ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಬಿಜೆಪಿ ಕಾರ್ಯಕರ್ತರ ಸಮಾವೇಶ: ಬಂಡಾಯ ಶಮನಕ್ಕೆ ಅಮಿತ್‌ ಶಾ ನೇರ ಪ್ರವೇಶ

ಎಚ್‌ಡಿಕೆ ಜತೆ ರೋಡ್ ಶೋ
Published 1 ಏಪ್ರಿಲ್ 2024, 23:30 IST
Last Updated 1 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಪಕ್ಷದೊಳಗಿನ ಆಂತರಿಕ ಭಿನ್ನಮತ, ಬಂಡಾಯದಂತಹ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಸಮಾಧಾನದ ಬೆಂಕಿ ಶಮನ ಮಾಡುವ ಯತ್ನ ನಡೆಸಲಿದ್ದಾರೆ.

ಸೋಮವಾರ ರಾತ್ರಿ ಬೆಂಗಳೂರಿಗೆ ಬಂದಿಳಿದ ಅಮಿತ್ ಶಾ, ಪಕ್ಷದ ವಿವಿಧ ಹಂತದ ನಾಯಕರ ಜತೆ, ಮಿತ್ರ ಪಕ್ಷ ಜೆಡಿಎಸ್ ನಾಯಕರ ಜತೆ ಹಲವು ಸಭೆಗಳನ್ನು ನಡೆಸಲಿದ್ದಾರೆ. ಪ್ರತ್ಯೇಕ ರಾಷ್ಟ್ರದ ಪ್ರಸ್ತಾಪ ಮಾಡಿ ವಿವಾದಕ್ಕೆ ಒಳಗಾಗಿದ್ದ ಸಂಸದ ಡಿ.ಕೆ.ಸುರೇಶ್‌ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದಲೇ ಕರ್ನಾಟಕದ ಚುನಾವಣಾ ಪ್ರಚಾರಕ್ಕೂ ಚಾಲನೆ ನೀಡಲಿದ್ದಾರೆ.

ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿರುವ ಅಸಮಾಧಾನವನ್ನು ಬಗೆಹರಿಸುವುದರ ಜತೆಗೆ, ಮಿತ್ರ ಪಕ್ಷ ಜೆಡಿಎಸ್‌ ಜತೆಗೆ ಹೆಗಲಿಗೆ ಹೆಗಲುಕೊಟ್ಟು ಶ್ರಮಿಸಲು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆದ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಿರುವ ಅಮಿತ್‌ ಶಾ ಅವರು, ಈ ವಿಚಾರವಾಗಿ ಪಕ್ಷದ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಲಿದ್ದಾರೆ. ಪಕ್ಷದ ಎಲ್ಲ ನಾಯಕರು ಮತ್ತು ಕಾರ್ಯಕರ್ತರು ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕು. ಅಭ್ಯರ್ಥಿಗಿಂತ ಪಕ್ಷದ ಗೆಲುವು ಮತ್ತು ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ಮುಖ್ಯ. ಅದಕ್ಕಾಗಿ ಬೆವರು ಹರಿಸಬೇಕು. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡರೆ, ಪರೋಕ್ಷವಾಗಿ ವಿರೋಧಿಗಳ ಜೊತೆ ಕೈ ಜೋಡಿಸಿದರೆ, ಅಂತಹವರನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಎಚ್ಚರಿಕೆಯನ್ನೂ ನೀಡಲಿದ್ದಾರೆ’ ಎಂದು ಮೂಲಗಳು ವಿವರಿಸಿವೆ.

ಬಂಡಾಯ ಎದುರಿಸುತ್ತಿರುವ ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಬೀದರ್‌, ಬೆಳಗಾವಿ ಲೋಕಸಭಾ ಕ್ಷೇತ್ರಗಳ ಜಿಲ್ಲಾ ಪ್ರಮುಖ ನಾಯಕರ ಸಮಿತಿ (ಕೋರ್‌ ಕಮಿಟಿ) ಸದಸ್ಯರ ಜೊತೆಗೂ ಶಾ ಸಭೆ ನಡೆಸಲಿದ್ದಾರೆ.

ಸಮಾವೇಶ– ರೋಡ್‌ ಶೋ: ಮಂಗಳವಾರ ಇಡೀ ದಿನ ಸಮಾವೇಶ, ಸಭೆಗಳ ಜತೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಚನ್ನಪಟ್ಟಣದಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ರೋಡ್‌ ಶೋನಲ್ಲಿ ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಭಾಗವಹಿಸಲಿದ್ದಾರೆ.

ಬೆಳಿಗ್ಗೆ ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ಬಿಜೆಪಿ– ಜೆಡಿಎಸ್‌ ನಾಯಕರ ಸಮನ್ವಯ ಸಮಿತಿ ಸಭೆಯೂ ನಡೆಯಲಿದೆ. ಆ ಬಳಿಕ ಶಾ ಅವರು ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಹಿಸಲಿದ್ದಾರೆ. ‘ಇದರಲ್ಲಿ ಸುಮಾರು 5 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದು, ನೇರವಾಗಿ ಐದು ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರ ಜತೆ ಮಾತುಕತೆ ನಡೆಸಲಿದ್ದಾರೆ’ ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ವಿ.ಸುನಿಲ್‌ಕುಮಾರ್‌ ತಿಳಿಸಿದರು.

‘ಥೋಡೋ ವಿರುದ್ಧ ಜೋಡೋ, ಇದು ಕರ್ನಾಟಕ ಚುನಾವಣೆಯ ಘೋಷಣೆ. ಕಳೆದ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿತ್ತು. ಈ ಬಾರಿ ಮೊದಲ ವಿಜಯ ಇಲ್ಲಿಂದಲೇ ಆರಂಭವಾಗಲಿದೆ. ಆ ಕಾರಣಕ್ಕಾಗಿ ಗ್ರಾಮಾಂತರ ಕ್ಷೇತ್ರದಿಂದಲೇ ಅಮಿತ್‌ ಶಾ ಪ್ರಚಾರ ಆರಂಭಿಸುತ್ತಿದ್ದಾರೆ’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT