ಮಂಗಳವಾರ, ಜನವರಿ 26, 2021
24 °C

ಸೇನೆಯಲ್ಲಿ ಕಾಯಂ ನೇಮಕಾತಿ: ಅಧಿಕಾರಿಗಳ ಮಾಹಿತಿ ಕೇಳಿದ ‘ಸುಪ್ರೀಂ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತೀಯ ಸೇನೆಯಲ್ಲಿ ತಾತ್ಕಾಲಿಕ ಸೇವೆಯಡಿ(ಶಾರ್ಟ್‌ ಸರ್ವೀಸ್‌ ಕಮಿಷನ್‌) ಕಾರ್ಯನಿರ್ವಹಿಸುತ್ತಿರುವ 615 ಮಹಿಳಾ ಅಧಿಕಾರಿಗಳು, ಕಾಯಂ ನೇಮಕಾತಿಗೆ ಸಲ್ಲಿಸಿದ ಅರ್ಜಿಯ ಸ್ಥಿತಿಗತಿ ವರದಿಯನ್ನು ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಈ 615 ಮಹಿಳಾ ಅಧಿಕಾರಿಗಳ ಪೈಕಿ 422 ಅಧಿಕಾರಿಗಳು ಅರ್ಹತೆ ಆಧಾರದಲ್ಲಿ, ಕಾಯಂ ನೇಮಕಾತಿಗೆ ಅರ್ಹರಾಗಿದ್ದಾರೆ. ‘ಮಹಿಳಾ ಅಧಿಕಾರಿಗಳಿಗೆ ಕಾಯಂ ನೇಮಕಾತಿ ನೀಡುವ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದರ ಫಲಿತಾಂಶ ಪ್ರಕಟಗೊಂಡಿದೆ’ ಎಂದು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ, ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ, ಇಂದೂ ಮಲ್ಹೋತ್ರ ಹಾಗೂ ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠವು ಸ್ಥಿತಿಗತಿ ವರದಿ ನೀಡಲು ಸರ್ಕಾರಕ್ಕೆ ಸೂಚಿಸಿದೆ. ‘ಕಾಯಂ ನೇಮಕಾತಿಗೆ ಅರ್ಜಿ ಸಲ್ಲಿಸಿದ ಪ್ರತಿ ಅರ್ಜಿದಾರರ ಮಾಹಿತಿಯನ್ನೂ ನೀಡಬೇಕು’ ಎಂದು ಪೀಠವು ಹೇಳಿತು. 

ಕಾಯಂ ನೇಮಕಾತಿಗೆ ಆಯ್ಕೆಯಾಗದ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠವು, ಮುಂದಿನ ಡಿಸೆಂಬರ್‌ನಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಸೂಚಿಸಿತು. ‘ವಿಚಾರಣೆಯನ್ನು ಮುಂದೂಡಿದರೆ ಕೆಲ ಅಧಿಕಾರಿಗಳಿಗೆ ಸಮಸ್ಯೆಯಾಗಲಿದೆ. ನನ್ನ ಒಬ್ಬ ಕಕ್ಷಿದಾರರು 20 ವರ್ಷ ಸೇವೆ ಸಲ್ಲಿಸಿದ್ದು, ಅವರಿಗೆ ಕಾಯಂ ನೇಮಕಾತಿ ಕೊಟ್ಟಿಲ್ಲ. ವಿಚಾರಣೆಯನ್ನು ಇನ್ನಷ್ಟು ಮುಂದೂಡಿದರೆ ಅವರನ್ನು ಸೇವೆಯಿಂದ ನಿಯುಕ್ತಿಗೊಳಿಸಲಿದ್ದಾರೆ. ವಿಚಾರಣೆ ಮುಂದೂಡುವುದಿದ್ದರೆ, ಯಥಾಸ್ಥಿತಿ ಮುಂದುವರಿಸುವಂತೆ ಮಧ್ಯಂತದ ಆದೇಶವನ್ನು ನೀಡಬೇಕು’ ಎಂದು ಹಿರಿಯ ವಕೀಲ ಪಿ.ಎಸ್‌.ಪಟ್ವಾಲಿಯಾ ಹೇಳಿದರು.

ಕೇಂದ್ರ ಸರ್ಕಾರದ ವಿವರಣೆಯನ್ನು ಕೇಳದೆ ಈ ರೀತಿ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ಪೀಠವು ತಿಳಿಸಿತು. ಕೇಂದ್ರದ ಪರ ವಕೀಲರು, ‘ಅಫಿಡಾವಿಟ್‌ ಅಂತಿಮ ಹಂತದಲ್ಲಿದ್ದು, ಕೆಲ ದಿನಗಳಲ್ಲೇ ಇದನ್ನು ಸಲ್ಲಿಸಲಿದ್ದೇವೆ’ ಎಂದು ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು