ಮಂಗಳವಾರ, ನವೆಂಬರ್ 19, 2019
29 °C

ಗೌರಿ ಹಬ್ಬದ ನಂತರ ಉತ್ತರ ಕರ್ನಾಟಕದಲ್ಲಿ ಜೋಕುಮಾರಸ್ವಾಮಿ ಹಬ್ಬ

Published:
Updated:
Prajavani

ಗ್ರಾಮೀಣ ಜನಪದ ಹಬ್ಬಗಳಲ್ಲೊಂದು ಜೋಕುಮಾರನ ಹಬ್ಬ. ಇದು ಉತ್ತರ ಕರ್ನಾಟಕದಲ್ಲಿ ತನ್ನ ಛಾಪನ್ನು ಮೂಡಿಸಿದೆ. ಬಾಗಲಕೋಟೆ ಮತ್ತು ವಿಜಯಪುರಕ್ಕೆ  ಸೇರಿದ ಹಲವು ಹಳ್ಳಿಗಳಲ್ಲಿ ಜೋಕುಮಾರಸ್ವಾಮಿಯನ್ನು ಬರಮಾಡಿಕೊಳ್ಳುತ್ತಾರೆ.

ಗಣೇಶಮೂರ್ತಿ ವಿಸರ್ಜನೆಯಾದ ಮರುದಿನವೇ ಜೋಕುಮಾರಸ್ವಾಮಿ ಊರಿನ ಕುಂಬಾರನ ಮನೆಯಲ್ಲಿ ಹುಟ್ಟುತ್ತಾನೆ; ಎಂದರೆ ಮಣ್ಣಿನಿಂದ ಮೂರ್ತಿಯನ್ನು ತಯಾರಿಸುತ್ತಾರೆ. ಅಂಬಿಗರ ಮನೆಯಲ್ಲಿ ಬೆಳೆಯುತ್ತಾನೆ. ಅವನನ್ನು ಬೇವಿನ ಎಲೆಗಳ ಉಡುಗೆಯೊಂದಿಗೆ ಅಲಂಕಾರ ಮಾಡುತ್ತಾರೆ. ಬಾಯಿಗೆ ಬೆಣ್ಣೆಯನ್ನು ಒರೆಸಿ ಕಪ್ಪು ಕಾಡಿಗೆಯಿಂದ ಸಿಂಗರಿಸುತ್ತಾರೆ.

ಬುಟ್ಟಿಯಲ್ಲಿ ಸುತ್ತಲೂ ಇಟ್ಟ ಬೇವಿನ ಸೊಪ್ಪಿನ ನಡುವೆ ಅಗಲವಾದ ಬಾಯಿ ತೆರೆದುಕೊಂಡಿರುವ ಜೋಕುಮಾರನ ಮಣ್ಣಿನ ಮೂರ್ತಿಯನ್ನು ಇಡುತ್ತಾರೆ. ಮಹಿಳೆಯರು ‘ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆಗಳೆಲ್ಲ ತುಂಬಿ ಒಡ್ಡುಗಳೆಲ್ಲ ಒಡೆದಾವು’ ಎಂದು ಹಾಡುತ್ತ ಅಲಂಕೃತಗೊಂಡ ಜೋಕುಮಾರಸ್ವಾಮಿಯನ್ನ ಹೊತ್ತು ಅಂದಿನ ದಿನವೇ ಊರಿನ ಪ್ರಮುಖರ ಮನೆಗೆ ತೆರಳಿ ಮೊದಲ ಪೂಜೆ ಮಾಡುವರು. ಏಳು ದಿನಗಳು ಏಳು ಊರುಗಳನ್ನು ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕೆಂಬುದು ಕಟ್ಟಳೆ. ಗಲ್ಲಿ ಗಲ್ಲಿಗೆ ತೆರಳಿದಾಗ. ಅಲ್ಲಿ ಬುಟ್ಟಿಯನ್ನಿಟ್ಟು ಎಲ್ಲರನ್ನು ಕರೆದು ಪೂಜೆ ಮಾಡಿ ಸುತ್ತಲೂ ಕುಳಿತು ಜೋಕುಮಾರನ ಹಾಡು ಹಾಡುತ್ತಾರೆ. ಅಲ್ಲಿನ ಭಕ್ತರು ಮೊರದಲ್ಲಿ ದವಸ, ಧಾನ್ಯ, ಹಣವನ್ನು ಕೊಡುತ್ತಾರೆ. ಕೊಟ್ಟ ದಾನಕ್ಕೆ ಪ್ರತಿಯಾಗಿ ಮಹಿಳೆಯರು ಕರಿಮಸಿ ಬೆರೆತ ಬೇವಿನ ಸೊಪ್ಪು, ಮತ್ತು ಜೋಳ, ನುಚ್ಚು, ಮೆಣಸಿನಕಾಯಿ ಮುಂತಾದವುಗಳನ್ನು ಪ್ರತಿಯಾಗಿ ಕೊಡುತ್ತಾರೆ. ಅವನ್ನು ಹೊಲದ ತುಂಬೆಲ್ಲಾ ಚಲ್ಲಿದರೆ ಉತ್ತಮ ಬೆಳೆ ಆಗುವುದು ಎಂಬ ನಂಬಿಕೆ ಇದೆ.

ಏಳು ದಿನಗಳ ಆಚರಣೆ ಮುಕ್ತಾಯದ ನಂತರ, ಜೋಕುಮಾರನು ದಲಿತ ಸಮುದಾಯದ ಕೈಗೆ ಸಿಗುತ್ತಾನೆ. ಜೋಕುಮಾರನನ್ನು ಹೊತ್ತುಕೊಂಡು ಊರಾಚೆಗೆ ಹೋಗಿ ಕಲ್ಲಿನಿಂದ ಹೊಡೆದು ಜೋಕುಮಾರನನ್ನು ಸಾಯಿಸುತ್ತಾರೆ. ನಂತರ  ಅಗಸರ ಕಲ್ಲು ಬಂಡೆಯ ಕೆಳಗೆ ಅವನ ಶವವನ್ನು ಹೂಳುತ್ತಾರೆ. ಅಗಸರು ಅವನ ಬಟ್ಟೆಯನ್ನು ತೆಗೆದುಕೊಂಡು ಮೂರು ದಿನಗಳ ಕಾಲ ಕಾರ್ಯಮಾಡುತ್ತಾರೆ. ಅಂಬಿಗರು ಸಂಗ್ರಹಿಸಿದ ದವಸ–ಧಾನ್ಯದಿಂದ ಅಡುಗೆ ಮಾಡಿ, ಅದನ್ನು ಸಾಮೂಹಿಕವಾಗಿ ಪ್ರಸಾದ ರೂಪದಲ್ಲಿ ತಿನ್ನುತ್ತಾರೆ.

ಹಿನ್ನೆಲೆ

ಜೋಕಮುನಿಯ ಮಗನೇ ಜೋಕುಮಾರಸ್ವಾಮಿ. ಏಳು ದಿನಗಳಲ್ಲಿ ಅವನ ಜನನ, ಬಾಲ್ಯ, ಯೌವನ, ಸಾವು – ಎಲ್ಲವೂ ಮುಗಿಯುತ್ತದೆ ಎನ್ನುವುದು ನಂಬಿಕೆ. ಇದರ ಆಚರಣೆಯನ್ನು ಜೋಕುಮಾರನ ಹಬ್ಬದಲ್ಲಿ ಕಾಣಬಹುದು. ಜೋಕುಮಾರ ಒಬ್ಬ ದೇವತೆಯ ಮಗ; ಮಾರಿಯ ಮಗ. ಅವನು ಅಲ್ಪಾಯುಷಿಯಾಗಿ, ಏಳು ದಿನಗಳಲ್ಲಿ ಮೆರೆದು ಪುಂಡಾಟಿಕೆಮಾಡಿ ತೀರಿಹೋದವನು ಎಂದೂ ಹೇಳುತ್ತಾರೆ. ಅವನ ತಾಯಿಯು ದೇವತಾಸ್ತ್ರೀಯಾಗಿದ್ದರೂ ಅವನನ್ನು ಕಾಪಾಡದೆಹೋದಳೆಂದು ಪ್ರತೀತಿ. ಕ್ಷುದ್ರದೇವತೆಗಳಲ್ಲಿ ಜೋಕುಮಾರಸ್ವಾಮಿಯೂ ಒಬ್ಬ.

ಪ್ರತಿಕ್ರಿಯಿಸಿ (+)