲಸ ಕಾರ್ಯಗಳನ್ನು ಪೂರೈಸಲು ಉದ್ಯೋಗ ಸ್ಥಳದಲ್ಲಿ ಶ್ರಮಿಸಲಿದ್ದೀರಿ. ಆ ನಿಮ್ಮ ಶ್ರಮಕ್ಕೆ ತಕ್ಕಂತೆ ಫಲಿತಾಂಶ ದೊರೆಯಲಿದೆ. ಪ್ರೀತಿ ಪ್ರೇಮದಲ್ಲಿ ಇರುವವರಿಗೆ ಸಂಗಾತಿ ಜತೆಗಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ. ಈ ಹಿಂದೆ ಭಿನ್ನಾಭಿಪ್ರಾಯ ಅಥವಾ ಮನಸ್ತಾಪಗಳು ಇದ್ದಲ್ಲಿ ಅವುಗಳನ್ನು ಬಗೆಹರಿಸಿಕೊಳ್ಳಲಿದ್ದೀರಿ. ತಿಂಗಳ ಮಧ್ಯ ಭಾಗದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೂ ಬಿಕ್ಕಟ್ಟು ಎದುರಾಗಲಿದೆ. ಆದರೆ ಈ ಬಿಕ್ಕಟ್ಟಿಗೆ ಇರುವ ಕಾರಣಗಳನ್ನು ನೀವೇ ಪತ್ತೆಹಚ್ಚಿ, ಅವುಗಳನ್ನು ನಿವಾರಣೆ ಮಾಡಿಕೊಂಡು ಮುಂದಕ್ಕೆ ಸಾಗಲಿದ್ದೀರಿ. ಆರೋಗ್ಯವು ಉತ್ತಮವಾಗಿರುತ್ತದೆ. ವೈವಾಹಿಕ ಜೀವನವು ಸಂತುಷ್ಟವಾಗಿರುತ್ತದೆ. ವ್ಯಾಪಾರಿಗಳು ಉದ್ಯಮಿಗಳು ತುಂಬ ಚಟುವಟಿಕೆಯಿಂದ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಹಲವು ಬಗೆಯಲ್ಲಿ ಲಾಭ ಕಾಣಲು ಸಾಧ್ಯವಾಗಲಿದೆ.
ADVERTISEMENT
ADVERTISEMENT