ಸೋತವರು ಹೇಳಿದರೆ ‘ಸೋಲಿಸಿದವರ’ ವಿರುದ್ಧ ಕ್ರಮ!

7
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ ಹೇಳಿಕೆ

ಸೋತವರು ಹೇಳಿದರೆ ‘ಸೋಲಿಸಿದವರ’ ವಿರುದ್ಧ ಕ್ರಮ!

Published:
Updated:
ಜಗದೇವ ಗುತ್ತೇದಾರ

ಕಲಬುರ್ಗಿ: ‘ಕೆಲ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ನಾಯಕರು ಸರಿಯಾಗಿ ಕೆಲಸ ಮಾಡದ ಕಾರಣ ಅಲ್ಲಿ ಸೋಲಾಗಿದೆ. ನನ್ನ ಸೋಲಿಗೆ ಇವರೇ ಕಾರಣ ಎಂದು ಸೋತ ಅಭ್ಯರ್ಥಿಗಳು ವರದಿ ನೀಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ ಹೇಳಿದರು.

‘ತಮಗೆ ಟಿಕೆಟ್‌ ಕೊಡಲಿಲ್ಲ, ಸರ್ಕಾರ ಇದ್ದಾಗ ಸೂಕ್ತಸ್ಥಾನಮಾನ ನೀಡಲಿಲ್ಲ ಎಂದು ಕೆಲ ನಾಯಕರು ಅಸಮಾಧಾನಗೊಂಡಿದ್ದರು. ಸೋಲಿನ ಪರಾಮರ್ಶೆ ಸಭೆಯಲ್ಲಿ ಈ ಅಂಶದ ಚರ್ಚೆಯೂ ನಡೆದಿದೆ. ಅಂಥವರ ಬಗ್ಗೆ ವರದಿ ಸಲ್ಲಿಸುವಂತೆ ಸೋತ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ’ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ನಾವೆಲ್ಲ ವಿಫಲರಾಗಿದ್ದೇವೆ. ಅದಕ್ಕೆ ನಾವೆಲ್ಲರೂ ಕಾರಣ’ ಎಂದೂ ಅವರು ಪ್ರತಿಕ್ರಿಯಿಸಿದರು.

‘ಅತಿಯಾದ ಆತ್ಮವಿಶ್ವಾಸ ಹಾಗೂ ಎದುರಾಳಿ ಅಭ್ಯರ್ಥಿ ಬಗ್ಗೆ ಜನರಲ್ಲಿ ಇದ್ದ ಅನುಕಂಪ ಡಾ.ಶರಣಪ್ರಕಾಶ ಪಾಟೀಲರ ಸೋಲಿಗೆ ಕಾರಣವಾಯಿತು. ಬಿಜೆಪಿ ಅಭ್ಯರ್ಥಿ ನಾನು ವಿಷ ತಗೋತಿನಿ, ಹೆಂಡತಿ ಸಾಯ್ತಾಳೆ ಎಂದು ಹೇಳಿ ಅನುಕಂಪ ಗಿಟ್ಟಿಸಿಕೊಂಡರು’ ಎಂದು ಅವರು ಹೇಳಿದರು.

ಇನ್ನೊಂದು ಸಚಿವ ಸ್ಥಾನಕ್ಕೆ ಬೇಡಿಕೆ: ‘ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಪಾಲಿನ ಆರು ಸಚಿವ ಸ್ಥಾನ ಖಾಲಿ ಇದ್ದು, ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಕೊಡಿ ಎಂದು ಕೇಳಿದ್ದೇವೆ. ಜೇವರ್ಗಿ ಶಾಸಕ ಡಾ.ಅಜಯ್‌ ಸಿಂಗ್‌, ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ, ಕಲಬುರ್ಗಿ ಉತ್ತರ ಶಾಸಕಿ ಕನ್ನೀಜ್‌ ಫಾತಿಮಾ ಅವರಿಗೂ ಸಚಿವ ಸ್ಥಾನ ನೀಡುವಂತೆ ಅವರ ಬೆಂಬಲಿಗರು ಕೇಳುತ್ತಿದ್ದಾರೆ. ಹೀಗಾಗಿ ಇವರಿಗೇ ಸಚಿವ ಸ್ಥಾನ ನೀಡಿ ಎಂದು ಹೇಳಲು ಆಗುವುದಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

‍ಪಕ್ಷದ ಮುಖಂಡರಾದ ಭಾಗನಗೌಡ ಪಾಟೀಲ, ಅಲ್ಲಮಪ್ರಭು ಪಾಟೀಲ, ಸಿ.ಬಿ. ಪಾಟೀಲ ಓಕುಳಿ, ನಾರಾಯಣರಾವ ಕಾಳೆ, ಭೀಮರಾವ ಟಿ.ಟಿ., ದೇವೀಂದ್ರಪ್ಪ, ಬಾಬುರಾವ್‌ ಇದ್ದರು.

ಸಚಿವ, ಶಾಸಕರಿಗೆ ಸನ್ಮಾನ ನಾಳೆ

ಜಿಲ್ಲಾ ಕಾಂಗ್ರೆಸ್‌ನಿಂದ ಜೂನ್‌ 29ರಂದು ಸಂಜೆ 6 ಗಂಟೆಗೆ ಇಲ್ಲಿಯ ಡಾ.ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಸಚಿವರು ಮತ್ತು ಶಾಸಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಜಗದೇವ ಗುತ್ತೇದಾರ ತಿಳಿಸಿದರು.

ಸಮಾಜ ಕಲ್ಯಾಣ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಪ್ರಿಯಾಂಕ್‌ ಖರ್ಗೆ ಅಂದು ಸೇಡಂ ಮಾರ್ಗವಾಗಿ ನಗರಕ್ಕೆ ಬರಲಿದ್ದಾರೆ. ಗುಲಬುರ್ಗಾ ವಿಶ್ವವಿದ್ಯಾಲಯದ ದ್ವಾರದಿಂದ ಬೈಕ್‌ ರ‍್ಯಾಲಿಯಲ್ಲಿ ಅವರನ್ನು ನಗರೇಶ್ವರ ಶಾಲೆಯ ವರೆಗೆ ಕರೆತರಲಾಗುವುದು. ಮಹಿಳಾ ಕಾಂಗ್ರೆಸ್‌ನವರು ಅಲ್ಲಿ ಆರತಿ ಬೆಳಗಲಿದ್ದು, ಅಲ್ಲಿಂದ ರಂಗಮಂದಿರದ ವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಗುವುದು ಎಂದರು.

ಶಾಸಕರಾದ ಎಂ.ವೈ.ಪಾಟೀಲ, ಡಾ.ಅಜಯ್‌ ಸಿಂಗ್‌, ಡಾ.ಉಮೇಶ ಜಾಧವ, ಕನ್ನೀಜ್‌ ಫಾತಿಮಾ, ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಡಾ.ಚಂದ್ರಶೇಖರ ಪಾಟೀಲ, ಅರವಿಂದ ಅರಳಿ, ರಾಜ್ಯಸಭಾ ಸದಸ್ಯ ಬಳ್ಳಾರಿಯ ನಾಸೀರ್‌ ಹುಸೇನ್‌, ಎಐಸಿಸಿ ಕಾರ್ಯದರ್ಶಿ ಸಾಕೆ ಸೈಜಲನಾಥ ಅವರನ್ನೂ ಸನ್ಮಾನಿಸಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !