ಶುಕ್ರವಾರ, ನವೆಂಬರ್ 15, 2019
24 °C

‘ಕೆ.ಜಿ’ ಮೀರಿಸಿದ ಅಂಗನವಾಡಿ

Published:
Updated:

ಅಂಗನವಾಡಿ ಕೇಂದ್ರಗಳೆಂದರೆ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಹಾಗೂ ಬರುವ ಮಕ್ಕಳನ್ನು ಆರೈಕೆ ಮಾಡುವುದಕ್ಕಷ್ಟೇ ಸೀಮಿತ ಎನ್ನುವಂತಾಗಿದೆ. ಇಂಥ ಕಾಲಘಟ್ಟದಲ್ಲಿ ಕೊಟ್ಟೂರು ತಾಲ್ಲೂಕಿನ ಬಿ.ಗಜಾಪುರದ ಅಂಗನವಾಡಿ ಬಿ ಕೇಂದ್ರ, ಕಾನ್ವೆಂಟ್‌ಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಶಿಕ್ಷಣೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಆಕರ್ಷಿಸುತ್ತಿದೆ.

ಎರಡರಿಂದ ನಾಲ್ಕು ವರ್ಷದ ಮಕ್ಕಳು ಚಿಲಿಪಿಲಿಗುಟ್ಟುವ ಈ ಪುಟ್ಟ ಕೋಣೆ. ಅಲ್ಲಿ ಟೀಚರ್ ಕೇಳುವ ಪ್ರತಿ ಪ್ರಶ್ನೆಗಳಿಗೂ ಮಕ್ಕಳು ಸ್ಪರ್ಧೆಗೆ ಬಿದ್ದಂತೆ ಪಟಪಟನೆ ಉತ್ತರಿಸುತ್ತಾರೆ. ಪ್ಲಾಸ್ಟಿಕ್ ಕಪ್‍ಗಳನ್ನು ಚಕಚಕನೆ ಜೋಡಿಸುತ್ತಾ ಸೂಪರ್ ಮಿನಿಟ್ ರಿಯಾಲಿಟಿ ಶೋವನ್ನು ಅಣಕು ಮಾಡಿ ಚಪ್ಪಾಳೆ ತಟ್ಟುತ್ತಾರೆ. ಮಗುವೊಂದು ನೆಟ್‍ನಲ್ಲಿ ಬಾಸ್ಕೆಟ್ ಬಾಲ್‌ ಅನ್ನು ಎಸೆಯುವಾಗ ಉಳಿದೆಲ್ಲರೂ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಾರೆ. ಗಾಂಧೀಜಿ ಹೆಸರು ಹೇಳಿದ ತಕ್ಷಣ, ಅವರಿಗೆ ಸಂಬಂಧಿಸಿದ ಹತ್ತಾರು ಸಂಗತಿಗಳನ್ನು ಒಬ್ಬೊಬ್ಬರಾಗಿ ಪಟಪಟನೆ ಹೇಳುತ್ತಾ ಗಾಂಧಿಯ ಜೀವನ ಕಥನವನ್ನು ಅರಳಿಸುತ್ತಾರೆ. ‘ಸ್ವಾತಂತ್ರ್ಯ’ ಎಂದು ಹೆಸರಿಸಿದರೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಹೆಸರನ್ನು ಉಲಿಯುತ್ತಾರೆ. ‘ಸೊಳ್ಳೆ’ ಎಂದರೆ, ಅದರ ಪರಿಚಯದ ಜತೆಗೆ, ಅದರಿಂದ ಹರಡುವ ರೋಗಗಳು ಹಾಗೂ ಸೊಳ್ಳೆ ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತೆ ಬಗ್ಗೆಯೂ ವಿವರಿಸುತ್ತಾರೆ.

ಹೀಗೆ ಒಂದೊಂದು ಸಂಗತಿಯ ಬಗೆಗೂ ಸಾಮೂಹಿಕವಾಗಿ ಹಾಗೂ ಸರದಿಯಲ್ಲಿ ಉತ್ತರದ ಸರಪಳಿ ಹೆಣೆಯುವ ಈ ಮಕ್ಕಳು ಇಂಟರ್ ನ್ಯಾಷನಲ್ ಎಂದು ಕರೆದುಕೊಳ್ಳುವ ಯಾವುದೇ ಖಾಸಗಿ ಕಾನ್ವೆಂಟ್ ಸ್ಕೂಲಿನಲ್ಲಿ ಓದುತ್ತಿಲ್ಲ. ಹತ್ತಾರು ಅವಕಾಶಗಳಿರುವ ಸರ್ಕಾರಿ ಶಾಲೆಯ ಮಕ್ಕಳೂ ಅಲ್ಲ. ಬಳ್ಳಾರಿ ಜಿಲ್ಲೆ ಕೂಟ್ಟೂರು ತಾಲೂಕಿನ ಕೂಡ್ಲಿಗಿಯಿಂದ ಪಶ್ಚಿಮಕ್ಕೆ 10 ಕಿಲೋಮೀಟರ್ ದೂರದಲ್ಲಿರುವ ಗಜಾಪುರದ ಅಂಗನವಾಡಿ ಬಿ ಕೇಂದ್ರದ ಮಕ್ಕಳು.

ಕಲಿಕಾ ಸಾಮಗ್ರಿಗಳು

ಅಂಗನವಾಡಿ ಕಾರ್ಯಕರ್ತೆಯೊಬ್ಬರು ಇಷ್ಟೆಲ್ಲಾ ಪ್ರಯೋಗ ಮಾಡುತ್ತಾರಾ ಎಂದು ನೋಡಲು ನೀವೇನಾದರೂ ಈ ಪುಟ್ಟ ಕೇಂದ್ರವನ್ನು ಪ್ರವೇಶಿಸಿದರೆ, ನಿಮ್ಮ ಎದುರಿಗೆ ಹತ್ತಾರು ಹೊಸ ಹೊಸ ಪ್ರಯೋಗಗಳು, ಕಲಿಕಾ ಸಾಮಗ್ರಿಗಳು ತೆರೆದುಕೊಳ್ಳುತ್ತವೆ. ಮಕ್ಕಳೇ ಬಳಸಿ ಬಿಸಾಡಿದ ವಸ್ತುಗಳು ಇಲ್ಲಿ ಕಲಿಕಾ ಸಾಮಗ್ರಿಗಳಾಗಿವೆ. ಅಷ್ಟೇ ಅಲ್ಲ, ಮನೆಗಳಲ್ಲಿರುವ ವಿವಿಧ ಬೀಜಗಳನ್ನು ಸಂಗ್ರಹಿಸಿ ಜೋಡಿಸಿಟ್ಟಿದ್ದಾರೆ. ಅಲ್ಲಿನ ಒಂದೊಂದು ಬೀಜವನ್ನು ತೋರಿಸಿದಾಗಲೂ ಆ ಬೀಜದ ಬೆಳೆ, ಹಣ್ಣು, ಕಾಯಿ, ಬೆಳೆಯುವ ಕಾಲಮಾನ, ಬೆಳೆಯ ಅವಧಿ ಇತ್ಯಾದಿಗಳನ್ನು ಮಕ್ಕಳು ಹೇಳುತ್ತಾರೆ.

ಪ್ರತಿ ದಿನ ಹನ್ನೊಂದು ಗಂಟೆಗೆ ಒಂದು ಮಗು ಶಾಲೆಯಿಂದ ಹೊರಗಡೆ ಬಂದು ವಾತಾವರಣವನ್ನು ಅವಲೋಕಿಸುತ್ತದೆ. ನಂತರ ಉಳಿದ ಮಕ್ಕಳಿಗೆ ಈ ದಿನದ ಹವಾಮಾನ ಹೇಗಿದೆ ಎಂದು ವಿವರಿಸುತ್ತದೆ. ಪ್ರತಿ ಮಗುವಿಗೆ ಒಂದು ಚೀಲ ಕೊಟ್ಟಿದ್ದಾರೆ. ಅದನ್ನು ಗೋಡೆಯಲ್ಲಿ ತೂಗು ಹಾಕಿರುತ್ತಾರೆ. ಆ ಮಗು ಒಂದು ವಾರದಲ್ಲಿ ತಾನು ಬರೆಯುವ ಡ್ರಾಯಿಂಗ್ ಹಾಗೂ ಬರೆಯುವ ಪುಟಗಳನ್ನು ಆ ಚೀಲದಲ್ಲಿ ಜೋಡಿಸಿಡುತ್ತದೆ. ವಾರಕ್ಕೊಮ್ಮೆ ಪೋಷಕರನ್ನು ಕರೆಸಿ ಮಕ್ಕಳ ವಾರದ ಚಟುವಟಿಕೆಯನ್ನು ವಿವರಿಸಲಾಗುತ್ತದೆ. ಕನ್ನಡ ಮತ್ತು ಇಂಗ್ಲಿಷ್‌ ಅಂಕೆ ಸಂಖ್ಯೆಯ ಅಕ್ಷರಗಳನ್ನು ಗುರುತಿಸುತ್ತಲೇ ಓದುವ ಪ್ರಯತ್ನ ಮಾಡುವ ಮಕ್ಕಳನ್ನು ನೋಡಿ ಪ್ರತಿ ಪೋಷಕರಿಗೆ ತಮ್ಮ ಮಗು ಏನೇನು ಕಲಿಯುತ್ತಿದೆ ಎನ್ನುವ ಸ್ಪಷ್ಟತೆ ಸಿಕ್ಕಿ ಖುಷಿಯಾಗುತ್ತಾರೆ.

ಮಕ್ಕಳಿಂದಲೂ ಪ್ರತಿಸ್ಪಂದನೆ

ದಿನ ಬಳಸುವ ವಸ್ತುಗಳಿಂದ ತಯಾರಿಸುವ ಸಾಮಗ್ರಿ ಬಳಸಿ ಕಲಿಯುವ ಮಕ್ಕಳು ಅದನ್ನು ಮನೆಯಲ್ಲಿ ತಂದೆ ತಾಯಿಯರಿಗೆ ವಿವರಿಸುತ್ತಾರೆ. ಪ್ರತಿ ವಾರ ಒಂದು ವಿಷಯ ಆಯ್ದುಕೊಂಡು ಆ ವಿಷಯದ ಬಗ್ಗೆ ಚಿತ್ರಗಳನ್ನು ತೋರಿಸುತ್ತಾ ಅವುಗಳ ಲಕ್ಷಣಗಳನ್ನು ವಿವರಿಸುತ್ತಾರೆ. ಒಂದು ಚಿತ್ರವನ್ನು ತೋರಿಸಿದ ತಕ್ಷಣ ಮಕ್ಕಳು ಆ ಚಿತ್ರಕ್ಕೊಂದು ಕಥೆ ಕಟ್ಟುತ್ತಾರೆ. ಮೋಡ, ಹವಾಮಾನ, ಹೊಲಗಳಲ್ಲಿ ಬೆಳೆಯುವ ಬೆಳೆಗಳು, ಸುತ್ತಮುತ್ತಣ ಪರಿಸರ ಎಲ್ಲದರ ಬಗ್ಗೆಯೂ ಮಕ್ಕಳು ಮಾತನಾಡುತ್ತಾರೆ.

ಖಾಲಿ ರಟ್ಟಿನ ಬಾಕ್ಸ್‌ಗಳನ್ನು ಬಳಸಿ ಮನೆ, ಆಸ್ಪತ್ರೆ, ಶಾಲೆಯ ಮಾದರಿಗಳನ್ನು ತಯಾರಿಸಿ ಸ್ವಚ್ಛ ಹಳ್ಳಿಯೊಂದರ ಚಿತ್ರಣವನ್ನು ಕಣ್ಣಮುಂದೆ ತರುತ್ತಾರೆ. ತೂಗುಹಾಕಿದ ಚೀಲಗಳ ಬಣ್ಣವನ್ನು ಗುರುತಿಸಿ ಆಯಾ ಬಣ್ಣದ ಹತ್ತಾರು ಸಂಗತಿಗಳನ್ನು ಜೋಡಿಸಿ ಹೇಳುತ್ತಾರೆ. ಹೀಗೆ ಮಕ್ಕಳ ಗ್ರಹಿಕೆಯನ್ನು ಸೂಕ್ಷ್ಮಗೊಳಿಸಲಾಗಿದೆ. ಮಕ್ಕಳು ಪ್ರತಿಯೊಂದರ ಬಗ್ಗೆಯೂ ತಿಳಿದುಕೊಳ್ಳುವ ಕುತೂಹಲಿಗಳಾಗಿದ್ದಾರೆ. ಸಮಗ್ರ ಬಾಲವಿಕಾಸ ಯೋಜನೆಯ ಪೂರ್ವ ಪ್ರಾಥಮಿಕ ಶಿಕ್ಷಣದ ಉದ್ದೇಶ ಇಲ್ಲಿ ಸಾಕಾರಗೊಂಡಿದೆ. ಇದನ್ನು ರೂಪಿಸಿದವರು ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ಬಿ.ವಸಂತ.

ಅಂಗವೈಕಲ್ಯ ಮರೆತವರು..

ಏಳು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿರುವ ವಸಂತ ಅವರು ತನಗಿರುವ ಅಂಗವೈಕಲ್ಯವನ್ನು ಮರೆತು ಮಕ್ಕಳ ಜತೆ ಮಕ್ಕಳಂತೆಯೇ ಬೆರೆಯುತ್ತಾರೆ. ನಾಳೆ ಮಕ್ಕಳಿಗೆ ಯಾವ ಪ್ರಯೋಗ ಮಾಡಬೇಕು, ಹೊಸದೇನನ್ನು ಕಲಿಸಬೇಕು ಎನ್ನುವ ಯೋಚನೆಯೇ ಅವರನ್ನು ಕ್ರಿಯಾಶೀಲವಾಗಿಟ್ಟಿದೆ. ‘ನನಗಿನ್ನೂ ತುಂಬಾ ಕನಸುಗಳಿವೆ ಸರ್. ನಮ್ಮ ಇಲಾಖೆ ಮತ್ತು ಊರಿನ ಗ್ರಾಮಸ್ಥರಿಂದ ಉತ್ತಮ ಪ್ರೋತ್ಸಾಹವಿದೆ. ಆದರೆ ಈ ತರಹದ ಪ್ರಯೋಗಗಳಿಗೆ ಇಲಾಖೆಯಿಂದ ಹಣ ಕೊಡುವ ನಿಯಮವಿಲ್ಲ. ಹಾಗಾಗಿ ಅಗತ್ಯವಿದ್ದ ಹಣವನ್ನು ನಾವೇ ಕೈಯಿಂದ ಹಾಕಬೇಕು ಅಥವಾ ಹಣವಿಲ್ಲದೆ ಪುಕ್ಕಟೆಯಾಗಿ ಸಿಗುವ ವಸ್ತುಗಳನ್ನೇ ಬಳಸಿ ಪ್ರಯೋಗಗಳನ್ನು ಮಾಡಬೇಕು’ ಎನ್ನುತ್ತಾರೆ ವಸಂತ. ವಸಂತ ಅವರ ಇಂಥ ಕ್ರಿಯಾಶೀಲ ಚಟುವಟಿಕೆಗಳಿಗೆ ಅಂಗನವಾಡಿ ಸಹಾಯಕಿ ರತ್ನಮ್ಮ ಪೂರಕವಾಗಿ ಸಹಕರಿಸುತ್ತಾರೆ.

‘ವಸಂತ ಟೀಚರ್ ಬಾಳ ಚಲೋ‌ ಕಲಿಸ್ತಾರೆ ಸರ್. ಅಂಗನವಾಡಿ ಅನ್ನಂಗಿಲ್ಲ ಅಷ್ಟು ಇಂಪ್ರು ಮಾಡ್ಯಾರ. ನನ್ನ ಮಕ್ಕಳು ಅಲ್ಲೆ ಓದ್ತಾರೆ. ನಮ್ಮ ಗ್ರಾಮ ಪಂಚಾಯ್ತಿಯಿಂದ ಈ ತನ್ಕ ಏನನ್ನೂ ಕೇಳಿಲ್ಲ. ಅವರೇ ಖರ್ಚು ಮಾಡಿಕೊಂಡು ಎಲ್ಲಾ ಮಾಡಿದ್ದಾರೆ. ಮುಂದೆ ಗ್ರಾಮಪಂಚಾಯ್ತಿಯಿಂದ ಶಾಲೆಗೆ ಹೆಲ್ಪ್ ಆಗೋ ತರ ಏನಾದ್ರೂ ಕೊಡಿಸೋಕೆ ನೋಡ್ತೀವಿ’ ಎನ್ನುತ್ತಾರೆ ಗಜಾಪುರದ ಗ್ರಾಮ ಪಂಚಾಯ್ತಿ ಸದಸ್ಯ ಮಲ್ಲಿಕಾರ್ಜುನ ಬಿ.

‘ನಾವು ಬಡವರು. ಕಾನ್ವೆಂಟಿಗೆ ಕಳಿಸೋವಷ್ಟು ದುಡ್ಡಿಲ್ಲ. ಕಾನ್ವೆಂಟಿಗೆ ಹೋಗುವ ಮಕ್ಕಳಿಗಿಂತ ಚೆನ್ನಾಗಿ ಓದ್ತಾಳೆ’ ಎಂದು ಅಂಗನವಾಡಿಯಲ್ಲಿರುವ ತನ್ನ ಮಗಳ ಬಗ್ಗೆ ಭಾಗ್ಯಮ್ಮ ಹೆಮ್ಮೆಯ ಮಾತುಗಳನ್ನಾಡುತ್ತಾರೆ.

ಬಿ.ವಸಂತ ಮಾದರಿ ತಾಲೂಕಿಗೆ ಅಳವಡಿಸುತ್ತೇವೆ

ಅಂಗನವಾಡಿ ಕಾರ್ಯಕರ್ತೆ ಬಿ.ವಸಂತ ಅವರು ಅನುಸರಿಸಿರುವ ಈ ಮಾದರಿಯನ್ನು ತಾಲೂಕಿನ ಇತರೆ ಅಂಗನವಾಡಿಗಳಲ್ಲಿ ಅಳವಡಿಸಿಕೊಳ್ಳಲು ತಿಳಿಸಿದ್ದೇವೆ ಎಂದು ಕೂಡ್ಲಿಗಿ ತಾ. ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ಎ.ಆರ್. ಮಧುಸೂದನ ತಿಳಿಸಿದ್ದಾರೆ.

ಚಿತ್ರಗಳು: ಲೇಖಕರವು

ಪ್ರತಿಕ್ರಿಯಿಸಿ (+)