ಶಮನಗೊಳ್ಳದ ಆಂತರಿಕ ಬೇಗುದಿ; ಏಟಿಗೆ ಎದಿರೇಟು..!

7
ಬಿಜೆಪಿಯಿಂದ ವಿಜಯಪುರ ಲೋಕಸಭಾ ಚುನಾವಣೆ ಪೂರ್ವ ತಯಾರಿಗೆ ಚಾಲನೆ

ಶಮನಗೊಳ್ಳದ ಆಂತರಿಕ ಬೇಗುದಿ; ಏಟಿಗೆ ಎದಿರೇಟು..!

Published:
Updated:

ವಿಜಯಪುರ: ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿನ ಆಂತರಿಕ ಬೇಗುದಿ ತಣಿಯದಾಗಿದೆ. ವಿಧಾನಸಭಾ ಚುನಾವಣಾ ಪೂರ್ವದಿಂದಲೂ ನಡೆದಿರುವ ಮುಖಂಡರ ತಿಕ್ಕಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದಿದೆ.

ಇದೀಗ 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ವಿಜಯಪುರ ಜಿಲ್ಲಾ ಬಿಜೆಪಿ ಭಾನುವಾರ ವಿಧ್ಯುಕ್ತ ಚಾಲನೆ ನೀಡಿತು. ಈ ಸಭೆಯೇ ಪಕ್ಷದೊಳಗಿನ ಆಂತರಿಕ ಕಲಹಕ್ಕೆ ಸಾಕ್ಷಿಯಾಯ್ತು.

ಸಭೆಗೆ ಅಪೇಕ್ಷಿತರಾಗಿದ್ದ ವಿವಿಧ ಮಂಡಲ, ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಜತೆಗೆ ಕಮಲ ಪಾಳೆಯದ ಚುನಾಯಿತ ಜನಪ್ರತಿನಿಧಿಗಳಿಗೂ ಆಹ್ವಾನ ನೀಡಲಾಗಿತ್ತು. ಪದಾಧಿಕಾರಿಗಳನ್ನು ಹೊರತುಪಡಿಸಿ, ಪ್ರಮುಖರ ಗೈರು ಹಾಜರಿ ಗೋಚರಿಸಿತು.

ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸೋಮನಗೌಡ ಪಾಟೀಲ ಸಾಸನೂರ, ಎ.ಎಸ್‌.ಪಾಟೀಲ ನಡಹಳ್ಳಿ ತಮ್ಮ ತಮ್ಮ ಮತಕ್ಷೇತ್ರಗಳಲ್ಲೇ ಇದ್ದರೂ; ಸಭೆಗೆ ಗೈರಾಗಿದ್ದು ಚರ್ಚೆಗೆ ಗ್ರಾಸವಾಯ್ತು.

ಪಾಲಿಕೆ ಪಾಲಿಟಿಕ್ಸ್‌..!

ವಿಧಾನಸಭಾ ಚುನಾವಣೆ ಪೂರ್ವದಲ್ಲಿ ವಿಜಯಪುರ ಮಹಾನಗರ ಪಾಲಿಕೆ ಅಂಗಳದಲ್ಲಿ ನಡೆದ ರಾಜಕೀಯ ಧ್ರುವೀಕರಣದಿಂದ ಬಿಜೆಪಿ ಸದಸ್ಯರ ಸಂಖ್ಯೆ 22ಕ್ಕೇರಿತ್ತು. ಭಾನುವಾರ ಇಲ್ಲಿನ ಗುರುದತ್ತ ಮಂಗಲ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ವಿಶೇಷ ಸಭೆಗೆ, ಪಾಲಿಕೆಯ ಬೆರಳೆಣಿಕೆ ಸದಸ್ಯರು ಹಾಜರಾಗುವ ಮೂಲಕ ‘ಪಾಲಿಕೆ ಪಾಲಿಟಿಕ್ಸ್‌’ ವಿಧಾನಸಭಾ ಚುನಾವಣೆಯಲ್ಲಿ ನಡೆದಂತೆ ಲೋಕಸಭಾ ಚುನಾವಣೆಯಲ್ಲೂ ನಡೆಯಲಿದೆ ಎಂಬ ಸಂದೇಶವನ್ನು ಯತ್ನಾಳ ಬಣ ಸ್ಪಷ್ಟವಾಗಿ ರವಾನಿಸಿತು.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸನಗೌಡ ಪಾಟೀಲ ಯತ್ನಾಳರಿಗೆ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬೆಂಬಲಿಗರು ಹೆಜ್ಜೆ ಹೆಜ್ಜೆಗೂ ಕಾಡಿದ್ದರು. ಇದಕ್ಕೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಪರೋಕ್ಷವಾಗಿ ಕುಮ್ಮಕ್ಕು ನೀಡಿದ್ದರು ಎಂಬ ಆರೋಪ ಆ ಸಂದರ್ಭ ಕಮಲ ಪಾಳೆಯದಲ್ಲೇ ವ್ಯಾಪಕವಾಗಿ ಹರಿದಾಡಿತ್ತು.

ಇದೀಗ ಲೋಕಸಭಾ ಚುನಾವಣೆಯಲ್ಲಿ ಯತ್ನಾಳ ಬೆಂಬಲಿಗರು ಪಕ್ಷದ ಅಭ್ಯರ್ಥಿಯಾಗಲಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿಯನ್ನು ಹೆಜ್ಜೆ ಹೆಜ್ಜೆಗೂ ಕಾಡಲು ನಿರ್ಧರಿಸಿದ್ದಾರೆ. ಈ ಸಂಬಂಧ ಯತ್ನಾಳ ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಈ ನಿರ್ಧಾರದಂತೆಯೇ ಭಾನುವಾರದ ಸಭೆಗೆ ಪಾಲಿಕೆಯ ಬಹುತೇಕ ಸದಸ್ಯರು ಗೈರಾಗಿದ್ದರು. ನಗರದಲ್ಲೇ ಇದ್ದರೂ ಹಾಜರಾಗಿರಲಿಲ್ಲ ಎನ್ನಲಾಗಿದೆ. ಏಟಿಗೆ ಎದಿರೇಟು ನೀಡುವ ಹುಮ್ಮಸ್ಸಿನಲ್ಲಿ ಕಾರ್ಯಮಗ್ನರಾಗಿದ್ದಾರೆ ಎಂಬುದು ತಿಳಿದು ಬಂದಿದೆ.

‘ಬಿಜೆಯೊಳಗಿನ ಪ್ರಸಕ್ತ ಬೆಳವಣಿಗೆಗಳು ವಿಜಯಪುರ ನಗರ ಮಂಡಲ ಸೇರಿದಂತೆ, ಜಿಲ್ಲಾ ಘಟಕ, ರಾಜ್ಯದ ವರಿಷ್ಠರಿಗೂ ಈ ಹಿಂದಿನಂತೆಯೇ ಮತ್ತೊಮ್ಮೆ ನುಂಗಲಾರದ ಬಿಸಿ ತುಪ್ಪವಾಗಿದೆ. ಲೋಕಸಭಾ ಚುನಾವಣೆಯ ಪೂರ್ವ ತಯಾರಿಯ ಆರಂಭದಲ್ಲೇ ಬೆಂಬಿಡದ ಭೂತದಂತೆ ಕಾಡಲಾರಂಭಿಸಿದೆ. ‘ಶೆಟ್ಟಿ–ಗೌಡ’ ನಡುವಿನ ತಿಕ್ಕಾಟ ಮತ್ತೊಮ್ಮೆ ತಾರಕಕ್ಕೇರುವುದು ಖಚಿತವಾಗಿದೆ.

ಜಿಲ್ಲೆಯ ವಿವಿಧೆಡೆಯಿರುವ ಯತ್ನಾಳ ಬೆಂಬಲಿಗರು ಸಹ ಇದಕ್ಕೆ ಸಾಥ್‌ ನೀಡುತ್ತಿದ್ದಾರೆ. ಭಾನುವಾರದ ವಿಶೇಷ ಸಭೆಗೆ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಗೈರಾಗಿರುವುದು ಇದೇ ಕಾರಣಕ್ಕೆ ಎಂಬುದು ಆಂತರಿಕ ಮೂಲಗಳಿಂದ ತಿಳಿದು ಬಂದಿದೆ.

ಈ ಎಲ್ಲ ಒಳಮರ್ಮಗಳನ್ನು ಅರಿತಿರುವ ಚಾಣಾಕ್ಷ್ಯ ಜಿಗಜಿಣಗಿ, ಯಾವ ಹಂತದಲ್ಲಿ ಯಾವ ದಾಳ ಉರುಳಿಸಲಿದ್ದಾರೆ. ಎಲ್ಲೆಲ್ಲಿಂದ ಯಾವ್ಯಾವ ಕಾಲಾಳು, ಸೇನಾಧಿಪತಿಯನ್ನು ಬಳಸಿಕೊಳ್ಳಲಿದ್ದಾರೆ ಎಂಬುದು ಮಾತ್ರ ತೀವ್ರ ಕುತೂಹಲ ಕೆರಳಿಸಿದೆ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !