ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬರದ ನಾಡಲ್ಲಿ ಮಳೆಯ ಮಾಯೆ

Last Updated 27 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಕೋಲಾರ ಸೀಮೆಯ ಜನ ಉಣ್ಣುವ ಪ್ರತೀ ತುತ್ತು ಪಾತಾಳಗಂಗೆಯ ಕೃಪೆ. ಇಲ್ಲಿ ಕಂಡಕಂಡಲ್ಲಿ ಕೆರೆಗಳಿದ್ದರೂ ಖಾಲಿ, ಖಾಲಿಯಾಗಿದ್ದವು. ಇಂತಹ ಬರದ ನಾಡಿನಲ್ಲಿ ಮಳೆಯ ಮಾಯೆ ಸೃಷ್ಟಿಸಿದ ಸಂಭ್ರಮ ಎಂತಹದ್ದು ಗೊತ್ತೆ?

***

ರಾಜ್ಯ ರಾಜಧಾನಿಗೆ ತಾಗಿಕೊಂಡಂತೇ ಇರುವ ಕೋಲಾರ ಸೀಮೆಯಲ್ಲಿ ಕಂಡಕಂಡಲ್ಲಿ ಕೆರೆಗಳನ್ನು ಕಾಣಬಹುದು. ಆದರೆ, ಬಹುಪಾಲು ಕೆರೆಗಳಲ್ಲಿ, ವರ್ಷದ ಹೆಚ್ಚಿನ ಅವಧಿಯಲ್ಲಿ ಮನುಷ್ಯರಿಗೆ ಇರಲಿ; ಪಕ್ಷಿಪ್ರಾಣಿಗಳಿಗೂ ಗುಟುಕು ನೀರು ಸಿಗುವುದು ಕಷ್ಟವಾಗಿತ್ತು. ಇಲ್ಲಿನ ಜನ ಉಣ್ಣುವ ಪ್ರತೀ ತುತ್ತು ಪಾತಾಳಗಂಗೆಯ ಕೃಪೆ. ಆಕೆ ಕರುಣೆ ತೋರಿದರೆ ಬೆಳೆ. ಮುನಿದರೆ ನೆಲ ಬರಡು. ಇನ್ನೇನು ನೀರನ್ನು ತಂದೇ ಬಿಟ್ಟಿತು ಎಂಬ ಆಸೆ ಹುಟ್ಟಿಸಿದ್ದ ಎತ್ತಿನಹೊಳೆ ಯೋಜನೆ ಸನಿಹಕ್ಕೂ ಸುಳಿಯಲಿಲ್ಲ. ಸಂಸ್ಕರಿಸಿದ ಚರಂಡಿ ನೀರಾದರೂ ಪರವಾಗಿಲ್ಲ, ಕೆ.ಸಿ. ವ್ಯಾಲಿ ಯೋಜನೆ ಹರಿಸಿದ ನೀರು ಕೆಲವಾದರೂ ಕೆರೆಗಳ ಪಾತ್ರ ತುಂಬಿ, ಅಂತರ್ಜಲದ ಮಟ್ಟ ಅಷ್ಟೋ ಇಷ್ಟೋ ಮೇಲೇರಲು ಕಾರಣವಾಗಿತ್ತು. ನದಿ ಆಸರೆ ಇಲ್ಲದ ನೆಲದಲ್ಲಿ ಮಳೆಹನಿಯೇ ಜೀವದಾಯಿ. ಆದರೆ, ಅದೇಕೋ ಹನಿ ಹನಿ ಸೇರುತ್ತಿರಲಿಲ್ಲ. ಹಳ್ಳಕೊಳ್ಳ ತುಂಬುತ್ತಿರಲಿಲ್ಲ. ನೀರಿನ ಕೊರತೆಯೇ ದೊಡ್ಡ ಕೊರಗಾಗಿ ಕಾಡುತ್ತಿತ್ತು. ಮನೋಬೇನೆಯಾಗಿ ಕೃಷಿಕರ ಒಡಲು ಸುಡುತ್ತಿತ್ತು.

ಇಂತಹ ಬರದ ನಾಡಲ್ಲಿಮಳೆಯ ಮಾಯೆ ಈಗ ಪುಳಕ ಮೂಡಿಸಿದೆ; ಕನಸಲ್ಲೂ ಕಂಡಿರದ ಜಲಸಮೃದ್ಧಿಯನ್ನು ಕಣ್ಣೆದುರು ಇರಿಸಿದೆ. ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲೆಗಳ ಬಹುಪಾಲು ಕೆರೆ, ಕುಂಟೆ, ಕಲ್ಯಾಣಿಗಳು ಭರ್ತಿಯಾಗಿವೆ. ಜಲಮೂಲಗಳು ಸಚೇತನಗೊಂಡಿವೆ. ಕೆರೆಗಳು ಪುನಃ ತುಂಬಬಹುದು ಎಂಬ ವಿಶ್ವಾಸವೇ ಇಲ್ಲಿನ ಜನರಲ್ಲಿ ಉಡುಗಿಹೋಗಿತ್ತು. ಅಂತಹವರಲ್ಲಿ ಪುನರ್ಭರ್ತಿಯ ಅನುಭೂತಿಯು ಖುಷಿ–ವಿಶ್ವಾಸ ಎರಡನ್ನೂ ಉಕ್ಕಿಸಿದೆ.

ಯಾವ ಪ್ರಭುತ್ವವೂ ಯಾವ ನಾಯಕನೂ ಮೂಡಿಸಲಾರದ ಭರವಸೆಯನ್ನು ಮಳೆಹನಿ ಮೂಡಿಸಿದೆ. ಈ ವರ್ಷಧಾರೆಯುಮುಂದಿನ ಮೂರ್ನಾಲ್ಕು ವರ್ಷಗಳ ಭವಿಷ್ಯದ ಬಗೆಗೆ ಭರವಸೆ ತುಂಬಿದೆ. ಅದೆಂಥ ಖಚಿತ ಭರವಸೆಯೆಂದರೆ, ಅತಿವೃಷ್ಟಿಯಿಂದ ಈಗ ಆಗಿರುವ ಅಪಾರ ಬೆಳೆನಷ್ಟವೂ ಅದರ ಎದುರು ಯಃಕಶ್ಚಿತ್‌ ಅನ್ನಿಸುವ ಮಟ್ಟಿಗೆ. ಪುಟಿದೇಳಲು ರಟ್ಟೆಗೆ ಕಸುವು ತುಂಬುವಂಥ ಭರವಸೆ ಅದು. ಬೆಳೆನಷ್ಟದ ನೋವಿನಲ್ಲೂ ಕೃಷಿಕರ ಮುಖದಲ್ಲಿ ಮಂದಹಾಸ ಕಾಣಲು ಸಾಧ್ಯವಾಗಿದ್ದರೆ ಅದಕ್ಕೆ ಮುಂದಿನ ಹಂಗಾಮುಗಳಲ್ಲಿ ಬೆಳೆ ತೆಗೆಯಲು ಬೇಕಾದ ಜೀವದ್ರವ್ಯದ ಲಭ್ಯತೆಯ ಖಾತರಿಯೇ ಕಾರಣ. ಅಂತಹ ಖಾತರಿಯನ್ನು ಈ ಮಳೆ ತುಂಬಿದೆ.

ಕೋಲಾರ ಜಿಲ್ಲೆಯಲ್ಲಿ ಸುಮಾರು 2,500 ಕೆರೆಗಳಿವೆ. 900ಕ್ಕೂ ಹೆಚ್ಚು ಕಲ್ಯಾಣಿಗಳಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,350ಕ್ಕೂ ಹೆಚ್ಚು ಕೆರೆಗಳಿವೆ. ಇವುಗಳಲ್ಲಿ ಬಹುಪಾಲು ತುಂಬಿವೆ. ಕೆಲವು ಕೆರೆಗಳು ಅರ್ಧ– ಮುಕ್ಕಾಲು ಪಾಲು ಭರ್ತಿಯಾಗಿವೆ. ಇಂತಹ ಜಲಸಮೃದ್ಧಿಯು ಮೂರು ದಶಕಗಳ ಬಳಿಕ ಕಾಣಸಿಕ್ಕಿದೆ ಎಂದು ಹಿರಿಯರು ನೆನಪುಗಳನ್ನು ಮೀಟುತ್ತಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಅತಿದೊಡ್ಡ ಕೆರೆ ಎನಿಸಿರುವ ಅಮಾನಿ ಗೋಪಾಲಕೃಷ್ಣ ಕೆರೆ ಮೈದುಂಬಿಕೊಂಡಿದೆ. ಶ್ರೀನಿವಾಸಸಾಗರವು ಜಲಸಿರಿಯಿಂದ ಕಂಗೊಳಿಸುತ್ತಿದೆ. ಪ್ರವಾಸಿತಾಣವಾಗಿ ಮಾರ್ಪಟ್ಟಿದೆ. ಇದರ ಸೊಬಗು ಕಣ್ತುಂಬಿಕೊಳ್ಳಲು ದೂರದ ಊರುಗಳಿಂದ ಜನ ಬರುತ್ತಿದ್ದಾರೆ. ಚಿತ್ರಾವತಿ ಜಲಾಶಯ, ಜಕ್ಕಲಮಡುಗು ಜಲಾಶಯ ಭೋರ್ಗರೆಯುತ್ತಿವೆ. ಉತ್ತರ ಪಿನಾಕಿನಿ ನದಿ ಸಹ ತುಂಬಿ ಹರಿಯುತ್ತಿದೆ.ಚಿಂತಾಮಣಿ ತಾಲ್ಲೂಕಿನಲ್ಲಿ ಹತ್ತು–ಇಪ್ಪತ್ತು ವರ್ಷಗಳಿಂದ ತುಂಬದೇ ಇದ್ದ ಹಲವಾರು ಕೆರೆಗಳು ಭರ್ತಿಯಾಗಿವೆ. ಊಲವಾಡಿ, ನಂದಿಗಾನಹಳ್ಳಿ, ಕೈವಾರ, ಮುಂಗಾನಹಳ್ಳಿ ದೊಡ್ಡಕೆರೆ ಮೊದಲಾದ ಪ್ರಮುಖ ಕೆರೆಗಳ ಕೋಡಿ ಹರಿದಿದೆ. ಗುಡಿಬಂಡೆಯ ಅಮಾನಿ ಕೆರೆಯ ಒಡಲೂ ಭರ್ತಿಯಾಗಿದೆ.

ಕೋಲಾರ ಜಿಲ್ಲೆಯಲ್ಲಿ ದೊಡ್ಡ ಕೆರೆಗಳೆನಿಸಿರುವ ಮುದುವಾಡಿ, ಕೋಲಾರಮ್ಮ, ಬೇತಮಂಗಲ, ಸೋಮಾಂಬುಧಿ ಅಗ್ರಹಾರ, ಮಾರ್ಕಂಡೇಯ, ರಾಮಸಾಗರ, ನಂಗಲಿ ಮೊದಲಾದ ಕೆರೆಗಳು ತುಂಬಿ ತುಳಕತೊಡಗಿವೆ. ಜನವರಿಯಿಂದ ನವೆಂಬರ್‌ ಅಂತ್ಯದವರೆಗೆ ಜಿಲ್ಲೆಯ ವಾಡಿಕೆ ಮಳೆ ಪ್ರಮಾಣ 700 ಮಿ.ಮೀ. ಆದರೆ ಈ ವರ್ಷದ ಇದೇ ಅವಧಿಯಲ್ಲಿ 1,300 ಮಿ.ಮೀ. ಮಳೆ ಸುರಿದಿದೆ. ಮುಳ್ಳುಕಂಟಿಗಳಿಂದ ಮುಚ್ಚಿಹೋಗಿದ್ದ, ಒತ್ತುವರಿಗೆ ಒಳಗಾಗಿದ್ದ ಜಲಪಥಗಳು ಪುನಃ ತೆರೆದುಕೊಳ್ಳುವಂತೆ ಆಗಿರುವುದು ಈ ಪರಿ ಮಳೆ ಆಧಿಕ್ಯದಿಂದಲೇ! ಮಳೆಗೆ ಸಹಜವಾಗಿಯೇ ಅಂತಹದೊಂದು ಅಗಾಧ ಶಕ್ತಿ ಇದೆ.

ಕೋಲಾರ ಸೀಮೆಯಲ್ಲಿ ಕೆರೆಗಳ ಬಹುದೊಡ್ಡ ಸರಪಳಿಯೇ ಇದೆ. ಮೇಲಿನ ಕೆರೆ ತುಂಬಿ ಕೋಡಿ ಹರಿದರೆ ಅದರ ನೀರು ಕೆಳಗಿನ ಕೆರೆ ಸೇರಿಕೊಳ್ಳುವಂತಹ ಜಲಪಥ ಇದೆ. ಮಳೆನೀರು ಈ ಮೂಲಕ ವ್ಯವಸ್ಥಿತವಾಗಿ ಸಂಗ್ರಹ ಆಗುತ್ತಿತ್ತು. ಮಳೆ ಮುನಿಸಿಕೊಂಡಿತು. ಕೆರೆಗಳು ಹೂಳು ತುಂಬಿಕೊಂಡು ಪಾಳುಬಿದ್ದವು. ಜಲಾನಯನ ಪ್ರದೇಶವು ಇನ್ನಾರದೋ ಪಾಲಾಯಿತು. ಕೆರೆ ಸಂಬಂಧದ ಕೊಂಡಿಗಳು ಒಂದೊಂದೇ ಕಳಚಿಕೊಳ್ಳುತ್ತ ಹೋದವು. ನೀರಿನ ಅಭಾವ ತೀವ್ರವಾಗಿ ತಲೆದೋರಿತು. ಜೀವರಾಶಿಯ ದಾಹ ನೀಗುವ ಪರ್ಯಾಯವಾಗಿ ಕೊಳವೆಬಾವಿಗಳು ಉದಯಿಸಿದವು. ಈ ವಿದ್ಯಮಾನಕ್ಕೆ ‘ಬಂಗಾರದ ಮನುಷ್ಯ’ ಸಿನಿಮಾ ಪ್ರೇರಣೆಯಾಗಿ ಒದಗಿಬಂದಿದೆ ಎಂಬ ಅಂಬೋಣವೂ ಇದೆ.

ಭಾರತದಲ್ಲಿ ಬೇಸಾಯವು ಮಳೆಯೊಂದಿಗಿನ ಜೂಜು ಎಂಬ ಮಾತಿದೆ. ಆದರೆ, ಕೋಲಾರ ಭಾಗದಲ್ಲಿ ಬೇಸಾಯವು ಕೊಳವೆಬಾವಿಗಳೊಂದಿಗಿನ ಜೂಜು ಎಂಬಂತಾಯಿತು. ಬೋರ್‌ವೆಲ್‌ಗೆ ಹಣ ಸುರಿದು ಸುರಿದು ಬಡವಾದರು ಇಲ್ಲಿನ ಜನ. ಆಳಕ್ಕೆ ಇನ್ನೂ ಆಳಕ್ಕೆ ಅಂತ ಕೊರೆಯುತ್ತಲೇ ಇದ್ದಾರೆ. 1,000 ಅಡಿ, 1,200, 1,500 ಅಡಿ ಆಳಕ್ಕೆ ಹೋಗುತ್ತಲೇ ಇವೆ ಕೊಳವೆಬಾವಿಗಳು. ಆದರೆ, ನೀರಿನ ಪ್ರಮಾಣ ಮತ್ತು ಲಭ್ಯತೆಯ ಅವಧಿ ಬಗೆಗೆ ಯಾರಿಗೂ ಖಾತರಿ ಇಲ್ಲ. ಕೊಳವೆಬಾವಿಯಲ್ಲಿ ಇವೊತ್ತು ಇರುವ ನೀರು ನಾಳೆಗೆ ಏನೋ ಎಂಬ ಅನಿಶ್ಚಯ ಸ್ಥಿತಿಯಲ್ಲಿ ಓಲಾಡುವಂತಾಗಿದೆ ಕೃಷಿಬದುಕು. ಅಂತರ್ಜಲವನ್ನು ಇದೇ ಬಗೆಯಲ್ಲಿ ಹೀರುತ್ತಾ ಹೋದರೆ ಕೋಲಾರಮ್ಮನ ನಾಡು ಮತ್ತೊಂದು ಮರುಭೂಮಿ ಆಗಲಿದೆ ಎಂಬ ಎಚ್ಚರಿಕೆಯ ಮಾತು ಕೇಳುವಂತಾಗಿದ್ದು ಇದೇ ಕಾರಣದಿಂದ. ಪರಿಸರ ರಕ್ಷಣೆ ನೆಲೆಯಲ್ಲಿ ಇದು ವಿವೇಕವಾಣಿಯೇ. ಆದರೆ ಅಲ್ಲಿನ ಜನರಿಗೆ ಬದುಕಿನ ಪ್ರಶ್ನೆ, ಅಸ್ತಿತ್ವದ ಪ್ರಶ್ನೆ.

ಕೊಳವೆಬಾವಿಗಳಿಂದ ದೊರೆತ ಅಲ್ಪಸ್ವಲ್ಪ ನೀರನ್ನು ಮಿತವಾಗಿ ಬಳಸುವ ಕೌಶಲ ಕರಗತ ಮಾಡಿಕೊಂಡಿದ್ದಾರೆ ಇಲ್ಲಿನ ಜನ. ಬಳಸಿದ ಅಂತರ್ಜಲ ಪ್ರಮಾಣದಷ್ಟೇ ಹಾಲು ಉತ್ಪಾದಿಸಿದರು. ಆ ಹಾಲನ್ನು ಮನೆಮಕ್ಕಳಿಗೆ ಕೊಡದೆ ಡೇರಿಗೆ ಕೊಟ್ಟು ಹೊಟ್ಟೆಹೊರೆದರು. ತರಕಾರಿ ಬೆಳೆದು ನಗರ–ಪಟ್ಟಣಗಳಿಗೆ ಕಳುಹಿಸಿದರು. ನೀರಿನ ಕ್ಷಾಮವು ಕಣ್ಣೀರು ತರಿಸಿದರೂ ಎದೆಗುಂದಲಿಲ್ಲ. ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಬೊಗಸೆ ನೀರಿನಲ್ಲೇ ಬಿತ್ತಿ, ಬೆಳೆದು, ಹುಟ್ಟಿದ ಆ ನೆಲಕ್ಕೇ ಅಂಟಿಕೊಂಡ ಇಲ್ಲಿನ ಜನರ ಛಲ ಮೆಚ್ಚುವಂತಹುದು. ಈಗ ಹರಿದಿರುವ ಜಲಧಾರೆಯಿಂದ ಜಲ ಮರುಪೂರಣ ಆಗಲಿದೆ. ಅಂತರ್ಜಲ ಮಟ್ಟ ಹೆಚ್ಚಲಿದೆ. ಕೊಳವೆಬಾವಿಗಳು ಮರುಪೂರಣ ಆಗಲಿವೆ. ಕೆರೆಗಳಲ್ಲಿ ಮೂರು ತಿಂಗಳಿಗೋ ಆರು ತಿಂಗಳಿಗೋ ನೀರು ಖಾಲಿಯಾದರೂ ಆ ಬಳಿಕ ಮೂರ್ನಾಲ್ಕು ವರ್ಷಗಳ ಅವಧಿಗಾದರೂ ಅಂತರ್ಜಲ ಕೈಹಿಡಿಯುತ್ತದೆ ಎಂಬ ವಿಶ್ವಾಸ ಮೂಡಿದೆ. ರೈತರ ಹುಮ್ಮಸ್ಸು ಇಮ್ಮಡಿಯಾಗಲು ಇದಕ್ಕಿಂತ ಬೇರೇನು ಬೇಕು?

ಚಿಕ್ಕಬಳ್ಳಾಪುರ ಜಿಲ್ಲೆಯ 200ಕ್ಕೂ ಹೆಚ್ಚು ಕೆರೆಗಳಲ್ಲಿ ಮೀನು ಸಾಕಣೆ ಚಟುವಟಿಕೆ ನಡೆಯುತ್ತಿದೆ. ಈ ಹಿಂದೆ ವಾರ್ಷಿಕ 3 ಸಾವಿರದಿಂದ 4 ಸಾವಿರ ಟನ್‌ ಮೀನು ಉತ್ಪಾದನೆ ಆಗುತ್ತಿತ್ತು. ಮಳೆ ಚೆನ್ನಾಗಿ ಆಗಿರುವುದರಿಂದ ಈ ಸಲ ಈ ಪ್ರಮಾಣ 9 ಸಾವಿರ ಟನ್‌ಗೆ ಏರಬಹುದು ಎಂದು ಅಂದಾಜಿಸಲಾಗಿದೆ. ಮೀನು ಕೃಷಿಯು ಬಯಲುಸೀಮೆಗೂ ವಿಸ್ತರಿಸಿ, ಮತ್ತೊಂದು ಉಪಕಸುಬಾಗಿ ಪರಿಣಮಿಸಿರುವುದು ಆಶಾದಾಯಕ ಬೆಳವಣಿಗೆ.

ಮಳೆ, ಮಾರುಕಟ್ಟೆ ಧಾರಣೆ ಮತ್ತು ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಈ ಮೂರೂ ಮೂಡಿಸಿದ್ದ ಅನಿಶ್ಚಿತತೆಗಳಿಗೆ ಎದೆಗೊಟ್ಟು ಹೇಗೋ ಬೇಸಾಯದ ಬಂಡಿ ಎಳೆಯುತ್ತಿದ್ದರು ರೈತರು. ಗ್ರಾಮಗಳಲ್ಲಿ ಕೆಲವೇ ಕೊಳವೆಬಾವಿಗಳು ಸಶಕ್ತವಾಗಿದ್ದರಿಂದ ಅದಕ್ಕೆ ಅನುಗುಣವಾಗಿ ಮಿತಪ್ರಮಾಣದಲ್ಲಿ ಬೇಸಾಯದ ಚಟುವಟಿಕೆಗಳು ನಡೆಯುತ್ತಿದ್ದವು. ಈಗ ಜಲಸಂಪನ್ಮೂಲ ಹೇರಳವಾಗಿದೆ. ಆದರೆ ದುಡಿಯುವ ಕೈಗಳ ತೀವ್ರ ಅಭಾವ ಎದುರಾಗಲಿದೆ ಎಂಬ ಆತಂಕದ ಮಾತು ಕೃಷಿ ವಲಯದಲ್ಲಿ ಈಗಾಗಲೇ ಕೇಳಿಬರುತ್ತಿದೆ. ಸಣ್ಣ ಹಿಡುವಳಿ ಹೊಂದಿರುವ ಕುಟುಂಬಗಳ ಕೆಲವು ಯುವಕರು ಬೇಸಾಯಕ್ಕೆ ನೀರಿಲ್ಲ ಎಂಬ ಕಾರಣಕ್ಕೇ ಉದ್ಯೋಗ ಅರಸಿ ನಗರ–ಪಟ್ಟಣಗಳಿಗೆ ವಲಸೆ ಹೋಗಿದ್ದರು. ಅವರಲ್ಲಿ ಕೆಲವರಾದರೂ ಈಗ ಊರುಗಳತ್ತ ಮತ್ತೆ ಮುಖ ಮಾಡಬಹುದು. ಹಾಗಿದ್ದೂ ಕೃಷಿಕಾರ್ಮಿಕರ ಕೊರತೆ ಬಾಧಿಸುವುದರಲ್ಲಿ ಸಂದೇಹವೇ ಇಲ್ಲ.

ನಮ್ಮ ಜನಪದರ ಜೀವನ ದರ್ಶನಗಳಲ್ಲಿ ನೀರು ಪೂರ್ಣತ್ವದ ಪ್ರತೀಕ. ಈ ಜಲಸಮೃದ್ಧಿಯು ಜಲಪ್ರಜ್ಞೆಗೆ ನಾಂದಿಯಾಗಬೇಕು. ಕೆರೆಗಳ ವ್ಯವಸ್ಥಿತ ನಿರ್ವಹಣೆ, ಒತ್ತುವರಿ ತೆರವು, ಜಲಮೂಲಗಳ ಸಂರಕ್ಷಣೆ ಮತ್ತು ಆ ಮೂಲಕ ಮಳೆನೀರು ಸಂಗ್ರಹವು ವ್ಯವಸ್ಥಿತವಾಗಿ ನಡೆಯಲು ಸಾಧ್ಯವಾಗುವಂತಹ ಉಪಕ್ರಮಗಳನ್ನು ಕೈಗೊಳ್ಳಲು ಈ ವಿದ್ಯಮಾನವು ನಮ್ಮ ಅಧಿಕಾರಸ್ಥರಿಗೆ ಪ್ರೇರಣೆಯಾಗಬೇಕು. ಅಂತಹ ಕ್ರಮಗಳು ಕಾಲಮಿತಿಯಲ್ಲಿ ಪರಿಣಾಮಕಾರಿಯಾಗಿ ಜಾರಿಯಾದರೆ ಎಂತಹ ಬರದ ಬೀಡಲ್ಲೂ ನೀರಿನ ಅಭಾವ ನೀಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT