ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜು ಮುಸುಕಿದ ಹಾದಿಯಲ್ಲಿ...

Last Updated 6 ಮೇ 2013, 19:59 IST
ಅಕ್ಷರ ಗಾತ್ರ

`ಅಮ್ಮಾ, ಅಲ್ಲಿ ನೋಡು ಮಾವಿನಹಣ್ಣು. ನನ್ಗೆ ಬೇಕೇ ಬೇಕು...' ಎಂದು ನನ್ನ ಹತ್ತು ವರ್ಷದ ಮಗಳು ಹಟ ಹಿಡಿದಿದ್ದಳು. ಬೆಂಗಳೂರಿನಿಂದ ಶಿವಮೊಗ್ಗದ ಶಿಕಾರಿಪುರಕ್ಕೆ ಮದುವೆ ಸಮಾರಂಭವೊಂದಕ್ಕೆ ಕಾರಿನಲ್ಲಿ ಹೊರಟ್ದ್ದಿದಾಗ ರಸ್ತೆ ಬದಿಯಲ್ಲಿ ಮಾವು ಮಾರುವ ಮಹಿಳೆಯರನ್ನು ನೋಡಿ ಮಗಳು ಈ ಬೇಡಿಕೆ ಇತ್ತಳು. ಕಾರಿನಿಂದ ಇಳಿದು ಆ ಹಣ್ಣು ತೆಗೆದುಕೊಳ್ಳುವಷ್ಟು `ಪೇಷನ್ಸ್' ನನ್ನಲ್ಲಿರಲಿಲ್ಲ. ಮಗಳದ್ದು ಹೊಸ ಬಟ್ಟೆ ಬೇರೆ, ಹಣ್ಣು ತಿನ್ನುವಾಗ ಬಟ್ಟೆಯೆಲ್ಲಾ ಕೊಳೆ ಮಾಡಿಕೊಂಡಾಳು ಎಂಬ ಭಯ ಇನ್ನೊಂದೆಡೆ. ಒಟ್ಟಿನಲ್ಲಿ `ಬೇಡ ಪುಟ್ಟ, ವಾಪಸು ಬರುವಾಗ ಕೊಡಿಸುವೆ' ಎಂದೆ. ಮಗಳ ಕೋಪ ನೆತ್ತಿಗೇರಿತ್ತು. `ಆ ಮಕ್ಳಿಗೆ ಎಷ್ಟು ಚಾನ್ಸ್ ನೋಡು. ಎಷ್ಟು ಬೇಕಾದ್ರೂ ತಿನ್‌ಬಹುದು. ನನ್ಗೆ ಮಾತ್ರ ನೀನು ಕೊಡಿಸಲ್ಲ' ಎಂದು ಹಣ್ಣಿನ ವ್ಯಾಪಾರ ಮಾಡುತ್ತಿರುವ ಮಹಿಳೆಯರ ಪಕ್ಕದಲ್ಲೇ ಇದ್ದ ಮಕ್ಕಳನ್ನು ನೋಡಿ ವಟಗುಟ್ಟಿದಳು.

ನನಗೆ ಅಯ್ಯೋ ಎನಿಸಿತು. `ಸರಿಯಪ್ಪಾ, ನಿನಗೂ ಕೊಡಿಸುವೆ' ಎಂದೆ. ಶಿವಮೊಗ್ಗದ ರಸ್ತೆ ಬಳಿ ಹಣ್ಣು ಮಾರಾಟ ಮಾಡುತ್ತಿದ್ದುದು ಕಂಡು ಇಳಿದೆ. ಸುಕ್ಕುಗಟ್ಟಿದ ಮುಖ. ಕಳೆಗುಂದಿದ ಕಣ್ಣುಗಳು, ಎಣ್ಣೆ ಕಂಡು ಎಷ್ಟೋ ದಿನವಾದ ಕೂದಲು, ಚಪ್ಪಲಿಯಿಲ್ಲದ ಕಾಲು... 25-40ರ ಆಸುಪಾಸಿನ ಆ ಹೆಂಗಳೆಯರನ್ನು ನೋಡಿ ಅಯ್ಯೋ ಎನಿಸಿತು. ಈ ವಯಸ್ಸಿನಲ್ಲಿಯೇ ಅವರಲ್ಲಿ ಮುಪ್ಪು ಕವಿದಂತಿತ್ತು. ಮಾವಿನ ಹಣ್ಣು ಮಾರಾಟ ಮಾಡುತ್ತಿದ್ದ ಒಬ್ಬಾಕೆ ಪಕ್ಕದಲ್ಲಿ ಇಬ್ಬರು ಸುಮಾರು 6-7 ವರ್ಷದ ಅವಳಿ ಮಕ್ಕಳು ಮಾವಿನ ಹಣ್ಣನ್ನು ತಿಂದು ಮೈಪೂರ್ತಿ ಕೊಳೆ ಮಾಡಿಕೊಂಡಿದ್ದರು. ಆ ಹಣ್ಣಿನ ರಸದ ಜೊತೆ ಮೆತ್ತಿಕೊಂಡಿದ್ದ ಮಣ್ಣು ಬೇರೆ. ಕೈ ಬಾಯಿ ಕೂಡ ಮಣ್ಣು-ಹಣ್ಣಿನ ಪಾಲಾಗಿತ್ತು. `ಮಾವಿನ ಹಣ್ಣಿನ ಸೀಸನ್ ಈಗ ತಾನೇ ಆರಂಭವಾಗಿದೆ. ಕೆ.ಜಿ ಗೆ 150ರೂಪಾಯಿ ದಾಟಿದೆ. ಇಂಥ ವೇಳೆಯೂ ಮಕ್ಕಳಿಗೆ ಈ ಅಮ್ಮ ಹಣ್ಣು ಕೊಟ್ಟಿದ್ದು ನೋಡಿ ಅಚ್ಚರಿ ಆಯ್ತು, ಜೊತೆಗೆ `ಭಲೇ ಅಮ್ಮ' ಎಂದಿತ್ತು ಮನಸ್ಸು.

`ಇವು ನಿಮ್ ಮಕ್ಳಾ' ಎಂದೆ. ಆ ಮಹಿಳೆಗೆ ನನ್ನ ಭಾವನೆ ಹೇಗೆ ಅರ್ಥ ಆಯ್ತೋ ಗೊತ್ತಿಲ್ಲ. `ಹ್ಞೂಂ ಅಮ್ಮಾವ್ರೆ. ಅವ್ಳಿ ಜವ್ಳಿ. ಹಣ್ಣು ನೋಡಿ ಬೇಡ್ತಾವೆ. ಆದ್ರೆ ನಮ್ ನಸೀಬಾ ನೋಡ್ರಿ. ಒಳ್ಳೆ ಹಣ್ಣನ್ನ ಅವ್ರಿಗೆ ಕೊಟ್ರೆ ನಮ್ಗೆ ಕಾಸು ಸಿಗಲ್ಲ. ಅದ್ಕೆ ಹಾಳಾಗಿರೋ ಹಣ್ಣಿದ್ರೆ ಇವ್ರಿಗೆ ಕೊಡ್ತಿವ್ನಿ. ಅದ್ರಲ್ಲಿ ಎಷ್ಟು ಹುಳು ಇರುತ್ತೋ ಗೊತ್ತಿಲ್ಲವ್ವ. ಅಂತೂ ಹೊಟ್ಟೆ ತುಂಬಬೇಕಲ್ಲ. ಮಾವಿನ ಸೀಸನ್ ಇದ್ದಾಗ ಮಾವು, ಬೇರೆ ಹಣ್ಣಿನ ಸೀಸನ್ ಇದ್ದಾಗ ಆ ಹಣ್ಣು... ಒಟ್ನಲ್ಲಿ ಹುಳು ಹಿಡಿದ ಹಣ್ಣು ತಿಂದು ಮಕ್ಳು ಬದುಕ್ತಾ ಇವೆ. ಅವು ತಿಂದು ಮಿಕ್ಕಿದ್ರೆ ನಾನೂ ಹೊಟ್ಟೆ ತುಂಬಿಸಿಕೊಳ್ತೇನೆ...' ಎಂದು ವಿಷಾದದ ನಗೆ ಬೀರಿದಳು.
ಹುಳು ಹಿಡಿದ ಹಣ್ಣು ತಿಂತಾರೆ ಅನ್ನೋ ಮಾತು ಕೇಳಿ ನನ್ ಮಗ್ಳು ಒಂದೇ ಸಾರಿ `ಚೀ ಚೀ' ಎಂದಳು. ಮಗಳತ್ತ ದುರುಗುಟ್ಟಿದೆ. `ಹಾಗೆಲ್ಲ ಹೇಳಬಾರದು ಬಾ..' ಎಂದು ಅವಳನ್ನು ಎಳೆದುಕೊಂಡು ಕಾರು ಏರಿದೆ. ಮಗಳಿಗೆ ಒಂದಿಷ್ಟು `ಪಾಠ' ಮಾಡಿದೆ. ಅದೆಷ್ಟು ಅವಳಿಗೆ ಗೊತ್ತಾಯ್ತೋ ಆ ದೇವರೇ ಬಲ್ಲ. ಅಂತೂ `ಆಯ್ತಮ್ಮ ಇನ್ನು ಹಾಗೆಲ್ಲ ಹೇಳಲ್ಲ' ಅಂದಳು.

ನಾನೂ ಹಾಗೇಮಾಡಿದ್ದೆ
ಸರಿ, ಸ್ವಲ್ಪ ಮುಂದೆ ಹೋಗುತ್ತಾ ಇದ್ದಂತೆ `ಅಮ್ಮಾ ಸೂಸೂ ಬರುತ್ತೆ' ಎಂದಳು ಮಗಳು. ಒಂದು ಕಡೆ ಕಾರು ನಿಲ್ಲಿಸಿದೆ. ರಸ್ತೆ ದಾಟಿ ಆ ಕಡೆ ಹೋಗಬೇಕಿತ್ತು. ಅಲ್ಲಿಯೇ ರಸ್ತೆ ಬದಿ ಗೇರುಹಣ್ಣು (ಗೋಡಂಬಿ) ಮಾರುತ್ತಿದ್ದಳು ಒಬ್ಬ ಹೆಣ್ಣುಮಗಳು. ಕಂಕುಳಲ್ಲಿ ಚಿಕ್ಕ ಮಗು ಬೇರೆ. ಅದರ ಮೂಗಲ್ಲಿ ಸಿಂಬಳ ಸುರಿಯುತ್ತಿತ್ತು.

ಕೆಂಪುಕೆಂಪು ಗೋಡಂಬಿ ನೋಡಿದ ಮಗಳು `ಅಮ್ಮಾ ಅಲ್ಲಿ ನೋಡು, ಎಷ್ಟು ಚೆನ್ನಾಗಿದೆ. ಅದೇನು ಹಣ್ಣಮ್ಮಾ' ಎಂದು ಕೇಳಿದಳು. ಆ ಹಣ್ಣಿನತ್ತ ನಮ್ಮ ದೃಷ್ಟಿ ತಾಗಿದ್ದೇ ತಡ. ಆ ಮಹಿಳೆ ಓಡೋಡಿ ಬಂದು `ತಗೋಳಿ ಅಮ್ಮಾ, ಈ ಕವರ್‌ನಲ್ಲಿ 12 ಹಣ್ಣು ಅವೆ. ಬರೀ 35 ರೂಪಾಯಿ, ದಯವಿಟ್ಟು ತಗೋಳಿ ಅಮ್ಮಾ, ನೀವೇ ಬೋಣಿ. ಇಲ್ಲೆವರೆಗೆ ಯಾರೂ ಬಂದಿಲ್ಲ. ತಗೋಳಿ, ತಗೋಳಿ ಎಂದು ಗಂಟು ಬಿದ್ದಳು. `ಅಯ್ಯೋ ಬೇಡಮ್ಮ, ಹೋಗು' ಎಂದೆ. 25 ರೂಪಾಯಿ... ಬೇಡ 10 ರೂಪಾಯಿ ಕೊಡಿ ಅಮ್ಮಾ...' ಎಂದು ಗೋಗರೆದಳು. ಆ ಮಗು ನನ್ನ ಮಗಳನ್ನು ಮುಟ್ಟುತ್ತಿತ್ತು. ನನಗೆ ಈಗ ಸಿಟ್ಟು ನೆತ್ತಿಗೇರಿತ್ತು. ಎಷ್ಟೆಂದರೆ ಶುದ್ಧ ಬಟ್ಟೆ ಧರಿಸಿದವರಲ್ವಾ ನಾವು. ಆ `ಕೊಳಕು' ಹೆಂಗಸು, ಮಗುವನ್ನು ನೋಡಿ ಆಗ ಅಸಹ್ಯ ಆಗಿತ್ತು. `ಥೂ...' ಬೇಡಮ್ಮ ಎಂದು ಹೇಳಿ ಆಕೆಯಿಂದ ತಪ್ಪಿಸಿಕೊಂಡು ಬರುವಷ್ಟರಲ್ಲಿ ಸಾಕಾಗಿ ಹೋಗಿತ್ತು.

ಆ ದಿನವೇನೋ `ಥೂ..' ಎಂದುಬಿಟ್ಟೆ. ಈಗ ಆ ನೆನಪಾದಾಗ `ಅಯ್ಯೋ' ಎನಿಸುತ್ತಿದೆ. ಎಷ್ಟು ಕಟುವಾಗಿ ವರ್ತಿಸಿಬಿಟ್ಟೆನಲ್ಲ ಎಂಬ ಕೊರಗು ಈಗ. ಹಣ್ಣು ಬೇಡಿದ್ದರೆ ಬೇಡ. ಕೊನೇ ಪಕ್ಷ 10 ರೂಪಾಯಿನಾದ್ರೂ ಕೊಟ್ಟು ಬರಬಹುದಿತ್ತಲ್ವಾ? ಪಾಪ ನನ್ನ ಹಾಗೆ ಆಕೆನೂ ಅಮ್ಮ ಅಲ್ವಾ?' ಎಂದು ಎನಿಸುತ್ತಿದೆ. ಆದರೆ ಈಗ ಅಂದುಕೊಂಡು ಏನೂ ಪ್ರಯೋಜನ ಇಲ್ಲ. ಬಹುಶಃ ಇನ್ನೊಮ್ಮೆ ಅಂಥ ಪ್ರಸಂಗ ಎದುರಾದರೂ ಅದೇ ರೀತಿ ವರ್ತಿಸಿ ಕೊನೆಗೆ ಪಶ್ಚಾತ್ತಾಪ ಪಡುತ್ತೇನೋ ಗೊತ್ತಿಲ್ಲ.

ಎಲ್ಲೆಲ್ಲೂ ಹೀಗೆ...
ಹೌದು. ಹಣ್ಣು, ತರಕಾರಿ ಮಾರುವವರು ಮಾತ್ರವಲ್ಲದೇ ರಸ್ತೆ ಬದಿಯಲ್ಲಿ ಬುಟ್ಟಿ, ಆಟಿಕೆ, ಪ್ಲಾಸ್ಟಿಕ್ ಸಾಮಗ್ರಿ ಮಾರುವ, ಪ್ರತಿಯೊಂದು ಅಮ್ಮಂದಿರ ಕಥೆ- ವ್ಯಥೆ ಇದು. ಮನೆಮನೆಗೆ ತಳ್ಳುಗಾಡಿಯಲ್ಲಿ ಸಾಮಗ್ರಿ ಮಾರುವ ತಾಯಂದಿರ ನೋವಿನ ಕಥೆ ಕೂಡ. ಕಂಕುಳಲ್ಲಿ ಒಂದು, ಹೊಟ್ಟೆಯಲ್ಲಿ ಇನ್ನೊಂದು, ಅಕ್ಕಪಕ್ಕದಲ್ಲಿ ಮತ್ತೊಂದು ಹೀಗೆ ವರ್ಷಕ್ಕೊಂದು ಹೆರುತ್ತ ಆ ನೋವಿನ ನಡುವೆಯೇ ವ್ಯಾಪಾರ ಮಾಡುವ ಪರಿಸ್ಥಿತಿ ಇವರದ್ದು. ಇದು ಇಂಥದ್ದೇ ಊರಿನ ಕಥೆಯಲ್ಲ. ಎಲ್ಲೆಲ್ಲೂ ಇದೆ.

ವಿಧವಿಧ ರೀತಿಯ ಶೋಷಣೆ ಅವರಿಗೆ ಕಟ್ಟಿಟ್ಟ ಬುತ್ತಿ. ಬೇರೆಯವರಿಗೆ ಸವಿಸವಿ ಹಣ್ಣು ತಾಜಾ ತರಕಾರಿ ನೀಡುವ ಈ ಅಮ್ಮಂದಿರ ಮಕ್ಕಳದ್ದು ಉಪವಾಸ. ಹೊತ್ತು ಮೂಡುವ ಮೊದಲೇ ಎದ್ದು ಮಂಡಿಗೆ ಹೋಗಿ ಹಣ್ಣು, ತರಕಾರಿ, ಹೂವು ತರಬೇಕು. ಸಂಜೆಯವರೆಗೆ ಅವುಗಳನ್ನು ಮಾರಿ ಉಳಿದವುಗಳನ್ನು ಚೀಲಕ್ಕೆ ಹಾಕಬೇಕು. ಸಂಜೆಯಾಗುವುದರೊಳಗೆ ಮನೆ ಸೇರಬೇಕು. ಅಲ್ಲಿ ಮಕ್ಕಳು-ಮೊಮ್ಮಕ್ಕಳು ಅಷ್ಟೇ ಏಕೆ ಪತಿಯೂ ಕಾಯುತ್ತಿರುತ್ತಾರೆ. ಅಮ್ಮನ ಚೀಲದಲ್ಲಿ ಮಾರಾಟವಾಗದೇ ಉಳಿದ ಹಣ್ಣು, ತರಕಾರಿ, ಏನಾದರೂ ಇರುವುದೇ ಎಂದು ನೋಡುವ ತವಕ ಮಕ್ಕಳದ್ದಾಗಿದ್ದರೆ, ಪತಿ ಕಾಯುತ್ತಿರುವುದು ಪತ್ನಿ ದುಡಿದು ತಂದ ದುಡ್ಡಿಗೆ ಕೈ ಒಡ್ಡುವುದಕ್ಕಾಗಿ! ಅಲ್ಲಿ ಇಲ್ಲಿ ಅಡಗಿಸಿಟ್ಟ ಅಷ್ಟಿಷ್ಟು ದುಡ್ಡನ್ನೂ ಕಸಿದು, ಕೊಡದಿದ್ದರೆ ದುಡಿದ ತಪ್ಪಿಗೆ ಏಟು ಕೊಟ್ಟಾದರೂ ತೆಗೆದುಕೊಂಡು ಹೋಗುವ ಕಾಯಕ ಅವರ ಗಂಡಂದಿರದ್ದು. ಕುಡಿಯಲೋ ಇಲ್ಲವೇ ಇಸ್ಪೀಟ್ ಆಡಲು.

ತಳ್ಳುಗಾಡಿಯಲ್ಲಿ ಮೈಲುಗಟ್ಟಲೆ ತರಕಾರಿ ಹೊತ್ತೊಯ್ಯುವ ಈ ಅಮ್ಮಂದಿರ ಪಾಡೂ ಇದೇ ತಾನೆ? ಮಾಲ್‌ಗಳಲ್ಲಿ ದುಪ್ಪಟ್ಟು ಹಣ ಕೊಟ್ಟು ತರಕಾರಿ ಕೊಳ್ಳುವ ನಾವು, ಮನೆಯ ಬಳಿ ಬಂದ ಇವರ ಜೊತೆ ಒಂದು ರೂಪಾಯಿಗೂ ಚೌಕಾಸಿಗಿಳಿಯುತ್ತೇವೆ. ಐದು ರೂಪಾಯಿಗೆ ಒಂದು ಕಟ್ಟು ಸೊಪ್ಪು ಎಂದರೆ ಅದನ್ನು ನಾಲ್ಕು ರೂಪಾಯಿಗೆ ಇಳಿಸಿ ಪಡೆಯುವಷ್ಟು ಚೌಕಾಸಿ ನಮ್ಮದು! ಒಂದು ರೂಪಾಯಿ ಉಳಿಸಿದ ಸಂತಸದಿಂದ ಬೀಗುತ್ತೇವೆ. ಚೌಕಾಸಿ ವೇಳೆ ಮಾತ್ರ ಈ ಸಿದ್ಧಾಂತ, ವೇದಾಂತ ಯಾವುದೂ ಗಮನಕ್ಕೆ ಬರುವುದೇ ಇಲ್ಲ. 

ಆದರೆ ಈ `ಅಮ್ಮ'ಂದಿರಿಗೆ ಮಾತ್ರ ಇವೆಲ್ಲ ಮಾಮೂಲು. `ಎಲ್ಲವೂ ನನ್ನ ಹಣೆಬರಹ' ಎಂದು ಹಣಿಯುವುದೊಂದೇ ಅವಳಿಗಿರುವ ದಾರಿ. ಮಾರನೆಯ ದಿನಕ್ಕೆ ಮಾರಾಟ ಮಾಡಲು ಒಳ್ಳೊಳ್ಳೆ ಹಣ್ಣು ಹೆಕ್ಕಿಟ್ಟುಕೊಂಡರೆ ಹಳಸಿದ ಹಣ್ಣುಗಳು ಮಕ್ಕಳ ಪಾಲು. ಅವು ತಿಂದು ಮಿಕ್ಕರೆ ಈ ಅಮ್ಮನಿಗೆ ಅದುವೇ ಸ್ವರ್ಗ.

ಪೊಲೀಸ್, ದಲ್ಲಾಳಿಗಳ ಕಾಟ
ಒಂದು ಕಡೆ ನಿಂತು ಮಾರಾಟ ಮಾಡಲು ಪೊಲೀಸರು ಬಿಡಲ್ಲ. ಇವರಿಂದಲೂ `ಮಾಮೂಲು' ವಸೂಲಿ ಮಾಡುವ ಪೊಲೀಸರೂ ಇದ್ದಾರೆ. ಇಲ್ಲವೇ ಬುಟ್ಟಿಗೆ ಕೈಹಾಕಿ ಒಳ್ಳೆ ಹಣ್ಣು ತಿನ್ನುವ ಜಾಯಮಾನ ಈ ಪೊಲೀಸರದ್ದು. ಹಣ್ಣು- ತರಕಾರಿ ಮಾರಾಟ ಮಾಡುವಾಕೆ ಸ್ವಲ್ಪ ಚೆನ್ನಾಗಿದ್ದರಂತೂ ಮುಗಿದೇ ಹೋಯಿತು. ಪೋಲಿ- ಪುಂಡರ ಕಾಟ. ಇನ್ನು ಮೂತ್ರವನ್ನೂ ಕಟ್ಟಿಕೊಳ್ಳುವ ಪರಿಸ್ಥಿತಿ. ಜನಸಾಂದ್ರತೆ ಇರುವ ಕಡೆಗಳಲ್ಲೇ ಇವರ ವ್ಯಾಪಾರ. ಎಲ್ಲೆಡೆ ಶೌಚಾಲಯ ಇರುವುದಿಲ್ಲ. ಇದ್ದರೂ ಮಕ್ಕಳನ್ನು ಬಿಟ್ಟು ಅಲ್ಲಿ ಹೋಗುವಂತಿಲ್ಲ. ಜೊತೆಗೆ ಬುಟ್ಟಿ ಬೇರೆ, ಯಾರಾದರೂ ಹೊತ್ತುಕೊಂಡು ಹೋಗಿಯಾರು ಎಂಬ ಭಯ. ಇದರಿಂದ ಮೂತ್ರ ಬಂದರೂ ಅದನ್ನು ತಡೆದು ನಿಲ್ಲಿಸುವ ಪರಿಸ್ಥಿತಿ. ಇದರಿಂದ ಇಲ್ಲಸಲ್ಲದ ಕಾಯಿಲೆಗಳಿಗೆ ದಾರಿ.

ಇನ್ನೂ ಅಚ್ಚರಿಯ ಸಂಗತಿ ಎಂದರೆ, ಒಂದು ಅಧ್ಯಯನದ ಪ್ರಕಾರ ಹುಬ್ಬಳ್ಳಿ ಧಾರವಾಡ ಒಂದರಲ್ಲೇ ತಮ್ಮ ಕುಟುಂಬದ ರಥ ಎಳೆಯಬೇಕಾದ ಹೊಣೆ ಹೊತ್ತುಕೊಂಡಿರುವ 30ಸಾವಿರಕ್ಕೂ ಅಧಿಕ ಮಹಿಳೆಯರು ಜಾತಿ-ಧರ್ಮದ ಬೇಧವಿಲ್ಲದೇ ಮನೆಗೆಲಸದಲ್ಲಿ ತೊಡಗಿದ್ದಾರೆ. ಎರಡು ಸಾವಿರ ಮಹಿಳೆಯರು ಖಾಸಗಿ ಹೋಟೆಲ್‌ಗಳಲ್ಲಿ ಮತ್ತು ಜೋಳದ ರೊಟ್ಟಿ ಮಾರುವ ಅಂಗಡಿಗಳಲ್ಲಿ ರೊಟ್ಟಿ ಬಡಿಯುತ್ತಿದ್ದರೆ, ಐದು ಸಾವಿರಕ್ಕೂ ಹೆಚ್ಚು ಮಹಿಳೆಯರು ಮಾರುಕಟ್ಟೆ ಪ್ರದೇಶದಲ್ಲಿ ತರಕಾರಿ- ಹಣ್ಣು ಮಾರುತ್ತಾರೆ. ಇವರ ಸ್ಥಿತಿ ಎಷ್ಟು ಶೋಚನೀಯ ಎಂದರೆ ಯುವತಿಯರು ಮಾತ್ರವಲ್ಲದೇ ಎಷ್ಟೋ ಅಮ್ಮಂದಿರು ತಮ್ಮ ಕೆಲಸ ಉಳಿಸಿಕೊಳ್ಳಬೇಕಾದರೆ `ದಣಿ'ಗೆ ತಮ್ಮ ದೇಹವನ್ನೂ ಒಪ್ಪಿಸಬೇಕಿದೆ. ಮಕ್ಕಳ ತುತ್ತಿನ ಚೀಲ ತುಂಬಬೇಕಾದರೆ ಇವರು ಶೀಲವನ್ನೂ ಲೆಕ್ಕಿಸದ ಪರಿಸ್ಥಿತಿ.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕನೊಬ್ಬ ಮನೆಗೆಲಸದ ವಿಧವೆಯೊಬ್ಬಳನ್ನು ಸುಮಾರು ಒಂಬತ್ತು ತಿಂಗಳ ಕಾಲ ಶೋಷಿಸಿ ಸಿಕ್ಕುಬಿದ್ದ ಘಟನೆಯೂ ನಮ್ಮ ಮುಂದೆಯೇ ಇದೆಯಲ್ವೆ? ಈ ಎಲ್ಲ ನೋವಿನ ನಡುವೆ ವರ್ಷಪೂರ್ತಿ ಬದುಕುತ್ತಿರುವ ಈ `ಅಮ್ಮ'ಂದಿರಿಗೆ ವರ್ಷಕ್ಕೆ ಒಮ್ಮೆ ಬರುವ `ಅಮ್ಮಂದಿರ ದಿನ'ದಂದು ಸ್ಮರಿಸಿದರೆ ಸಾಕೆ...?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT