ಕಲಾ ಸಿರಿವಂತಿಕೆಯ ಜಲಗುಡಿ!

7

ಕಲಾ ಸಿರಿವಂತಿಕೆಯ ಜಲಗುಡಿ!

Published:
Updated:

ಹೊಯ್ಸಳರು ಶಿಲೆಯಲ್ಲಿ ಕಲೆಯರಳಿಸಿದ ಧೀಮಂತರು. ಬಳಪದ ಕಲ್ಲಿನಿಂದ ಕಲೆಯ ಹೊಳಪನ್ನು ಕಂಡ ಕಲಾವಂತರು. ಶಿಲೆಗಳಿಗೆ ದೈವ ಸ್ವರೂಪ ತುಂಬಿದ ಸಿರಿವಂತರು. ಶಿಲಾದೇಗುಲಗಳಲ್ಲದೇ ಜಲಕೊಳಗಳನ್ನೂ ನಿರ್ಮಿಸಿದವರು. ಅವರ ಕಾಲದಲ್ಲಿ ನಿರ್ಮಿಸಿರುವ ಕಲಾತ್ಮಕ ಪುಷ್ಕರಣಿಗಳು ಹೊಯ್ಸಳರ ಜಲಸಂರಕ್ಷಣೆ ಪ್ರೀತಿಗೆ ಸಾಕ್ಷಿಯಾಗುತ್ತದೆ. ಅಂಥವುಗಳಲ್ಲಿ ಹುಲಿಕೆರೆಯ ಶಿಲಾವಂತ ಪುಷ್ಕರಣಿಯೂ ಒಂದು.

ಹಾಸನ ಜಿಲ್ಲೆಯ ಹಳೇಬೀಡಿನಿಂದ ಹಗರೆಗೆ ಹೋಗುವ ಮಾರ್ಗದಲ್ಲಿ ಸಿದ್ದಾಪುರದಿಂದ ಒಳಕ್ಕೆ 3 ಕಿ.ಮೀ ಕ್ರಮಿಸಿದರೆ ಹುಲಿಕೆರೆ ಸಿಗುತ್ತದೆ. ಇದು ಪ್ರಕೃತಿಯ ಮಡಿಲೊಳಗೆ ಸುಂದರ ವನರಾಶಿಯ ನಡುವೆ ಇರುವ ಒಂದು ಪುಟ್ಟ ಹಳ್ಳಿ. ಇಲ್ಲಿನ ಶಿಲಾವಂತ ಪುಷ್ಕರಣಿಯಿಂದಾಗಿ ಈ ಊರು ಇತಿಹಾಸ ಪುಟಗಳಲ್ಲಿ ಉಲ್ಲೇಖಿತಗೊಂಡಿದೆ.

ಹೊಯ್ಸಳರ ಇತಿಹಾಸದ ಅಧ್ಯಯನ ಮಾಡುವಾಗ ನನಗೆ ಕಣ್ಣಿಗೆ ಬಿದ್ದದ್ದು ಈ ಹುಲಿಕೆರೆಯ ಪುಷ್ಕರಣಿ ಬಗೆಗಿನ ರಚನೆಯ ಚರಿತೆ. ಇದು ಭೂಮಟ್ಟದಿಂದ 60ಅಡಿ ಆಳದಲ್ಲಿದೆ. ದೂರದಿಂದ ನೋಡಿದರೆ, ಪುಷ್ಕರಣಿ ಇರುವುದಿಲ್ಲ ಕಾಣುವುದಿಲ್ಲ. ಹತ್ತಿರ ಹೋಗಿ ನೋಡಿದಾಗಲೇ ಪುಷ್ಕರಣಿಯಲ್ಲಿರುವ ಕಲೆಯ ನೆಲೆ ಕಾಣುವುದು. ಇದು ವಿಶಿಷ್ಟ ವಾಸ್ತುಶೈಲಿಯಿಂದ ಕೂಡಿದ ದೇಗುಲ ಸ್ವರೂಪದ ಜಲದ ನೆಲೆ.

ಹುಲಿಕೆರೆಯ ಸ್ಥಳದ ಬಗೆಗೆ ಅಷ್ಟೇನು ಇತಿಹಾಸ ದೊರಕದಿದ್ದರೂ, ಸ್ಥಳೀಯರ ಮಾತಿನಂತೆ ಇದು ಹಿಂದೆ ದಟ್ಟಕಾನನವಾಗಿತ್ತು. ಇಲ್ಲಿನ ಕೆರೆಯಲ್ಲಿ ಹುಲಿಗಳು ಬಂದು ನೀರು ಕುಡಿಯುತ್ತಿದ್ದವಂತೆ. ಅದಕ್ಕೆ ಈ ಊರಿಗೆ ವಾಡಿಕೆಯಲ್ಲಿ ಹುಲಿಕೆರೆ ಎಂದು ಹೆಸರು ಬಂದಿದೆ ಎನ್ನುತ್ತಾರೆ. ಇದಕ್ಕಿರುವ ಮತ್ತೊಂದು ಕತೆಯೆಂದರೆ, ಬಿಟ್ಟಿದೇವನ ರಾಣಿ ಶಾಂತಲೆ ತನ್ನ ಸಖಿಯರೊಡಗೂಡಿ ಜಲಕ್ರೀಡೆಗಾಗಿ ಇಲ್ಲಿನ ಪುಷ್ಕರಣಿ ಬರುತ್ತಿದ್ದಳು. ಆಕೆಗಾಗಿಯೇ ಈ ಕೊಳ ನಿರ್ಮಿಸಲಾಗಿತ್ತು. ಆ ವೇಳೆ ಕೊಳದ ಸುತ್ತ ಹುಲಿಯಂತಹ ಸೇನೆಯ ಭದ್ರತೆ ಒದಗಿಸುತ್ತಿದ್ದರು. ಅದಕ್ಕಾಗಿ ಈ ಸ್ಥಳಕ್ಕೆ ‘ಹುಲಿಕೆರೆ’  ಎಂಬ ಹೆಸರು ಬಂತು ಎನ್ನಲಾಗಿದೆ. ಸ್ಥಳೀಯ ಪುರಾಣದ ಪ್ರಕಾರ ಕೊಳಕ್ಕೆ ‘ರಾಣಿ ಶಾಂತಲೆ ಕೊಳ’ ಎನ್ನಲಾಗುತ್ತದೆ. ಇವನ್ನು ಹೊರತುಪಡಿಸಿ ಇಲ್ಲಿ ಈ ಊರಿನ ಬಗ್ಗೆ ತಿಳಿಸುವ ಯಾವುದೇ ದಾಖಲೆಗಳಿಲ್ಲ. ಹುಲಿಕೆರೆಯ ಪುಷ್ಕರಣಿಯು ಹೊಯ್ಸಳರ ಅತ್ಯಂತ ವಿಶಿಷ್ಟ ಸಂರಚನೆಯಾಗಿದೆ. ಈ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಾದಂತಿಲ್ಲ.


ಹುಲಿಕೆರೆಯಲ್ಲಿರುವ ಹೊಯ್ಸಳರ ಕಾಲದ ಕಲ್ಯಾಣಿ

ಹೀಗಿದೆ ಕಲ್ಯಾಣಿ ರಚನೆ
ಪುಷ್ಕರಣಿಯ ನಾಲ್ಕು ಭಾಗಗಳಲ್ಲೂ 27 ಕೋಣೆಗಳಿವೆ. ಇವುಗಳಲ್ಲಿ 11 ಪ್ರಧಾನ ಗೃಹಗಳು ಉಳಿದ 16 ಉಪಗೃಹಗಳಂತಿರುವ ಇವು ಅಧಿಷ್ಠಾನ, ಪಟ್ಟಿಕೆ, ದೇವಗೃಹ, ಶಿಖರವನ್ನು ಹೊಂದಿವೆ. ಇವು ದೇವರ ಗರ್ಭಗುಡಿಯಂತೆ ಕಂಡು ಬರುತ್ತವೆ. ಆದರೆ ಈ ಗುಡಿಗಳಲ್ಲಿದ್ದ ದೇವತೆಗಳ ವಿಗ್ರಹಗಳು ಕಣ್ಮರೆಯಾಗಿವೆ. ಒಂದೆಡೆ ರುಂಡವಿಲ್ಲದ ದೇವತೆಯ ವಿಗ್ರಹವು ತನ್ನ ಮೇಲಾದ ದಾಳಿಯನ್ನು ಪ್ರತಿಬಿಂಬಿಸುತ್ತದೆ. ವಾಸ್ತುಕಲೆ ಮತ್ತು ದೈವಿಕ ಅಂಶಗಳನ್ನೊಂದಿರುವ ಈ ಪುಷ್ಕರಣಿಯನ್ನು ಸಂಶೋಧಕರು ‘ಜಲಾಂತರ್ಗಾಮಿ ದೇವಾಲಯ’ ಎಂದಿದ್ದಾರೆ. ಈ ಕೊಳದ ಕೆಳಭಾಗಕ್ಕೆ ಸಾಗಬೇಕಾದರೆ 36 ಮೆಟ್ಟಿಲುಗಳನ್ನು ಇಳಿಯಬೇಕು. ಜಾಮಿತಿಯ ಲೆಕ್ಕಾಚಾರದಲ್ಲಿಯೇ ಇದು ನಿರ್ಮಾಣವಾಗಿರುವುದು ವಿಶೇಷ.

ಹುಲಿಕೆರೆಯ ಈ ಪುಷ್ಕರಣಿಯನ್ನು ಹೊಯ್ಸಳ ದೊರೆ 1ನೇ ನರಸಿಂಹ ಕ್ರಿ.ಶ. 1160 ರಲ್ಲಿ ನಿರ್ಮಿಸಿದನೆಂದೂ ಇತಿಹಾಸ ಹೇಳುತ್ತದೆ. ಈತನ ಮತ್ತೊಂದು ಹೆಸರು ಲಟ್ಟಯ್ಯ. ಇವನು ಈ ಊರಿನಲ್ಲಿ ‘ಭುವನ ಭೂಷಣ ಲಟ್ಟೇಶ್ವರ’ ಎಂಬ ಶಿವ ದೇವಾಲಯ, ಒಂದು ಜೈನಬಸದಿಯನ್ನು ನಿರ್ಮಿಸಿದ್ದನೆಂದು ತಿಳಿಯುತ್ತದೆ. ಆದರೆ, ಈಗ ಅಂಥ ಕುರುಹು ಸಹ ಇಲ್ಲಿ ಕಂಡು ಬರುವುದಿಲ್ಲ.

ಪುಷ್ಕರಣಿಗೆ ಮಳೆ ನೀರು ಹರಿದು ಬರಲು ವ್ಯವಸ್ಥೆ ಇದೆ. ಹಾಗೆಯೇ, ತುಂಬಿದ ನೀರು ಹೊರ ಹರಿಯುವ ವ್ಯವಸ್ಥೆ ಇದೆ. ಆದರೆ ಅದು ಬಂದ್ ಆಗಿದೆ. ನಾಲ್ಕೈದು ವರ್ಷಗಳ ಹಿಂದೆ ಈ ಪುಷ್ಕರಣಿಯಲ್ಲಿ ನೀರು ಇದ್ದಿದ್ದನ್ನು ನೋಡಿದ್ದೇನೆ. ಆದರೆ, ಮಳೆ ನೀರು ಹರಿಯುವ ದಾರಿಗಳು ಮುಚ್ಚಿ ಹೋಗಿರುವ ಕಾರಣ, ಇತ್ತೀಚೆಗೆ ಇದು ತುಂಬಿಲ್ಲ. ಈಗಲೂ ಇದನ್ನು ಪುನಶ್ಚೇತನಗೊಳಿಸಲು ಅವಕಾಶವಿದೆ.

ಒಟ್ಟಾರೆ, ಇಂಥ ನೀರಿನ ರಚನೆಯನ್ನು ಕಲೆಯೊಂದಿಗೆ ಸಂಯೋಜಿಸಿ ಕಟ್ಟಿರುವ ಹಿರಿಯರ ಪರಿಶ್ರಮ ಮತ್ತು ಮುಂದಾಲೋಚನೆ ಮೆಚ್ಚುವಂಥದ್ದು.
ಚಿತ್ರಗಳು: ಲೇಖಕರವು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !