ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂ’ಗೆ ಧುಲಿಯಾ, ಪಾರ್ದೀವಾಲಾ: ನ್ಯಾಯಮೂರ್ತಿಗಳ ಸಂಖ್ಯೆ 34ಕ್ಕೆ ಏರಿಕೆ

Last Updated 7 ಮೇ 2022, 20:14 IST
ಅಕ್ಷರ ಗಾತ್ರ

ನವದೆಹಲಿ: ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ಗುಜರಾತ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಜಮ್‌ಶೇದ್‌ ಬಿ. ಪಾರ್ದೀವಾಲಾ ಅವರಿಗೆ ಸುಪ್ರೀಂ ಕೋರ್ಟ್‌
ನ್ಯಾಯಮೂರ್ತಿಗಳಾಗಿ ಕೇಂದ್ರ ಸರ್ಕಾರ ಶನಿವಾರ ಬಡ್ತಿ ನೀಡಿದೆ. ಇದರೊಂದಿಗೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ 34ಕ್ಕೆ ಏರಿದೆ ಮತ್ತು ಮಂಜೂರಾದ ಎಲ್ಲ ಹುದ್ದೆಗಳೂ ಭರ್ತಿ ಆದಂತಾಗಿದೆ.

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಕೊಲಿಜಿಯಂ, ಈ ಇಬ್ಬರ ಬಡ್ತಿಗೆ ಎರಡು ದಿನಗಳ ಹಿಂದೆ ಶಿಫಾರಸು ಮಾಡಿತ್ತು.

1965ರಲ್ಲಿ ಜನಿಸಿದ ಪಾರ್ದೀವಾಲಾ ಅವರು 2028ರಲ್ಲಿ ಮುಖ್ಯ ನ್ಯಾಯ ಮೂರ್ತಿ ಹುದ್ದೆಗೆ ಏರಲಿದ್ದಾರೆ. ಎರಡು ವರ್ಷಕ್ಕೂ ಹೆಚ್ಚಿನ ಅವಧಿಗೆ ಅವರು ಈ ಹುದ್ದೆಯಲ್ಲಿ ಇರಲಿದ್ದಾರೆ. ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಬಿ.ವಿ. ನಾಗರತ್ನ ಅವರು ನಿವೃತ್ತರಾದ ಬಳಿಕ ಪಾರ್ದೀವಾಲಾ ಅವರು ಮುಖ್ಯ ನ್ಯಾಯ ಮೂರ್ತಿ ಆಗಲಿದ್ದಾರೆ.

ಧುಲಿಯಾ ಅವರಿಗೆ ಮೂರು ವರ್ಷ ಗಳಿಗೂ ಹೆಚ್ಚಿನ ಅವಧಿ ಇದೆ. ಅವರ ತಮ್ಮ ತಿಗಮಾಂಶು ಧುಲಿಯಾ ಅವರು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ಮತ್ತು ನಟ.

2022ರಲ್ಲಿ ಸುಪ್ರೀಂ ಕೋರ್ಟ್‌ ಮೂವರು ಮುಖ್ಯ ನ್ಯಾಯಮೂರ್ತಿಗಳನ್ನು ಕಾಣಲಿದೆ. 1950ರಲ್ಲಿ ಸುಪ್ರೀಂ ಕೋರ್ಟ್‌ ಸ್ಥಾಪನೆಯಾದ ಬಳಿಕ ಎರಡನೇ ಬಾರಿ ಇಂತಹ ಸನ್ನಿವೇಶ ಸೃಷ್ಟಿಯಾಗಲಿದೆ.

ರಮಣ ಅವರು ಇದೇ ಆಗಸ್ಟ್‌ 26ರಂದು ನಿವೃತ್ತ ರಾಗಲಿದ್ದಾರೆ. ನಂತರ ಈ ಹುದ್ದೆಗೇರಲಿರುವ ನ್ಯಾಯಮೂರ್ತಿ ಉದಯ್‌ ಉಮೇಶ್ ಲಲಿತ್‌ ಅವರ ಅವಧಿ ಸುಮಾರು ಎರಡು ತಿಂಗಳು ಮಾತ್ರ. ಲಲಿತ್‌ ಅವರ ನಿವೃತ್ತಿಯ ಬಳಿಕ, ನ್ಯಾಯ ಮೂರ್ತಿ ಡಿ.ವೈ. ಚಂದ್ರಚೂಡ್‌ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆ. ಎರಡು ವರ್ಷಕ್ಕೂ ಹೆಚ್ಚು ಕಾಲ ಅವರು ಈ ಹುದ್ದೆಯಲ್ಲಿ ಇರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT