ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದಿರು ಗಿಣಿಯ ಜೇಡಗೂಡು...

Last Updated 16 ಜೂನ್ 2014, 19:30 IST
ಅಕ್ಷರ ಗಾತ್ರ

ಕ್ವೆಕ್‌ಕ್ವೆಕ್ ಎನ್ನುತ್ತಾ ಒಂದು ಕಡೆ ನಿಲ್ಲದೆ ಓಡಾಡುವ ನಾನು ಪುಟ್ಟ ಹಕ್ಕಿ ಕದಿರು ಗಿಣಿ. ಗುಬ್ಬಚ್ಚಿಗಿಂತ ಸಣ್ಣದಾದ ಕಡು ನೇರಳೆ ಹಳದಿ ಮಿಶ್ರಿತ ಬಣ್ಣ. ಎದೆ, ಹೊಟ್ಟೆ ಹಳದಿ ಬಣ್ಣ. ಚೂಪಾದ ಕೊಕ್ಕು ಹೊಂದಿರುವ ನಾನು ಹಿತ್ತಲಲ್ಲಿ, ತೋಟಗಳಲ್ಲಿ ಬೇಲಿಯ ಮೇಲೆ ಹುಲ್ಲು, ಜೇಡರ ಬಲೆ ಹಾಗೂ ಮೆತ್ತನೆಯ ವಸ್ತುಗಳಿಂದ ನೇತಾಡುವ ಗೂಡು ಕಟ್ಟುವೆ.

ನಿಮ್ಮಿಂದ ನನ್ನ ಗೂಡು ಅನೇಕ ಬಾರಿ ಹಾಳಾಗಿದೆ. ಹಾಗಾಗಿ ಹೊಸ ದಾರಿ ಹುಡುಕಿದ್ದೇನೆ. ನನ್ನ ಹೊಸ ದಾರಿ ಬಗ್ಗೆ ಹೇಳ್ತೇನೆ ಕೇಳಿ. ಈ ಪುಟ್ಟ ಹಕ್ಕಿ ನಮಗೇನ್ ಹೇಳುತ್ತೆ ಎಂದು ಅಸಡ್ಡೆ ಮಾಡ್ಬೇಡಿ. ನೀವು ನಮ್ ಗೂಡನ್ನು ಹಾಳು ಮಾಡಿ ಖುಷಿ ಪಟ್ಟು ಬುದ್ಧಿವಂತರು ಎಂದು ತಿಳ್ಕೊಂಡಿದ್ದೀರಾ, ಹಾಗಂತ ನಾವೇನು ದಡ್ಡರಲ್ಲ. ಕೆಲವೊಮ್ಮೆ ನಮ್ ಬುದ್ಧಿಯನ್ನ ಗೂಡು ಕಟ್ಟೋದ್ರಲ್ಲಿ ತೋರಿಸ್ತೇವೆ. ಹೆಚ್ಚಿನ ದೊಡ್ಡವರು ನಮ್ ಗೂಡು ಹಾಳು ಮಾಡೋಲ್ಲ ಅನ್ನೋದು ನಮಗೂ ಗೊತ್ತು, ಆದ್ರೆ ಮಕ್ಕಳು ಇದ್ದಾರಲ್ಲ... ಅವರ ತುಂಟಾಟಕ್ಕೆ ನಾವು ಬಲಿಯಾಗ್ತೇವೆ.

ಕೆಲವು ದಿನಗಳ ಹಿಂದೆ ಬೇಲಿಯ ಮೇಲೆ ಗೂಡು ಕಟ್ಟಿದ್ದೆ. ನನ್ನ ಮರಿಗಳು ಕೆಲವೇ ದಿನಗಳಲ್ಲಿ ಮೊಟ್ಟೆಯಿಂದ ಹೊರಬರಲಿದ್ದವು. ಆಗ ಒಬ್ಬ ದನ ಕಾಯುವ ಹುಡುಗನ ಕಣ್ಣಗೆ ಬಿದ್ದು ಹಾಳಾಗಿ ಹೊಯ್ತು. ಅವನು ಮಾಡಿದ್ದು ಹುಡುಗಾಟಿಕೆಯೇ ಆಗಿರಬಹುದು, ಬಲಿಯಾದ ನನ್ನ ಎರಡು ಮೊಟ್ಟೆಗಳನ್ನು ವಾಪಾಸ್ ಕೊಡಲು ಆಗತ್ತಾ? ಆ ದಿನ ನಾನೆಷ್ಟೇ ಕೂಗಿ ಬೇಡಿಕೊಂಡರೂ ಅವನಿಗೆ ಕರುಣೆ ಬರಲಿಲ್ಲ.

ಅದೇ ನೋವಿನಲ್ಲಿ ಗೂಡಿಗಾಗಿ ಹೊಸ ದಾರಿ ಹುಡುಕುವಾಗ ಅಲ್ಲೊಂದು ತಂತಿಯಲ್ಲಿ ದೊಡ್ಡ ಜೇಡರ ಗೂಡು ಕಾಣಿಸಿತು. ತಕ್ಷಣ ಅಲ್ಲಿಗೆ ಹೋಗಿ ಮುಂದಿನ ನನ್ನ ಗೂಡನ್ನು ಇಲ್ಲಿ ಕಟ್ಟಿದರೆ ಹೇಗೆ? ಎಂದು ಯೋಚಿಸಿದೆ. ಅದೆ ರೀತಿ ಈ ಬಾರಿ ಜೇಡರ ಗೂಡನ್ನು ನನಗೆ ಬೇಕಾದ ರೀತಿಯಲ್ಲಿ ವಿನ್ಯಾಸಗೊಳಿಸಿದೆ. ನಿಮಗೆ ಆಶ್ಚರ್ಯವಾಗಬಹುದು, ಸ್ವಲ್ಪ ದೂರದಿಂದ ನೋಡಿದರೆ ಹಕ್ಕಿಯ ಗೂಡು ಎಂದು ತಿಳಿಯಲಾಗುವುದಿಲ್ಲ.

ಈ ಗೂಡು ಕೇವಲ ಮೂರ್ನಾಲ್ಕು ಅಡಿ ಎತ್ತರದಲ್ಲಿದರೂ ಯಾವುದೇ ತೊಂದರೆ ಇಲ್ಲ. ಎಷ್ಟೋ ಜನ ಪಕ್ಕದಲ್ಲಿ ನಿಂತು ಮಾತನಾಡಿದ್ದಾರೆ, ತಿರುಗಾಡಿದ್ದಾರೆ ಆದರೂ ಗುರುತಿಸಲಾಗಿಲ್ಲ. ಕೊನೆಗೆ ಯಾವುದೇ ತೊಂದರೆ ಇಲ್ಲದೆ ನನ್ನ ಮರಿಗಳ ಜೊತೆ ಹಾರಾಡಿದೆ. ಇದೇ ರೀತಿ ನಮ್ಮ ಸಂಬಂಧಿಕರೊಬ್ಬರು ಮುಳ್ಳಿನ ಗಿಡದ ಜೇಡರ ಗೂಡಿನಲ್ಲಿ ತನ್ನ ಗೂಡು ಕಟ್ಟಿ ಸಫಲವಾಗಿದ್ದರು. ಆದರೂ ಈ ದಾರಿಗೂ ಯಾವಾಗ ನಿಮ್ಮಿಂದ ತೊಂದರೆಯಾಗುತ್ತೆ ಎಂಬ ಭಯ ನಮ್ಮನ್ನು ಕಾಡುತ್ತಿದೆ. ಹಾಗಾಗದೆ ಇರಲಿ ದೇವರೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT