ಶನಿವಾರ, ಜುಲೈ 24, 2021
22 °C

ಮಾಸ್ಕ್‌ ಇಲ್ಲದೇ ಮಾರುಕಟ್ಟೆ, ಪ್ರವಾಸಿ ತಾಣಗಳಲ್ಲಿ ಜನಜಾತ್ರೆ: ಪ್ರಧಾನಿ ಕಳವಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಾರುಕಟ್ಟೆ ಮತ್ತು ಪ್ರವಾಸಿ ತಾಣಗಳಲ್ಲಿ ಮಾಸ್ಕ್ ಧರಿಸದೇ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳದೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿರುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 

’ಇದು ಆತಂಕ ಸೃಷ್ಟಿಸುವ ವಿಷಯವಾಗಿದ್ದು, ನಾಗರಿಕರು ಯಾವುದೇ ಕಾರಣಕ್ಕೂ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಬಾರದು. ಎಲ್ಲ ನಿಯಮಗಳನ್ನೂ ಕಡ್ಡಾಯವಾಗಿ ಪಾಲಿಸಬೇಕು’ ಎಂದು ಅವರು ಮನವಿ ಮಾಡಿದರು.

ಈಶಾನ್ಯ ರಾಜ್ಯಗಳ ಎಂಟು ಮುಖ್ಯಮಂತ್ರಿಗಳೊಂದಿಗೆ ಮಂಗಳವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದ ಪ್ರಧಾನಿಯವರು, ’ಸಾಂಕ್ರಾಮಿಕದ ಮೂರನೇ ಅಲೆಯ ವಿರುದ್ಧ ಹೋರಾಡಲು ತ್ವರಿತಗತಿಯಲ್ಲಿ ಕೋವಿಡ್‌ ಲಸಿಕೆ ಪ್ರಕ್ರಿಯೆಯನ್ನು ಮುಂದುವರಿಸಬೇಕು’ ಎಂದು ಹೇಳಿದರು.

’ಕೊರೊನಾ ಸಾಂಕ್ರಾಮಿಕದಿಂದಾಗಿ ಪ್ರವಾಸೋದ್ಯಮ ಮತ್ತು ಇನ್ನಿತರ ವ್ಯಾಪಾರ ವಹಿವಾಟಿನ ಮೇಲೆ ತೀವ್ರ ತರಹದ ಪರಿಣಾಮ ಬೀರಿದೆ ಎಂಬುದು ನಿಜ. ಹಾಗೆಂದು, ಪ್ರವಾಸಿ ತಾಣಗಳಲ್ಲಿ, ಮಾರುಕಟ್ಟೆಗಳಲ್ಲಿ ಕೋವಿಡ್‌ ನಿಯಮಗಳನ್ನು ಪಾಲಿಸದೇ, ಇಷ್ಟು ದೊಡ್ಡ ಪ್ರಮಾಣದಲ್ಲಿ ಜನ ಸೇರುವುದು ಸರಿಯಾದ ಕ್ರಮವಲ್ಲ’ ಎಂದು ಪ್ರಧಾನಿ ಎಚ್ಚರಿಸಿದರು. ’ಕೋವಿಡ್‌ ಸಾಂಕ್ರಾಮಿಕದ ಮೂರನೇ ಅಲೆಯ ವಿರುದ್ಧ ನಾವೆಲ್ಲ ಒಗ್ಗಟ್ಟಿನಿಂದ ಹೋರಾಡುವ ಅಗತ್ಯವಿದೆ’ ಎಂದು ಕರೆ ನೀಡಿದರು.

ಕೋವಿಡ್‌ ಸಾಂಕ್ರಾಮಿಕದ ಪ್ರತಿ ಅಲೆಯನ್ನೂ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಿ ಹೇಳಿದ ಅವರು, ’ವೈರಸ್‌ ರೂಪಾಂತರಗೊಂಡ ನಂತರ ಅದು ಯಾವ ರೀತಿ ವರ್ತಿಸುತ್ತದೆ ಎಂಬುದರ ಬಗ್ಗೆ ತಜ್ಞರು ನಿರಂತರವಾಗಿ ಅಧ್ಯಯನ ಮಾಡುತ್ತಿದ್ದಾರೆ. ಆದರೆ, ಇಂಥ ಕಠಿಣ ಪರಿಸ್ಥಿತಿಯಲ್ಲಿ ರೋಗ ನಿಯಂತ್ರಣ ಮತ್ತು ಚಿಕಿತ್ಸೆ ಬಹಳ ಮುಖ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

’ಕೋವಿಡ್‌–19’ ಸೋಂಕು ಪರೀಕ್ಷೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಮೂಲಸೌಕರ್ಯ ಸುಧಾರಣೆಯತ್ತ ಹೆಜ್ಜೆ ಹಾಕಬೇಕಿದೆ. ಈ ಸಂಬಂಧ ಇತ್ತೀಚೆಗೆ ₹23 ಸಾವಿರ ಕೋಟಿ ಪ್ಯಾಕೇಜ್‌ಗೆ ಅನುಮೋದನೆ ಸಂಪುಟ ಅನುಮೋದನೆ ನೀಡಿದೆ. ಈಶಾನ್ಯ ರಾಜ್ಯಗಳಲ್ಲಿರುವ ಪ್ರತಿ ರಾಜ್ಯವೂ ಈ ಪ್ಯಾಕೇಜ್‌ನಿಂದ ಸಹಾಯ ಪಡೆಯುವ ಮೂಲಕ ಆರೋಗ್ಯ ಸೌಕರ್ಯವನ್ನು ಬಲವರ್ಧನೆಗೊಳಿಸಬೇಕು’ ಎಂದು ಪ್ರಧಾನಿ ತಿಳಿಸಿದರು.

ಈಶಾನ್ಯ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಹೇಳಿದ ಪ್ರಧಾನಿಯವರು, ಸಂಬಂಧಿಸಿದ ರಾಜ್ಯಗಳ ಮುಖ್ಯಮಂತ್ರಿಗಳು ಈ ಬಗ್ಗೆ ಎಚ್ಚರವಹಿಸಬೇಕು. ಯಾವ ಜಿಲ್ಲೆಯಲ್ಲಿ ಏನಾಗುತ್ತಿದೆ ಎಂಬುದನ್ನು ಪರಿಶೀಲಿಸಿ, ತ್ವರಿತಗತಿಯಲ್ಲಿ ಕ್ರಮ ಕೈಗೊಂಡು, ಸೋಂಕು ಹರಡುವುದನ್ನು ನಿಯಂತ್ರಿಸಬೇಕು’ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಅಸ್ಸಾಂ, ನಾಗಾಲ್ಯಾಂಡ್‌, ತ್ರಿಪುರಾ, ಸಿಕ್ಕಿಂ, ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ರಾಜ್ಯದ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಪ್ರಧಾನಿಯವರೊಂದಿಗೆ ಗೃಹ ಸಚಿವ ಅಮಿತ್‌ ಶಾ ಮತ್ತು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಮತ್ತಿತರರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು