ನೂರು ವರ್ಷ ಮದ್ದೂರು ವಡೆಗೆ

7

ನೂರು ವರ್ಷ ಮದ್ದೂರು ವಡೆಗೆ

Published:
Updated:
Deccan Herald

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಪ್ರಯಾಣದ ಜೊತೆಗೆ ಮದ್ದೂರು ವಡೆ ಸವಿದರೆ ಆ ಪ್ರಯಾಣಸವಿ ನೆನಪಾಗಿ ಉಳಿಯುತ್ತದೆ.  ಮದ್ದೂರು ವಡೆ ಎಲ್ಲಾ ಕಡೆ ಸಿಗುತ್ತದೆ. ಆದರೆ ಘಮಘಮಿಸುವ, ವಿಶೇಷ ಶೈಲಿಯಲ್ಲಿ ಕರಿಯುವ ವಡೆ ತಿನ್ನಬೇಕು ಎಂದರೆ ಮದ್ದೂರು ಪಟ್ಟಣಕ್ಕೇ ಬರಬೇಕು. ಬಾಯಿಗಿಟ್ಟೊಡನೆ ಈ ವಡೆ ಮರಳುಮರಳಾಗಿ ಕರಗಿ ಹೋಗುತ್ತದೆ. ಕರಿದ ಕರಿಬೇವು ವಡೆಯ ಪರಿಮಳ ಹೆಚ್ಚಿಸುತ್ತದೆ. ಎಳ್ಳು, ಗಸಗಸೆಯ ರುಚಿ ನಾಲಗೆಯ ಮೇಲೆ ನಲಿದಾಡುತ್ತವೆ. ತುಪ್ಪ, ಗೋಡಂಬಿಗೆ ಬಾಯಿ ಚಪ್ಪರಿಸುತ್ತದೆ. ನಡುನಡುವೆ ಸಿಗುವ ಹೆಚ್ಚಿದ ಈರುಳ್ಳಿ ಬಾಯಲ್ಲಿ ನೀರು ತರಿಸುತ್ತದೆ. ಹಲ್ಲುಗಳಿಗೆ ಹತ್ತುವ ರವೆ, ಅಕ್ಕಿ ಹಿಟ್ಟು ರುಚಿಯನ್ನು ನೂರ್ಮಡಿಗೊಳಿಸುತ್ತವೆ.

ಮದ್ದೂರು ವಡೆಗೆ ಶತಮಾನದ ಇತಿಹಾಸವಿದೆ. ಆದರೆ ಇದಕ್ಕೊಂದು ಬ್ರ್ಯಾಂಡ್‌ ರೂಪಕೊಟ್ಟ ನಾಲ್ಕು ತಲೆಮಾರುಗಳ ಕುಟುಂಬವೊಂದು ಈಗಲೂ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮದ್ದೂರಿನಲ್ಲಿ ಇದೆ. ನಾಲ್ಕನೇ ತಲೆಮಾರಿನ ಕುಡಿಗಳು ಈಗಲೂ ಇಲ್ಲಿ ಗರಿಗರಿಯಾದ ವಡೆ ಮಾಡಿ ಉಣಬಡಿಸುತ್ತಿದ್ದಾರೆ.  100 ವರ್ಷಗಳ ಹಿಂದೆ ಮಧ್ವಾಚಾರ್ಯ ಮತ್ತು ರಾಮಚಂದ್ರ ಬುದ್ದಿ ಅವರಿಂದ ಆರಂಭವಾದ ಮದ್ದೂರು ವಡೆ ಕಾಯಕ ಈಗ ನಾಲ್ಕನೇ ತಲೆಮಾರಿನ ‘ಮದ್ದೂರು ಟಿಫಾನೀಸ್‌’ವರೆಗೂ ಸಾಗಿ ಬಂದಿದೆ.

ಈ ಕುಟುಂಬ 1917ರಿಂದಲೂ ಮದ್ದೂರು ವಡೆ ಮಾಡುತ್ತಾ ಬಂದಿದೆ. ಎರಡನೇ ತಲೆಮಾರಿನ ಎಚ್‌.ಡಿ.ಹೆಬ್ಬಾರ್‌, ಟಿ.ಗೋಪಾಲಯ್ಯ, ಮೂರನೇ ತಲೆಮಾರಿನ ಡಿ.ನಾಗರಾಜ್‌, ಡಿ. ಸುಬ್ರಮಣ್ಯ, ಡಿ.ಜಯಪ್ರಕಾಶ್‌ ಅವರು ಮದ್ದೂರು ವಡೆಗೆ ವಿಶೇಷ ರೂಪ ಕೊಟ್ಟಿದ್ದಾರೆ. ಈಗ ಡಿ.ಜಯಪ್ರಕಾಶ್‌ ಹಾಗೂ ನಾಲ್ಕನೇ ತಲೆಮಾರಿನ ಯುವಕ ಡಿ.ಎನ್‌.ಚತುರ ಅವರು ಪೂರ್ವಿಕರು ನೀಡಿದ ರುಚಿಯನ್ನು ಉಳಿಸಿಕೊಂಡು ಬಂದಿದ್ದಾರೆ. 1991ರಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮದ್ದೂರು ಟಿಫಾನೀಸ್‌ ಸ್ಥಾಪನೆಯಾಯಿತು.

ಈ ಕುಟುಂಬದ ಜೊತೆ 40 ವರ್ಷಗಳಿಂದಲೂ ಇಲ್ಲಿ ಕೆಲಸ ಮಾಡುತ್ತಿರುವ ಬಾಣಸಿಗರು ಕಾಣಸಿಗುತ್ತಾರೆ. ಬಾಬು ಮದ್ದೂರು ವಡೆ ಮಾಡಲು ಪ್ರಸಿದ್ಧಿ ಪಡೆದಿದ್ದಾರೆ. ಇವರ ಜೊತೆಗೆ ನಾಗ, ಸುಬ್ಬರಾಜು ಅವರು ಮದ್ದೂರು ಟಿಫಾನೀಸ್‌ನ ಪ್ರೀತಿಯ ಬಾಣಸಿಗರಾಗಿದ್ದಾರೆ.

‘ಮದ್ದೂರು ವಡೆಯಲ್ಲಿ ಈರುಳ್ಳಿ ಪಾತ್ರ ಬಲುಮುಖ್ಯವಾದುದು. ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ ತರುತ್ತೇವೆ. ಇದರಲ್ಲಿ ನೀರಿನಾಂಶ ಕಡಿಮೆ. ಹೀಗಾಗಿಯೇ ಇದಕ್ಕೆ ವಿಶೇಷ ರುಚಿ.‌ ಇದೇ ರೀತಿಯ ಮದ್ದೂರು ವಡೆಗಳು ಬೆಂಗಳೂರಿನ ಗಾಂಧಿನಗರದಲ್ಲಿರುವ ಉತ್ಸವ ಗ್ರ್ಯಾಂಡ್‌ ಹೋಟೆಲ್‌ನಲ್ಲೂ ದೊರೆಯುತ್ತವೆ’ ಎಂದು ಮದ್ದೂರು ಟಿಫಾನಿಸ್‌ ಮಾಲೀಕ ಡಿ.ಎನ್‌.ಚತುರ ಹೇಳುತ್ತಾರೆ.

ದಾಲ್‌ ಕಿಚಡಿ ಫೇಮಸ್‌:

ಮದ್ದೂರು ವಡೆ ಮಾತ್ರವಲ್ಲದೆ ಉತ್ತರ ಭಾರತೀಯ ಅಡುಗೆಗೂ ಮದ್ದೂರು ಟಿಫಾನಿಸ್‌ ಪ್ರಸಿದ್ಧಿ ಪಡೆದಿದೆ. ‘ದಾಲ್‌ ಕಿಚಡಿ’ ಇಲ್ಲಿಯ ವಿಶೇಷ.

ಪೇಪರ್‌ ದೋಸೆ: ನಾಸಿಕ್‌ ಈರುಳ್ಳಿಯಿಂದ ಮಾಡುವ ಈರುಳ್ಳಿ ದೋಸೆ ಪ್ರತಿದಿನ ಮುಂಜಾನೆ ಅತೀ ಹೆಚ್ಚು ಮಾರಾಟವಾಗುತ್ತವೆ. ಯುವಜನರಿಗೆ ಪೇಪರ್‌ ಮಸಾಲೆ ದೋಸೆ ಬಲು ಇಷ್ಟವಾಗಿದ್ದು ದೊಡ್ಡ ಪ್ಲೇಟ್‌ನಲ್ಲಿ ಉದ್ದದ ದೋಸೆ ಇಟ್ಟುಕೊಂಡು ಸವಿಯುತ್ತಾರೆ. ಹಿರಿಯರಿಗೆ ಬೆಣ್ಣೆದೋಸೆ ಇಷ್ಟವಾದರೆ, ತುಪ್ಪದ ಮಸಾಲೆ ದೋಸೆಗೆ ಮರುಳಾಗದವರೇ ಇಲ್ಲ.

ಮಿನಿ ಟಿಫನ್‌: 

ಬೆಳಿಗ್ಗೆಯ ತಿಂಡಿಗೆ ಇಲ್ಲಿ ‘ಮಿನಿ ಟಿಫನ್‌‌’ ಪ್ರಸಿದ್ಧಿ ಪಡೆದಿದೆ. ಒಂದು ಇಡ್ಲಿ, ಒಂದು ವಡೆ, ಖಾರಾ ಭಾತ್‌, ಕೇಸರಿ ಭಾತ್‌, 1 ಪೂರಿ, ಒಂದು ಕಾಫಿ ಅಥವಾ ಚಹಾ ‘ಮಿನಿ ಟಿಫನ್‌‌’ನಲ್ಲಿ ಒಳಗೊಂಡಿದೆ. ಬೆಲೆ ₹ 120.

ಸಾಧಾರಣ ವಡೆಗೆ ₹ 17, ವಿಶೇಷ ವಡೆಗೆ ₹22. ಸಂಪರ್ಕ ಸಂಖ್ಯೆ: 8861399992, 9060299992

ಅವಸರದಲ್ಲಿ ಹುಟ್ಟಿತು ಮದ್ದೂರು ವಡೆ!

ಮದ್ದೂರು ವಡೆ ಹುಟ್ಟಿಕೊಂಡಿದ್ದಕ್ಕೆ ಒಂದು ರೋಚಕವಾದ ಕತೆ ಇದೆ. ಇದು 100 ವರ್ಷಗಳ ಹಿಂದಿನ ಕತೆ. ರೈಲು ನಿಲ್ದಾಣದಲ್ಲಿ ಕ್ಯಾಂಟೀನ್‌ ಇಟ್ಟಿದ್ದ ಮಧ್ವಾಚಾರ್ಯ ಹಾಗೂ ರಾಮಚಂದ್ರ ಬುದ್ದಿ ಎಂಬವರು ಪಕೋಡ ಮಾಡಿ ಮಾರಾಟ ಮಾಡುತ್ತಿದ್ದರು. ಒಂದು ದಿನ ರೈಲು ಗಾಡಿ ನಿಗದಿತ ಅವಧಿಗಿಂತ ಮುಂಚೆಯೇ ನಿಲ್ದಾಣಕ್ಕೆ ಬಂತು. ಆ ವೇಳೆಗೆ ಅವರು ಇನ್ನೂ ಪಕೋಡ ಮಾಡಿರಲಿಲ್ಲ. ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಅವಸರಕ್ಕೆ ಸಣ್ಣದಾಗಿ ಚಪ್ಪಟೆಯಾಕಾರದಲ್ಲಿ ವಡೆ ಮಾಡಿ ಮಾರಾಟ ಮಾಡಿದರು. ಆಮೇಲೆ ಗ್ರಾಹಕರು ಪ್ರತಿ ದಿನ ಅದನ್ನೇ ಕೇಳುತ್ತಿದ್ದರು. ಕಡೆಗೆ ಚಪ್ಪಟೆಯಾಕಾರದ ವಡೆಗೆ ‘ಮದ್ದೂರು ವಡೆ’ ಎಂದು ನಾಮಕರಣ ಮಾಡಿದರು.

ವಡೆ ರುಚಿ ನೋಡಿದವರು

ಜಯಚಾಮರಾಜೇಂದ್ರ ಒಡೆಯರ್‌, ಸರ್‌.ಎಂ.ವಿಶ್ವೇಶ್ವರಯ್ಯ ಅವರೇ ಮದ್ದೂರು ವಡೆಗೆ ಮನಸೋತಿದ್ದರು. ಮದ್ದೂರು ಟಿಫಾನೀಸ್‌ ಆದ ಮೇಲಂತೂ ರುಚಿ ನೋಡಿದ ಗಣ್ಯರ ಪಟ್ಟಿ ಬಲು ದೊಡ್ಡದಿದೆ. ಶಂಕರ್‌ನಾಗ್‌– ಅನಂತ್‌ನಾಗ್‌ ಅವರಂತೂ ಮದ್ದೂರು ವಡೆ ಹುಡುಕಿಕೊಂಡು ಬರುತ್ತಿದ್ದರು ಎಂಬ ನೆನಪುಗಳು ಇಲ್ಲಿವೆ. ಡಾ.ರಾಜ್‌ಕುಮಾರ್‌ಗೂ ಇಲ್ಲಿಯ ಮದ್ದೂರು ವಡೆ ಅಚ್ಚುಮೆಚ್ಚು. ಅಮೀರ್‌ ಖಾನ್‌, ಅನಿಲ್‌ ಕಪೂರ್‌, ಅನುಪಮ್‌ ಖೇರ್‌, ರಾಣಿ ಮುಖರ್ಜಿ ಮುಂತಾದ ನಟನಟಿಯರು ವಡೆ ರುಚಿ ಕಂಡಿದ್ದಾರೆ. ಕ್ರಿಕೆಟಿಗರಾದ ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ, ಸುನೀಲ್‌ ಜೋಶಿ ಅವರಿಗೂ ಇಲ್ಲಿಯ ಮದ್ದೂರು ವಡೆಯ ರುಚಿ ಗೊತ್ತಿದೆ.*

* ಮದ್ದೂರು ವಡೆಗೆ ನೂರು ವರ್ಷ ತುಂಬಿದೆ. ನಮ್ಮ ಪೂರ್ವಿಕರು ವಡೆಗೆ ವಿಶೇಷ ರೂಪ ಕೊಟ್ಟಿದ್ದಾರೆ. ಅವರು ಕೊಟ್ಟ ರುಚಿಯನ್ನು ಸ್ವಲ್ಪವೂ ವ್ಯತ್ಯಾಸವಾಗದಂತೆ ಮುನ್ನಡೆಸಿಕೊಂಡು ಹೋಗುತ್ತಿದ್ದೇನೆ. ನಮ್ಮ ಹೋಟೆಲ್‌ಗೆ ಗ್ರಾಹಕರ ಬಲ ಬಲುದೊಡ್ಡರು–ಡಿ.ಎನ್‌.ಚತುರ, ಮದ್ದೂರು ಟಿಫಾನೀಸ್‌ ಮಾಲೀಕರು

 

Tags: 

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !