ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಹಕ್ಕಿಲ್ಲ: ಹೈಕೋರ್ಟ್‌

ಹೈಕೋರ್ಟ್‌ ಮಹತ್ವದ ತೀರ್ಪು: ಪ್ರಾಣೇಶ್ ಸ್ಥಾನಕ್ಕೆ ಕುತ್ತು?
Last Updated 3 ನವೆಂಬರ್ 2022, 20:51 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಮಗಳೂರು ಕ್ಷೇತ್ರದಿಂದ ವಿಧಾನಪರಿಷತ್‌ ಸ್ಥಾನಕ್ಕೆ ನಡೆದಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಯ ಗಳಿಸಿದ್ದ ಎಂ.ಕೆ.ಪ್ರಾಣೇಶ್‌ ಅವರ ಆಯ್ಕೆ ಪ್ರಶ್ನಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ‘ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಹಕ್ಕಿಲ್ಲ’ ಎಂದು ಮಹತ್ವದ ತೀರ್ಪು ನೀಡಿದೆ.

ಆರು ಮತಗಳ ಅಂತರದಲ್ಲಿ ಸೋಲನುಭವಿಸಿದ್ದ ಕಾಂಗ್ರೆಸ್ ಪಕ್ಷದ ಗಾಯತ್ರಿ ಶಾಂತೇಗೌಡ ಈ ಸಂಬಂಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನ ಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ನಾಮ ನಿರ್ದೇಶಿತ ಸದಸ್ಯರು ಕೇವಲ ಸಲಹೆ-ಸೂಚನೆಗಳನ್ನು ಮಾತ್ರವೇ ನೀಡಬಹುದು’ ಎಂದು ಹೇಳಿದೆ. ಏತನ್ಮಧ್ಯೆ, ಎಂ.ಕೆ.ಪ್ರಾಣೇಶ್ ಆಯ್ಕೆ ಅಸಿಂಧು ಕೋರಿ ಸಲ್ಲಿಸಲಾಗಿರುವ ಚುನಾವಣಾ ತಕರಾರು ಅರ್ಜಿ ಮತ್ತೊಂದು ನ್ಯಾಯಪೀಠದಲ್ಲಿ ವಿಚಾರಣೆಗೆ ಬಾಕಿ ಇದೆ.

‘ಸಂವಿಧಾನದ 243 (6)ನೇ ವಿಧಿ ಮತ್ತು ಕರ್ನಾಟಕ ಮುನ್ಸಿಪಲ್‌ ಕಾಯ್ದೆ–1964ರ ಅನುಸಾರ ನಾಮ
ನಿರ್ದೇಶಿತ ಸದಸ್ಯರಿಗೆವಿಧಾನಪರಿಷತ್ ಚುನಾವಣೆ ಮಾತ್ರವಲ್ಲದೆ, ಮುನಿಸಿಪಾಲಿಟಿ ಸಭೆಗಳಲ್ಲೂ ಮತದಾನ ಮಾಡುವ ಹಕ್ಕಿಲ್ಲ’ ಎಂದು ನ್ಯಾಯಪೀಠ ವಿವರಿಸಿದೆ.

ಅರ್ಜಿದಾರರ ಪರ ವಕೀಲರು, ‘ಮತದಾರರ ಪಟ್ಟಿಗೆ 4 ಪಟ್ಟಣ ಪಂಚಾಯ್ತಿಗಳ 12 ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಿರುವುದು ಕಾನೂನು ಬಾಹಿರ. ಸಂವಿಧಾನದ ನಿಯಮಗಳ ಪ್ರಕಾರ ನಾಮನಿರ್ದೇಶಿತ ಸದಸ್ಯರಿಗೆ ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಭಾಗವಹಿಸಬಹುದೇ ಹೊರತು, ಅವರಿಗೆ ಮತದಾನದ ಹಕ್ಕಿರುವುದಿಲ್ಲ’ ಎಂಬ ವಾದ ಮಂಡಿಸಿದ್ದರು.

ಆರು ಮತ ಅಂತರದ ಗೆಲುವು

ಚಿಕ್ಕಮಗಳೂರು: ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಾಣೇಶ್‌ 1,188 ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಎ.ವಿ.ಗಾಯತ್ರಿ ಶಾಂತೇಗೌಡ 1,182 ಮತಗಳನ್ನು ಪಡೆದಿದ್ದರು. ಆರು ಮತಗಳಿಂದ ಪ್ರಾಣೇಶ್ ಗೆದ್ದಿದ್ದರು.

ಒಟ್ಟು 2,417 ಮತದಾರರು ಇದ್ದರು. ಈ ಪೈಕಿ 12 ನಾಮನಿರ್ದೇಶಿತ ಸದಸ್ಯರು ಇದ್ದರು. 2,410 ಮತಗಳು (ಶೇ 99.71) ಚಲಾವಣೆಯಾಗಿದ್ದವು. 2,371 ಮತಗಳು ಸಿಂಧು ಹಾಗೂ 39 ಮತಗಳು ಅಸಿಂಧುವಾಗಿದ್ದವು.

2021ರ ನವೆಂಬರ್ 16ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಿತ್ತು. ಐವರು ಅಭ್ಯರ್ಥಿಗಳು ಕಣದಲ್ಲಿದ್ದರು. ‌ಡಿಸೆಂಬರ್ 10ರಂದು ಚುನಾವಣೆ ನಡೆದಿತ್ತು. 14ರಂದು ಮತ ಎಣಿಕೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT