ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಯ ಬಲೆಗೆ ನೂಕದಿರಿ

Last Updated 18 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಾರ್ಯ ಗ್ರಾಮದ ದೇವಸ್ಥಾನದ ಬಳಿ ಶತಮಾನಗಳಷ್ಟು ಹಳೆಯದಾದ ಅರಳಿ ಮರದಲ್ಲಿ ನನ್ನ ಕುಟುಂಬದ ವಾಸ. ದೇವಸ್ಥಾನ ಅಲ್ವಾ? ಅದಕ್ಕೆ ಮರಹತ್ತಿ ಹಿಡಿಯುವಂತಹ ಪ್ರಯತ್ನ ಯಾರೂ ಮಾಡ್ತಾ ಇರಲಿಲ್ಲ. ಅದಕ್ಕೆ ನಮ್ಮದು ದೊಡ್ಡ ಕುಟುಂಬ ಆಗಿ ಬೆಳೆದಿದೆ. ಆದ್ರೆ ಈಗ ಪರಿಸ್ಥಿತಿ ಬದಲಾಗಿ ಬಿಟ್ಟಿದೆ ನೋಡಿ. ನಮ್ಮನ್ನು ಹಿಡಿಯುವಂತಹ ಪ್ರಯತ್ನ ನಡೆಯುತ್ತಿದೆ. ನಮ್ಮ ವಾಸಸ್ಥಾನದಿಂದ ಕೂಗಳತೆಯ ದೂರದ ತೋಟಗಳಲ್ಲಿ ಒಂದು ಮರದಿಂದ ಮತ್ತೊಂದು ಮರಕ್ಕೆ ದೊಡ್ಡ ದೊಡ್ಡ ಬಲೆಗಳನ್ನು ಕಟ್ಟುತ್ತಾರೆ, ಆಹಾರಕ್ಕೆಂದು ಹೋದ ನಾವು ಗೊತ್ತಿಲ್ಲದೇ ಬಲೆಗೆ ಬೀಳುತ್ತಿದ್ದೇವೆ. ಇದರಿಂದ ನಮ್ಮ ಸಂತತಿಯೇ ಕ್ಷೀಣಿಸತೊಡಗಿವೆ.

ನಮ್ಮ ಬಗ್ಗೆ ನಿಮಗೆಲ್ಲ ತಿಳಿದೇ ಇದೆ ಬಿಡಿ. ಆದ್ರೂ ನನ್ನ ಬಗ್ಗೆ ಒಂದಿಷ್ಟು ಹೇಳುವೆ. ಸಸ್ತನಿಗಳ ಜಾತಿಯಲ್ಲಿನ ಹಾರುವ (ಪಕ್ಷಿಗಳಂತೆ) ಜೀವಿ ಎಂದರೆ ನಾವು ಮಾತ್ರ. ಎಲ್ಲರಿಗೂ ಹಗಲು ಪ್ರೀತಿ ಆದ್ರೆ ನನಗೆ ರಾತ್ರಿ ಅಂದ್ರೆ ಇಷ್ಟ. ಭೂಮಿಯ ಮೇಲೆ ಸಿಗುವ ಇಲಿ, ಕಪ್ಪೆ, ಹಲ್ಲಿ ಹಾಗೂ ಹಣ್ಣು ನಮ್ಮ ಆಹಾರ. ಆದ್ದರಿಂದ ಕೃಷಿ ಭೂಮಿಯನ್ನೆ ಕೇಂದ್ರವಾಗಿಟ್ಟುಕೊಂಡು ವಾಸಿಸುತ್ತೇವೆ.

ನಾನು ಒಂದು ಗಂಟೆಯಲ್ಲಿ ಒಂದು ಸಾವಿರ ಕೀಟಗಳನ್ನು ತಿನ್ನುವ ಸಾಮರ್ಥ್ಯ ಹೊಂದಿದ್ದೇನೆ. ಅದಕ್ಕಾಗಿಯೇ ನಾನು ರೈತ ಸ್ನೇಹಿ, ಸಂಘ ಜೀವಿ. ಅತೀ ಎತ್ತರದ ಮರ ಎಂದರೆ ನನಗೆ ಇಷ್ಟ. ರಾತ್ರಿ ಹೊತ್ತು ಆಹಾರಕ್ಕಾಗಿ ಅಲೆದಾಡಿ, ಬೆಳಗಾಗುವುದರ ಒಳಗಾಗಿ ಮರದಲ್ಲಿ ಒಟ್ಟಾಗಿ ಸೇರುತ್ತವೆ.

ಮುಖ ನೋಡಲು ನಾಯಿಯ ಹಾಗೆ. ಮುಖ ಹಾಗೂ ದೇಹದ ಭಾಗ ದಟ್ಟ ಹಳದಿ ಮಿಶ್ರಿತ ಕಂದು. ರೆಕ್ಕೆಗಳು ಮಾತ್ರ ದಟ್ಟ ಕಪ್ಪು. ನಾವು ರೆಕ್ಕೆಗಳನ್ನು ಕೈಗಳಂತೆ ಬಳಸುತ್ತೇವೆ. ಗುಹೆ, ಕೋಟೆಗಳ ಗೋಡೆ ಹಾಗೂ ಮರಗಳಲ್ಲಿ ಸುಲಭವಾಗಿ ನಮ್ಮ ಸಂಚಾರ. ರೆಕ್ಕೆ ಪಾರದರ್ಶಕ ಹಾಗೂ ಮೃದು. ನಾವು ಸದಾ ಚಟುವಟಿಕೆಯಿಂದ ಕೂಡಿರುತ್ತೇವೆ. ನಾವು ವಾಸನೆಯನ್ನು ಆಧರಿಸಿ ಚಲಿಸುತ್ತವೆ. ಮೂಗಿನ ಚೂಪಾದ ತುದಿಯಿಂದ ಧ್ವನಿ ಹೊರಡಿಸುತ್ತೇವೆ. ಕೇವಲ ಸಂತಾನೋತ್ಪತ್ತಿ ಸಮಯದಲ್ಲಿ ಮಾತ್ರ ಜೊತೆಗಿದ್ದು, ಉಳಿದ ದಿನಗಳಲ್ಲಿ ಬೇರೆ ಬೇರೆಯಾಗಿ ವಾಸಿಸುತ್ತೇವೆ.

ಆದರೆ ನೋಡಿ. ಮಾಂಸಕ್ಕಾಗಿ ನಾವು ಬಲಿಯಾಗುತ್ತಿದ್ದೇವೆ. ಮೈಸೂರಿಗೆ ಸಮೀಪ 7-8 ವರ್ಷಗಳ ಹಿಂದೆ ನಮ್ಮದು ಸಾವಿರಾರು ಸಂಖ್ಯೆ ಇದ್ದವು. ಆದರೆ ಇಂದು ಕೆಲವೇ ನಿಮಿಷಗಳಲ್ಲಿ ಎಣಿಸಿ ಮುಗಿಸಬಹುದಾದ ಸ್ಥಿತಿ ತಲುಪಿವೆ. ಯಾರಾದರೂ ನಮಗೆ ಸಹಾಯ ಮಾಡುವಿರಾ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT