ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿದರೆ ನಂಬಿ... ಇದು ನಿಜಕ್ಕೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ!

Last Updated 22 ಅಕ್ಟೋಬರ್ 2019, 4:12 IST
ಅಕ್ಷರ ಗಾತ್ರ

ಅದೊಂದು ವಿಶಿಷ್ಟ ವಿನ್ಯಾಸದ ಕಟ್ಟಡ. ಎದುರು ವಿಶಾಲವಾದ ಪ್ರಾಂಗಣ. ಎಡಬದಿಯಲ್ಲಿ ಮಕ್ಕಳಾಟದ ಉದ್ಯಾನ. ಗೇಟ್ ಎದುರು ನಿಂತರೆ, ಕಾರ್ಪೊರೇಟ್ ಕಚೇರಿಯಂತೆ ಕಾಣುವ ಹೈಟೆಕ್ ಕಟ್ಟಡ. ಕಟ್ಟಡದ ಎಡಬದಿಯ ಗೋಡೆ ಮೇಲೆ ಕಪ್ಪು ಅಕ್ಷರಗಳಲ್ಲಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ’ ಎಂದು ಬರೆದಿದೆ...!

ಅರೆ, ಇದು ಸರ್ಕಾರಿ ಶಾಲೆನಾ? ಹೌದು. ಖಂಡಿತವಾಗಿ ಇದು ಬೆಂಗಳೂರು ನಗರದ ಅಂಚಿನಲ್ಲಿರುವ ಜಾಲ ಗ್ರಾಮಪಂಚಾಯ್ತಿ ವ್ಯಾಪ್ತಿಯ ನವರತ್ನ ಅಗ್ರಹಾರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಈ ಶಾಲೆ ಹೊರಗಿನಿಂದಷ್ಟೇ ಅಲ್ಲ, ಒಳಾಂಗಣ ಹಾಗೂ ಪಾಠ ಮತ್ತು ಪಠ್ಯೇತರವಾಗಿಯೂ ಅಷ್ಟೇ ‘ಹೈಟೆಕ್‌’ ಆಗಿದೆ. ಶಾಲೆಯ ಆವರಣದ ಒಂದು ಭಾಗದಲ್ಲಿ ಚಿಕ್ಕಮಕ್ಕಳಿಗೆ ಪ್ರತ್ಯೇಕವಾದ ಆಟದ ವ್ಯವಸ್ಥೆ ಇದೆ. ಒಟ್ಟು ಹನ್ನೊಂದು ತರಗತಿ ಕೊಠಡಿಗಳಿವೆ. ಕಂಪ್ಯೂಟರ್‌ ಕೊಠಡಿ, ಮುಖ್ಯಶಿಕ್ಷಕರ, ಶಿಕ್ಷಕರ ಮತ್ತು ಭದ್ರತಾ ಸಿಬ್ಬಂದಿ ಕೊಠಡಿ, ಸಭಾಂಗಣ, ಕ್ರೀಡಾ ವಿಭಾಗ, ದಾಖಲೆಗಳ ಕೊಠಡಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯ ಸೌಲಭ್ಯಗಳಿವೆ.

ಮಧ್ಯಾಹ್ನದ ಬಿಸಿಯೂಟಕ್ಕಾಗಿ ಪ್ರತ್ಯೇಕ ಕೊಠಡಿ ಮತ್ತು ಟೇಬಲ್‌, ಕುರ್ಚಿಗಳ ವ್ಯವಸ್ಥೆ ಕಲ್ಪಿಸಲಾಗಿದೆ. 31 ಸಿಸಿ ಟಿವಿ ಕ್ಯಾಮೆರಾಗಳನ್ನು ಜೋಡಿಸಿದ್ದಾರೆ. ಜತೆಗೆ, ಪಾಠೋಪಕರಣಗಳು, ಪೀಠೋಪಕರಣಗಳಿವೆ. ಪ್ರತಿ ಕೊಠಡಿಗೂ ಫ್ಯಾನ್‌ ಇದೆ. ಶುದ್ಧ ನೀರಿನ ಘಟಕವಿದೆ. ವಿಜ್ಞಾನ ಪ್ರಯೋಗಾಲಯಕ್ಕೆ ಇನ್ನೊಂದು ಕೊಠಡಿ ಇದೆ. ಮುಖ್ಯ ಶಿಕ್ಷಕರ ಕೊಠಡಿಯಿಂದ ಪ್ರತಿ ಕೊಠಡಿಗೆ ಧ್ವನಿವರ್ಧಕದ ಮೂಲಕ ಸಂದೇಶ ರವಾನಿಸುವ ವ್ಯವಸ್ಥೆ ಇದೆ. ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ಸಕಲ ಮೂಲಸೌಕರ್ಯಗಳು ಇಲ್ಲಿ ಲಭ್ಯ. ಶಾಲೆಯ ಭದ್ರತೆ ಉಸ್ತುವಾರಿಗೆ ಒಬ್ಬ ಕಾವಲುಗಾರರನ್ನು ನಿಯೋಜಿಸಲಾಗಿದೆ. ‘ಇಂಥ ಹಲವು ಸೌಲಭ್ಯಗಳನ್ನು ಹೊಂದಿರುವ ಅಪರೂಪದ ಶಾಲೆ ಇದಾಗಿದೆ’ ಎನ್ನುತ್ತಾರೆ ಶಿಕ್ಷಕ ಸಮೂಹ.

ಅಂದ ಹಾಗೆ, ಈ ಎಲ್ಲ ಸೌಲಭ್ಯಗಳು ಸರ್ಕಾರಿ ಅನುದಾನದಿಂದ ಬಂದಿದ್ದಲ್ಲ. ಇದೆಲ್ಲ, ಉದ್ಯಮಿ, ಅನಿವಾಸಿ ಭಾರತೀಯ ರೊನಾಲ್ಡ್‌ ಕೊಲಾಸೊ ಅವರ ಆಸಕ್ತಿಯಿಂದ ದೊರೆತಿದ್ದು. ಅವರು ಈ ಶಾಲಾ ಕಟ್ಟಡ ನಿರ್ಮಿಸಿ, ಹೈಟೆಕ್ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ‘ಹಳ್ಳಿ ಮಕ್ಕಳೂ ಆಧುನಿಕ ಸೌಲಭ್ಯಗಳಿಂದ ವಂಚಿತರಾಗಬಾರದು’ ಎನ್ನುವ ಉದ್ದೇಶದಿಂದ ಅವರು ಈ ಯೋಜನೆ ಕೈಗೊಂಡಿದ್ದಾರೆ. ಇದಕ್ಕಾಗಿಯೇ ಅವರು ₹ 3.10 ಕೋಟಿ ನೀಡಿದ್ದಾರೆ.

ಹೈಟೆಕ್ ಶಾಲೆ ಹಿಂದಿನ ಕಥೆ..

18 ವರ್ಷಗಳ ಹಿಂದೆ ಕೊಲಾಸೊ ಅವರು ಇದೇ ಶಾಲೆಗೆ ಐದು ಕೊಠಡಿಗಳನ್ನು ನಿರ್ಮಿಸಿ ಕೊಟ್ಟಿದ್ದರು. ಆದರೆ, ಕೆಲವು ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿ ಮಳೆ ಬಂದಾಗ ಸೋರುತ್ತಿದ್ದವು. ಈ ವಿಷಯವನ್ನು ಶಾಲೆಯ ಮುಖ್ಯ ಶಿಕ್ಷಕರು ಕೊಲಾಸೊ ಅವರ ಗಮನಕ್ಕೆ ತಂದಾಗ ಕೊಠಡಿ ರಿಪೇರಿ ಮಾಡಿಸುವ ಬದಲಿಗೆ ಹೊಸ ಕಟ್ಟಡವನ್ನೇ ನಿರ್ಮಿಸುವ ನಿರ್ಧಾರಕ್ಕೆ ಬಂದರು. ಆದರೆ, ಎಲ್ಲ ಸರ್ಕಾರಿ ಶಾಲೆಗಳಂತೆ ಕಟ್ಟಡ ನಿರ್ಮಾಣ ಮಾಡುವ ಬದಲು ವಿಭಿನ್ನ ವಿನ್ಯಾಸ ಮತ್ತು ಅಂತರರಾಷ್ಟ್ರೀಯ ಗುಣಮಟ್ಟದಂತಹ ಕಟ್ಟಡ ಕಟ್ಟಿಸಬೇಕು. ಅಂಥದ್ದೇ ಸೌಲಭ್ಯಗಳನ್ನೂ ಕೊಡಬೇಕು ಎಂದು ಯೋಜನೆ ರೂಪಿಸಿದರು. ಆ ಯೋಜನೆಯ ಫಲವೇ 12 ಸಾವಿರ ಚ.ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಹೈಟೆಕ್ ಶಾಲೆ. ರೊನಾಲ್ಡ್‌ ಅವರ ಪುತ್ರ ನೈಜಿಲ್‌ ಕಟ್ಟಡ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಕೇವಲ ಐದೇ ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಿದರು.

ಶಾಲೆ ಹೈಟೆಕ್ ಆದ ಮೇಲೆ, ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಶೈಕ್ಷಣಿಕ ವರ್ಷದ ಮಧ್ಯದಲ್ಲೇ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ‘ಈ ಮೊದಲು ಒಂದರಿಂದ ಏಳನೇ ತರಗತಿಯವರೆಗೆ 60 ವಿದ್ಯಾರ್ಥಿಗಳಿದ್ದರು. ಈಗ 72 ವಿದ್ಯಾರ್ಥಿಗಳಿದ್ದಾರೆ. ಇನ್ನು ಹಲವರು ಇದೇ ಶಾಲೆಗೆ ಬರುವ ಉತ್ಸಾಹ ತೋರಿದ್ದಾರೆ’ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ಎಚ್‌.ವಿಜಯಲಕ್ಷ್ಮಿ.

‘ಕೊಲಾಸೊ ಅವರಿಂದಾಗಿ ಮಕ್ಕಳು ಮತ್ತು ಶಿಕ್ಷಕರು ಖುಷಿಯಾಗಿದ್ದಾರೆ. ಈಗ ಶಾಲೆಯಲ್ಲಿ ಕಾಯಂ ನಾಲ್ವರು ಶಿಕ್ಷಕರ ಜತೆ ನಾಲ್ವರು ಅರೆಕಾಲಿಕ ಶಿಕ್ಷರನ್ನು ನೇಮಿಸಲಾಗಿದೆ. ಈ ಅರೆಕಾಲಿಕ ಶಿಕ್ಷಕರಿಗೆ ಕೊಲಾಸೊ ಅವರೇ ವೇತನ ನೀಡುತ್ತಿದ್ದಾರೆ. ಗ್ರಾಮಸ್ಥರು ಸಹ ಶಾಲಾಬ್ಯಾಗ್‌, ಸಮವಸ್ತ್ರ, ಶೂ, ಪುಸ್ತಕಗಳನ್ನು ಕೊಡಿಸುತ್ತಿದ್ದಾರೆ’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT