ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉ.ಪ್ರ ಬಿಜೆಪಿ ಕಾರ್ಯಕಾರಿಣಿ: ರೈತ ಹೋರಾಟ, ಮತಾಂತರ, ಜಿಹಾದ್‌ ಕುರಿತು ಚರ್ಚೆ

Last Updated 16 ಜುಲೈ 2021, 15:21 IST
ಅಕ್ಷರ ಗಾತ್ರ

ಲಖನೌ: ರೈತರ ಪ್ರತಿಭಟನೆ, ಜಿಹಾದಿ ಅಂಶಗಳಿಂದ ರಾಷ್ಟ್ರೀಯ ಭದ್ರತೆಗೆ ಅಪಾಯಗಳು, ಮತಾಂತರ, ರಾಜ್ಯ ಸರ್ಕಾರ ಮತ್ತು ಪಕ್ಷದ ಸಂಘಟನೆಯ ನಡುವೆ ಉತ್ತಮ ಹೊಂದಾಣಿಕೆ... ಇವೇ ಮೊದಲಾದ ವಿಚಾರಗಳು ಲಖನೌನಲ್ಲಿ ನಡೆಯುತ್ತಿರುವ ಉತ್ತರ ಪ್ರದೇಶ ಬಿಜೆಪಿ ಕಾರ್ಯಕಾರಿಣಿ ಸಭೆಯ ಮೊದಲ ದಿನದಲ್ಲಿ ಚರ್ಚೆಯಾಗಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ಹೊಗಳಿದರು. ರಾಜ್ಯದಲ್ಲಿ ಕಾನೂನು ವ್ಯವಸ್ಥೆಯನ್ನು ಮರಳಿ ಸ್ಥಾಪಿಸಿದ್ದು, ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದನ್ನು ಶ್ಲಾಘಿಸಿದರು. ಲಖನೌನಲ್ಲಿ ಕೆಲವು ಅಲ್-ಖೈದಾ ಭಯೋತ್ಪಾದಕರನ್ನು ಬಂಧಿಸಿದ ವಿಚಾರವಾಗಿ ನಡ್ಡಾ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಕೊಂಡಾಡಿದರು. ಭಯೋತ್ಪಾದನಾ ಚಟುವಟಿಕೆಗಳು ರಾಷ್ಟ್ರೀಯ ಭದ್ರತೆಗೆ ಗಂಭೀರ ಅಪಾಯವನ್ನುಂಟುಮಾಡಿದೆ ಎಂದು ಅವರು ಇದೇ ವೇಳೆ ಹೇಳಿದರು.

ಉತ್ತರ ಪ್ರದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕವನ್ನು ಅಸಮರ್ಪಕವಾಗಿ ನಿರ್ವಹಿಸಿದ ಪರಿಣಾಮದ ಬಗ್ಗೆ ಎಚ್ಚರವಹಿಸಿದ ನಡ್ಡಾ, ಲಸಿಕಾ ಅಭಿಯಾನದಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಮೂಲಕ ಜನರು ಲಸಿಕೆ ಪಡೆಯುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಬ್ಲಾಕ್ ಪ್ರಮುಖ್ ಚುನಾವಣೆಗಳಲ್ಲಿ ಬಿಜೆಪಿ ಸಾಧಿಸಿದ ಮುನ್ನಡೆಯ ಲಯವನ್ನು ಕಾಪಾಡಿಕೊಳ್ಳಬೇಕೆಂದು ಅವರು ಪಕ್ಷದ ಮುಖಂಡರಿಗೆ ತಿಳಿಸಿದರು.

ವಿಜೇತ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಬ್ಲಾಕ್ ಪ್ರಮುಖ್‌ರನ್ನು ಸನ್ಮಾನಿಸಲಾಗುತ್ತದೆ ಎಂದೂ ನಡ್ಡಾ ಹೇಳಿದರು.

ಸಭೆಯ ಅಂತ್ಯದಲ್ಲಿ ಮಾತನಾಡಿದ ಆದಿತ್ಯನಾಥ್, 'ಜಿಹಾದಿ'ಗಳು ಕಿವುಡ ಮತ್ತು ಮೂಕ ಮಕ್ಕಳನ್ನು ಮತಾಂತರ ಮಾಡುವ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದರು.

‘ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಪ್ರತಿಪಕ್ಷಗಳು ಯಾವಾಗಲೂ ರಾಜಿ ಮಾಡಿಕೊಳ್ಳುತ್ತಲೇ ಇರುತ್ತವೆ. ಅವರು ದೇಶದ ತನಿಖಾ ಸಂಸ್ಥೆಗಳನ್ನೇ ಪ್ರಶ್ನಿಸುತ್ತಿದ್ದಾರೆ,‘ ಎಂದು ಆದಿತ್ಯನಾಥ್ ಪ್ರತಿಪಾದಿಸಿದರು.

ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ಮತ್ತು ವ್ಯಾಕ್ಸಿನೇಷನ್ ಕುರಿತ ಪ್ರತಿಪಕ್ಷಗಳ ಅಪಪ್ರಚಾರಗಳಿಗೆ ಕಾರ್ಯಕರ್ತರು ಕಿವಿಗೊಡಬಾರದು ಎಂದೂ ಆದಿತ್ಯನಾಥ್‌ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT