ಚಾರಣ ಹವ್ಯಾಸ ಒಮ್ಮೆ ಅಂಟಿಕೊಂಡಿತೆಂದರೆ ಸುಲಭದಲ್ಲಿ ಬಿಡುವಂಥದ್ದಲ್ಲ! ಈ ಹವ್ಯಾಸವನ್ನು ಬೆಳೆಸಿಕೊಂಡು ಬಂದಿರುವ ‘ಯೂಥ್ ಹಾಸ್ಟೆಲ್’ ಕರ್ನಾಟಕ ಘಟಕ ಆಯೋಜಿಸಿದ್ದ ರಾಜ್ಯಮಟ್ಟದ ಪಶ್ಚಿಮಘಟ್ಟದ ಚಾರಣವನ್ನು ಮುನ್ನಡೆಸುವ ಹೊಣೆಗಾರಿಕೆ ಗಂಗೋತ್ರಿ ಘಟಕ ಮೈಸೂರು ವಹಿಸಿಕೊಂಡಿತ್ತು. ಅದರಲ್ಲಿ ನನಗೂ ಅವಕಾಶ ಸಿಕ್ಕಿತ್ತು. ನಗರ ಜೀವನದ ಗಡಿಬಿಡಿ, ಗದ್ದಲದಿಂದ ಒಂದಷ್ಟು ದಿನ ದೂರವಿದ್ದು ಅಪ್ಪಟ ಗ್ರಾಮ ಜೀವನದ ಅನುಭವ ಸವಿಯುವ ಅಮೂಲ್ಯ ಅವಕಾಶ ಒದಗಿಬಂದಿತ್ತು.

ಯೂಥ್ ಹಾಸ್ಟೆಲ್ ಅಸೋಸಿಯೇಶನ್ ಲಾಭರಹಿತ ಸಂಸ್ಥೆ. (ನೊ ಪ್ರಾಫಿಟ್, ನೊ ಗೇನ್ ಎಂಬುದು ಇದರ ಮೂಲಮಂತ್ರ). ಈ ಸಂಸ್ಥೆಯ ಕಾರ್ಯಕರ್ತರ ನೇತೃತ್ವದಲ್ಲಿ ಒಟ್ಟು ಐದು ತಂಡ ರಚನೆಯಾಯಿತು. ಒಂದೊಂದು ತಂಡದಲ್ಲಿ 40 ಜನರಿಗೆ ಅವಕಾಶ. ಪ್ರಕೃತಿಯನ್ನು ಅರಿಯುವ, ಮಲೆನಾಡಿನ ಜನಜೀವನ ತಿಳಿಯುವ, ಅರಣ್ಯದ ಸೊಬಗು ಪರಿಚಯಿಸುವ ಕಾರ್ಯಕ್ರಮವೇ ಈ ಪಶ್ಚಿಮಘಟ್ಟದ ಚಾರಣದ ಉದ್ದೇಶ.

ಐದು ದಿನಗಳ ಚಾರಣದಲ್ಲಿ ಇದ್ದದ್ದು ವಿವಿಧ ರಾಜ್ಯಗಳ 37 ಮಂದಿ. ನಮ್ಮ ಮೊದಲ ಪಯಣ ಉತ್ತರಕನ್ನಡದ ಯಲ್ಲಾಪುರ ಜಿಲ್ಲೆಯ ಶೀಗೇಕೇರಿ ಬೇಸ್ ಕ್ಯಾಂಪ್. ಅಲ್ಲಿ ಸಂಜೆ ಮೂರು ಕಿ.ಮೀ ದೂರದ ಸೂರ್ಯಕಾಂತಿ ಗುಡ್ಡಕ್ಕೆ ಹೋಗುವ ಮೂಲಕ ಚಾರಣಕ್ಕೆ ಮುನ್ನುಡಿ ಬರೆದೆವು. ಶೋಲೇ ಕಾಡು. ಗಿಡಮರಗಳು ಎತ್ತರವಿಲ್ಲ. ಕುರುಚಲು ಗಿಡ, ಹುಲ್ಲುಗಳು. ಆರ್ಕಿಡ್ ಸಸ್ಯಗಳನ್ನು ಕಂಡೆವು. ಆ ಸಂಜೆ ಹುಲ್ಲಿನ ಮೇಲೆ ಸೂರ್ಯನ ಬೆಳಕು ಹರಡಿ ಹುಲ್ಲು ಸುವರ್ಣವರ್ಣದಲ್ಲಿ ಕಾಂತಿ ಬೀರುವುದನ್ನು ನೋಡಿ ತಣಿದೆವು. ಗುಡ್ಡದ ಮೇಲಿಂದ ಸೂರ್ಯ ಅಸ್ತಂಗತನಾಗುವುದನ್ನು ಕಣ್ಣು ತುಂಬಿಸಿಕೊಂಡೆವು. ರಾತ್ರಿ ಸ್ಥಳೀಯ ಶಾಲಾಮಕ್ಕಳಿಂದ ಅವರ ಪ್ರತಿಭೆಗಳ ಅನಾವರಣ ಕಾರ್ಯಕ್ರಮ ನಡೆಯಿತು. ಮಕ್ಕಳು ಖುಷಿಯಿಂದ ಹಾಡು, ನೃತ್ಯ, ನಾಟಕದಲ್ಲಿ ಭಾಗಿಗಳಾಗಿದ್ದರು.

ಚಾರಣದ ಎರಡನೆಯ ದಿನ ಶೀಗೇಕೇರಿಯಿಂದ ಸುಮಾರು 22 ಕಿ.ಮೀ ದೂರ ಕಾಡು, ನಾಡು ಕ್ರಮಿಸಿ ಕರಿಕಲ್ಲಿಗೆ ನಡೆದೆವು. ದಾರಿಯುದ್ದಕ್ಕೂ ಕುರುಚಲು ಕಾಡಿನಿಂದ ಹಿಡಿದು ಹಸಿರಿನಿಂದ ಕೂಡಿದ ಬೆಟ್ಟಗಳು, ನಡು ನಡುವೆ ಪುಟ್ಟ ಗ್ರಾಮಗಳು, ಗದ್ದೆಗಳು, ತೋಟಗಳು ಆ ಮನೆಯವರ ಉಪಚಾರ ಎಲ್ಲವನ್ನೂ ಅನುಭವಿಸುತ್ತ ಖುಷಿಯಿಂದಲೇ ಹಾದಿ ಸವೆಸಿದೆವು. ಕಾಡೊಳಗೆ ಒಬ್ಬನೇ ಹಿಂದೆ ಉಳಿದು ದಾರಿ ತಪ್ಪೀತೆಂಬ ಭಯವೇ ಆಗದಂತೆ ಅಲ್ಲಲ್ಲಿ ಮರ, ಬಂಡೆಗಳ ಮೇಲೆ ಬಾಣದ ಗುರುತನ್ನು ಆಯೋಜಕರು ಮಾಡಿದ್ದರು. ಕರಿಕಲ್ಲು ನಾರಾಯಣ ಹೆಗಡೆಯವರಲ್ಲಿ ವಾಸ್ತವ್ಯ ಇತ್ತು. ಅವರ ಮನೆಗೆ ಹೋಗಬೇಕಾದರೆ ಗಂಗಾವಳಿ (ಬೇಡ್ತಿ) ನದಿ ದಾಟಬೇಕಿತ್ತು. ನೀರಿನ ಹರಿವು ಸೊಂಟದವರೆಗೆ ಇತ್ತು. ಶೂಗಳ ಹಾರವನ್ನು ಕೊರಳಿಗೆ ಹಾಕಿ, ಜೀವರಕ್ಷಕ ಉಡುಪು ಧರಿಸಿ ಹಗ್ಗ ಹಿಡಿದು ನದಿ ದಾಟಿದೆವು. ನದಿ ದಾಟುವ ಕ್ಷಣವಂತೂ ಬಲು ಸೋಜಿಗ. ಸಂಜೆ ಆರು ಗಂಟೆಗೆ ನಾವು ಗಮ್ಯಸ್ಥಾನ ತಲುಪಿದ್ದೆವು.

ನಾರಾಯಣ ಹೆಗಡೆಯವರ ಅಂಗಳದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆಯಾಗಿತ್ತು. ಬಾಯಿತುಂಬ ಉಪಚಾರದೊಂದಿಗೆ ಹೊಟ್ಟೆ ತುಂಬ ರುಚಿಯಾದ ಊಟ ನಮಗೆ ಲಭಿಸಿತು. ಸಾಂಪ್ರದಾಯಿಕ ಅಡುಗೆಯಾದ ಸಾಂಬಾರು, ತಂಬ್ಳಿ, ಒಬ್ಬಟ್ಟಿನ ಜೊತೆಗೆ ಚಪಾತಿ ಪಲ್ಯ, ಹಪ್ಪಳ, ಹಸಿ ತರಕಾರಿಯನ್ನೊಳಗೊಂಡ ಸಮೃದ್ಧ ಊಟ.

ಚಾರಣದ ಮೂರನೇ ದಿನ 18 ಕಿ.ಮೀ ನಡಿಗೆ ಮೋತಿಗುಡ್ಡದೆಡೆಗೆ. ವಾಹನಗಳ ದಟ್ಟಣೆ, ವಾಯು ಮಾಲಿನ್ಯವಿಲ್ಲದೆ, ಪ್ರಶಾಂತವಾದ ವಾತಾವರಣದಲ್ಲಿ ದಟ್ಟಕಾಡಿನಲ್ಲಿ ಪಕ್ಷಿಗಳ ಕಲರವ ಕೇಳುತ್ತ ನಡೆಯುವ ಸೌಭಾಗ್ಯ ನಮಗೆ ಒದಗಿತ್ತು. ಮುಂದೆ ಸಾಗಿದಂತೆ ಅಡಿಕೆ ತೋಟ, ತೋಟದಲ್ಲಿ ಮರವೇರಿ ಅಡಿಕೆ ಕೊಯ್ಯುವ ಮಂದಿ, ಮತ್ತೂ ಸಾಗಿದಂತೆ ಪುಟ್ಟ ತೊರೆ, ಅಲ್ಲೇ ಕೂತು ಬುತ್ತಿ ಬಿಚ್ಚಿ ಊಟ, ತೊರೆ ನೀರು ಮನದಣಿಯೆ ಕುಡಿದು ಮುಖಕ್ಕೆ ನೀರು ಎರಚಿದಾಗ ಸಿಗುವ ಸುಖ ಅವರ್ಣನೀಯ.

ತೋಟದ ದಾರಿಯಲ್ಲಿ ಹೋಗುತ್ತಿರಬೇಕಾದರೆ ಬಾಳೆಗಿಡದಲ್ಲಿ ಗೊನೆ ಮಾಯ. ಕಪಿರಾಯ ಎಲ್ಲ ಖಾಲಿ ಮಾಡಿ ಬಾಳೆ ಮೋತೆಯನ್ನು ಮಾತ್ರ ಬಿಟ್ಟ ದೃಶ್ಯ ನೋಡಿದಾಗ ಕೃಷಿಕರ ಸಂಕಷ್ಟದ ಅರಿವಾಗುತ್ತದೆ. ಕೆಲವೆಡೆ ಗೊನೆಗೆ ಗೋಣಿಚೀಲ ಸುತ್ತಿರುವುದನ್ನು ಕಂಡೆವು.
ಮೋತಿಗುಡ್ಡದಲ್ಲಿ ಭಾಸ್ಕರ ಹೆಗಡೆಯವರ ಮನೆ ತಲುಪುವಾಗ ಸಂಜೆ ಸೂರ್ಯ ಅಸ್ತಮಿಸಲು ತಯಾರಿಯಲ್ಲಿದ್ದ. ಆ ಸೂರ್ಯ ಅಸ್ತಮಿಸಿದರೂ ಈ ಭಾಸ್ಕರ ಬೆಳಕು ತೋರಿ ನಮಗೆ ಆತಿಥ್ಯ ನೀಡಿದ್ದರು! ರಾತ್ರಿ ಹೊಸತೋಟ ಮಂಜುನಾಥ ಭಾಗವತರಿಂದ ಸತ್ಯ ಮತ್ತು ಅಹಿಂಸೆ ಬಗ್ಗೆ ವಿಚಾರಭರಿತ ಭಾಷಣ ಕೇಳುವ ಸುಯೋಗ ದೊರೆತಿತ್ತು.

ನಾಲ್ಕನೆಯ ದಿನ ಚಾರಣದ ಕೊನೇ ದಿನ ಬಂದೇ ಬಿಟ್ಟಿತ್ತು. ಇಷ್ಟು ದಿನ ನಾವೆಲ್ಲ ಒಂದೇ ಮನೆಯವರಂತೆ ಆತ್ಮೀಯತೆಯಿಂದ ಇದ್ದೆವು. ಮೋತಿಗುಡ್ಡದಿಂದ ಹೊರಟು ಸುಮಾರು 16 ಕಿ.ಮೀ ದೂರದ ಯಾಣಕ್ಕೆ ನಮ್ಮ ಸವಾರಿ ಹೊರಟಿತ್ತು. ನಾವು ನಡೆದದ್ದು ಮೂರೂ ದಿನವೂ ಕಾಡುದಾರಿ ದಾಟಿ, ಮಧ್ಯೆ ಕೆಲವು ಗ್ರಾಮಗಳು, ಮನೆಗಳು, ತೋಟ, ಗದ್ದೆ, ತೊರೆ. ಯಾಣಕ್ಕೆ ಬೆಟ್ಟ ಹತ್ತುವ ಮಧ್ಯೆ ಸಿಗುವ ವಿಭೂತಿ ಫಾಲ್ಸ್‌ನಲ್ಲಿ ತುಸು ವಿರಮಿಸಿದೆವು. ಕೆಲವರು ನೀರಿಗೆ ಇಳಿದು ಆಟವಾಡಿ ಖುಷಿಪಟ್ಟರು. ಇನ್ನು ಕೆಲವರು ನೀರು ಧಾರೆ ನೋಡಿಯೇ ಖುಷಿ ಅನುಭವಿಸಿದರು. ಜಲಧಾರೆ ದಾಟಿ ಮುಂದೆ ಬೆಟ್ಟ ಏರಬೇಕು. 70 ಡಿಗ್ರಿ ಕಡಿದಾದ ಏರುದಾರಿ. ಕುರುಚಲು ಗಿಡ, ಮರದ ಬೇರು, ಬಳ್ಳಿ ಹಿಡಿದು ಏರಬೇಕು. ಮೂರು ದಿನಗಳ ನಡಿಗೆಯಲ್ಲಿ ಈ ದಾರಿ ಮಾತ್ರ ಸ್ವಲ್ಪ ಕಠಿಣವಾಗಿದ್ದುದು. ಸುಮಾರು ಐದಾರು ಕಿಲೋಮೀಟರ್ ದೂರವೂ ಬೆಟ್ಟ ಏರಬೇಕು. ಸಮತಟ್ಟು, ಇಳಿಜಾರು ಇಲ್ಲವೇ ಇಲ್ಲ. ಯಾಣಕ್ಕೆ ದಾರಿ ಎಂದು ಫಲಕ ಸಿಗುವಲ್ಲಿವರೆಗೆ ಏರುದಾರಿಯೇ. ಎಲ್ಲರೂ ಏದುಸಿರು ಬಿಡುತ್ತ, ಹತ್ತಲಾಗದಿದ್ದವರನ್ನು ಕೈಹಿಡಿದು ಎಳೆದು ಹತ್ತಿಸುತ್ತ ಯಾಣ ತಲುಪಿದೆವು. ಯಾಣ ತಲುಪಲು ಇನ್ನೇನು ಕೆಲವೇ ಅಂತರ ಇರುವಾಗ ಅಕಾಲಿಕ ಧಾರಾಕಾರ ಮಳೆಗೆ ಸಿಲುಕಿ ಒದ್ದೆಯಾದೆವು.

ಭೈರವೇಶ್ವರ ಶಿಖರ ಹಾಗೂ ಚಂಡಿಕಾ ( ಮೋಹಿನಿ) ಶಿಖರ ಎಂಬ ಎರಡು ಬೃಹತ್ ಬಂಡೆಗಳು ಎದುರು ಬದುರು ಇರುವುದನ್ನು ಕಂಡು ‘ಯಾನ ಮಾಡುತ್ತ ಬಂದು ಯಾಣ ಕಂಡೆವು’ ಎಂಬ ಉದ್ಗಾರ ತೆಗೆದೆವು. ಆ ಬಂಡೆಗಲ್ಲುಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಅಷ್ಟು ಸೊಗಸು.

ಯಾಣದಲ್ಲಿ ದತ್ತಾತ್ರೇಯ ಭಟ್ಟರ ಮನೆ ತಲುಪಿದಾಗ ಕತ್ತಲೆ ಆವರಿಸಿತ್ತು. ನೀವು ವಿಭೂತಿ ಫಾಲ್ಸ್ ನೋಡಿ ಅಲ್ಲಿಂದ ಮಳೆಯನ್ನೇ ಹೊತ್ತು ತಂದಿರಿ ಎಂದು ಹುಸಿಕೋಪದಿಂದ ನುಡಿದ ಭಟ್ಟರು ನಮ್ಮನ್ನು ಸ್ವಾಗತಿಸಿದರು. ವಿದ್ಯುತ್ ಕೈಕೊಟ್ಟಿತ್ತು. ಬೆಳಕಿಗೆ ಸೋಲಾರ್ ವ್ಯವಸ್ಥೆ ಇತ್ತು. ಮೂರು ದಿನ ಬೆನ್ನಚೀಲ ಹೊತ್ತು ಸುಮಾರು ದೂರ ನಡೆದ ಅನುಭವ ಚೇತೋಹಾರಿ. ಕೆಲವರದು ಪ್ರೀತಿಯ ದೂರು ‘ಈ ಚೀಲ ಇಲ್ಲದಿರುತ್ತಿದ್ದರೆ, ಮತ್ತೆ ಯಾಣಕ್ಕೆ ಹೋಗುವ ದಾರಿಯನ್ನು ಬೆಟ್ಟ ಕಡಿದು ಕಾಲು ಇಡುವಂತೆ ಕೆಲವು ಕಡೆ ಮೆಟ್ಟಲು ಮಾಡಿರುತ್ತಿದ್ದರೆ ಬಲು ಸುಲಭವಾಗುತ್ತಿತ್ತು!’ ಅದಕ್ಕೆ ಆಯೋಜಕರು ಉತ್ತರ ಕೊಟ್ಟದ್ದು ‘ಅಷ್ಟು ಸುಲಭಗೊಳಿಸಿದರೆ ಅದು ಚಾರಣಯೋಗ್ಯವಲ್ಲ. ಚಾರಣ ಎಂದರೆ ಸ್ವಲ್ಪವಾದರೂ ಸಾಹಸ ಇರಬೇಕು.’ ಹೌದು. ಈ ಹೇಳಿಕೆಗೆ ನನ್ನ ಸಹಮತವಿದೆ.

ಪ್ರತೀದಿನ ಊಟ, ತಿಂಡಿ ಎಂದು ನಾವು ಹೋದ ಮನೆಯ ಹೆಂಗಸರಿಗೆ ಇಡೀ ದಿನ ಕೆಲಸ. ದಿನಕ್ಕೆ 150ಕ್ಕೂ ಹೆಚ್ಚು ಚಪಾತಿಯನ್ನು ಮೂರ್ನಾಲ್ಕು ಮಂದಿ ತಯಾರಿಸಿದ್ದರು. ನಾವು ಅಡುಗೆ ಮನೆಗೆ ಹೋಗಿ ಅವರ ಜೊತೆ ಮಾತಾಡುತ್ತ ಹೊತ್ತು ಕಳೆದಿದ್ದೆವು. ‘ನಮಗೂ ನಿಮ್ಮೊಡನೆ ಮಾತಾಡುತ್ತ ಕೂರಲು ಆಸೆ. ಆದರೆ ಮಾತಾಡುತ್ತ ಕೂತರೆ ಕೆಲಸ ಆಗಬೇಕಲ್ಲ. ನೀವು ಒಳಗೆ ಬಂದು ಮಾತಾಡಿದ್ದು ಖುಷಿ ಆಯಿತು’ ಎಂದು ಅವರಂದಾಗ ಎಂಥ ಒಳ್ಳೆಯ ಮನಸ್ಸು ಇವರದು ಎಂದು ಅನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.