ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100ನೇ ವರ್ಷಕ್ಕೆ ತಾಯಿ ಹೀರಾಬೆನ್: ಪ್ರಧಾನಿ ಮೋದಿ ಭಾವನಾತ್ಮಕ ಬರಹ

ಅಕ್ಷರ ಗಾತ್ರ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರು ಇಂದು (ಜೂನ್ 18) 100 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಜೀವನದಲ್ಲಿ ಅಮ್ಮನ ಪಾತ್ರದ ಕುರಿತಂತೆ ಮೋದಿ, ಭಾವನಾತ್ಮಕಸಂದೇಶವನ್ನು ಬರೆದಿದ್ದಾರೆ.


‘ಮಾತೆ ಎಂಬುದು ಕೇವಲ ಪದವಲ್ಲ. ಭಾವನಾತ್ಮಕ ವಿಷಯವಾಗಿದೆ. ಇಂದು ಜೂನ್ 18, ನನ್ನ ತಾಯಿ ಹೀರಾಬಾ 100 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.ಈ ವಿಶೇಷ ದಿನದಂದು ನಾನು ಸಂತೋಷ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಕೆಲವು ವಿಚಾರಗಳನ್ನು ಬರೆದಿದ್ದೇನೆ’ ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ತಮ್ಮ ಬರಹದಲ್ಲಿ ಪ್ರಧಾನಿ ಮೋದಿ, ತಾಯಿ ಹೀರಾಬೆನ್ ಅವರನ್ನು ಅತ್ಯಂತ ಸರಳ, ಆದರೆ ಅಸಾಮಾನ್ಯ ಮಹಿಳೆ ಎಂದು ಬಣ್ಣಿಸಿದ್ದಾರೆ. ನನ್ನ ತಾಯಿ ಚಿಕ್ಕವರಿದ್ದಾಗಲೇ ಅವರ ತಾಯಿಯನ್ನು ಕಳೆದುಕೊಂಡಿದ್ದರು. ಜೀವನದಲ್ಲಿ ಅನೇಕ ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ. ಅದರಿಂದಾಗಿಯೇ ಅವರು ಹೆಚ್ಚು ದೃಢವಾಗಿ ಹೊರಹೊಮ್ಮಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ತಾಯಿಯೊಂದಿಗೆ ಕಳೆದ ಬಾಲ್ಯದ ಕೆಲವು ವಿಶೇಷ ಕ್ಷಣಗಳನ್ನು ಮೋದಿ ಮೆಲುಕು ಹಾಕಿದ್ದಾರೆ. ತಮ್ಮ ಬೆಳವಣಿಗೆ ಹಂತದಲ್ಲಿ ತಾಯಿ ಮಾಡಿದ ಹಲವಾರು ತ್ಯಾಗಗಳನ್ನು ಅವರು ನೆನಪಿಸಿಕೊಂಡಿದ್ದಾರೆ ಮತ್ತು ತಮ್ಮ ಮನಸ್ಸು, ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸವನ್ನು ರೂಪಿಸಿದ ಅವರ(ತಾಯಿ) ವಿವಿಧ ಗುಣಗಳನ್ನು ಪ್ರಸ್ತಾಪಿಸಿದ್ದಾರೆ.

ವಡ್ನಗರದಲ್ಲಿದ್ದ ಮಣ್ಣಿನ ಗೋಡೆಗಳು ಮತ್ತು ಹೆಂಚಿನ ಪುಟ್ಟ ಮನೆಯಲ್ಲಿ ತಮ್ಮ ಹೆತ್ತವರು ಮತ್ತು ಒಡಹುಟ್ಟಿದವರೊಂದಿಗೆ ಕಳೆದ ಜೀವನವನ್ನು ನೆನಪಿಸಿಕೊಂಡಿದ್ದಾರೆ. ಮನೆಯ ಎಲ್ಲಾ ಕೆಲಸಗಳನ್ನು ತಾನೇ ಮಾಡುತ್ತಿದ್ದ ತಾಯಿ, ಮನೆಯ ಖರ್ಚಿಗಾಗಿ ಆದಾಯ ತರಲು ಹೊರಗಡೆ ದುಡಿಯುತ್ತಿದ್ದರು. ಸಮೀಪದ ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದರು ಮತ್ತು ಚರಕ ತಿರುಗಿಸುವ ಕಾಯಕ ಸಹ ಮಾಡುತ್ತಿದ್ದರು ಎಂದು ಮೋದಿ ಹೇಳಿದ್ದಾರೆ.

‘ಮಳೆಗಾಲದಲ್ಲಿ ನಮ್ಮ ಮನೆಯ ಮೇಲ್ಛಾವಣಿ ಸೋರಿ ಮನೆಗೆ ನೀರು ಬರುತ್ತಿತ್ತು. ಮಳೆನೀರನ್ನು ಸಂಗ್ರಹಿಸಲು ತಾಯಿ ಬಕೆಟ್ ಮತ್ತು ಪಾತ್ರೆಗಳನ್ನು ಇಡುತ್ತಿದ್ದರು. ಅಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ತಾಯಿ ಸ್ಥೈರ್ಯದ ಪ್ರತೀಕವಾಗಿದ್ದರು’ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡರು.

ಔಪಚಾರಿಕವಾಗಿ ಶಿಕ್ಷಣ ಪಡೆಯದೆ ಕಲಿಯಲು ಸಾಧ್ಯ ಎಂದು ತಾಯಿ ನನಗೆ ಅರಿವು ಮೂಡಿಸಿದರು. ‘ಅವರ ಆಲೋಚನಾ ಪ್ರಕ್ರಿಯೆ ಮತ್ತು ದೂರದೃಷ್ಟಿಯ ಚಿಂತನೆಯು ಯಾವಾಗಲೂ ನನ್ನನ್ನು ಆಶ್ಚರ್ಯಗೊಳಿಸುತ್ತದೆ’ ಎಂದು ಅವರು ಬರೆದುಕೊಂಡಿದ್ದಾರೆ.

ತಮ್ಮ ತಾಯಿಯ ಅತ್ಯಂತ ಸರಳ ಜೀವನಶೈಲಿಯನ್ನು ಒತ್ತಿ ಹೇಳಿರುವ ಪ್ರಧಾನಿ ಮೋದಿ, ಇಂದಿಗೂ ಸಹ ತಮ್ಮ ತಾಯಿಯ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲ ಎಂದು ಬರೆದಿದ್ದಾರೆ. ‘ಅವರು ಯಾವುದೇ ಚಿನ್ನದ ಆಭರಣ ಧರಿಸಿರುವುದನ್ನು ನಾನು ನೋಡಿಲ್ಲ ಮತ್ತು ಅವರಿಗೆ ಅವುಗಳ ಬಗ್ಗೆಆಸಕ್ತಿಯೂ ಇಲ್ಲ. ಮೊದಲಿನಂತೆಯೇ, ಅವರು ತನ್ನ ಸಣ್ಣ ಕೋಣೆಯಲ್ಲಿ ಅತ್ಯಂತ ಸರಳವಾದ ಜೀವನಶೈಲಿಯನ್ನು ಮುಂದುವರಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ತಮ್ಮ ತಾಯಿ ಜೊತೆಗಿನ ಎರಡು ಸಾರ್ವಜನಿಕ ನಿದರ್ಶನಗಳನ್ನು ಮೋದಿ ಹೈಲೈಟ್ ಮಾಡಿದ್ದಾರೆ. ಒಮ್ಮೆ, ಅಹಮದಾಬಾದ್‌ನಲ್ಲಿ ಸಾರ್ವಜನಿಕ ಸಮಾರಂಭವಿತ್ತು. ಶ್ರೀನಗರದಲ್ಲಿ ಏಕತಾ ಯಾತ್ರೆಯನ್ನು ಮುಗಿಸಿ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಹಿಂದಿರುಗಿದ ನಂತರ ಅವರು ನನ್ನ ಹಣೆಗೆ ತಿಲಕವನ್ನು ಹಚ್ಚಿದ್ದರು. ಎರಡನೆಯದಾಗಿ 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣವಚನ ಸ್ವೀಕರಿಸಿದಾಗ ತಾಯಿ ಜೊತೆಗಿದ್ದರು ಎಂದು ಹೇಳಿದ್ದಾರೆ.

ಇಂದು ಮುಂಜಾನೆ ಪ್ರಧಾನಿ ಮೋದಿ ಅವರು, ತಮ್ಮ ತಾಯಿಯನ್ನು ಗಾಂಧಿನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು. ಅವರ 100 ನೇ ಹುಟ್ಟುಹಬ್ಬವನ್ನು ಆಚರಿಸಿದರು ಮತ್ತು ಈ ವಿಶೇಷ ಸಂದರ್ಭದಲ್ಲಿ ಅವರಿಂದ ಆಶೀರ್ವಾದ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT