ಸೋಮವಾರ, ಸೆಪ್ಟೆಂಬರ್ 20, 2021
26 °C

ನಮ್ ಕಥೆ ಕೇಳ್ತೀರಾ...

ಬಸೀರಅಹ್ಮದ್ ನಗಾರಿ Updated:

ಅಕ್ಷರ ಗಾತ್ರ : | |

Prajavani

ಹಾಯ್‌... ಹಲೋ... ನಮಸ್ಕಾರ...

ನಾನು ಕಣ್ರೀ, ಗೊತ್ತಾಗಲಿಲ್ಲವಾ ನಿಮಗೆ. ಹಾಗಾದರೆ ಹೇಳ್ತೀನಿ ಕೇಳಿ.

ನಾನೊಂದು ರೈಲ್ವೆ ಎಂಜಿನ್‌. ಜನಿಸಿದ್ದು(ನಿರ್ಮಾಣ) ಉತ್ತರ ಪ್ರದೇಶದ ವಾರಾಣಸಿ ಡೀಸೆಲ್‌ ರೈಲು ಎಂಜಿನ್‌ ಕಾರ್ಖಾನೆಯಲ್ಲಿ. ಮಾರ್ಚ್ 29, 2008 ನನ್ನ ಡೇಟ್ ಆಫ್ ಬರ್ತ್. ನನ್ನ ಹೆಸರು 12153ಡಬ್ಲ್ಯುಜಿ4. ದೇಶದ ಜನರ ₹14.63 ಕೋಟಿ ತೆರಿಗೆ ದುಡ್ಡು ಹಾಗೂ ನೂರಾರು ಕಾರ್ಮಿಕರ ಅವಿರತ ಶ್ರಮದ ಫಲವಾಗಿ ನಾನು ಮೂರ್ತ ಸ್ವರೂಪ ತಳೆದಿದ್ದೇನೆ.

ಎರಡು ಸ್ಟ್ರೋಕ್‌ಗಳ, ಟರ್ಬೋ ಚಾರ್ಚ್ಡ್‌, 16 ಸಿಲಿಂಡರ್‌ಗಳ 45 ಡಿಗ್ರಿ ‘ವಿ’ ಟೈಪ್‌ ದೇಹದ ಚಾಲಕ ಸ್ನೇಹಿ ಎಂಜಿನ್‌ ನಾನು. ನನ್ನ ಸಾಮರ್ಥ್ಯ 904 ಆರ್‌ಪಿಎಂ.  ನನ್ನ ದೇಹದ ತೂಕ ಎಷ್ಟು ಗೊತ್ತಾ? ಬರೋಬ್ಬರಿ 126 ಟನ್‌. ದೇಹದ ಗಾತ್ರಕ್ಕೆ ತಕ್ಕಂತೆ 4,840 ಟನ್‌ ತೂಕ ಎಳೆಯುವ ಶಕ್ತಿ ನನಗಿದೆ. ಇಷ್ಟೊಂದು ತೂಕ ಇದ್ದರೂ ಜಿಂಕೆಗಿಂತಲೂ ವೇಗವಾಗಿ ಓಡಬಲ್ಲೆ. ಗಂಟೆಗೆ ಗರಿಷ್ಠ 120 ಕಿಲೋ ಮೀಟರ್‌ ವೇಗದಲ್ಲಿ ನಾನು ಓಡಬಲ್ಲೆ.

ಹುಬ್ಬಳ್ಳಿಗೂ ಚಿರಪರಿಚಿತ

ಸರಕು ಸಾಗಣೆ ನನ್ನ ಪ್ರಮುಖ ಕೆಲಸವಾಗಿತ್ತು. ನೈರುತ್ಯ ರೈಲ್ವೆ ವಿಭಾಗದ ಘಟ್ಟ ಪ್ರದೇಶದ ಮಾರ್ಗ ಸೇರಿದಂತೆ ದೇಶದಾದ್ಯಂತ ಓಡಾಡಿದ್ದೇನೆ. ಅದಾಗ್ಯೂ, ಹುಬ್ಬಳ್ಳಿ ನನಗೆ ತುಸು ಹೆಚ್ಚೇ ಪರಿಚಿತ. ಏಕೆಂದರೆ, ನನ್ನ ಹೋಮ್‌ ಶೆಡ್‌ ಹುಬ್ಬಳ್ಳಿ. ಅಂದರೆ ಹುಷಾರಿಲ್ಲದಾಗ (ತಾಂತ್ರಿಕ ತೊಂದರೆ), ವಾರ್ಷಿಕ ನಿರ್ವಹಣೆ, ಬಿಡಿ ಭಾಗಗಳ ಬದಲಾವಣೆಗೆಲ್ಲ ಹುಬ್ಬಳ್ಳಿಯೇ ನನ್ನ ರಿಫ್ರೆಶಿಂಗ್‌ ತಾಣವಾಗಿತ್ತು. ಜೊತೆಗೆ ಇಲ್ಲಿಗೂ ಸರಕು ಸಾಗಣೆ ಮಾಡಿರುವ ಹೆಮ್ಮೆ ಇದೆ. 

ಅಂಗಾಂಗ ದಾನ

ಸಾಮಾನ್ಯವಾಗಿ ನಮ್ಮ ಕುಟುಂಬದ ಸದಸ್ಯರ ಜೀವಿತಾವಧಿ ಹೆಚ್ಚು, ಕಡಿಮೆ ಮೂರು ದಶಕಗಳು. ತುಂಬಾ ಚೆನ್ನಾಗಿ ಓಡಿದರೆ, ಇನ್ನೊಂದೈದು ವರ್ಷ ಹೆಚ್ಚಿಗೆಯಾಗಬಹುದು. ಆದರೆ, ವಾಸಿಯಾಗದ ರೋಗ (ತಾಂತ್ರಿಕ ತೊಂದರೆ) ಕಾಡಿದರೆ, ಕಡ್ಡಾಯ ನಿವೃತ್ತಿ ನೀಡಲಾಗುತ್ತದೆ. ಅದು ವಿರಳಾತೀ ವಿರಳ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಅದು ಅನಿವಾರ್ಯ ಗೊತ್ತಾ?. ನಾನು ಸುದೀರ್ಘ ಒಂದು ದಶಕಕ್ಕೂ ಅವಧಿಗೆ ದೇಶದ ಉದ್ದಗಲಕ್ಕೂ ಓಡಾಡಿದೆ. ನನಗೂ ಚಿಕಿತ್ಸೆ ಸಿಗದ ರೋಗವೊಂದು ಕಾಡಿತು. ಇದೀಗ ಓಟ ನಿಲ್ಲಿಸಿದ್ದೇನೆ. ‘ಕೊಳೆತು ಸಾಯುವುದಕ್ಕಿಂತ ಸವೆದು ಸಾಯುವುದು ಲೇಸು’ ಎಂಬಂತೆ ನಾನೂ ಕೂಡ ನಿವೃತ್ತಿಗೆ ಮುನ್ನ, ನನ್ನಲ್ಲಿರುವ ಉಪಯೋಗಿಸಬಹುದಾದ ಬಹುತೇಕ ಭಾಗ
ಗಳನ್ನು ದಾನ ಮಾಡಿರುವೆ.

ಅದಾದ ಬಳಿಕ ಕಡು ನೀಲಿ ಬಣ್ಣದ ಜೊತೆಗೆ ಅಲ್ಲಲ್ಲಿ ಶ್ವೇತ ಬಣ್ಣ ಬಳಸಿ, ಮುಂದೆ ಹಾಗೂ ಹಿಂದೆ ರಾಷ್ಟ್ರಧ್ವಜ ಚಿತ್ರಿಸಿ ನನ್ನನ್ನು ಮತ್ತೆ ಅಂದಗೊಳಿಸಿದ್ದಾರೆ. ಇದೀಗ ನಿಮ್ಮ ಮನ ಸೆಳೆದು, ಭಾರತೀಯ ರೈಲ್ವೆ ಪರಂಪರೆ ಸಾರುವ ಹೊಣೆ ನನ್ನದಾಗಿದೆ.  ನನ್ನನ್ನು ನೋಡುವ ಕುತೂಹಲ ನಿಮಗಿದೆಯೇ?  ಹಾಗಾದರೆ, ಅಂದಕಾಲತ್ತಿಲ್ ಹುಬ್ಬಳ್ಳಿಯ ಟಾಂಗಾ ನಿಲ್ದಾಣ ಇತ್ತಲ್ಲ ಅಲ್ಲಿಗೆ ಬನ್ನಿ, ಅರ್ಥವಾಗಲಿಲ್ಲವೇ? ಅದೇ ಕಣ್ರೀ, ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರ. ಅದೇ ನನ್ನ ಪ್ರಸ್ತುತ ತಂಗುದಾಣ. ನೀವು ಬರ್ತೀರಲ್ಲವೇ?‌ ನೀವು ಅಲ್ಲಿಗೆ ಬಂದರೆ, ನನ್ನನ್ನಷ್ಟೇ ಅಲ್ಲ, ನನ್ನ ಬಂಧುಗಳು, ಅಣ್ತಮ್ಮಗಳನ್ನು ನೋಡಬಹುದು.

ನನ್ನ ಹೆಸರು ‘ವೈಡಿ30243’ 

ನಾನೂ ಒಂದು ರೈಲ್ವೆ ಎಂಜಿನ್‌. ಅದೇ ಚಿಕ್ಕಂದಿನಲ್ಲಿ ಹೇಳುತ್ತಿದ್ದರಲ್ಲ, ಉಗಿ ಬಂಡಿ. ಅದೇ ನಾನು. ನಾನು ಅಕ್ಷರಶಃ ಉಗಿ ಮೇಲೆ ಓಡುತ್ತಿದ್ದ ಬಂಡಿಯೇ. ಅಮೆರಿಕದ ಮೆ/ಎಸ್‌ ವಲ್ಕನ್‌ ಫೌಂಡ್ರಿಯಲ್ಲಿ 1951ರಲ್ಲಿ ಜನಿಸಿದೆ(ನಿರ್ಮಾಣ). ದೇಶ ಸ್ವತಂತ್ರಗೊಂಡ ಕೆಲವೇ ಕೆಲವು ವರ್ಷಗಳಾಗಿದ್ದಾಗ ನಾನು ಭಾರತಕ್ಕೆ ಬಂದೆ. ಕಲ್ಲಿದ್ದಲಿನ ಶಾಖದಿಂದ ನೀರನ್ನು ಕಾಯಿಸಿ, ಅದರಿಂದ ಹೊಮ್ಮುತ್ತಿದ್ದ ಆವಿಯನ್ನು ಬಳಸಿಕೊಂಡು ನಾನು ಓಡುತ್ತಿದ್ದೆ. ಪ್ರತಿ ಗಂಟೆಗೆ ಗರಿಷ್ಠ 56 ಕಿಲೋ ಮೀಟರ್‌ ವೇಗದಲ್ಲಿ ಓಡಬಲ್ಲ ಸಾಮರ್ಥ್ಯ ನನ್ನದು. 62 ಅಡಿಗಳಷ್ಟಿರುವ ಉದ್ದವಿರುವ ನನ್ನ ತೂಕ ಬರೋಬ್ಬರಿ 97.3 ಟನ್‌. ದುಂಡನೆಯ ಉದ್ದದ ಮೂತಿ, ಅದರ ಮೇಲಿರುವ ಮೂರು ಮುಖದ ಸಿಂಹ, ಕಡುಗಪ್ಪು ಹಾಗೂ ಚಾಕೋಲೆಟ್‌ ಬಣ್ಣವು ನನ್ನ ಸೌಂದರ್ಯ ಹೆಚ್ಚಿಸಿದೆ.

ನಾನು ಲೋಂಡಾ– ಕ್ಯಾಸಲ್‌ರಾಕ್‌ ಹಾಗೂ ಗೋವಾದ ಮರ್ಮಗೋವಾ ಬಂದರು ಮಾರ್ಗದಲ್ಲಿ ಓಡಾಡಿದ್ದೇನೆ. ಜೊತೆಗೆ ಮೈಸೂರಿನ ಮಹಾರಾಜರ ಐಷಾರಾಮಿ ಬೋಗಿಯ ಸಂಚಾರಕ್ಕೆ ಉಪಯೋಗವಾಗಿದ್ದೆ ಎಂಬ ಹೆಮ್ಮೆ ನನ್ನದು. 1998ರ ತನಕ ಚಲನಶೀಲವಾಗಿದ್ದೆ. ಆ ಬಳಿಕ ಸೇವೆಯಿಂದ ನಿವೃತ್ತಗೊಂಡೆ. ನನ್ನನ್ನು ನೋಡಬೇಕೆಂದರೆ, ಹುಬ್ಬಳ್ಳಿಯ ಕೇಶ್ವಾಪುರ ರಸ್ತೆಯಲ್ಲಿರುವ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಎದುರು ಬನ್ನಿ. ಅಲ್ಲಿರುತ್ತೇನೆ. ನಾನು ನೈರುತ್ಯ ರೈಲ್ವೆ ವಿಭಾಗ ಆರಂಭವಾಗುವ ಮುಂಚೆಯಿಂದಲೂ ಇಲ್ಲಿದ್ದೇನೆ ಎಂಬುದು ವಿಶೇಷ.

ಸ್ಟೀಮ್‌ ಕ್ರೇನ್‌...

ನನ್ನ ಹೆಸರು ‘ಎಸ್‌–3512’. ನಾನು ‘ಎಸ್‌’ ವರ್ಗಕ್ಕೆ ಸೇರಿದ ಮೀಟರ್‌ ಗೇಜ್‌ ಸ್ಟೀಮ್‌ ಕ್ರೇನ್‌. ಉತ್ತರ ಪಶ್ಚಿಮ ರೈಲ್ವೆ ವಿಭಾಗಕ್ಕೆ ಸೇರುವ ಉತ್ತರ ಪ್ರದೇಶದಲ್ಲಿರುವ ಇಜ್ಜತ್‌ ನಗರದ ವರ್ಕ್‌ಶಾಪ್‌ನಲ್ಲಿ 1983ರಲ್ಲಿ ಜನ್ಮತಳೆದೆ. ನನ್ನ ತೂಕ ಬರೋಬ್ಬರಿ 70 ಟನ್‌. ನಾನು 35 ಟನ್‌ ತೂಕ ಎತ್ತುವ ಸಾಮರ್ಥ್ಯ ಹೊಂದಿದ್ದೇನೆ. ಗದಗ ಭಾಗದಲ್ಲಿ ನನ್ನ ಸೇವೆ ಬಳಕೆಯಾಗಿದೆ. ರೈಲ್ವೆ ಅಪಘಾತ, ಇಲ್ಲವೇ ಪ್ರಕೃತಿ ವಿಕೋಪಗಳಂತಹ ಸನ್ನಿವೇಶಗಳ ಬಳಿಕ ಸಂಚಾರ ಸುಗಮಗೊಳಿಸುವುದು ನನ್ನ ಕೆಲಸವಾಗಿತ್ತು.

ಆದರೆ, ಭಾರತೀಯ ರೈಲ್ವೆಯು ಮೀಟರ್‌ ಗೇಜ್‌ನಿಂದ ಬ್ರಾಡ್‌ಗೇಜ್‌ಗೆ ಪರಿವರ್ತನೆಯಾದ ಬಳಿಕ, ಎಂಜಿನ್‌ಗಳ ಸಾಗಾಟ, ಬೋಗಿಗಳ ಸ್ಥಳಾಂತರದಂಥ ಕೆಲಸಗಳಿಗೆ ನನ್ನನ್ನು ಬಳಸಿದರು. ಅಂತಿಮವಾಗಿ 2006ರಲ್ಲಿ ನಾನು ಸೇವಾ ನಿವೃತ್ತಿಗೊಂಡೆ. ಭಾರತೀಯ ರೈಲ್ವೆ ಪರಂಪರೆ ಹಾಗೂ ಬದಲಾದ ತಂತ್ರಜ್ಞಾನದ ಪ್ರತೀಕವಾಗಿ ನನ್ನನ್ನು ಹುಬ್ಬಳ್ಳಿ ರೈಲು ಸೌಧದ ಎದುರು ನಿಲ್ಲಿಸಿದ್ದಾರೆ.

ಬನ್ನಿ ಭೇಟಿಯಾಗೋಣ....

ಇಂತಿ ನಿಮ್ಮ ಪ್ರೀತಿಯ

ಎಂಜಿನ್‌‌ 12153ಡಬ್ಲ್ಯುಜಿ4.

***

ಭಾರತೀಯ ರೈಲ್ವೆಯ 160ಕ್ಕೂ ಹೆಚ್ಚು ವರ್ಷಗಳ ಇತಿಹಾಸ, ಪರಂಪರೆಯನ್ನು ಸಾರುವ, ಸಂರಕ್ಷಿಸುವ ಹಾಗೂ ಪರಿಚಯಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆಯು ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಎದುರು ಡೀಸೆಲ್‌ ಎಂಜಿನ್‌ , ‌ಸ್ಟೀಮ್‌ ಕ್ರೇನ್‌ ಹಾಗೂ ಸ್ಟೀಮ್‌ ಎಂಜಿನ್‌ ಅನ್ನು ಪ್ರದರ್ಶನಕ್ಕಿಟ್ಟಿದೆ

–ಎ.ಕೆ.ಸಿಂಗ್, ಪ್ರಧಾನ ವ್ಯವಸ್ಥಾಪಕರು, ನೈರುತ್ಯ ರೈಲ್ವೆ, ಹುಬ್ಬಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.