ಮೈಸೂರಿನ ಜೆಎಸ್‌ಎಸ್‌ ಮಾದರಿ ಅಭಿವೃದ್ಧಿ

7
ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರ ಉದ್ಘಾಟಿಸಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ ಭರವಸೆ

ಮೈಸೂರಿನ ಜೆಎಸ್‌ಎಸ್‌ ಮಾದರಿ ಅಭಿವೃದ್ಧಿ

Published:
Updated:
Prajavani

ವಿಜಯಪುರ: ಮಕ್ಕಳನ್ನು ಸದೃಢವಾದ ಸಂಪತ್ತನ್ನಾಗಿ ರೂಪಿಸಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿನ, ಹಳೆ ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿ ತೆರೆದಿರುವ ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರವನ್ನು ಆರೋಗ್ಯ ಸಚಿವ ಶಿವಾನಂದ ಪಾಟೀಲ ಗುರುವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಸಚಿವರು, ‘ಹೆರಿಗೆ ಕೇಂದ್ರಗಳಿಂದ, ಆರ್‌ಬಿಎಸ್‌ಕೆ ತಂಡ ಹಾಗೂ ಎಸ್‌ಎನ್‌ಸಿಯು ಘಟಕಗಳಿಂದ ರೆಫರ್‌ ಆದ ನವಜಾತ ಶಿಶುಗಳನ್ನು ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರದಲ್ಲಿ ತಪಾಸಣೆ ಮಾಡಿ, ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಚಿಕಿತ್ಸೆ ಅವಶ್ಯವಿರುವ ಮಕ್ಕಳಿಗೆ ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿತ ಟೆರ್ಟಿಟರಿ ಸೆಂಟರ್‌ಗಳಿಗೆ ರೆಫರ್ ಮಾಡಲಾಗುವುದು’ ಎಂದರು.

‘2017 ಮಾರ್ಚ್‌ ತಿಂಗಳಿಂದ ಸಣ್ಣ ಪ್ರಮಾಣದಲ್ಲಿ ಸೇವೆ ಆರಂಭಿಸಿರುವ ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರವನ್ನು ಮೈಸೂರಿನ ಜೆಎಸ್‌ಎಸ್‌ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವ ಚಿಂತನೆಯಿದೆ.  ಸರ್ಕಾರದಿಂದ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಲಾಗುವುದು. ಸದ್ಯ ಈ ಕೇಂದ್ರದಲ್ಲಿ 40ರಿಂದ 45 ಮಕ್ಕಳು ನಿತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಸಾಕಷ್ಟು ಮಕ್ಕಳು ಗುಣಮುಖರಾಗಿದ್ದಾರೆ’ ಎಂದು ಹೇಳಿದರು.

‘ನಗರದಲ್ಲಿ ಎ.ಐ.ಎಂ.ಎಸ್‌ ಸ್ಥಾಪನೆ ಆಗಬೇಕು. ಈ ಕೆಲಸ ಕೇಂದ್ರ ಸರ್ಕಾರದಿಂದ ಆಗಬೇಕಿರುವುದರಿಂದ ನಮ್ಮ ಸಂಸದರು ಪ್ರಯತ್ನ ಮಾಡಬೇಕು. ರಾಜ್ಯ ಸರ್ಕಾರವೂ ಸಹ ಪ್ರಯತ್ನ ಮಾಡಲಿದೆ. ನಮ್ಮ ಜಿಲ್ಲಾ ಆಸ್ಪತ್ರೆ ಹೊಂದಿರುವ ವಿಶಾಲವಾದ ಜಾಗದಷ್ಟು, ಮತ್ತೆ ಯಾವ ಜಿಲ್ಲೆಯಲ್ಲೂ ಇಲ್ಲ. ಇಲ್ಲಿಯೇ ಮಾಡಿದರೆ ಒಳ್ಳೆಯದು. ಗುತ್ತಿಗೆ ನೌಕರರ ಸಂಬಳ ಸಮಸ್ಯೆ ಕುರಿತಂತೆ ಶೀಘ್ರ ಪರಿಹರಿಸಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಕಾಸ್‌ ಕಿಶೋರ್‌ ಸುರಳಕರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಮಹೇಂದ್ರ ಕಾಪಸೆ, ಆರ್‌ಸಿಎಚ್‌ಒ ಸಿ.ಎಸ್‌.ಚವ್ಹಾಣ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕಟ್ಟಿ, ಎಸ್‌ಎಂಒ ಮುಕ್ಕುಂದ ಗಲಗಲಿ, ಡಾ.ಸಂಪತ್‌ ಗುಣಾರಿ, ಪ್ರವೀಣ ಮನಗೊಂಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !