ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಡಿಕೇಟ್‌, ಸೆನೆಟ್‌ ಸದಸ್ಯರ ನೇಮಕಾತಿ ರದ್ದು

ಆರೋಗ್ಯ ವಿ.ವಿ.: ಹಿಂದಿನ ಸದಸ್ಯರನ್ನೇ ಮುಂದುವರಿಸುವಂತೆ ಹೈಕೋರ್ಟ್‌ ಆದೇಶ
Last Updated 30 ಜೂನ್ 2021, 20:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (ಆರ್‌ಜಿಯುಎಚ್‌ಎಸ್‌) ಸಿಂಡಿಕೇಟ್‌ ಮತ್ತು ಸೆನೆಟ್‌ ಸದಸ್ಯರನ್ನು ನೇಮಿಸಿ ಈಗಿನ ಬಿಜೆಪಿ ಸರ್ಕಾರ 2020ರ ಅಕ್ಟೋಬರ್‌ನಲ್ಲಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದು ಮಾಡಿದೆ.

ಹಿಂದಿನ ಅವಧಿಯಲ್ಲಿ ನೇಮಕಗೊಂಡಿದ್ದ ಸಿಂಡಿಕೇಟ್‌ ಮತ್ತು ಸೆನೆಟ್‌ ಸದಸ್ಯರನ್ನು ಹುದ್ದೆಯಲ್ಲಿ ಮುಂದುವರಿಸಿರುವ ನ್ಯಾಯಪೀಠ, ಈ ಸದಸ್ಯರು ಗೌರವಯುತವಾಗಿ ತಮ್ಮ ಅವಧಿ ಪೂರೈಸಲು ಅವಕಾಶ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಡಾ. ದೀಪ್ತಿ ಭಾವಾ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಆದೇಶ ಪ್ರಕಟಿಸಿರುವ ನ್ಯಾಯಮೂರ್ತಿ ಜಿ. ನರೇಂದರ್‌ ನೇತೃತ್ವದ ಪೀಠ, ‘ಸಿಂಡಿಕೇಟ್‌ ಮತ್ತು ಸೆನೆಟ್‌ ಸದಸ್ಯರು ತಮ್ಮ ಆಸ್ತಿ ಎಂದು ಭಾವಿಸುವುದು ಸಲ್ಲದು. ಅತ್ಯುನ್ನತ ಶಿಕ್ಷಣ ಸಂಸ್ಥೆಗಳನ್ನು ರಾಜಕೀಯ ಪಕ್ಷಗಳು ಮತ್ತು ಸಿದ್ಧಾಂತಗಳ ಆಧಾರದಲ್ಲಿ ನಡೆಸುವುದು ಅಪಾಯಕಾರಿ. ಇಂತಹ ಬೆಳವಣಿಗೆ ಈ ಸಂಸ್ಥೆಗಳಲ್ಲಿನ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಅದು ಸಮಾಜದ ಮೇಲೂ ಪರಿಣಾಮ ಬೀರುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮನ್ನು ಆರ್‌ಜಿಯುಎಚ್‌ಎಸ್‌ನ ಸಿಂಡಿಕೇಟ್‌ ಮತ್ತು ಸೆನೆಟ್‌ ಸದಸ್ಯರನ್ನಾಗಿ 2018ರ ಅಕ್ಟೋಬರ್‌ 16ರಂದು ನೇಮಿಸಲಾಗಿತ್ತು. 2020ರ ಅಕ್ಟೋಬರ್‌ 23ರಂದು ತಮ್ಮ ಸ್ಥಾನಕ್ಕೆ ಬೇರೆ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಅವಧಿ ಪೂರ್ಣಗೊಳ್ಳುವ ಮೊದಲೇ ಹುದ್ದೆಯಿಂದ ತೆರವು ಮಾಡಲಾಗಿದೆ ಎಂದು ಅರ್ಜಿದಾರರು ದೂರಿದ್ದರು.

‘ಈ ವ್ಯಕ್ತಿಗಳ ಶೈಕ್ಷಣಿಕ ಸಾಮರ್ಥ್ಯವನ್ನು ಪರಿಗಣಿಸದೇ ಅವರನ್ನು ರಾಜಕೀಯ ವ್ಯಕ್ತಿಗಳಾಗಿ ನೋಡುತ್ತಿರುವುದರಿಂದ ಅವರ ನೇಮಕಾತಿಯ ವಿಚಾರ ವಿವಾದವಾಗಿ ಮಾರ್ಪಟ್ಟಿರುವುದು ನೋವಿನ ಸಂಗತಿ. ಯಾವುದೇ ಅತ್ಯುನ್ನತ ವ್ಯಕ್ತಿಗಳು ಯಾವುದೋ ಒಂದು ರಾಜಕೀಯ ಪಕ್ಷ ಅಥವಾ ಸಂಘಟನೆಯ ಸದಸ್ಯರಾದ ಮಾತ್ರಕ್ಕೆ ಅವರ ಮೌಲ್ಯ ಕಡಿಮೆಯಾಗುವುದಿಲ್ಲ. ಅವರ ಅರ್ಹತೆಗೆ ಅನುಗುಣವಾಗಿ ಯಾವತ್ತೂ ಅತ್ಯುನ್ನತ ವ್ಯಕ್ತಿಗಳಾಗಿಯೇ ಇರುತ್ತಾರೆ’ ಎಂದು ನ್ಯಾಯಪೀಠ ಹೇಳಿದೆ.

ಆಡಳಿತಾತ್ಮಕ ಅನುಕೂಲಕ್ಕಾಗಿ ಸಿಂಡಿಕೇಟ್‌ ಮತ್ತು ಸೆನೆಟ್‌ ಸದಸ್ಯರ ಬದಲಾವಣೆ ಮಾಡಲಾಗಿದೆ ಎಂದು ಸರ್ಕಾರದ ವಕೀಲರು ಸರ್ಕಾರದ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದರು. ಅದನ್ನು ಮಾನ್ಯ ಮಾಡದ ನ್ಯಾಯಪೀಠ, ‘ಅರ್ಜಿದಾರರ ಬದಲಾಗಿ ನೇಮಿಸಿರುವ ವ್ಯಕ್ತಿಗಳು ಇವರಿಗಿಂತಲೂ ಹೆಚ್ಚು ಅರ್ಹತೆ ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಯಾವ ದಾಖಲೆಗಳನ್ನೂ ನ್ಯಾಯಾಲಯದ ಮುಂದೆ ಇಟ್ಟಿಲ್ಲ. ಇಂತಹ ಕಾರಣಗಳು ಕೇವಲ ನೆಪಕ್ಕಷ್ಟೇ’ ಎಂದು ಪ್ರತಿಕ್ರಿಯಿಸಿದೆ.

‘ಒಂದು ನಿಗದಿತ ಅವಧಿಗೆ ನೇಮಕಗೊಂಡ ವ್ಯಕ್ತಿಗಳನ್ನು ಸರಿಯಾದ ಕಾರಣಗಳಿಲ್ಲದೇ ಅವಧಿಗೂ ಮುನ್ನ ತೆರವುಗೊಳಿಸಲು ಸಾಧ್ಯವಿಲ್ಲ. ಹುದ್ದೆಯಿಂದ ತೆರವು ಮಾಡುವ ಮುನ್ನ ಸಕ್ಷಮ ಪ್ರಾಧಿಕಾರ ಅಥವಾ ರಾಜ್ಯ ಸರ್ಕಾರ, ಸಕಾರಣಗಳನ್ನು ದಾಖಲಿಸುವುದು ಕಡ್ಡಾಯ. ಅರ್ಜಿದಾರರ ನೇಮಕಾತಿಯಿಂದ ಆಡಳಿತಾತ್ಮಕವಾಗಿ ಯಾವ ತೊಡಕುಗಳು ಸೃಷ್ಟಿಯಾಗಿದ್ದವು ಎಂಬುದನ್ನು ಪ್ರತಿವಾದಿಗಳಾದ ಆರ್‌ಜಿಯುಎಚ್‌ಎಸ್‌ ಅಥವಾ ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಟ್ಟಿಲ್ಲ’ ಎಂದೂ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಇನ್ನು ಅತಿ ಕಡಿಮೆ ಅವಧಿ ಉಳಿದಿರುವುದರಿಂದ ಅರ್ಜಿದಾರರನ್ನು ಹುದ್ದೆಯಲ್ಲಿ ಮುಂದುವರಿಸುವಂತೆ ಆದೇಶ ನೀಡಬಾರದು ಎಂದು ವಿಶ್ವವಿದ್ಯಾಲಯದ ವಕೀಲರು ಮನವಿ ಮಾಡಿದ್ದರು. ಅದನ್ನು ತಿರಸ್ಕರಿಸಿರುವ ನ್ಯಾಯಪೀಠ, ‘ಅರ್ಜಿದಾರರನ್ನು ಅಗೌರವಯುತವಾಗಿ ಹುದ್ದೆಯಿಂದ ತೆರವು ಮಾಡಲಾಗಿತ್ತು. ಅವರು ಅವಧಿ ಪೂರೈಸಿ ಗೌರವಯುತವಾಗಿ, ತಲೆ ಎತ್ತಿಕೊಂಡು ನಿರ್ಮಿಸಲು ಅವಕಾಶ ಒದಗಿಸಬೇಕು’ ಎಂದು ತಾಕೀತು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT