ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ 1 ವರ್ಷ: ಪ್ರಗತಿಗೆ ತಾಳ; ವಿವಾದಗಳದ್ದೇ ಸಪ್ಪಳ

Last Updated 27 ಜುಲೈ 2022, 19:30 IST
ಅಕ್ಷರ ಗಾತ್ರ

‘ಅದೃಷ್ಟ’ದ ಮುಖ್ಯಮಂತ್ರಿ ಸ್ಥಾನವನ್ನು ಬಸವರಾಜ ಬೊಮ್ಮಾಯಿ ಅವರು ಅಲಂಕರಿಸಿ, ಜುಲೈ 28ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಆಡಂಬರಕ್ಕೆ ಒಗ್ಗದ, ಅಬ್ಬರಕ್ಕೆ ಬಗ್ಗದ ಸಮಚಿತ್ತದ ಬೊಮ್ಮಾಯಿ, ನಡೆ–ನುಡಿಯಲ್ಲಿ ಸರಳತೆಯನ್ನೇ ಮೈಗೂಡಿಸಿಕೊಂಡವರು. ಸಮಚಿತ್ತ–ಸಮಾಧಾನದ ವ್ಯಕ್ತಿತ್ವವೇ ಅವರ ಆಡಳಿತಕ್ಕೆ ಮಗ್ಗುಲು ಮುಳ್ಳಾಗತೊಡಗಿ, ಸರ್ಕಾರದ ಹೊರಗಿರುವ ‘ಪರ’ರು ಪ್ರಾಬಲ್ಯ ಸಾಧಿಸಿದ್ದು ಒಂದು ವರ್ಷದಲ್ಲಿ ಈ ನಾಡಿನ ಮತದಾರರ ಕಣ್ಣಿಗೆ ರಾಚಿದ್ದಿದೆ. ಸಿಕ್ಕಿದ ‘ಜನಾಧಿಕಾರ’ವನ್ನು ನಿಷ್ಠುರ, ನಿರ್ದುಷ್ಟವಾಗಿ ಬಳಸಿದ್ದರೆ ಹಿಂದಣ ಮುಖ್ಯಮಂತ್ರಿಗಳು ಸ್ಥಾಪಿಸಿದ್ದ ಮೈಲಿಗಲ್ಲುಗಳನ್ನು ದಾಟಿ, ಇತಿಹಾಸ ಸೃಷ್ಟಿಸುವ ಅವಕಾಶಗಳು ತನ್ನಿಂತಾನೇ ತೆರೆದುಕೊಳ್ಳುತ್ತಿದ್ದವು.

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಪಟ್ಟ ಏರಿದ ಮೊದಲ ದಿನವೇ ‘ರೈತ ವಿದ್ಯಾನಿಧಿ’ಯಂತಹ ದೂರದೃಷ್ಟಿಯ ಯೋಜನೆ ಘೋಷಿಸಿದ ಬೊಮ್ಮಾಯಿ, ‘ಸಿಎಂ’ ಎಂದರೆ ಕಾಮನ್ ಮ್ಯಾನ್ (ಸಾಮಾನ್ಯ ಮನುಷ್ಯ) ಎಂದು ಹೇಳಿ ಹೊಸ ಅರ್ಥವನ್ನು ಕೊಟ್ಟರು. ಸಮಾರಂಭಗಳಲ್ಲಿ ಹಾರ–ತುರಾಯಿ ಬದಲು ಕನ್ನಡ ಪುಸ್ತಕ ಕೊಡಿ, ಅತಿಗಣ್ಯ ವ್ಯಕ್ತಿಗಳಿಗೆ ನೀಡುವ ‘ಝೀರೋ ಟ್ರಾಫಿಕ್‌’ ಬೇಡ ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಆಡಳಿತಕ್ಕೆ ಹೊಸತನ ನೀಡುವ ಸುಳಿವು ಕೊಟ್ಟಿದ್ದರು. ಜನ ಕಲ್ಯಾಣದ ಮೂಲಕ ಸಮೃದ್ಧ ನಾಡನ್ನು ಕಟ್ಟುವ ‘ನವ ಕರ್ನಾಟಕ’ದ ಕನಸನ್ನೂ ಬಿತ್ತಿದ್ದರು. ಪ್ರಗತಿಗೆ ಪೂರಕವಾದ ‘ತಾಳ’ವೂ, ಅದಕ್ಕೆ ಬೇಕಾದ ಮೇಳವೂ ಜತೆಗಿತ್ತು. ಆದರೆ, ಒಂದಾದ ಮೇಲೊಂದರಂತೆ ನಾಡಿನ ಮೇಲೆ ಛೂಬಿಟ್ಟ ವಿವಾದಗಳು ಸರ್ಕಾರದ ಅಭಿವೃದ್ಧಿಯ ಹಾದಿಗೆ ತೊಡರುಗಾಲು ಆದವು. ‘ಪ್ರಗತಿ–ಕೋಮು ವಿಕೃತಿ’ಯ ಸಂಘರ್ಷ ಬಿರುಸುಗೊಂಡಿತು. ಈ ವ್ಯಾಜ್ಯದಲ್ಲಿ ಸರ್ಕಾರ ಅಥವಾ ಮುಖ್ಯಮಂತ್ರಿ ಯಾರ ಪರ ಎಂಬ ಸ್ಪಷ್ಟತೆಯೇ ಜನರಿಗೆ ಸಿಗದೇ ಹೋಯಿತು. ತಾಕಲಾಟದ ಮೇಲಾಟ ನಡೆದಾಗ ಸರ್ಕಾರದ ನಿರ್ಲಿಪ್ತ ಧೋರಣೆ, ಕೆಲವೊಮ್ಮೆ ವಿಕೃತಿಯ ಪರ ವಕಾಲತ್ತಿನ ನಡೆಯೂ ಅನುಮಾನಗಳಿಗೆ ಕಾರಣವಾಗುತ್ತಾ ಹೋಯಿತು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರ ಮುನ್ನೆಲೆಗೆ ಬಂದಾಗ ಅನೇಕ ಹೆಸರುಗಳು ಓಡಾಡಿದರೂ ಕೊನೆಗೆ ಅಚ್ಚರಿಯ ಆಯ್ಕೆಗೆ ಕಾರಣರಾದವರು ಪ್ರಧಾನಿ ನರೇಂದ್ರ ಮೋದಿ. ಮೋದಿಯವರ ನಿಕಟ ಬೆಂಬಲದೊಂದಿಗೆ ಆಡಳಿತ ಚುಕ್ಕಾಣಿ ಹಿಡಿದ ಬೊಮ್ಮಾಯಿಯವರ ಮೇಲೆ ನಿರೀಕ್ಷೆ ಅಪಾರವಾಗಿತ್ತು. ಅದಕ್ಕೆ ಪೂರಕವೆಂಬಂತೆ ಅನೇಕ ಕಾರ್ಯಕ್ರಮಗಳನ್ನೂ ಅವರು ಘೋಷಿಸಿದರು. ಬಜೆಟ್ ಬೆನ್ನಲ್ಲೇ ಆದೇಶಗಳೂ ಹೊರಬಂದವು. ಇದ್ದ ಸಂಪನ್ಮೂಲದಲ್ಲೇ ಸರ್ವರ ಕಲ್ಯಾಣದ ಅನೇಕ ಯೋಜನೆಗಳಿಗೆ ಚಾಲನೆಯನ್ನೂ ಕೊಟ್ಟರು. ಯೋಜನೆಗಳ ರೂಪುರೇಷೆ, ಚೌಕಟ್ಟು ನೋಡಿದರೆ ಅನ್ವೇಷಣಾತ್ಮಕ ಗುಣ ಎದ್ದು ಕಾಣುತ್ತಿತ್ತು. ನಾಲ್ಕೈದು ಮುಖ್ಯಮಂತ್ರಿಗಳ ಜತೆಗೆ ಹತ್ತಿರದ ನಂಟಿದ್ದ ಬೊಮ್ಮಾಯಿ ಅವರಿಗೆ ನಾಡನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವ ಮುಂಗಾಣ್ಕೆ ಸಹಜವಾಗಿಯೇ ಬಂದಿತ್ತು. ಅನುಭವವನ್ನು ಕಾರ್ಯರೂಪಕ್ಕೆ ತರುವತ್ತ ಅವರು ಲಕ್ಷ್ಯ ವಹಿಸಿದ್ದು ಆರಂಭಿಕ ದಿನಗಳಲ್ಲಿ ಕಾಣಿಸುತ್ತಿತ್ತು.

ಆದರೆ, ಹಿಂದಿನ ಎರಡು ವರ್ಷದ ಸರ್ಕಾರದ ಅವಧಿಯ ‘ಬೆನ್ನಭಾರ’ ಅವರನ್ನು ತುಸು ಬಗ್ಗಿಸಿತು. ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ 40ರಷ್ಟು ಲಂಚ ಪ್ರಕರಣದ ಬಗ್ಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ಪ್ರಧಾನಿ ಕಚೇರಿಗೆ ದೂರು ಸಲ್ಲಿಕೆಯಾಗಿತ್ತು. ಆ ಸರ್ಕಾರದ ಭಾಗಿದಾರರಾಗಿದ್ದ ಬೊಮ್ಮಾಯಿ ಅವರಿಗೆ ಈ ಪತ್ರದ ‘ಕಿಮ್ಮತ್ತು’ ಗೊತ್ತಿತ್ತು. ಮುಖ್ಯಮಂತ್ರಿಯಾದ ಕೂಡಲೇ, ಗುತ್ತಿಗೆದಾರರ ಆರೋಪದ ಬಗ್ಗೆ ನ್ಯಾಯಯುತ ತನಿಖೆ ನಡೆಸಿ, ಸರ್ಕಾರದಲ್ಲಿ ಪಾರದರ್ಶಕತೆ ತರುವ ಯತ್ನ ಮಾಡಲಿಲ್ಲ.

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳುತ್ತಿದ್ದರು. ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಗುಸುಗುಸು ಶುರುವಾದಾಗಲೇ ತನಿಖೆ ನಡೆಸಬೇಕಿತ್ತು. ಯಾವುದೇ ಅಕ್ರಮ ನಡೆದಿಲ್ಲ ಎಂದು ಗೃಹ ಸಚಿವರು ಸಮರ್ಥಿಸಿಕೊಂಡರು. ಕೊನೆಗೆ ನೇಮಕಾತಿ ವಿಭಾಗದ ಎಡಿಜಿಪಿಯೇ ಇದರಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಬಂಧನಕ್ಕೆ ಒಳಗಾದಾಗ ಸರ್ಕಾರ ಗುಂಡಿಗೆ ಬಿದ್ದಾಗಿತ್ತು. ಇಷ್ಟೆಲ್ಲ ಆದರೂ, ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಸಿಐಡಿಯೇ ಈ ಹಗರಣವನ್ನು ಬಯಲಿಗೆಳೆದಿದೆ ಎಂಬುದನ್ನು ಉಲ್ಲೇಖಿಸದೇ ಇರಲಾಗದು. ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎಂಬ ದೂರಿದ್ದು, ಕೆಲವರ ಬಂಧನವೂ ಆಗಿದೆ. ಆದರೆ, ಅದರ ಆಳ–ಅಗಲ ಇನ್ನಷ್ಟೇ ಹೊರಬೇಕಿದೆ.

ಹಿಜಾಬ್‌ ವಿವಾದ ತೀವ್ರವಾಗಿದ್ದ ವೇಳೆ ಉಡುಪಿಯಲ್ಲಿ ಭಿನ್ನ ಸಮುದಾಯದ ವಿದ್ಯಾರ್ಥಿನಿಯರು ಜತೆಯಲ್ಲಿ ಶಾಲೆಗೆ ಹೋಗುವ ಮೂಲಕ ಸೌಹಾರ್ದ ಸಾರಿದ್ದರು
ಹಿಜಾಬ್‌ ವಿವಾದ ತೀವ್ರವಾಗಿದ್ದ ವೇಳೆ ಉಡುಪಿಯಲ್ಲಿ ಭಿನ್ನ ಸಮುದಾಯದ ವಿದ್ಯಾರ್ಥಿನಿಯರು ಜತೆಯಲ್ಲಿ ಶಾಲೆಗೆ ಹೋಗುವ ಮೂಲಕ ಸೌಹಾರ್ದ ಸಾರಿದ್ದರು

ವಿವಾದಗಳ ಮುಮ್ಮೇಳ: ಪ್ರಗತಿಯ ತಾಳವನ್ನು ಬೊಮ್ಮಾಯಿ ಹಾಕುತ್ತಲೇ ಬಂದರೂ ವಿವಾದಗಳೇ ಮುಮ್ಮೇಳವಾಗಿ ಅದರ ಸಪ್ಪಳವೇ ಜೋರಾಯಿತು. ಹಿಜಾಬ್‌, ಆಜಾನ್‌ಗೆ ನಿಷೇಧ, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಇವೆಲ್ಲ ನಡೆಯುತ್ತಲೇ ಹೋದವು. ಹಿಜಾಬ್‌ ವಿವಾದವನ್ನು ಆರಂಭದಲ್ಲೇ ಶಾಂತಿಯುತವಾಗಿ ಇತ್ಯರ್ಥ ಮಾಡಿದ್ದರೆ, ಸರ್ಕಾರ ಹಟಕ್ಕೆ ಕೂರದೇ ಇದ್ದರೆ ಅದು ಜಗತ್ತಿಗೆ ಗೊತ್ತಾಗುತ್ತಿರಲಿಲ್ಲ. ಗಾಯವನ್ನು ಕೆರೆದು ಹುಣ್ಣು ದೊಡ್ಡದು ಮಾಡುವಲ್ಲಿ ಸಚಿವರೇ ಮುಂದೆ ನಿಂತರು. ಆಗ ಕೈಕಟ್ಟಿ ಕೂರಬೇಕಾದ ಸ್ಥಿತಿ ಮುಖ್ಯಮಂತ್ರಿಯದಾಗಿಬಿಟ್ಟಿತು. ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಿದ ಬಗ್ಗೆ ಉದ್ಯಮಿ ಕಿರಣ ಮಜುಂದಾರ್ ಷಾ ಟ್ವೀಟ್ ಮಾಡಿದ ಬಳಿಕ, ಪ್ರಕರಣ ದೇಶದ ಗಮನ ಸೆಳೆಯಿತು. ಆಗಲೂ, ಬೊಮ್ಮಾಯಿ ಮೌನ ಮುರಿಯಲಿಲ್ಲ.

ಪಠ್ಯಪುಸ್ತಕವನ್ನು ಅತಾರ್ಕಿಕವಾಗಿ ಪರಿಷ್ಕರಣೆ ಮಾಡಿಸಿದ್ದು ‘ದೆಹಲಿ’ಯ ಸೂತ್ರಧಾರಿ. ಉತ್ತರದಾಯಿ ಆಗಿದ್ದು ಬೊಮ್ಮಾಯಿ. ಆರಂಭದ ದಿನಗಳಲ್ಲಿ ‘ನಾರಾಯಣಗುರು, ಭಗತ್ ಸಿಂಗ್ ಪಠ್ಯ ಕೈಬಿಟ್ಟಿಲ್ಲ. ಕನಕದಾಸರಿಗೆ ಅವಮಾನ ಮಾಡಿಲ್ಲ’ ಎಂದು ಶಿಕ್ಷಣ ಸಚಿವ ನಾಗೇಶ್ ಹೇಳುತ್ತಲೇ ಬಂದರು. ಅವರು ಹೇಳುತ್ತಾ ಬಂದ ಸುಳ್ಳನ್ನು ನಂಬಿಕೂತ ಬೊಮ್ಮಾಯಿ, ವಿವಾದದ ಗುಡ್ಡವನ್ನೇ ತಮ್ಮ ಮೇಲೆ ಎಳೆದುಕೊಂಡರು. ಪರಿಷ್ಕರಣೆಯಂತಹ ಚಾರಿತ್ರಿಕ ಕೆಲಸವನ್ನು ಚರಿತ್ರೆ ಗೊತ್ತಿರುವವರಿಗೆ ಕೊಡುವ ಬದಲು ಅನರ್ಹರಿಗೆ ಕೊಟ್ಟ ಪಾಪದ ಫಲವನ್ನೂ ಉಂಡರು. ಇದು ಸರಿಯಲ್ಲವೆಂದು ಗೊತ್ತಾಗುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಜನರು ಕೊಟ್ಟ ಅಧಿಕಾರವನ್ನು ಜನಹಿತಕ್ಕೆ ಬಳಸುವ ವಿವೇಚನಾಧಿಕಾರ ಮುಖ್ಯಮಂತ್ರಿಗೆ ಇರುತ್ತದೆ. ಅದನ್ನು ಬಳಸಬೇಕು ಕೂಡ. ರಾಜರ ಕಾಲದಲ್ಲಿ ‘ದೊರೆ’ಗಳು ಧರೆಗೆ ಕಿವಿಗೊಟ್ಟು ಜನರ ನಡಿಗೆಯ ಸದ್ದನ್ನು ಆಲಿಸುತ್ತಿದ್ದರು, ಮಾರುವೇಷ ಧರಿಸಿ ಜನರ ಮಧ್ಯೆ ಓಡಾಡಿ ಅವರ ಭಾವನೆ ತಿಳಿದುಕೊಳ್ಳುತ್ತಿದ್ದರು. ದೊರೆಗಳೇ ಹೀಗೆ ಮಾಡುತ್ತಿದ್ದಾಗ ಪ್ರಜಾಪ್ರಭುತ್ವ ರಾಷ್ಟ್ರದ ‘ಪ್ರಭು’ಗಳು ಪ್ರಜೆಗಳ ದನಿಗೆ ಕಿವಿಕೊಡುವ ಕೆಲಸ ಮಾಡಿದರಷ್ಟೇ ಆಡಳಿತ ಜನಾನುರಾಗಿ ಆದೀತು.

ಬೊಮ್ಮಾಯಿ ಸರ್ಕಾರದ ಸಾಧನೆಗಳು

lರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಯೋಜನೆ ಜಾರಿ. ಕೋರ್ಸಿಗೆ ಅನುಗುಣವಾಗಿ ₹2,000 ಗಳಿಂದ ₹11,000 ವರೆಗೆ ವಿದ್ಯಾರ್ಥಿ ವೇತನ ವಿತರಣೆ

lಕೃಷಿಯಲ್ಲಿ ಯಂತ್ರೋಪಕರಣ ಬಳಕೆ ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚ ಭಾರವನ್ನು ತಗ್ಗಿಸಲು ರೈತರಿಗೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರತಿ ಎಕರೆಗೆ ₹250 ರಂತೆ ಗರಿಷ್ಠ 5 ಎಕರೆಗೆ ಡಿಬಿಟಿ ಮೂಲಕ ಡೀಸೆಲ್‌ಗೆ ಸಹಾಯ ಧನ ನೀಡುವ ರೈತ ಶಕ್ತಿ ಯೋಜನೆ

lರೈತರ ಆದಾಯ ಹೆಚ್ಚಿಸುವ ಧ್ಯೇಯದೊಂದಿಗೆ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ‘ಸೆಕೆಂಡರಿ ಕೃಷಿ ನಿರ್ದೇಶನಾಲಯ’ ಸ್ಥಾಪನೆ

lಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೋತ್ಸಾಹಿಸುವ ಸಲುವಾಗಿ ಮತ್ತು ಇತರ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕ ಕೃಷಿ ಪ್ರಶಸ್ತಿ ಮತ್ತು ಕೃಷಿ ಪಂಡಿತ ಪ್ರಶಸ್ತಿ ಸ್ಥಾಪನೆ

lಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ನೀಡಲು ದೇಶದಲ್ಲೇ ಮೊದಲ ಬಾರಿಗೆ ‘ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್‌’ ಸ್ಥಾಪನೆ

lತಾಂತ್ರಿಕ ಬೋಧನೆ–ಕಲಿಕೆಗಳಿಗೆ ಹಾಗೂ ಸಂಶೋಧನೆಯನ್ನು ಉತ್ತೇಜಿಸಲು ರಾಜ್ಯದ ಏಳು ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳನ್ನು ಕರ್ನಾಟಕ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಗಳನ್ನಾಗಿ ಉನ್ನತೀಕರಣ

lರಾಜ್ಯದ ಪ್ರಮುಖ ನಗರಗಳಲ್ಲಿ 438 ದೆಹಲಿ ಮಾದರಿಯಲ್ಲಿ ನಮ್ಮ ಕ್ಲಿನಿಕ್‌ಗಳ ಸ್ಥಾಪನೆಗೆ ಚಾಲನೆ

lದಕ್ಷಿಣಕನ್ನಡ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕವಾಗಿ ಮೆನ್‌ಸ್ಟ್ರುಯಲ್‌ ಆಸಾನ್‌ ಕಪ್‌ಗಳ ವಿತರಣೆ

lಪೌಷ್ಟಿಕ ಕರ್ನಾಟಕ ಎಂಬ ಹೊಸ ಯೋಜನೆಯಡಿ ಅಪೌಷ್ಟಿಕತೆ ನಿವಾರಿಸಲು 14 ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿ ವಿತರಣೆ

lಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಅವರ ಸೇವಾ ಅವಧಿಯ ಆಧಾರದ ಮೇಲೆ ₹1000 ದಿಂದ ₹1500 ರವರೆಗೆ ಹೆಚ್ಚಳ

lಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ₹3,000 ಕೋಟಿ

lಇದೇ ಮೊದಲ ಬಾರಿಗೆ ಪೌರ ಕಾರ್ಮಿಕರಿಗೆ ತಿಂಗಳಿಗೆ ₹2,000 ಸಂಕಷ್ಟ ಭತ್ಯೆ

lಬೆಂಗಳೂರು ನಗರದಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ₹6,000 ಕೋಟಿ ವೆಚ್ಚದಲ್ಲಿ ಅಮೃತ್‌ ನಗರೋತ್ಥಾನ ಯೋಜನೆ 3 ವರ್ಷಗಳಲ್ಲಿ ಅನುಷ್ಠಾನ

ಸರ್ಕಾರದ ಸುತ್ತ ವಿವಾದಗಳ ಹುತ್ತ...

lಬಿಟ್‌ ಕಾಯಿನ್‌ ಹ್ಯಾಕಿಂಗ್‌ ಆರೋಪಕ್ಕೆ ಸಂಬಂಧಿಸಿದಂತೆ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ವಿರುದ್ಧ ದಾಖಲಾದ ಪ್ರಕರಣಗಳ ತನಿಖೆ ಮತ್ತು ಆರೋಪಿಯನ್ನೇ ಬಳಸಿಕೊಂಡು ಪ್ರಭಾವಿಗಳು ದೊಡ್ಡ ಮೊತ್ತದ ಹ್ಯಾಕಿಂಗ್‌ ನಡೆಸಿದ್ದಾರೆ ಎಂಬ ಆರೋಪ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಸರ್ಕಾರದ‍ಪ್ರಭಾವಿಗಳ ಹೆಸರೂ ಈ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ ಎಂಬ ಆರೋಪವೂ ಇತ್ತು

lಶಾಲೆ, ಕಾಲೇಜುಗಳಿಗೆ ಹಿಜಾಬ್‌ ಧರಿಸಿ ಬರದಂತೆ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ನಿಷೇಧ ಹೇರಲಾಗಿತ್ತು. ಹಿಜಾಬ್‌ಗೆ ಅವಕಾಶ ನೀಡಿದರೆ ಕೇಸರಿ ಶಾಲು ಧರಿಸಲೂ ಅವಕಾಶ ನೀಡಬೇಕೆಂಬ ಬೇಡಿಕೆ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರಿಂದ ಬಂದಿತ್ತು. ಕೆಲವೇ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೆ ಈ ವಿವಾದ ವ್ಯಾಪಿಸಿತು

lಹಿಂದೂ ಧಾರ್ಮಿಕ ಸ್ಥಳಗಳ ಆವರಣದಲ್ಲಿ ಮುಸ್ಲಿಮರಿಗೆ ವ್ಯಾಪಾರ ವಹಿವಾಟು ನಡೆಸಲು ನಿಷೇಧ ಹೇರುವ ಪ್ರಯತ್ನವೂ ಉಡುಪಿ ಜಿಲ್ಲೆಯಿಂದಲೇ ಆರಂಭವಾಗಿತ್ತು. ಕೆಲವೇ ದಿನಗಳಲ್ಲಿ ಅದು ರಾಜ್ಯ ವ್ಯಾಪಿಯಾಗಿ ಹಬ್ಬಿತ್ತು. ಮುಸ್ಲಿಮರ ಅಂಗಡಿಗಳಲ್ಲಿ ಖರೀದಿ ಮಾಡಬಾರದು, ಅವರ ಆಟೊ ರಿಕ್ಷಾಗಳಲ್ಲಿ ಪ್ರಯಾಣಿಸಬಾರದು ಎಂಬ ಪ್ರಚಾರವನ್ನೂ ಹಿಂದುತ್ವ ಪರ ಸಂಘಟನೆಗಳು ಆರಂಭಿಸಿದ್ದವು

lಪಠ್ಯಪುಸ್ತಕ ಪರಿಶೀಲನೆ ಹೆಸರಿನಲ್ಲಿ ನಡೆದ ಪಠ್ಯ ಪರಿಷ್ಕರಣೆಯಲ್ಲಿ ಸಮಾಜ ಸುಧಾರಕರು, ಮಹಾನ್‌ ಸಾಧಕರಿಗೆ ಅವಮಾನಿಸಿರುವುದು ಮತ್ತು ಕೆಲವು ಸಮುದಾಯಗಳಿಗೆ ವಿರುದ್ಧವಾದ ಪಠ್ಯಗಳನ್ನು ಅಳವಡಿಸಿರುವುದು ತೀವ್ರ ವಿವಾದ ಸೃಷ್ಟಿಸಿತ್ತು. ಆರಂಭದ ದಿನಗಳಲ್ಲಿ ಯಾವುದೇ ತಪ್ಪು ನಡೆದಿಲ್ಲ ಎಂಬಂತೆ ಸರ್ಕಾರ ಸಮರ್ಥಿಸಿಕೊಂಡಿತ್ತು. ವಿವಾದ ಜೋರಾಗಿ ಜನರು ಬೀದಿಗಿಳಿಯುತ್ತಿದ್ದಂತೆ ಕೆಲವು ತಪ್ಪುಗಳನ್ನು ಒಪ್ಪಿಕೊಂಡು, ತಿದ್ದುಪಡಿಗೆ ಸುತ್ತೋಲೆ ಹೊರಡಿಸಿತ್ತು

lಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ನಡೆದಾಗ ಸಚಿವರು, ಸಂಸದರೇ ಮುಂಚೂಣಿಯಲ್ಲಿ ನಿಂತು ಶವ ಮೆರವಣಿಗೆ ನಡೆಸಿದರು. ಕಲ್ಲು ತೂರಾಟ, ಗಲಭೆ ನಡೆಯಿತು

lಪಂಚಾಯತ್ ರಾಜ್ ಇಲಾಖೆಯ ಲಂಚದ ಬಗ್ಗೆ ದೂರಿತ್ತಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ, ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಇಕ್ಕಟ್ಟಿಗೆ ಸಿಲುಕಿದ ಸರ್ಕಾರ, ಈಶ್ವರಪ್ಪ ಅವರ ರಾಜೀನಾಮೆ ಪಡೆದಿತ್ತು

‘ಆರೆಸ್ಸೆಸ್‌ ಕಪಿಮುಷ್ಟಿಯಲ್ಲಿ ಬೊಮ್ಮಾಯಿ’

ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೊಮ್ಮಾಯಿ ಮುಖ್ಯಮಂತ್ರಿ ಆದಾಗ ನಮಗೆ ಸ್ವಲ್ಪ ಭರವಸೆ ಇತ್ತು. ಜನತಾ ಪರಿವಾರದ ಹಿನ್ನೆಲೆಯಿಂದ ಬಂದವರು, ಹೀಗಾಗಿ ಒಂದಷ್ಟು ವಿಭಿನ್ನವಾಗಿ ಕೆಲಸ ಮಾಡಬಹುದು ಎಂಬ ನಂಬಿಕೆ ಇತ್ತು. ಅವರ ಒಂದು ವರ್ಷದ ಆಡಳಿತ ನೋಡಿ ಭ್ರಮನಿರಸನವಾಗಿದೆ. ಹಿಂದೆಂದೂ ನಡೆಯದಷ್ಟು ಭ್ರಷ್ಟಾಚಾರ ನಡೆದಿದೆ. ರಾಜ್ಯದ ಇತಿಹಾಸದಲ್ಲಿ ಶೇ 40 ಕಮಿಷನ್‌ ಕೊಡಬೇಕಾದ ಪರಿಸ್ಥಿತಿ ಇಲ್ಲಿನ ಗುತ್ತಿಗೆದಾರರಿಗೆ‌ ಬಂದಿರುವುದು ಇದೇ ಮೊದಲು. ಇಂಥ ಭ್ರಷ್ಟ ಸರ್ಕಾರ ಎಂದೂ ಬಂದಿರಲಿಲ್ಲ. ಅದರ ಸಂಭ್ರಮಾಚರಣೆ ಮಾಡಲು ಹೊರಟಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಹಿಜಾಬ್‌, ಹಲಾಲ್‌, ಜಾತ್ರೆಗಳಲ್ಲಿ ಅಲ್ಪಸಂಖ್ಯಾತ ವ್ಯಾಪಾರಿಗಳಿಗೆ ನಿಷೇಧ ಮುಂತಾದವುಗಳನ್ನು ಸರ್ಕಾರವೇ ಹುಟ್ಟುಹಾಕಿತು. ದ್ವೇಷ ಹುಟ್ಟುಹಾಕಿದ್ದೇ ಈ ಸರ್ಕಾರದ ಸಾಧನೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಆರೆಸ್ಸೆಸ್‌ನ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದರು. ಆದರೆ, ಬೊಮ್ಮಾಯಿ ಅವರು ಸಂಪೂರ್ಣವಾಗಿ ಆರೆಸ್ಸೆಸ್‌ ಕಪಿಮುಷ್ಟಿಯಲ್ಲಿ ಸಿಕ್ಕಾಕಿಕೊಂಡಿದ್ದಾರೆ‌

- ಸಿದ್ದರಾಮಯ್ಯ,ವಿಧಾನಸಭೆ ವಿರೋಧ ಪಕ್ಷದ ನಾಯಕ

ಅಧಿಕಾರಿಗಳು ಕೋಟಿಗಟ್ಟಲೆ ಹಣ ನೀಡಿ ಹುದ್ದೆ ಪಡೆಯುವ ಪರಿಸ್ಥಿತಿ ಇದೆ. ಕೋಟಿಗಟ್ಟಲೆ ಕೊಟ್ಟವರು ಅದನ್ನು ಜನರ ಬಳಿ ಸುಲಿಗೆ

ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ

ಮಾಡುತ್ತಾರೆ. ಹೀಗಾಗಿ ಜೀವಗಳಿಗೆ ಬೆಲೆಯೇ ಇಲ್ಲದಂತಹ ಪರಿಸ್ಥಿತಿ ರಾಜ್ಯದಲ್ಲಿದೆ. ಹಣ ಪಡೆದು ಅಧಿಕಾರಿಗಳನ್ನು ವರ್ಗಾವಣೆ ಮಾಡುವುದನ್ನು ನಿಲ್ಲಿಸಬೇಕು. ಆಗ ಮಾತ್ರವೇ ನಿಜವಾದ ಅರ್ಥದಲ್ಲಿ ಜನರ ಉತ್ಸವ ಮಾಡಲು ಸಾಧ್ಯ. ಭಾವನಾತ್ಮಕ ವಿಚಾರಗಳನ್ನೇ ಮುಂದಿಟ್ಟುಕೊಂಡು ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು

- ಎಚ್‌.ಡಿ. ಕುಮಾರಸ್ವಾಮಿ,ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT