ಮಂಗಳವಾರ, ಸೆಪ್ಟೆಂಬರ್ 27, 2022
27 °C
ತನಿಖೆಯ ಓಂನಾಮವೇ ಗೊತ್ತಿಲ್ಲ

ತನಿಖೆಯ ಓಂನಾಮವೇ ಗೊತ್ತಿಲ್ಲ: ಎಸಿಬಿಗೆ ಹೈಕೋರ್ಟ್‌ ಚಾಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಅಪರಾಧ ಪ್ರಕರಣಗಳ ತನಿಖೆಯ ಓಂನಾಮವೇ ಗೊತ್ತಿಲ್ಲ’ ಎಂದು ಚಾಟಿ ಬೀಸಿದ ಹೈಕೋರ್ಟ್‌, ‘ಇಂತಹ ಲೋಪಗಳನ್ನು ಕಂಡೂ ಕಣ್ಮುಚ್ಚಿ ಕೂರಲಾಗುವುದಿಲ್ಲ’ ಎಂದು ಖಡಕ್‌ ಎಚ್ಚರಿಕೆ ನೀಡಿದೆ.

ಎಸಿಬಿ ಕ್ರಮ ಪ್ರಶ್ನಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್‌) ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ.ಆರ್. ಕುಮಾರ್ ನಾಯ್ಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಕಿಡಿ ಕಾರಿದೆ. 

ಅರ್ಜಿದಾರರ ಪರ ವಕೀಲ ಕೆ.ಸತೀಶ್, ‘ಪ್ರಕರಣದಲ್ಲಿ ಎಸಿಬಿ ನಡೆಸಿರುವ ತನಿಖೆಯ ವಿಧಾನ ಕಾನೂನು ಬಾಹಿರವಾಗಿದೆ. ಎಫ್‌ಐಆರ್‌ಗೂ ಮೊದಲು ಎಸಿಬಿ ಪ್ರಾಥಮಿಕ ತನಿಖೆ ನಡೆಸಿಲ್ಲ ಹಾಗೂ ಮೂಲ ವರದಿಯನ್ನೂ ತಯಾ ರಿಸಿಲ್ಲ. ದಾಳಿ ನಡೆಸಿ ಅರ್ಜಿದಾರರಿಗೆ ಮಾನಸಿಕ ಹಿಂಸೆ ನೀಡಲಾಗಿದೆ’ ಎಂದು ಆಕ್ಷೇಪಿಸಿದರು. ಈ ಆಕ್ಷೇ
ಪಣೆಗೆ ದಾಖಲೆ ಪರಿಶೀಲಿಸಿದ ನ್ಯಾಯಪೀಠ, ‘ಕಾನೂನು ಪ್ರಕ್ರಿಯೆಯ ದುರುಪಯೋಗ ಮಾಡಿಕೊಳ್ಳಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿತು. 

ಆರ್‌ಟಿಒ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್‌ ವಿರುದ್ಧದ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣವೊಂದರಲ್ಲಿ ಕುಮಾರ್ ನಾಯ್ಕ ವಿರುದ್ಧ ಎಸಿಬಿ ಮಾರ್ಚ್‌ 16ರಂದು ಆದಾಯ ಮೀರಿ ಆಸ್ತಿ ಗಳಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಜನನ–ಮರಣ ನೋಂದಣಿ: ವಕೀಲರ ಸಂಘದ ವಿರೋಧ

ಬೆಂಗಳೂರು: ಜನನ ಮತ್ತು ಮರಣ ನೋಂದಣಿ ಪ್ರಕರಣಗಳನ್ನು ನ್ಯಾಯಾಲಯಗಳ ವ್ಯಾಪ್ತಿಯಿಂದ ಉಪವಿಭಾಗಾಧಿಕಾರಿಗಳಿಗೆ ವರ್ಗಾಯಿಸುವ ಸರ್ಕಾರದ ಕ್ರಮಕ್ಕೆ ಬೆಂಗಳೂರು ವಕೀಲರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ‘ಈ ತಿದ್ದುಪಡಿಯಿಂದ ವೃತ್ತಿಪರ ವಕೀಲರಿಗೆ ತೊಂದರೆಯಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದೆ.

ಈ ಕುರಿತಂತೆ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತು ಖಜಾಂಚಿ ಎಂ.ಟಿ. ಹರೀಶ್‌ ಕಾನೂನು ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ‘ಈ ತಿದ್ದುಪಡಿ ಕಾಯ್ದೆ ಕಾನೂನು ಬಾಹಿರ. ಆದ್ದರಿಂದ, ಕೂಡಲೇ ವಾಪಸು ಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.

‘ಸಾರ್ವಜನಿಕ ವಲಯದಲ್ಲಿ ಅಪಾರ ಪ್ರಮಾಣದಲ್ಲಿ ನಕಲಿ ಜನನ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್‌ ಬಳಕೆ ಮಾಡಲಾಗುತ್ತಿದೆ. ಇದನ್ನು ತಡೆಯುವ ಶಕ್ತಿ ಕೇವಲ ನ್ಯಾಯಾಂಗಕ್ಕೆ ಮಾತ್ರವಿದೆ. ನ್ಯಾಯಾಧೀಶರಾದರೆ, ಯಾವುದೇ ಅಳುಕು ಇಲ್ಲದೇ ಅಥವಾ ಮೀನಮೇಷ ಎಣಿಸಿದೇ ಕಾನೂನು ಪ್ರಕಾರ ಆದೇಶ ನೀಡುತ್ತಾರೆ. ಹಾಗಾಗಿ, ಜನನ ಮತ್ತು ಮರಣ ನೋಂದಣಿ ವಿಚಾರಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳಿಗಿಂತ ನ್ಯಾಯಾಧೀಶರ ಸುಪರ್ದಿಯಲ್ಲೇ ಇತ್ಯರ್ಥಗೊಳಿಸುವಂತಾಗಬೇಕು’ ಎಂದು ಒತ್ತಾಯಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು