ಗುರುವಾರ , ಮಾರ್ಚ್ 23, 2023
30 °C

ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು: ದ್ರೌಪದಿ ಮುರ್ಮು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂದಿನ 25 ವರ್ಷಗಳಲ್ಲಿ ಗತ ವೈಭವವನ್ನು ನೆನಪಿಸುವ ಮತ್ತು ಆಧುನಿಕತೆಯ ಪ್ರತಿ ಸುವರ್ಣ ಅಧ್ಯಾಯವನ್ನು ಒಳಗೊಂಡಿರುವ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಮಾಡುವ ದೃಷ್ಟಿಯಿಂದ ಪ್ರತಿಯೊಬ್ಬ ಭಾರತೀಯನೂ ತಮ್ಮ ಕೈಲಾದಷ್ಟು ಶ್ರಮ ಹಾಕಿ ಪ್ರಯತ್ನಿಸಬೇಕೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ಚೊಚ್ಚಲ ಭಾಷಣದಲ್ಲಿ, ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದಿಂದ ಶತಮಾನೋತ್ಸವದವರೆಗಿನ 25 ವರ್ಷಗಳ ಅವಧಿಯನ್ನು ಸರ್ಕಾರ ಅಭಿವೃದ್ಧಿಯ 'ಅಮೃತ ಕಾಲ' ಎಂದು ಸರ್ಕಾರ ಬಣ್ಣಿಸಿದೆ. ಈ ಸಮಯವು 'ಆತ್ಮನಿರ್ಭರ' (ಸ್ವಾವಲಂಬಿ) ದೇಶದ ನಿರ್ಮಾಣ ಮತ್ತು ಅದರ ಮಾನವೀಯ ಜವಾಬ್ದಾರಿಗಳನ್ನು ಪೂರೈಸುವ ಅವಧಿಯಾಗಿದೆ ಎಂದು ಮುರ್ಮು ಹೇಳಿದರು.

ಈ ಸಮಯವು ಭಾರತವನ್ನು ಬಡತನದಿಂದ ಮುಕ್ತಗೊಳಿಸುವ ಮತ್ತು ದೇಶವನ್ನು ಮುನ್ನಡೆಸುವ ಯುವಕರು, ಮಹಿಳೆಯರು ಮತ್ತು ಮಧ್ಯಮ ವರ್ಗವನ್ನು ಸಮೃದ್ಧಗೊಳಿಸುವ ಅವಧಿಯಾಗಿದೆ ಎಂದು ಅವರು ಹೇಳಿದರು.

ದೇಶವು ಇಂದು ನಿರ್ಭೀತ, ಖಚಿತ ನಿರ್ಧಾರಗಳನ್ನು ಕೈಗೊಳ್ಳುವ ಸರ್ಕಾರವನ್ನು ಹೊಂದಿದೆ. ನರೇಂದ್ರ ಮೋದಿ ನೇತೃತ್ವದ 9 ವರ್ಷಗಳ ಸರ್ಕಾರದ ಅವಧಿಯಲ್ಲಿ ದೇಶವು ಹಲವು ಧನಾತ್ಮಕ ಬದಲಾವಣೆಗಳನ್ನು ಕಂಡಿದೆ. ದೊಡ್ಡ ಬದಲಾವಣೆ ಎಂದರೆ, ಪ್ರತಿಯೊಬ್ಬ ಭಾರತೀಯರಲ್ಲೂ ಆತ್ಮವಿಶ್ವಾಸ ಉತ್ತುಂಗಕ್ಕೆ ಏರಿದೆ. ಜಗತ್ತು ಭಾರತದತ್ತ ನೋಡುವ ಮನಸ್ಥಿತಿ ಬದಲಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತವು ಈ ಮೊದಲು ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಬೇರೆ ದೇಶಗಳ ಮೇಲೆ ಅವಲಂಬಿತವಾಗಿತ್ತು. ಆದರೆ, ಈಗ ಬೇರೆ ದೇಶಗಳು ಜಾಗತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಭಾರತದ ಮೇಲೆ ಅವಲಂಬಿತವಾಗಿವೆ ಎಂದು ಅವರು ಹೇಳಿದ್ದಾರೆ.

ದಶಕಗಳಿಂದ ಕೊರತೆ ಇದ್ದ ಮೂಲಭೂತ ಸೌಕರ್ಯಗಳನ್ನು ಜನರಿಗೆ ನೀಡಲಾಗುತ್ತಿದೆ. ಬಹಳ ದಿನಗಳಿಂದ ಸಮಾಜವು ನಿರೀಕ್ಷಿಸುತ್ತಿದ್ದ ಆಧುನಿಕ ಮೂಲ ಸೌಕರ್ಯವನ್ನು ದೇಶದಾದ್ಯಂತ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು