ಮೈಸೂರಿನಲ್ಲಿ ಆಚಾರ್ಯತ್ರಯರ ಜಯಂತಿ

ಬುಧವಾರ, ಜೂಲೈ 17, 2019
29 °C

ಮೈಸೂರಿನಲ್ಲಿ ಆಚಾರ್ಯತ್ರಯರ ಜಯಂತಿ

Published:
Updated:
Prajavani

ಮೈಸೂರು: ‘ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯರು ನಮಗೆ ಉತ್ತಮ ಮಾರ್ಗವನ್ನು ತೋರಿಸಿಕೊಟ್ಟವರು’ ಎಂದು ಗಣಪತಿ ಸಚ್ಚಿದಾನಂದ ಆಶ್ರಮದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.

ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ವತಿಯಿಂದ ಭಾನುವಾರ ಲಕ್ಷ್ಮೀಪುರಂನ ನೇರಂಬಳ್ಳಿ ಸಾವಿತ್ರಮ್ಮ ಸುಬ್ಬರಾಯರ ಕಲ್ಯಾಣ ಮಂಟಪ‍ದಲ್ಲಿ ನಡೆದ ಆಚಾರ್ಯತ್ರಯರ ಜಯಂತಿಯಲ್ಲಿ ಆಶೀರ್ವಚನ ನೀಡಿದರು.

‘ಗಂಗಾ, ಯಮುನಾ, ಬ್ರಹ್ಮಪುತ್ರ ನದಿಗಳಂತೆ ಶಂಕರಾಚಾರ್ಯ, ಮಧ್ವಾಚಾರ್ಯ ಹಾಗೂ ರಾಮಾನುಜಾಚಾರ್ಯರು ಒಂದೆಡೆ ಸಂಗಮವಾಗಿರುವುದು ಸಂತಸದ ವಿಷಯ. ಅವರ ಕಾಲಘಟ್ಟ ಬೇರೆ ಬೇರೆ ಇರಬಹುದು. ಆದರೆ ಆಚಾರ–ವಿಚಾರಗಳು ಒಂದೇ ಆಗಿದ್ದವು. ಸರ್ಕಾರ ಈ ಆಚಾರ್ಯತ್ರಯರ ಜಯಂತಿಯನ್ನು ಇತರೆ ಜಯಂತಿಗಳಂತೆಯೇ ಆಚರಿಸಬೇಕು’ ಎಂದು ಆಗ್ರಹಿಸಿದರು.

ನಗರ ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ಮಾತನಾಡಿ ‘ಈ ಮೂವರು ಮಹಾಪುರುಷರು ಜಗತ್ತಿನ ಕಣ್ಣು ತೆರೆಸಿದವರು. ಯಾವುದೇ ಧರ್ಮ, ಪಂಥಕ್ಕೆ ಸೀಮಿತವಾಗಿರದೆ ಜಾತ್ಯತೀತತೆಯನ್ನು ಎತ್ತಿ ಹಿಡಿದಿದ್ದರು. ಅವರ ನಡೆ–ನುಡಿಗಳು ಇಂದಿಗೂ ಪ್ರಸ್ತುತ. ಜನರು ಅವರ ಆದರ್ಶ, ಸಿದ್ಧಾಂತಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಡಾ.ಎಚ್.ಪಿ.ನಾಗರಾಜ್ ಮಾತನಾಡಿ ‘ಆಚಾರ್ಯತ್ರಯರು ಸಮಸ್ತ ಪ್ರಪಂಚಕ್ಕೆ ಬ್ರಾಹ್ಮಣ ತತ್ವ, ಕೃತಿ ಹಾಗೂ ಆಚರಣೆಗಳನ್ನು ಪರಿಚಯಿಸಿಕೊಟ್ಟರು. 7ನೇ ಶತಮಾನದಲ್ಲಿದ್ದ ಬೌದ್ಧ, ಜೈನ ಮತಗಳು ವೈದಿಕ ಮತಕ್ಕೆ ವಿರುದ್ಧವಾಗಿದ್ದವು. ದೇಶದಲ್ಲಿ ಐಕ್ಯತೆಯ ಕೊರತೆ ಇದ್ದಾಗ ಶಂಕರಾಚಾರ್ಯ, ಮಧ್ವಾಚಾರ್ಯ ಹಾಗೂ ರಾಮಾನುಜಾಚಾರ್ಯರು ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ಮಾಡಿದ್ದರು’ ಎಂದು ತಿಳಿಸಿದರು.

ಶಾಸಕ ಎಸ್‌.ಎ.ರಾಮದಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಚ್.ಚನ್ನಪ್ಪ, ವಿಪ್ರ ಮುಖಂಡ ಎಚ್.ವಿ.ರಾಜೀವ್, ಮೂಡಾ ಮಾಜಿ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್, ನಗರ ಪಾಲಿಕೆ ಸದಸ್ಯರಾದ ಮಂಜುನಾಥ್, ರಮೇಶ್, ಲತಾ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !