ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಶ್ನಿ ಕಾಯ್ದೆ: ಒತ್ತುವರಿದಾರರನ್ನು ಹೊರದಬ್ಬಲು ಸಿದ್ಧತೆ

Last Updated 26 ನವೆಂಬರ್ 2020, 11:31 IST
ಅಕ್ಷರ ಗಾತ್ರ

ಶ್ರೀನಗರ: ವಿವಾದಾತ್ಮಕ ರೋಶ್ನಿ ಕಾಯ್ದೆಯಡಿ ನೀಡಲಾಗಿರುವ ಎಲ್ಲ ಭೂಮಿಯನ್ನು ಮತ್ತೆ ಸ್ವಾಧೀನಕ್ಕೆ ಪಡೆಯಲು ಹಾಗೂ ಈ ಭೂಮಿಯ ಒತ್ತುವರಿದಾರರನ್ನು ಹೊರದಬ್ಬಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸಿದ್ಧತೆ ನಡೆಸಿದೆ.

₹25 ಸಾವಿರ ಕೋಟಿ ಮೊತ್ತದ ಈ ರೋಶ್ನಿ ಹಗರಣದಡಿ, ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ, ಅವರ ಕುಟುಂಬ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌, ಪಿಡಿಪಿ, ಕಾಂಗ್ರೆಸ್‌ನ ಮಾಜಿ ಸಚಿವರು ಮತ್ತು ಐಎಎಸ್‌, ಐಪಿಎಸ್‌ ಅಧಿಕಾರಿಗಳು, ಖ್ಯಾತ ಉದ್ಯಮಿಗಳು ಇದರ ಫಲಾನುಭವಿಗಳಾಗಿದ್ದರು. ಫಲಾನುಭವಿಗಳ ಹೆಸರನ್ನು ಘೋಷಿಸಿದ ಬಳಿಕ ನ್ಯಾಯಾಲಯದ ನಿರ್ದೇಶನದಂತೆ, ಇದೀಗ ಆ ಭೂಮಿಯಲ್ಲಿರುವ ಒತ್ತುವರಿದಾರರನ್ನು ಹೊರಹಾಕಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಫಲಾನುಭವಿಗಳ ಹೆಸರನ್ನು ಸರ್ಕಾರವು ಇತ್ತೀಚೆಗಷ್ಟೇ ಘೋಷಿಸಿತ್ತು.

‘ಯೋಜನೆಯಲ್ಲಾದ ಹಗರಣದ ಕುರಿತು ಸಿಬಿಐ ತನಿಖೆ ನಡೆಸುತ್ತಿದ್ದು, ಇಲ್ಲಿಯವರೆಗೂ ಏಳು ಎಫ್‌ಐಆರ್‌ಗಳನ್ನು ತನಿಖಾ ಸಂಸ್ಥೆಯು ದಾಖಲಿಸಿದೆ. ಜಮ್ಮು ಮತ್ತು ಕಾಶ್ಮೀರದ ಖ್ಯಾತರು ಹಾಗೂ ಶ್ರೀಮಂತರು ಇದರ ಫಲಾನುಭವಿಗಳಾಗಿರುವುದರಿಂದ ಮುಖ್ಯಕಾರ್ಯದರ್ಶಿಯೇ ಈ ವಿಷಯದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

2001ರಲ್ಲಿ ಅಧಿಕಾರದಲ್ಲಿದ್ದ ನ್ಯಾಷನಲ್‌ ಕಾ‌ನ್ಫರೆನ್ಸ್‌ ಸರ್ಕಾರವು ರೋಶ್ನಿ ಕಾಯ್ದೆಯನ್ನು ಜಾರಿಗೊಳಿಸಿತ್ತು. ಒತ್ತುವರಿಯಾದ ಸಾರ್ವಜನಿಕ ಭೂಮಿಯನ್ನು ಅಲ್ಲಿ ವಾಸಿಸುತ್ತಿರುವ ಜನರಿಂದ ಹಿಂಪಡೆಯಲು ಸಾಧ್ಯವಿಲ್ಲ. ಹೀಗಾಗಿ ಅನಧಿಕೃತವಾಗಿ ರಾಜ್ಯದ ಭೂಮಿಯಲ್ಲಿರುವವರು, ಅದರ ಮಾರುಕಟ್ಟೆ ದರವನ್ನು ನೀಡಿ ಮಾಲೀಕತ್ವವನ್ನು ಪಡೆಯಲು ಅನುಕೂಲವಾಗುವಂತೆ ಈ ಕಾಯ್ದೆ ಜಾರಿಗೊಳಿಸಲಾಗಿತ್ತು. ಒತ್ತುವರಿಯಾದ ಭೂಮಿಯ ವರ್ಗಾವಣೆಯಿಂದ2007ರಿಂದ 2013ರವರ ಅವಧಿಯಲ್ಲಿ ₹25 ಸಾವಿರ ಕೋಟಿ ಸಂಗ್ರಹಿಸುವ ಗುರಿ ಇದ್ದರೂ, ಕೇವಲ ₹76 ಕೋಟಿ ಸಂಗ್ರಹವಾಗಿದೆ ಎಂದು 2014ರ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಕಳೆದ ನ.1ರಂದು ಕೇಂದ್ರಾಡಳಿತವು ರೋಶ್ನಿ ಕಾಯ್ದೆಯಡಿ ವರ್ಗಾವಣೆಯಾದ ಎಲ್ಲ ಭೂಮಿಯ ವರ್ಗಾವಣೆಗಳನ್ನು ರದ್ದುಗೊಳಿಸಿತ್ತು. ಕಾಯ್ದೆಯಡಿ ಇರುವ ಎಲ್ಲ ಭೂಮಿಗಳನ್ನು ಸ್ವಾಧೀನಪಡಿಸಿಕೊಳ್ಳಲು ರೂಪುರೇಷೆ ಸಿದ್ಧಪಡಿಸುವಂತೆ ಪ್ರಧಾನ ಕಾರ್ಯದರ್ಶಿಗೆ ಹಾಗೂ ಕಂದಾಯ ಇಲಾಖೆಗೆ ಸೂಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT