ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ–3: ವಿಕ್ರಮ್–ಪ್ರಜ್ಞಾನ್ ಮರುಜೀವ ಪಡೆಯಲಿವೆಯೇ?

ನಾಳೆ ನಿರ್ಣಾಯಕ ದಿನ
Published 20 ಸೆಪ್ಟೆಂಬರ್ 2023, 20:31 IST
Last Updated 20 ಸೆಪ್ಟೆಂಬರ್ 2023, 20:31 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿರುವ ‘ಶಿವಶಕ್ತಿ’ ಬಿಂದುವಿನಲ್ಲಿ ‘ನಿದ್ರಿಸುತ್ತಿರುವ’  ಚಂದ್ರಯಾನ–3ರ ಲ್ಯಾಂಡರ್‌ ‘ವಿಕ್ರಮ್‌’ ಮತ್ತು ರೋವರ್‌ ‘ಪ್ರಜ್ಞಾನ್‌’ ಶುಕ್ರವಾರ (ಸೆ. 22) ಸೂರ್ಯೋದಯದ ವೇಳೆಗೆ ಪುನಃ ಎಚ್ಚರಗೊಳ್ಳುವುದೇ?

ಚಂದ್ರನ ಅಂಗಳದಲ್ಲಿ ವಿಕ್ರಮ್‌ ಇಳಿದ ಬಳಿಕ ರೋವರ್‌ ಚಂದ್ರನ ಒಂದು ಪೂರ್ತಿ ದಿನ (ಭೂಮಿಯ 14 ದಿನಗಳು) ಕಾರ್ಯ ನಿರ್ವಹಿಸಿತ್ತು. ಬಳಿಕ ಸೂರ್ಯಾಸ್ತ ಆಗುತ್ತಿದ್ದಂತೆ ವೈಜ್ಞಾನಿಕ ಮಾಹಿತಿ ಸಂಗ್ರಹದ ಕಾರ್ಯವನ್ನು (ಸೆ.4) ನಿಲ್ಲಿಸಿತು. ಅಂದರೆ, ಇಸ್ರೊ ವಿಜ್ಞಾನಿಗಳು ಲ್ಯಾಂಡರ್‌ ಮತ್ತು ರೋವರ್‌ಗಳನ್ನು ನಿದ್ರಾವಸ್ಥೆಗೆ ದೂಡಿದರು.

ಲ್ಯಾಂಡರ್‌ ಮತ್ತು ರೋವರ್‌ ಅನ್ನು ‘ಸ್ಲೀಪ್‌ ಮೋಡ್‌’ಗೆ ಹಾಕುವುದಕ್ಕೂ ಮುನ್ನ ಒಂದು ವಿಶಿಷ್ಟ ಪರೀಕ್ಷೆಯನ್ನು ಇಸ್ರೊ ಯಶಸ್ವಿಯಾಗಿ ನಡೆಸಿತು. ಚಂದ್ರನಲ್ಲಿ ಕತ್ತಲು ಆವರಿಸಿದ ನಂತರ ಎಂಜಿನ್‌ ಉರಿಸುವ ಮೂಲಕ ‘ವಿಕ್ರಮ್’ ಲ್ಯಾಂಡರ್‌ ಅನ್ನು ನೆಲದಿಂದ ಮೇಲಕ್ಕೇರಿಸಿ ಕೊಂಚ ಪಕ್ಕಕ್ಕೆ ತೇಲಿಸಿ ಪುನಃ ಚಂದ್ರನಂಗಳದ ಮೇಲೆ ಸುರಕ್ಷಿತವಾಗಿ ಇಳಿಸಲಾಯಿತು.

40 ಸೆಂ.ಮೀನಷ್ಟು ಮೇಲಕ್ಕೆ ಎಬ್ಬಿಸಿ 30 ರಿಂದ 40 ಸೆಂ.ಮೀ.ನಷ್ಟು ಪಕ್ಕಕ್ಕೇ ತೇಲಿಸಿ ಮತ್ತೊಂದು ಸ್ಥಳದಲ್ಲಿ ಇಳಿಸಲಾಗಿದೆ. ಇದೊಂದು ಸಣ್ಣ ಪರೀಕ್ಷೆಯಾಗಿದ್ದರೂ ಮಹತ್ವದ ಪರೀಕ್ಷೆ. ಇದಕ್ಕೆ ‘ಹಾಪ್‌ ಟೆಸ್ಟ್‌’ ಎನ್ನಲಾಗುತ್ತದೆ.

ಎಲ್ಲರ ಚಿತ್ತ ಚಂದ್ರನತ್ತ: ಭಾರತ ಮಾತ್ರವಲ್ಲ; ವಿಶ್ವದ ಹಲವು ದೇಶಗಳ ಬಾಹ್ಯಾಕಾಶ ವಿಜ್ಞಾನಿಗಳು ಮತ್ತು ತಂತ್ರಜ್ಞರು ಈಗ ತಮ್ಮ ಚಿತ್ತವನ್ನು ಚಂದ್ರನತ್ತ ನೆಟ್ಟಿದ್ದಾರೆ. ಶುಕ್ರವಾರ ಮುಂಜಾನೆ ಸೂರ್ಯೋದಯದ ಬಳಿಕ ಬಿಸಿಲು ಲ್ಯಾಂಡರ್‌ ಮತ್ತು ರೋವರ್‌ಗಳ ಸೌರ ಫಲಕಗಳ ಮೇಲೆ ಬಿದ್ದ ನಂತರ, ಅವು ಪುನಃ ವಿದ್ಯುತ್‌ ಪೂರೈಕೆ ಮಾಡುವಲ್ಲಿ ಶಕ್ಯವಾಗಿ ಉಪಕರಣಗಳು ಕಾರ್ಯ ನಿರ್ವಹಿಸಲು ಸಾಧ್ಯವಾದರೆ ಅದು ಒಂದು ಸಾಧನೆ ಎಂದೇ ವಿಶ್ಲೇಷಿಸಲಾಗುತ್ತಿದೆ.

‘ವಿಕ್ರಮ್‌ ಮತ್ತು ಪ್ರಜ್ಞಾನ್‌ಗಳಲ್ಲಿರುವ ಉಪಕರಣಗಳು ಚಂದ್ರನ ಒಂದು ದಿನ ಮಾತ್ರ ಕಾರ್ಯ ನಿರ್ವಹಿಸುವಂತೆ ಇಸ್ರೊ ವಿನ್ಯಾಸಗೊಳಿಸಿದೆ. ಅಂದರೆ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವೈಜ್ಞಾನಿಕ ಮಾಹಿತಿ ಸಂಗ್ರಹಿಸುವುದಷ್ಟೇ ಅವುಗಳ ಕೆಲಸವಾಗಿತ್ತು.

ಚಂದ್ರನಲ್ಲಿ ರಾತ್ರಿ ವೇಳೆ ಹೆಪ್ಪುಗಟ್ಟುವ ಥಂಡಿ ವಾತಾವರಣವಿರುತ್ತದೆ. ಈ ಸಂದರ್ಭದಲ್ಲಿ ಲ್ಯಾಂಡರ್‌ ಮತ್ತು ರೋವರ್‌ ಬೆಚ್ಚಗಿರಲು ಹೀಟರ್‌ಗಳ ಅಗತ್ಯವಿರುತ್ತದೆ. ಹೀಟರ್‌ಗಳಿಗೆ 14 ದಿನಗಳ ಕತ್ತಲಿನಲ್ಲಿ ಶಕ್ತಿ ‍ಪೂರೈಸುವ ಬ್ಯಾಟರಿಗಳ ಅಗತ್ಯವಿರುತ್ತದೆ. ಆಗ ಮಾತ್ರ ಅವು ಉಳಿಯಬಲ್ಲವು’ ಎಂದು ಇಸ್ರೊ ವಿಜ್ಞಾನಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ನಿಟ್ಟಿನಲ್ಲಿ ಇಸ್ರೊ ಯಾವ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಇಲ್ಲ. ವಾಯೇಜರ್‌ಗಳಂತಹ ಬಾಹ್ಯಾಕಾಶ ನೌಕೆಗಳಲ್ಲಿ ಅಣುಶಕ್ತಿ ಚಾಲಿತ ಬ್ಯಾಟರಿಗಳು ಇರುತ್ತವೆ. ಅವು ನಿರಂತರ ವಿದ್ಯುತ್‌ ಪೂರೈಕೆ ಮಾಡುತ್ತವೆ. ಹೀಗಾಗಿ, ಅವು ಹಗಲು– ರಾತ್ರಿ ಎನ್ನದೇ ಕಾರ್ಯ ನಿರ್ವಹಿಸುತ್ತಲೇ ಇರುತ್ತವೆ. ರಷ್ಯಾ ಚಂದ್ರನ ದಕ್ಷಿಣ ಧ್ರುವಕ್ಕೆ ಕಳಿಸಿದ ನೌಕೆಯಲ್ಲೂ ಅಣುಶಕ್ತಿ ಚಾಲಿತ ಬ್ಯಾಟರಿಗಳನ್ನು ಹೊಂದಿದ್ದವು. ಆದರೆ, ನೌಕೆ ಚಂದ್ರನ ಅಂಗಳದಲ್ಲಿ ಇಳಿಯದೇ ಕುಸಿದು ಬಿದ್ದಿತು. ಚಂದ್ರಯಾನದ ಲ್ಯಾಂಡರ್‌ ಮತ್ತು ರೋವರ್‌ಗಳು ಅಂತಹ ಬ್ಯಾಟರಿ ಹೊಂದಿರುವ ಸಾಧ್ಯತೆ ಇಲ್ಲ’ ಎಂದು ಅವರು ಹೇಳಿದರು.

‘ಶುಕ್ರವಾರ ಬೆಳಿಗ್ಗೆ ಲ್ಯಾಂಡರ್‌ ಮತ್ತು ರೋವರ್‌ಗಳನ್ನು ಸಕ್ರಿಯಗೊಳಿಸಲು ಸಾಧ್ಯವಾಗದಿದ್ದರೆ, ಅಲ್ಲಿಗೆ ಅವುಗಳ ಕಾರ್ಯ ಪೂರ್ಣಗೊಂಡಂತೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT