ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್‌ ಸಗಟು ಖರೀದಿ ಶುಲ್ಕ ರದ್ದತಿಗೆ ಸಿದ್ದರಾಮಯ್ಯ ಆಗ್ರಹ

Last Updated 1 ಜುಲೈ 2022, 16:13 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಸಾರಿಗೆ ನಿಗಮಗಳು ಸಗಟು ಪ್ರಮಾಣದಲ್ಲಿ ಖರೀದಿಸುತ್ತಿರುವ ಪ್ರತಿ ಲೀಟರ್‌ ಡೀಸೆಲ್‌ ಮೇಲೆ ಹೆಚ್ಚುವರಿಯಾಗಿ ₹ 25 ಶುಲ್ಕ ವಿಧಿಸುತ್ತಿರುವುದನ್ನು ತಕ್ಷಣ ರದ್ದುಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಡೀಸೆಲ್‌ ಸಗಟು ಖರೀದಿ ಮೇಲೆ ಶುಲ್ಕ ವಿಧಿಸುವ ಮೂಲಕ ಸಾರ್ವಜನಿಕ ವಲಯದ ಸಾರಿಗೆ ನಿಗಮಗಳನ್ನು ನಿಧಾನಕ್ಕೆ ವಿಷವಿಕ್ಕಿ ಕೊಲ್ಲುತ್ತಿದೆ. ಸರ್ಕಾರಿ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಡೀಸೆಲ್‌ ಮೇಲೆ ಸಂಪೂರ್ಣ ಶುಲ್ಕ ರದ್ದುಗೊಳಿಸುವ ಮೂಲಕ ಈ ನಿಗಮಗಳನ್ನು ರಕ್ಷಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಬಿಎಂಟಿಸಿ ಸೇರಿದಂತೆ ರಾಜ್ಯ ಸರ್ಕಾರದ ನಾಲ್ಕು ಸಾರಿಗೆ ನಿಗಮಗಳಲ್ಲಿ 26,000 ಬಸ್‌ಗಳಿವೆ. 1.3 ಲಕ್ಷ ನೌಕರರಿದ್ದಾರೆ. ರಾಜ್ಯದ ಕೋಟ್ಯಂತರ ಮಂದಿ ನಿತ್ಯವೂ ಈ ನಿಗಮಗಳ ಬಸ್‌ ಸೇವೆ ಬಳಸುತ್ತಿದ್ದಾರೆ. ನಿಗಮಗಳು ಪ್ರತಿ ದಿನ 13 ಲಕ್ಷ ಲೀಟರ್‌ ಡೀಸೆಲ್‌ ಬಳಸುತ್ತಿವೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಈ ನಿಗಮಗಳಿಗೆ ಪ್ರತಿ ವರ್ಷಕ್ಕೆ ₹ 1,187 ಕೋಟಿ ಹೊರೆಯಾಗಲಿದೆ ಎಂದು ತಿಳಿಸಿದ್ದಾರೆ.

‘ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳು ಈಗಾಗಲೇ ಸಂಕಷ್ಟದಲ್ಲಿವೆ. ಎರಡೂವರೆ ವರ್ಷಗಳಿಂದ ನೌಕರರ ವೇತನ ಪರಿಷ್ಕರಣೆ ಆಗಿಲ್ಲ. ಈಗ ಸಗಟು ಖರೀದಿ ಮೇಲೆ ಶುಲ್ಕ ವಿಧಿಸಿರುವುದರಿಂದ ನಿಗಮಗಳಿಗೆ ಡೀಸೆಲ್‌ ಖರೀದಿಯೂ ಕಷ್ಟವಾಗಿದೆ. ಮೂರರಿಂದ ನಾಲ್ಕು ದಿನಗಳಿಗೆ ಸಾಕಾಗುವಷ್ಟು ಡೀಸೆಲ್‌ ಮಾತ್ರ ಲಭ್ಯವಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಸಾರಿಗೆ ನಿಗಮಗಳನ್ನು ರಕ್ಷಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT