ಪತ್ರಿಕೋದ್ಯಮದಲ್ಲಿ ಮರೆಯಾದ ಬದ್ಧತೆ

7
ಶಿವಮೊಗ್ಗ ಪ್ರೆಸ್ ಟ್ರಸ್ಟ್‌ ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿ ಸದಸ್ಯ ನಾಗತಿಹಳ್ಳಿ ನಾಗರಾಜ್

ಪತ್ರಿಕೋದ್ಯಮದಲ್ಲಿ ಮರೆಯಾದ ಬದ್ಧತೆ

Published:
Updated:
ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ನಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತರಾದ ಶಿವಾನಂದ ಕರ್ಕಿ, ಟಿ. ರಾಮಚಂದ್ರ ರಾವ್, ಕೆ.ಬಿ. ರಾಮಪ್ಪ, ಹುಲಿಮನೆ ತಿಮ್ಮಪ್ಪ, ಶ್ರೀಪಾದ ಬಿಚ್ಚುಗತ್ತಿ ಅವರನ್ನು ಸನ್ಮಾನಿಸಲಾಯಿತು.

ಶಿವಮೊಗ್ಗ: ಆರಂಭದ ದಿನಗಳಲ್ಲಿ ಇದ್ದ ಪ್ರಜ್ಞೆ, ಬದ್ಧತೆ, ಪ್ರಾಮಾಣಿಕತೆ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿಲ್ಲ ಎಂದು ಮಾಧ್ಯಮ ಅಕಾಡೆಮಿ ಸದಸ್ಯ ನಾಗತಿಹಳ್ಳಿ ನಾಗರಾಜ್ ಬೇಸರ ವ್ಯಕ್ತಪಡಿಸಿದರು.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದೆ ಪತ್ರಿಕಾ ಧರ್ಮ ಇತ್ತು. ಇಂದು ಅದು ಉದ್ಯಮವಾಗಿ ಬದಲಾಗಿದೆ. ಅಧಿಕಾರಶಾಹಿ, ರಾಜಕೀಯ ಪಕ್ಷಗಳ ಜತೆ ಗುರುತಿಸಿಕೊಳ್ಳಲಾಗುತ್ತಿದೆ. ಕ್ಯಾಶ್ ರೂಂ ಸಂಪೃಪ್ತವಾದರೆ, ನ್ಯೂಸ್ ರೂಂಗೆ ಅವಕಾಶ ಇರುತ್ತದೆ ಎಂಬ ಸ್ಥಿತಿ ಬಂದಿದೆ. ಸುದ್ದಿ ನೀಡುವ ಒತ್ತಡಗಳಿಗೆ ಸಿಲುಕಿರುವ ಪತ್ರಕರ್ತರು ಅಪ್ರಸ್ತುತ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮೊದಲು ಪತ್ರಿಕೆಗಳಲ್ಲಿ ಒಂದು ಸುದ್ದಿ ಬಂದರೆ ತಕ್ಷಣವೇ ಜಿಲ್ಲಾಡಳಿತ, ಸರ್ಕಾರ ಸಮಸ್ಯೆ ನಿವಾರಣೆಗೆ ಮುಂದಾಗುತ್ತಿತ್ತು. ಆದರೆ, ಇಂದು 50 ಪತ್ರಿಕೆಗಳು ಸುದ್ದಿ ಬರೆದರೂ, ಅಧಿಕಾರಶಾಹಿ ತಲೆಕೆಡಿಸಿಕೊಳ್ಳುವುದಿಲ್ಲ. ಇದಕ್ಕೆ ಪತ್ರಿಕಾ ಕ್ಷೇತ್ರದ ವೈಫಲ್ಯವೇ ಕಾರಣ ಎಂದು ವಿಶ್ಲೇಷಿಸಿದರು. 

ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನ್ನುವುದು ಕೇವಲ ಹೇಳಿಕೆಗೆ ಸೀಮಿತವಾಗಿದೆ. ಅಧಿಕಾರಶಾಹಿಯ ದಬ್ಬಾಳಿಗೆ ನಿಂತಿಲ್ಲ. ಬಸ್‌ಪಾಸ್, ಆರೋಗ್ಯವಿಮೆ ಸೇರಿದಂತೆ ಸವಲತ್ತುಗಳು ದೊರೆತಿಲ್ಲ. ಪತ್ರಕರ್ತರ ಮೂಗಿಗೆ ತುಪ್ಪ ಸವರುವ ಕೆಲಸ ನಡೆಯುತ್ತಿದೆ ಎಂದು ದೂರಿದರು.

ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸುವವರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸುವ ಕಾನೂನು ರೂಪಿಸಬೇಕು. ಮಾಧ್ಯಮ ಸಿಬ್ಬಂದಿಗೆ ಸಂಪೂರ್ಣ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು. ಮಾಧ್ಯಮ ಅಕಾಡೆಮಿ ಮತ್ತೊಬ್ಬ ಸದಸ್ಯ ವೆಂಕಟ್ ಸಿಂಗ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಪತ್ರಿಕೋದ್ಯಮ ಈಗ ಕಾಣಲು ಸಾಧ್ಯವಿಲ್ಲ. ಈಗ ಅದು ಬಂಡವಾಳ ಶಾಹಿಗಳಿಗೆ ಉದ್ಯಮ ಹಾಗೂ ಪತ್ರಕರ್ತರಿಗೆ ನೌಕರಿಯಾಗಿದೆ ಎಂದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಜಿಲ್ಲೆಯ ಬಹುತೇಕ ಪತ್ರಕರ್ತರು ಬಹುಮುಖ ಪ್ರತಿಭೆ ಹೊಂದಿದ್ದಾರೆ. ಲೇಖಕರು, ಚಿಂತಕರು, ಉತ್ತಮ ಬರಹಗಾರರು ಇದ್ದಾರೆ. ಕೆಲವರು ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಅವರಿಗೆ ಸೂಕ್ತ ಸೌಲಭ್ಯ ಒದಗಿಸಬೇಕು ಎಂದು ಕೋರಿದರು.

ಹಿರಿಯ ವಕೀಲ ಕೆ.ಪಿ. ಶ್ರೀಪಾಲ್, ರಂಗ ನಿರ್ದೇಶಕ ಸಾಸ್ವೆಹಳ್ಳಿ ಸತೀಶ್ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಎನ್‌. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ ಕಾರ್ಯದರ್ಶಿ ಸಿ.ವಿ. ಸಿದ್ದಪ್ಪ, ವೈ.ಕೆ. ಸೂರ್ಯನಾರಾಯಣ ಉಪಸ್ಥಿತರಿದ್ದರು. ಈ ಸಮಯದಲ್ಲಿ ಹಿರಿಯ ಪತ್ರಕರ್ತರಾದ ಹುಲಿಮನೆ ತಿಮ್ಮಪ್ಪ, ಟಿ. ರಾಮಚಂದ್ರರಾವ್, ಕೆ.ಬಿ. ರಾಮಪ್ಪ, ಶ್ರೀಪಾದ ಬಿಚ್ಚುಗತ್ತಿ, ಶಿವಾನಂದ ಕರ್ಕಿ ಅವರನ್ನು ಸನ್ಮಾನಿಸಲಾಯಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !